ಕನ್ನಡಿಗರ ಹೆಮ್ಮೆ: ಬೆಳಗಾವಿಯ ರಿವೋಟ್ ಇ-ಸ್ಕೂಟರ್ ಅ.23ಕ್ಕೆ ಬಿಡುಗಡೆ, ದೇಶದಲ್ಲೇ ಮೊದಲು.. 280 km ಓಡುತ್ತೆ!
ಭಾರತದ ದ್ವಿಚಕ್ರ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ದೊಡ್ಡಮಟ್ಟದಲ್ಲಿ ಜನಪ್ರಿಯತೆ ಗಳಿಸುತ್ತಿವೆ. ಇದೀಗ, ನಮ್ಮ ಬೆಳಗಾವಿ (Belagavi) ಮೂಲದ ರಿವೋಟ್ (Rivot) ಕಂಪನಿ ದೇಶದಲ್ಲಿಯೇ ಮೊದಲ ಬಾರಿಗೆ ಗರಿಷ್ಠ ರೇಂಜ್ ನೀಡುವ ಇ-ಸ್ಕೂಟರ್ ಬಿಡುಗಡೆಗೆ ಸಿದ್ದವಾಗಿದೆ.
ರಿವೋಟ್ ಮೋಟಾರ್ಸ್‌ನ ಬಹುನಿರೀಕ್ಷಿತ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಎನ್ಎಕ್ಸ್100 (NX100) ಅಕ್ಟೋಬರ್ 23ರಂದು (ಸೋಮವಾರ) ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಅಂದೇ ಬುಕ್ಕಿಂಗ್ ಕೂಡ ಶುರುವಾಗುವ ನೀರಿಕ್ಷೆಯಿದೆ. ಇದು, ಭವಿಷ್ಯದ ಉತ್ತಮ ನಗರ ಸಾರಿಗೆಯಾಗಲಿದೆ ಎಂದು ಹೇಳಲಾಗಿದೆ. ಅತ್ಯುತ್ತಮ ತಂತ್ರಜ್ಞಾನ ಹಾಗೂ ವೈಶಿಷ್ಟ್ಯವನ್ನು ಹೊಂದಿರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವ ಗ್ರಾಹಕರನ್ನು ಆಕರ್ಷಿಸುವ ಸಾಧ್ಯತೆಯಿದೆ.

ರಿವೋಟ್ ಮೋಟಾರ್ಸ್ ಹೇಳಿರುವಂತೆ ನೂತನ ಎನ್ಎಕ್ಸ್100 ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣ ಚಾರ್ಜ್ ನಲ್ಲಿ 280 ಕಿಲೋಮೀಟರ್ ರೇಂಜ್ ನೀಡಲಿದೆಯಂತೆ. ಇದು, ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಇತರೆ ಕಂಪನಿಗಳಾದ ಓಲಾ, ಸಿಂಪಲ್ ಎನರ್ಜಿ ಎಥರ್, ಟಿವಿಎಸ್ ಹಾಗೂ ಹೀರೋ ಇ - ಸ್ಕೂಟರ್‌ಗಳಿಗೆ ಹೋಲಿಸಿದರೆ ಅತ್ಯಧಿಕ ಎಂದು ಹೇಳಬಹುದು.
ಹೊಸ ರಿವೋಟ್ ಎನ್ಎಕ್ಸ್100 ಎಲೆಕ್ಟ್ರಿಕ್ ಸ್ಕೂಟರ್, ದೊಡ್ಡದಾದ 5.7 kWh ಸಾಮರ್ಥ್ಯದ ಲಿಥಿಯಂ - ಐಯಾನ್ (lithium - ion) ಬ್ಯಾಟರಿ ಪ್ಯಾಕ್ ಪಡೆದಿರಲಿದೆ. ಇದು, ಐಪಿ67 ರೇಟಿಂಗ್ ಒಳಗೊಂಡಿರಲಿದ್ದು, ಆ ಕಾರಣಕ್ಕೆ ಧೂಳು (dust) ಹಾಗೂ ಜಲ ನಿರೋಧಕವಾಗಿರಲಿದೆ (water resistant). ಇದರಲ್ಲಿರುವ ಎಲೆಕ್ಟ್ರಿಕ್ ಮೋಟಾರ್ 6 kWh ಪವರ್ ಮತ್ತು 150 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.

ಈ ರಿವೋಟ್ ಎನ್ಎಕ್ಸ್100 ಎಲೆಕ್ಟ್ರಿಕ್ ಸ್ಕೂಟರ್ ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಪ್ರಮುಖವಾಗಿ, 7 - ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ ಪಡೆದಿರಲಿದ್ದು, ಇದು ಹೆಚ್ಚು ಚಾಲಕ ಸ್ನೇಹಿಯಾಗಿದೆ. ಇದರೊಟ್ಟಿಗೆ, ಕಂಪನಿಯು ನವೀನ ಫೀಚರ್ ವೊಂದನ್ನು ಪರಿಚಯಿಸುತ್ತಿದ್ದು, ಸೇನಾರ್ಸ್ ಸಹಾಯದಿಂದ ಬೂಟ್‌ಸ್ಟೋರೇಜ್ ಮತ್ತು ಡ್ಯಾಶ್ ಕ್ಯಾಮ್ ತೆರೆಯಬಹುದಾಗಿದೆ.
ಸದ್ಯ, ಕೆಲವೊಂದು ವೈಶಿಷ್ಟ್ಯಗಳ ಬಗ್ಗೆ ಮಾತ್ರ ಮಾಹಿತಿ ಲಭ್ಯವಾಗಿದೆ. ಈ ಸ್ಕೂಟರ್ ಬಿಡುಗಡೆಯಾದ ಮೇಲೆ ಎಲ್ಲದಕ್ಕೂ ಸ್ಪಷ್ಟ ಚಿತ್ರಣ ಸಿಗಲಿದೆ. ಇದು ಗರಿಷ್ಠ ರೇಂಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ನಮ್ಮ ಬೆಳಗಾವಿಯಲ್ಲಿ ತಯಾರಾಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ನೂತನ ಇ-ಸ್ಕೂಟರ್ ಬೆಲೆ ಬಗ್ಗೆ ಕಂಪನಿ ಯಾವುದೇ ವಿವರವನ್ನು ಬಹಿರಂಗಪಡಿಸಿಲ್ಲ. ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗಲಿದೆ ಎಂದು ಹೇಳಲಾಗಿದೆ.
ಭಾರತದ ಮಾರುಕಟ್ಟೆಯಲ್ಲಿ ಇಂದಿನ ದಿನಮಾನಗಳಲ್ಲಿ ಗರಿಷ್ಠ ರೇಂಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಎಂದು ಬೆಂಗಳೂರಿನ ಸಿಂಪಲ್ ಒನ್ ಖ್ಯಾತಿಗಳಿಸಿದೆ. ಇದು, ರೂ.1.45 ಲಕ್ಷದಿಂದ ರೂ.1.5 ಲಕ್ಷ ಬೆಲೆಗೆ ಕೆಲವೇ ತಿಂಗಳ ಹಿಂದೆ ಬಿಡುಗಡೆಯಾಗಿತ್ತು. 5 kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 212 km ರೇಂಜ್ ನೀಡುತ್ತದೆ. 105 km ಟಾಪ್ ಸ್ವೀಡ್ ಹೊಂದಿದೆ.
ಓಲಾ ಎಸ್1 ಪ್ರೊ ಬಗ್ಗೆ ಹೇಳುವುದಾದರೆ, ಇದು ರೂ.1.47 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಸಂಪೂರ್ಣ ಚಾರ್ಜ್ ನಲ್ಲಿ 195 ಕಿಲೋಮೀಟರ್ ರೇಂಜ್ ಕೊಡಲಿದ್ದು, 120 kmph ಟಾಪ್ ಸ್ವೀಡ್ ಹೊಂದಿದೆ. 7 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಎರಡು ತುದಿಯಲ್ಲಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








