Simple ONE: 300 KM ರೇಂಜ್‌ನ ಬೆಂಗಳೂರಿನ 'ಸಿಂಪಲ್ ಒನ್' ಇ-ಸ್ಕೂಟರ್ ಬಿಡುಗಡೆ ದಿನಾಂಕ ಬಹಿರಂಗ
ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸ್ಟಾರ್ಟ್ಅಪ್ ಸಿಂಪಲ್ ಎನರ್ಜಿ ಕಡೆಗೂ ತನ್ನ ಬಹುನೀರಿಕ್ಷಿತ ಸಿಂಪಲ್ ಒನ್ (Simple ONE) ಸ್ಕೂಟರ್ ಬಿಡುಗಡೆ ಮಾಡಲು ದಿನಾಂಕವನ್ನು ಬಹಿರಂಗಪಡಿಸಿದೆ. ಇದು, ಈಗಾಗಲೇ ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿದ್ದು, ಗ್ರಾಹಕರ ಕೈಗೆಟುಕುವ ಬೆಲೆಗೆ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ.
ಈ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಮೇ.23 ರಂದು ಬೆಂಗಳೂರಿನಲ್ಲಿ ಲಾಂಚ್ ಆಗಲಿದೆ. ನಂತರ, ಹಂತ ಹಂತವಾಗಿ ದೇಶದ ಇತರೆ ನಗರಗಳಿಗೆ ವಿತರಣೆಯಾಗಲಿದೆ. ಪೂರೈಕೆ ಸಮಸ್ಯೆ ಸೇರಿದಂತೆ ನಾನಾ ಕಾರಣಗಳಿಗೆ ಈ ಸ್ಕೂಟರ್ ಬಿಡುಗಡೆಯನ್ನು ಕಂಪನಿ ಮುಂದೂಡಿಕೆ ಮಾಡುತ್ತಲೇ ಬಂದಿತ್ತು. ಇಲ್ಲಿ ಎಲ್ಲರೂ ಗಮನಿಸಬೇಕಾದ ಪ್ರಮುಖ ವಿಚಾರವೆಂದರೆ, ಈ ಸ್ಕೂಟರ್ ಅನ್ನು 2021ರಲ್ಲಿಯೇ ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣ ಮಾಡಲಾಗಿತ್ತು.

ಮೊದಲಿಗೆ ಸಿಂಪಲ್ ಒನ್ ಸ್ಕೂಟರ್ ಬ್ಯಾಟರಿ ಪ್ಯಾಕ್ ಹಾಗೂ ರೇಂಜ್ ಬಗ್ಗೆ ಮಾತನಾಡೋಣ. ಇದು ಅತ್ಯಂತ ವೇಗದ ಸ್ಕೂಟರ್ ಆಗಿದ್ದು, ಸುರಕ್ಷತಾ ಮಾನದಂಡಗಳ ಅನ್ವಯ ಬ್ಯಾಟರಿ ಪ್ಯಾಕ್ ಹೊಂದಿದೆ ಎಂದು ಕಂಪನಿ ಹೇಳಿದೆ. ಈ ಸ್ಕೂಟರ್, 4.8 kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಪಡೆದಿದ್ದು, ಸಂಪೂರ್ಣ ಚಾರ್ಜಿನಲ್ಲಿ 236 km ರೇಂಜ್ ಕೊಡಲಿದೆ. ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್ ಹೊಂದಿರುವ ಸ್ಕೂಟರ್ 300 Km ರೇಂಜ್ ನೀಡಲಿದೆ.
ಈ ಸ್ಕೂಟರ್ ನಲ್ಲಿ 8.5 kW ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟಾರ್ ಬಳಕೆ ಮಾಡಲಾಗಿದ್ದು, ಇದು 11 bhp ಗರಿಷ್ಠ ಪವರ್ ಹಾಗೂ 72 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. LED ಹೆಡ್‌ಲ್ಯಾಂಪ್ಸ್, 4G ಕನೆಕ್ಷನ್ ನೊಂದಿಗೆ 7 ಇಂಚಿನ ಟಚ್ ಸ್ಕ್ರೀನ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮ್ಯೂಸಿಕ್, ಫೋನ್ ಕಾಲ್ ಗಳ ಮಾಹಿತಿ ಪಡೆಯಲು ಬ್ಲೂಟೂತ್ ಕನೆಕ್ಟಿವಿಟಿ, ಆನ್‌ಬೋರ್ಡ್ ನ್ಯಾವಿಗೇಷನ್ ಸಿಸ್ಟಮ್ ಸೇರಿದಂತೆ ಹತ್ತಾರು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ.

ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಣ್ಣಗಳ ಆಯ್ಕೆ ಬಗ್ಗೆ ಹೇಳುವುದಾದರೆ, ಇದು ಅಜೂರ್ ಬ್ಲೂ, ಬ್ರೆಜನ್ ಬ್ಲಾಕ್, ಗ್ರೇಸ್ ವೈಟ್, ರೆಡ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಆದರೆ, ಬೆಲೆ ಬಗ್ಗೆ ಕಂಪನಿ ಎಲ್ಲಿಯೂ ಮಾಹಿತಿ ಬಹಿರಂಗಪಡಿಸಿಲ್ಲ. ಮೂಲಗಳ ಪ್ರಕಾರ, ಈ ಸ್ಕೂಟರ್ ಕೈಗೆಟುಕುವ ಬೆಲೆಯಲ್ಲಿಯೇ ಸಿಗಬಗುದು. ಇದು ರೂ.1.09 ಲಕ್ಷ ಬೆಲೆಯನ್ನು ಹೊಂದಿರಬಹುದು. ಆದರೆ, ಬದಲಾಯಿಸಬಹುದಾದ ಆಯ್ಕೆಯೊಂದಿರುವ ಸ್ಕೂಟರ್ ರೂ.1.45 ಲಕ್ಷ ಆರಂಭಿಕ ದರ ಪಡೆದಿರಬಹುದು.
ಈ ಬಗ್ಗೆ ಮಾತನಾಡಿರುವ ಸಿಂಪಲ್ ಎನರ್ಜಿ ಸಿಇಒ ಸುಹಾಸ್ ರಾಜ್‌ಕುಮಾರ್, 'ನಮ್ಮ ಗ್ರಾಹಕರಿಗೆ ಸೂಕ್ತವಾದ ಉತ್ಪನ್ನ ಒದಗಿಸುವುದು ಕಂಪನಿಯ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಕಳೆದ 2 ವರ್ಷಗಳಿಂದ ಹೆಚ್ಚಿನ ಬೇಡಿಕೆ ಇದ್ದರೂ ಸಿಂಪಲ್ ಒನ್ ಸ್ಕೂಟರ್ ಅನ್ನು ಎಲ್ಲ ರೀತಿಯಿಂದ ಪರೀಕ್ಷೆ ಮಾಡಿದ್ದೇವೆ. ಬ್ಯಾಟರಿಗಳು ಹೆಚ್ಚು ಸುರಕ್ಷಿತವಾಗಿವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಾಗಿದೆ. ಇದೀಗ, ಸ್ಕೂಟರ್ ಬಿಡುಗಡೆ ದಿನಾಂಕ ಘೋಷಣೆ ಮಾಡುತ್ತಿರುವುದು ಸಂತೋಷ ತಂದಿದೆ' ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ 'ಸಿಂಪಲ್ ವಿಷನ್ 1.0' ಉತ್ಪಾದನಾ ಘಟಕದಲ್ಲಿ ಈ ಸ್ಕೂಟರ್‌ಗಳನ್ನು ತಯಾರಿಸಲಾಗುತ್ತಿದ್ದು, ಸಿಂಪಲ್ ಒನ್ ದೇಶದಲ್ಲಿಯೇ ಗರಿಷ್ಠ ರೇಂಜ್ ನೊಂದಿಗೆ ಬಿಡುಗಡೆಯಾಗುತ್ತಿರುವುದರಿಂದ ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಕೊಂಡುಕೊಳ್ಳಬಹುದು. ಮುಂದಿನ ತಿಂಗಳು ಬಿಡುಗಡೆಯಾದ ಮೇಲೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ ಎಂಬುದು ಗೊತ್ತಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








