ಅಬ್ಬರಿಸಲು ಬರುತ್ತಿದೆ ಬಹುನಿರೀಕ್ಷಿತ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಬೈಕ್!
ಭಾರತದ ಯುವಕರಿಗೆ ನಿಮ್ಮ ಫೆವರೇಟ್ ಬೈಕ್ ಯಾವುದು ಎಂದು ಪ್ರಶ್ನೆ ಮಾಡಿದರೆ, ಅವರಿಂದ ಬರುವ ಒಂದೇ ಉತ್ತರ ಅದು ರಾಯಲ್ ರಾಯಲ್ ಎನ್‌ಫೀಲ್ಡ್ ಬೈಕ್‌ಗಳೆಂದು. ಅಷ್ಟರಮಟ್ಟಿಗೆ ಆಕರ್ಷಿಸಿವೆ. ಅವುಗಳ ಲುಕ್, ವೈಶಿಷ್ಟ್ಯಗಳು ಹಾಗೂ ಕಾರ್ಯಕ್ಷಮತೆಯನ್ನು ಇಷ್ಟಪಡದವರೇ ಇಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಸದ್ಯ ವೇಗವಾಗಿ ಬೆಳೆವಣಿಗೆಯಾಗುತ್ತಿರುವ ಎಲೆಕ್ಟ್ರಿಕ್ ವಾಹನ (ಇವಿ) ಮಾರುಕಟ್ಟೆಗೆ ಎಂಟ್ರಿ ಕೊಡಲು ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ರಾಯಲ್ ಎನ್‌ಫೀಲ್ಡ್ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಹಲವು ತಿಂಗಳಿನಿಂದ ಆವಿಷ್ಕಾರಗಳನ್ನು ನಡೆಸುತ್ತಿದ್ದು, ತ್ವರಿತ ಪ್ರಗತಿಯನ್ನು ಕೂಡ ಸಾಧಿಸುತ್ತಿದೆ ಎಂದು ವರದಿಯಾಗಿದೆ. ಮುಂದಿನ 18-24 ತಿಂಗಳೊಳಗೆ ಹೊಚ್ಚ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಮೂಲಕ ಭಾರತದ ಮಾರುಕಟ್ಟೆಗೆ ಅದ್ದೂರಿಯಾಗಿ ಪ್ರವೇಶ ಮಾಡಲಿದೆ. ಬಹುತೇಕ ಯುವ ಖರೀದಿದಾರರನ್ನು ಸೆಳೆಯುವ ಸಾಧ್ಯತೆಯಿದೆ.

ಎಲೆಕ್ಟ್ರಿಕ್ ವಾಹನವನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ರಾಯಲ್ ಎನ್‌ಫೀಲ್ಡ್, ತನ್ನದೇ ಆದ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅದಕ್ಕಾಗಿ ಓಲಾ ಎಲೆಕ್ಟ್ರಿಕ್ ನ (Ola Electric) ಚೀಫ್ ಟೆಕ್ನಾಲಜಿ ಆಫೀಸರ್ (ಸಿಟಿಒ) ಆಗಿದ್ದ ಉಮೇಶ್ ಕೃಷ್ಣಪ್ಪ ಅವರನ್ನು ಕರೆ ತಂದಿದೆ. ಮುಂಬರುವ ವರ್ಷಗಳಲ್ಲಿ ವಿಶ್ವಾದ್ಯಂತ ಕೆಲವೇ ಶೂನ್ಯ ಹೊರಸೂಸುವಿಕೆಯ ವಾಹನಗಳೇ ಮಾರುಕಟ್ಟೆಯಲ್ಲಿ ಇರಲಿದ್ದು, ಈಗಿನಿಂದಲೇ ರಾಯಲ್ ಎನ್‌ಫೀಲ್ಡ್ ನ ಒಂದು ತಂಡ ಇದೇ ಕಾರ್ಯದಲ್ಲಿ ಸಂಪೂರ್ಣವಾಗಿ ನಿರತವಾಗಿದೆ ಎಂದು ವರದಿಯಾಗಿದೆ.
ಕಂಪನಿಯು ಭಾರತ ಹಾಗೂ ಯುಕೆ ಮಾರುಕಟ್ಟೆ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದೆ ಎಂದು ಹೇಳಬಹುದು. ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಸಲು ಬರೋಬ್ಬರಿ 100-150 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಸಿದ್ಧವಾಗಿದೆ ಎಂದು ಮೂಲಗಳು ಹೇಳಿವೆ. ಇವಿಗಾಗಿ 'L' ಎಂಬ ಹೆಸರಿನ ಕೋಡ್ ನೇಮ್ ನೊಂದಿಗೆ ರಾಯಲ್ ಎನ್‌ಫೀಲ್ಡ್, ಈಗಾಗಲೇ ಪ್ಲಾಟ್ ಫಾರಂ ತಯಾರಿಕೆಯ ಕಾರ್ಯದಲ್ಲಿ ತೊಡಗಿಕೊಂಡಿದೆ. ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಕೈಗೆಟುಕುವ ಬೆಲೆಯಲ್ಲಿ ಹೆಚ್ಚಿನ ಕಾರ್ಯಕ್ಷಮತೆ ಹೊಂದಿರುವ ರೀತಿಯಲ್ಲಿಯೇ ರೆಡಿ ಮಾಡಲಾಗುತ್ತಿದೆಯಂತೆ.
ಹೊಚ್ಚ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು 2024ರ ದ್ವಿತೀಯಾರ್ಧದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಕಂಪನಿ ಯೋಜಿಸಿದ್ದು, ತನ್ನ ಮಾರಾಟ ಜಾಲವನ್ನು ವಿಸ್ತರಿಸಲು ವಾರ್ಷಿಕ 1.2 ರಿಂದ 1.8 ಲಕ್ಷ ಯುನಿಟ್ ಇವಿಗಳನ್ನು ತಯಾರಿಸುವ ಗುರಿಯನ್ನು ಹಾಕಿಕೊಂಡಿದೆ. ಈ ಮೂಲಕ ಕೆಲವೇ ವರ್ಷಗಳಲ್ಲಿ ವಿಸ್ತರಣೆಗೊಳ್ಳುವ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಮುಂದಾಗಿದೆ. ಗ್ರಾಹಕರಿಗೆ ರಾಯಲ್ ಎನ್‌ಫೀಲ್ಡ್ ಲಾಂಚ್ ಮಾಡಲಿರುವ ಎಲೆಕ್ಟ್ರಿಕ್ ಬೈಕ್ ಹೇಗಿರಲಿದೆ.. ಅದು ಬುಲೆಟ್ ಬೈಕಿನ ಎಲೆಕ್ಟ್ರಿಕ್ ಆವೃತ್ತಿ ಆಗಿರಲಿದೆಯೇ ಎಂಬ ಪ್ರಶ್ನೆಗಳು ಮೂಡಿವೆ.
ಇಷ್ಟೇಅಲ್ಲದೆ, ಜಪಾನ್ ವಾಹನ ತಯಾರಕ ಕಂಪನಿಗಳಾದ ಸುಜುಕಿ, ಹೋಂಡಾ ಕೂಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ನಿರತವಾಗಿವೆ. ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ ಮಾಡಲು ಹೋಂಡಾ ಸಿದ್ಧವಾಗಿದೆ. ಸುಜುಕಿ ಕೂಡ ಎಲೆಕ್ಟ್ರಿಕ್ ಸ್ಕೂಟರ್ ರೆಡಿ ಮಾಡುತ್ತಿದೆ. ಅದರಲ್ಲಿ ಅಳವಡಿಸಲಾಗಿರುವ ಮೋಟಾರ್, 4kW ಪವರ್ ಉತ್ಪಾದಿಸುವ ಸಾಮರ್ಥ್ಯ ಪಡೆದಿರಲಿದ್ದು, ಒಂದೇ ಚಾರ್ಜಿನಲ್ಲಿ ಬರೋಬ್ಬರಿ 90 ಕಿಮೀ ರೇಂಜ್ ನೀಡಬಹುದು ಎಂದು ಹೇಳಲಾಗಿದೆ.
ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಗ್ರಾಹಕರು ಖರೀದಿಸುವ ರಾಯಲ್ ಎನ್‌ಫೀಲ್ಡ್ ಬುಲೆಟ್ 350, ರೂ.1.55 ಲಕ್ಷದಿಂದ ರೂ.1.63 ಲಕ್ಷ ಬೆಲೆಯನ್ನು ಹೊಂದಿದೆ. ಇದರ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು BS6, 346 ಸಿಸಿ ಏರ್-ಕೋಲ್ಡ್, ಫ್ಯುಯೆಲ್-ಇಂಜೆಕ್ಟ್ದ್ ಎಂಜಿನ್ ಪಡೆದಿದ್ದು, 19.3 PS ಪವರ್ ಹಾಗೂ 28 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 5-ಸ್ವೀಡ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಲಭ್ಯವಿದ್ದು, ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ.
ರಾಯಲ್ ಎನ್‌ಫೀಲ್ಡ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಎಲೆಕ್ಟ್ರಿಕ್ ಬೈಕ್ ಅಭಿವೃದ್ಧಿಪಡಿಸುತ್ತಿರುವುದರಿಂದ ಬೇರೆ ಕಂಪನಿಗಳಿಗೆ ನಡುಕ ಉಂಟಾಗಿದೆ ಎಂದು ಹೇಳಬಹುದು. ಕಂಪನಿ ರೆಡಿ ಮಾಡುತ್ತಿರುವ ಹೊಸ ಬೈಕ್ ಹತ್ತು ಹಲವು ನೂತನ ವೈಶಿಷ್ಟ್ಯದೊಂದಿಗೆ ಗ್ರಾಹಕರಿಗೆ ಖರೀದಿಗೆ ಸಿಗಬಹುದು ಎಂದು ಹೇಳಲಾಗಿದೆ. ಬಹುತೇಕರು ಕಂಪನಿಯು ಬುಲೆಟ್ ಬೈಕಿನ ಎಲೆಕ್ಟ್ರಿಕ್ ಆವೃತ್ತಿಯನ್ನು ಲಾಂಚ್ ಮಾಡಲಿದೆ ಎಂಬ ನೀರಿಕ್ಷೆಯಲ್ಲಿದ್ದಾರೆ. ಆದರೆ, ಕಂಪನಿ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.


Click it and Unblock the Notifications