TVS iQube Scooter : ಟಿವಿಎಸ್ ಐಕ್ಯೂಬ್ ಗ್ರಾಹಕರೇ.. ಬಿಗ್ ನ್ಯೂಸ್
ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯ Fame - II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ ಕಾರಣ, ಟಿವಿಎಸ್ (TVS) ತನ್ನ ಜನಪ್ರಿಯ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯನ್ನು ಏರಿಕೆ ಮಾಡಿತ್ತು. ಇದೀಗ ನೂತನ ದರ ಎಷ್ಟಾಗಿದೆ ಎಂಬುದರ ಬಗ್ಗೆ ಮಹತ್ವದ ಮಾಹಿತಿ ಸಿಕ್ಕಿದೆ.
ಟಿವಿಎಸ್ ಮೋಟಾರ್ ಕಂಪನಿ, ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ರೂಪಾಂತರಗಳ ಬೆಲೆಯನ್ನು ರೂ.17,000 ದಿಂದ ರೂ.22,000 ಹೆಚ್ಚಳ ಮಾಡಿತ್ತು. ನೂತನ ದರಗಳು ಜೂನ್ 1ರಿಂದಲೇ ಜಾರಿಗೆ ಬರಲಿದೆ ಎಂದು ಹೇಳಿತ್ತು. ಸದ್ಯ, ದೆಹಲಿಯ ಆನ್ ರೋಡ್ ಬೆಲೆ ಕುರಿತು ವಿವರ ಲಭಿಸಿದೆ. ಮೇ.20 (2023)ರ ಮೊದಲು ಐಕ್ಯೂಬ್ ಸ್ಕೂಟರ್ ಬುಕ್ಕಿಂಗ್ ಮಾಡಿದ್ದರೆ, ವೇರಿಯೆಂಟ್ ಅನುಗುಣವಾಗಿ ರೂ.1,16,184 ರಿಂದ ರೂ.1,28,849 ದರದಲ್ಲಿ ಕೊಂಡುಕೊಳ್ಳಬಹುದು.

ಮೇ.21ರ ನಂತರ ಆರ್ಡರ್ ಮಾಡಿದ ಖರೀದಿದಾರರಿಗೆ ಐಕ್ಯೂಬ್ ರೂಪಾಂತರ ರೂ.1,23,184 ಹಾಗೂ ಐಕ್ಯೂಬ್ ಎಸ್ ರೂಪಾಂತರ ರೂ.1,38,289 ಬೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಸಿಗುತ್ತದೆ. ರಾಜ್ಯಗಳ ಸಬ್ಸಿಡಿ ಅನುಗುಣವಾಗಿ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ದರದಲ್ಲೂ ವ್ಯತ್ಯಾಸವಾಗುತ್ತದೆ. ಹೆಚ್ಚಿನ ಮಾಹಿತಿ ಪಡೆಯಲು ಸಮೀಪದ ಡೀಲರ್ ಶಿಪ್ ಗೆ ಭೇಟಿ ನೀಡುವುದು ಉತ್ತಮ.
ಟಿವಿಎಸ್ ಕಂಪನಿ, ಇತ್ತೀಚೆಗೆ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಐತಿಹಾಸಿಕ ಸಾಧನೆ ಮಾಡಿತ್ತು. ಬಿಡುಗಡೆಯಾದಾಗಿನಿಂದ ಈವರೆಗೆ 1,00,000 ಲಕ್ಷ ಯುನಿಟ್ ಸೇಲ್ ಮಾಡಿ, ದಾಖಲೆ ನಿರ್ಮಿಸಿತ್ತು. ಕಳೆದ ಮೇ ತಿಂಗಳಲ್ಲಿಯು 20,000 ಯುನಿಟ್ ಐಕ್ಯೂಬ್ ಸ್ಕೂಟರ್ ಮಾರಿತ್ತು. ಇದು ಪ್ರತಿಸ್ಪರ್ಧಿ ಕಂಪನಿಗಳಿಗೆ ನಡುಕ ಹುಟ್ಟಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಟಿವಿಎಸ್ ಐಕ್ಯೂಬ್ ಮತ್ತು ಐಕ್ಯೂಬ್ ಎಸ್ ಸ್ಕೂಟರ್ ಕುರಿತಂತೆ ಒಂದಷ್ಟು ವಿಚಾರವನ್ನು ತಿಳಿದುಕೊಳ್ಳುವುದಾದರೆ, ಇವೆರೆಡು 3.04 kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಫುಲ್ ಚಾರ್ಜಿನಲ್ಲಿ 100 km ರೇಂಜ್ ನೀಡಲಿವೆ. ಕಳೆದ ಜನವರಿಯಲ್ಲಿ ನಡೆದ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ಐಕ್ಯೂಬ್ ST, 145 km ರೇಂಜ್ ಕೊಡಲಿದೆ. ಆದರೆ, ಇದು ಬಿಡುಗಡೆಯಾಗಿಲ್ಲ.
ಐಕ್ಯೂಬ್ ಮತ್ತು ಐಕ್ಯೂಬ್ S ರೂಪಾಂತರಗಳು 75 km/h ಟಾಪ್ ಸ್ವೀಡ್ ಹೊಂದಿದ್ದು, ಕೇವಲ 4 ಗಂಟೆ 30 ನಿಮಿಷದಲ್ಲಿ ಇವುಗಳ ಬ್ಯಾಟರಿ 0-80% ಚಾರ್ಜ್ ಆಗುತ್ತದೆ. ಸಸ್ಪೆನ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್, ರೇರ್ ಡ್ಯುಯಲ್ ಶಾಕ್ ಅಬ್ಸಾರ್ಬರ್ ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ಕುರಿತು ಮಾತನಾಡುವುದಾದರೆ, ಫ್ರಂಟ್ ಡಿಸ್ಕ್, ರೇರ್ ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.
ವೈಶಿಷ್ಟ್ಯದ ವಿಚಾರಕ್ಕೆ ಬರುವುದಾದರೆ, ಇವೆರೆಡು ಎಲೆಕ್ಟ್ರಿಕ್ ಸ್ಕೂಟರ್ ಗಳು 12 ಇಂಚಿನ ವೀಲ್ಸ್ ಪಡೆದಿವೆ. ಜೊತೆಗೆ ಆಕರ್ಷಕ ಫುಲ್ ಕಲರ್ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ. ರೇಂಜ್ ಸೇರಿದಂತೆ ವಿವಿಧ ಮಾಹಿತಿ ಪಡೆಯಲು ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್‌ನೊಂದಿಗೆ ಡಿಸ್‌ಪ್ಲೇಯನ್ನು ಸಂಪರ್ಕಿಸಬಹುದು. ಮೊಬೈಲ್ ಚಾರ್ಜ್ ಮಾಡಲು USB ಸಾಕೆಟ್ ಸಹ ಇದೆ.
ಒಟ್ಟಾರೆ, ಕೇಂದ್ರ ಕೈಗಾರಿಕಾ ಸಚಿವಾಲಯ ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ ಹಿನ್ನೆಲೆ, ಟಿವಿಎಸ್ ಐಕ್ಯೂಬ್ ಸ್ಕೂಟರ್ ಬೆಲೆಯನ್ನು ಹೆಚ್ಚಿದೆ. ಆದರೆ, ಈ ಎಲೆಕ್ಟ್ರಿಕ್ ಸ್ಕೂಟರ್ ಭಾರೀ ಫೇಮಸ್ ಆಗಿರುವುದರಿಂದ ದರ ಏರಿಕೆ ಅಷ್ಟೊಂದು ಪರಿಣಾಮ ಬೀರುವುದಿಲ್ಲ. ಈ ಜೂನ್ ತಿಂಗಳಲ್ಲಿಯು ಐಕ್ಯೂಬ್ ಭಾರತದ ಗ್ರಾಹಕರನ್ನು ಹೇಗೆ ಸೆಳೆಯಲಿದೆ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ.


Click it and Unblock the Notifications