'ನಂಬರ್ 1 ರೇಂಜ್ ಕಿಂಗ್' ಬೆಂಗಳೂರಿನ Simple ONE 5 ದಿನದಲ್ಲಿ ಲಾಂಚ್: ಅದಕ್ಕೂ ಮೊದಲೇ ರಸ್ತೆಗೆ ಬಂದೇ ಬಿಡ್ತು!
ಭಾರತ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ನಿಧಾನವಾಗಿ ಜನಪ್ರಿಯತೆ ಗಳಿಸುತ್ತಿವೆ. ಅದರಲ್ಲೂ ಬೆಂಗಳೂರು ಮೂಲದ ಸಿಂಪಲ್ ಎನರ್ಜಿಯ ಬಹುನೀರಿಕ್ಷಿತ ಸಿಂಪಲ್ ಒನ್ (Simple ONE) ತನ್ನ ರೇಂಜ್ ನಿಂದಲೇ ಭಾರೀ ಸುದ್ದಿಯಾಗಿದ್ದು, ಕೇವಲ 5 ದಿನದಲ್ಲಿ ಅಂದರೆ, ಮೇ.23 ರಂದು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.
ಇದೀಗ, ರಸ್ತೆಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ತೆಗೆದಿರುವ ಅದರ ಚಿತ್ರಗಳು ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡಿವೆ. ಇತ್ತೀಚೆಗೆ ಕಂಪನಿ, ತಮಿಳುನಾಡಿನಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಈ ಸ್ಕೂಟರ್ ತಯಾರಿಕೆಯನ್ನು ಪ್ರಾರಂಭಿಸಿದ್ದು, ಮೊದಲ ತಯಾರಿಕ ಯುನಿಟ್ ಫೋಟೋವನ್ನು ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿತ್ತು. ಸದ್ಯದ ಮಾಹಿತಿ ಪ್ರಕಾರ, ಬಿಡುಗಡೆಯಾದ ದಿನದಿಂದಲೇ ವಿತರಣೆಯನ್ನು ಶುರು ಮಾಡಲಿದೆ.

ಆಸಕ್ತ ಗ್ರಾಹಕರು, ರೂ.1,947 ಪಾವತಿಸುವ ಮೂಲಕ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಮಾಡಬಹುದು. ಇದು ಸಂಪೂರ್ಣ ಮರುಪಾವತಿಸಬಹುದಾದ ಮೊತ್ತವಾಗಿದೆ. ಕಂಪನಿಯು ಈ ಸ್ಕೂಟರ್‌ನ್ನು 2021ರಲ್ಲಿಯೇ ಭಾರತದಲ್ಲಿ ಅನಾವರಣ ಮಾಡಿತ್ತು. ಆದರೆ, ವಿವಿಧ ಕಾರಣಗಳಿಗೆ ಲಾಂಚ್ ಡೇಟ್ ಮುಂದೂಡುತ್ತಲೇ ಬಂದಿತ್ತು. ಜೊತೆಗೆ ಇದರಲ್ಲಿ ಬಳಕೆ ಮಾಡಿರುವ ಬ್ಯಾಟರಿ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಕಂಪನಿ ತಿಳಿಸಿದೆ.
ಪ್ರಸ್ತುತ, ದೇಶೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ 'ಓಲಾ ಎಸ್1 ಪ್ರೊ' 181 km ರೇಂಜ್ ನೀಡುವ ಮೂಲಕ ಗರಿಷ್ಠ ಕಾರ್ಯಕ್ಷಮತೆ ಹೊಂದಿರುವ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಿಂಪಲ್ ಒನ್ ಅದಕ್ಕಿಂತಲ್ಲೂ ಹೆಚ್ಚಿನ ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದರಲ್ಲಿ ಬಳಕೆ ಮಾಡಿರುವ 4.8 kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಸಂಪೂರ್ಣ ಚಾರ್ಜಿನಲ್ಲಿ 236 km ರೇಂಜ್ ನೀಡಲಿದೆಯಂತೆ.

ಈ ಸ್ಕೂಟರ್ ಹೊಂದಿರುವ ಮಿಡ್ ಮೌಂಟೆಡ್ ಮೋಟಾರ್, ರೇರ್ ವೀಲ್ ಗೆ ಪವರ್ ವರ್ಗಾಯಿಸಲಿದ್ದು, 8.5 kW (11.3 bhp) ಅಥವಾ 4.5 kW (6.03 bhp) ಗರಿಷ್ಠ ಪವರ್ ಹಾಗೂ 72 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿರಲಿದೆ. ಕೇವಲ 2.77 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಪಡೆಯಲಿದ್ದು,105 kmph ಟಾಪ್ ಸ್ವೀಡ್ ಹೊಂದಿದೆ.
ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್, ಫ್ರಂಟ್ ಮತ್ತು ರೇರ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. 90/90 - 12 ಅಳತೆಯ ಟೈಯರ್ಸ್, 12 ಇಂಚಿನ ಅಲಾಯ್ ವೀಲ್ಸ್ ಪಡೆದಿದೆ. ಒಟ್ಟು 115 kg ತೂಕವಿದೆ. ಗ್ರಾಹಕರಿಗೆ ಅಜೂರ್ ಬ್ಲೂ, ಬ್ರೆಜನ್ ಬ್ಲಾಕ್, ಗ್ರೇಸ್ ವೈಟ್, ರೆಡ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ.

ಈ ಸ್ಕೂಟರ್ ಆಕರ್ಷಕ ಸ್ಪೋರ್ಟಿ ಲುಕ್ ಹೊಂದಿದ್ದು, ಖರೀದಿದಾರರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಮುಖ್ಯವಾಗಿ LED ಹೆಡ್‌ಲ್ಯಾಂಪ್ಸ್, 7 ಇಂಚಿನ ಟಚ್ ಸ್ಕ್ರೀನ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮ್ಯೂಸಿಕ್, ಫೋನ್ ಕಾಲ್ ವಿವರ ಪಡೆಯಲು ಬ್ಲೂಟೂತ್ ಕನೆಕ್ಟಿವಿಟಿ ಪಡೆದಿದೆ. ಬೆಲೆ ಬಗ್ಗೆ ಕಂಪನಿ ಎಲ್ಲಿಯೂ ಮಾಹಿತಿ ಬಹಿರಂಗಪಡಿಸಲ್ಲ. ಆದರೂ ರೂ.1.09 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಬಹುದು.
ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್, ಭಾರತದ ಮಾರುಕಟ್ಟೆಯಲ್ಲಿ ದೊರೆಯುವ ಓಲಾ, ಎಥರ್, ಟಿವಿಎಸ್ ಹಾಗೂ ಹೀರೋ ಕಂಪನಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಭಾರೀ ಪ್ರತಿಸ್ಪರ್ಧಿಯಾಗಲಿದೆ. ಈ ಸ್ಕೂಟರ್ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಬೆಲೆ ಎಷ್ಟು ಎಂಬ ಮಾಹಿತಿ ಸೋಮವಾರವೇ ಸಿಗಲಿದ್ದು, ಮುಂಬರುವ ದಿನಗಳಲ್ಲಿ ಹೇಗೆ ಕಮಲ್ ಮಾಡಲಿದೆ ಎಂಬುದು ಗೊತ್ತಾಗಲಿದೆ.


Click it and Unblock the Notifications








