TVS iQube Scooter : ಐಕ್ಯೂಬ್ ಗ್ರಾಹಕರೇ.. ಸಡನ್ ಶಾಕ್ ಕೊಡ್ತು ಟಿವಿಎಸ್
ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಟಿವಿಎಸ್ (TVS) ದೊಡ್ಡಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ಇದೀಗ, ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯ Fame -II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ ಹಿನ್ನೆಲೆ, ತನ್ನ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯಲ್ಲಿ ಏರಿಕೆ ಮಾಡಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಟಿವಿಎಸ್ ಮೋಟಾರ್ ಕಂಪನಿ ರೂಪಾಂತರಗಳಿಗೆ ಅನುಗುಣವಾಗಿ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯನ್ನು ರೂ.17,000 ರಿಂದ ರೂ.22,000 ಹೆಚ್ಚಳ ಮಾಡಿದೆ. ನೂತನ ದರ ಜೂನ್ 1 ರಿಂದಲೇ ಜಾರಿಗೆ ಬಂದಿದೆ. ಕಂಪನಿಯು ಮೇ.20ರ ಮುನ್ನ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಮಾಡಿದ ಗ್ರಾಹಕರಿಗೆ ಲಾಯಲ್ಟಿ ಬೆನಿಫಿಟ್ ಅನ್ನು ನೀಡುವುದಾಗಿ ಘೋಷಣೆ ಮಾಡಿದೆ.

ಸದ್ಯ, ಟಿವಿಎಸ್ ವೆಬ್‌ಸೈಟ್‌ನಲ್ಲಿ ಪರಿಷ್ಕರಣೆಗೊಂಡ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಕುರಿತ ಮಾಹಿತಿಯನ್ನು ನಿಖರವಾಗಿ ಅಪ್‌ಲೋಡ್ ಮಾಡಿಲ್ಲ. ದರ ಏರಿಕೆಗೂ ಮೊದಲು ಐಕ್ಯೂಬ್ ಸ್ಕೂಟರ್, ರೂ.1.66 ಲಕ್ಷದಿಂದ ರೂ.1.68 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿತ್ತು ಎಂದು ಫೈನಾಶಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಮುಂದಿನ ಕೆಲವೇ ಗಂಟೆಗಳಲ್ಲಿ ಅಧಿಕೃತ ಮಾಹಿತಿ ಹೊರಬೀಳಲಿದೆ.
ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಐಕ್ಯೂಬ್ ಮತ್ತು ಐಕ್ಯೂಬ್ S ಸ್ಕೂಟರ್ ಬಗ್ಗೆ ಮಾತನಾಡಿವುದಾದರೆ, ಇವೆರೆಡು 3.04 kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 100 km ರೇಂಜ್ ನೀಡಲಿವೆ. ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಟಾಪ್ ಎಂಡ್ ಮಾದರಿ ಐಕ್ಯೂಬ್ ST, 145 km ರೇಂಜ್ ಕೊಡಲಿದೆ. ಇದರ ಬೆಲೆ ಬಗ್ಗೆ ಯಾವುದೇ ವಿವರ ತಿಳಿದುಬಂದಿಲ್ಲ.
ಈ ಎಲೆಕ್ಟ್ರಿಕ್ ಸ್ಕೂಟರ್ 78 km/h ಟಾಪ್ ಸ್ವೀಡ್ ಹೊಂದಿದ್ದು, ಕೇವಲ 4 ಗಂಟೆ 30 ನಿಮಿಷದಲ್ಲಿ ಇದರ ಬ್ಯಾಟರಿ 0 - 80% ಚಾರ್ಜ್ ಆಗುತ್ತದೆ. ಜೊತೆಗೆ ಹಲವು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಆಕರ್ಷಕ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ. ರೈಡಿಂಗ್ ಅಂಕಿಅಂಶ ಸೇರಿದಂತೆ ಹೆಚ್ಚಿನ ಮಾಹಿತಿ ಪಡೆಯಲು ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್‌ನೊಂದಿಗೆ ಡಿಸ್‌ಪ್ಲೇ ಕನೆಕ್ಟ್ ಮಾಡಬಹುದು.
ದೇಶೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಟಿವಿಎಸ್ ಐಕ್ಯೂಬ್ ಭಾರೀ ಬೇಡಿಕೆ ಪಡೆದುಕೊಂಡಿದೆ. ಇತ್ತೀಚೆಗೆ ಕಂಪನಿ 1,00,000 ಯುನಿಟ್ ಐಕ್ಯೂಬ್ ಸ್ಕೂಟರ್ ಸೇಲ್ ಮಾಡಿ, ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿತ್ತು. ಅದರಲ್ಲೂ ಕಳೆದ ಮೇ ತಿಂಗಳಲ್ಲಿ ಬರೋಬ್ಬರಿ 20,000 ಯುನಿಟ್ ಸ್ಕೂಟರ್ ಮಾರಿದ್ದು, ಪ್ರತಿಸ್ಪರ್ಧಿ ಕಂಪನಿಗಳಿಗೆ ಸರಿಯಾಗಿಯೇ ಠಕ್ಕರ್ ನೀಡಿದೆ.
ಟಿವಿಎಸ್ ಮಾತ್ರವಲ್ಲದೆ, ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ 'ಓಲಾ' ಕೂಡ ತನ್ನ ಎಸ್1 ಸರಣಿ ಎಲೆಕ್ಟ್ರಿಕ್ ಸ್ಕೂಟರ್ ದರವನ್ನು ರೂ.15,000 ಏರಿಕೆ ಮಾಡಿದೆ. ಇದರಿಂದ ಓಲಾ ಎಸ್1 ಏರ್ ಬೆಲೆ ರೂ.99,999, ಓಲಾ ಎಸ್1 ದರ ರೂ.1,29,999 ಹಾಗೂ ಓಲಾ ಎಸ್1 ಪ್ರೊ ಬೆಲೆ ರೂ.1,39,999 ಆಗಿದೆ.
ಒಟ್ಟಾರೆ, ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯ Fame -II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ ನಂತರ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಬೆಲೆ ಏರಿಕೆ ಮಾಡಿವೆ. ಈಗಾಗಲೇ ಟಿವಿಎಸ್ ಐಕ್ಯೂಬ್ ಭಾರತ ಮಾರುಕಟ್ಟೆಯಲ್ಲಿ ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದ್ದು, ಈ ದರ ಹೆಚ್ಚಳ ಅದರ ಗ್ರಾಹಕರ ಮೇಲೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ.


Click it and Unblock the Notifications