ಬುಕ್ಕಿಂಗ್‌ನಲ್ಲಿ ಸುನಾಮಿ: ಬೆಂಗಳೂರಿನ 'Simple ONE' ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಶುರು
ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದಿನದಿಂದ ದಿನಕ್ಕೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸುತ್ತಿವೆ. ಅದರಲ್ಲಿಯೂ ಬಹಳ ವರ್ಷಗಳ ಕಾಯುವಿಕೆ ಬಳಿಕ, ಬೆಂಗಳೂರಿನ ಸಿಂಪಲ್ ಎನರ್ಜಿ (Simple Energy) ತನ್ನ ಬಹುನೀರಿಕ್ಷಿತ ಸಿಂಪಲ್ ಒನ್ (Simple ONE) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಿಡುಗಡೆ ಮಾಡಿತ್ತು. ಇದೀಗ, ಮಂಗಳವಾರದಿಂದ ವಿತರಣೆಯನ್ನು ಆರಂಭಿಸಿದೆ.
ಮೊದಲಿಗೆ ಬೆಂಗಳೂರಿನ ಗ್ರಾಹಕರಿಗಾಗಿ ಡಿಲೆವರಿ ಶುರು ಮಾಡಿದೆ. ಆ ನಂತರ ಭಾರತದ ಇತರೆ ಪ್ರಮುಖ ನಗರಗಳಲ್ಲಿ ಹಂತ ಹಂತವಾಗಿ ವಿತರಣೆಯನ್ನು ಮಾಡಲಿದೆ. ಸದ್ಯ, ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ರೂ.1.45 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಕಂಪನಿಯೇ ಹೇಳಿರುವಂತೆ ಈ ಸ್ಕೂಟರ್ ಗಾಗಿ 1,00,000ಕ್ಕೂ ಹೆಚ್ಚು ಗ್ರಾಹಕರು ಬುಕ್ಕಿಂಗ್ ಮಾಡಿದ್ದಾರೆ.

ಈ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಪ್ಯಾಕ್ ಬಗ್ಗೆ ಮಾತನಾಡುವುದಾದರೆ, ಇದು ಏಳು ಪದರಗಳ ರಕ್ಷಣಾ ಕವಚ ಹೊಂದುವ ಮೂಲಕ ಸುರಕ್ಷಿತವಾಗಿರುವ 5 kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಪಡೆದಿದೆ. ಫುಲ್ ಚಾರ್ಜಿನಲ್ಲಿ 212 km (IDC) ರೇಂಜ್ ನೀಡಲಿದೆ. ಈ ಸ್ಕೂಟರ್ ಬ್ಯಾಟರಿ 0-80% ಚಾರ್ಜ್ ಆಗಲು 5 ಗಂಟೆ 54 ನಿಮಿಷ ಬೇಕು.
ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್ 8.5 kW ಗರಿಷ್ಠ ಪವರ್ ಹಾಗೂ 72 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಸಿಂಪಲ್ ಒನ್ ಇ-ಸ್ಕೂಟರ್ ಕೇವಲ 2.77 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಪಡೆಯಲಿದ್ದು, 105 kmph ಟಾಪ್ ಸ್ವೀಡ್ ಹೊಂದಿದೆ. ಆರು ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಅವುಗಳೆಂದರೆ, ಬ್ರೆಜೆನ್ ಬ್ಲ್ಯಾಕ್, ಅಜುರೆ ಬ್ಲೂ ಮತ್ತು ಗ್ರೇಸ್ ವೈಟ್ ಸೇರಿವೆ.
ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಇಕೋ, ರೈಡ್, ಡ್ಯಾಶ್ ಮತ್ತು ಸೋನಿಕ್ ಎಂಬ ರೈಡಿಂಗ್ ಮೋಡ್ ಹೊಂದಿವೆ. ಸಸ್ಪೆಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್, ರೇರ್ ಮೊನೊ ಶಾಕ್ ಸಸ್ಪೆಷನ್ ಸೆಟಪ್ ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಹೇಳುವುದಾದರೆ, ಫ್ರಂಟ್ 200 ಎಂಎಂ, ರೇರ್ 190 ಎಂಎಂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.
ಈ ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಇದು ಯುವ ಖರೀದಿದಾರರನ್ನು ಆಕರ್ಷಿಸುವ 7.0 ಇಂಚಿನ TFT ಡಿಸ್ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ, OTA ಅಪ್‌ಡೇಟ್, LED ಲೈಟಿಂಗ್, 12 ಇಂಚಿನ ಅಲಾಯ್ ವೀಲ್ಸ್ ಹಾಗೂ 30 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಜೊತೆಗೆ 750 ವ್ಯಾಟ್ ಪೋರ್ಟಬಲ್ ಚಾರ್ಜರ್ ಆಯ್ಕೆಯೊಂದಿಗೂ ಗ್ರಾಹಕರಿಗೆ ಲಭ್ಯವಿದೆ.
ಸಿಂಪಲ್ ಎನರ್ಜಿ ದೇಶದ 40 ರಿಂದ 50 ನಗರಗಳಲ್ಲಿ ತನ್ನ ಮಾರಾಟ ಜಾಲವನ್ನು ವಿಸ್ತರಿಸಲು ತೀರ್ಮಾನಿಸಿದ್ದು, ಅದಕ್ಕಾಗಿ 160-180 ಎಕ್ಸ್ ಶೋರೂಂ ತೆರೆಯಲು ಚಿಂತನೆ ನಡೆದಿದೆ ಎಂದು ವರದಿಯಾಗಿದೆ. ಕೆಲವು ತಿಂಗಳ ಹಿಂದೆ, ತಮಿಳುನಾಡಿನ ಶೂಲಗಿರಿಯಲ್ಲಿ 'ಸಿಂಪಲ್ ವಿಷನ್ 1.0' ಹೆಸರಿನ ಬೃಹತ್ ಉತ್ಪಾದನಾ ಘಟಕವನ್ನು ಆರಂಭಿಸಿತ್ತು. ಅಲ್ಲಿ ವಾರ್ಷಿಕ 10 ಲಕ್ಷ ಯುನಿಟ್ ಸ್ಕೂಟರ್ ತಯಾರಿಸಬಹುದು.
ನಿಮಗೆ ಗೊತ್ತಿರಲಿ.. ಕಂಪನಿಯು 2021ರಲ್ಲಿಯೇ ಸಿಂಪಲ್ ಒನ್ ಸ್ಕೂಟರ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಅನಾವರಣ ಮಾಡಿತ್ತು. ಆದರೆ, ವಿವಿಧ ಕಾರಣಗಳಿಗೆ ಬಿಡುಗಡೆ ಮುಂದೂಡುತ್ತಲೇ ಬಂದಿತ್ತು. ಕಳೆದ ತಿಂಗಳು ಬಿಡುಗಡೆ ಮಾಡಿ, ವಿತರಣೆಯನ್ನು ಶುರು ಮಾಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಗೆ ಓಲಾ, ಎಥರ್ ಹಾಗೂ ಟಿವಿಎಸ್ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್ ಗಳು ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications








