ಅದ್ದೂರಿಯಾಗಿ ತೆರೆಕಂಡ TVS MotoSoul: ಆಕರ್ಷಕ ವಿನ್ಯಾಸದ ಕಸ್ಟಮ್ ಬೈಕ್‌ಗಳ ಅನಾವರಣ
ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಟಿವಿಎಸ್ ಮೋಟಾರ್, ಈ ಬಾರಿಯ ದೆಹಲಿಯಲ್ಲಿ ಆಟೋ ಎಕ್ಸ್‌ಪೋದಲ್ಲಿ ಭಾಗವಹಿಸಲಿಲ್ಲ. ಆದರೆ, ಕಳೆದ ವರ್ಷದಿಂದ ಗೋವಾದಲ್ಲಿ ತನ್ನ ಗ್ರಾಹಕರಿಗಾಗಿ 'ಟಿವಿಎಸ್ ಮೋಟೋಸೊಲ್' (TVS MotoSoul) ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದೀಗ, ಎರಡು ದಿನದ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಈ ಕಾರ್ಯಕ್ರಮವು ಬಹಳ ಅದ್ದೂರಿಯಿಂದ ನಡೆದಿದ್ದು, ಟಿವಿಎಸ್ ಕಂಪನಿಯು ಮೊದಲ ದಿನ ನಾಲ್ಕು ರೋನಿನ್ ಮೋಟಾರ್‌ಸೈಕಲ್‌ನ ಹೊಸ ಆವೃತ್ತಿಗಳನ್ನು ಪ್ರದರ್ಶಿಸಿದೆ. ಹೊಚ್ಚ ಹೊಸ ಬೈಕ್ ಗಳು ಅತ್ಯಾಕರ್ಷಕ ಲುಕ್ ಹೊಂದಿವೆ ಎಂದು ಹೇಳಬಹುದು. ಜೊತೆಗೆ ಡರ್ಟ್ ರೇಸ್, ಮೋಟೋ ಕ್ರಾಸ್‌ಫಿಟ್, ಸ್ಟಂಟ್ ಶೋ, ಸ್ಲೋ ರೇಸ್ ಹಾಗೂ ಮ್ಯೂಸಿಕ್ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆಯು ವ್ಯಕ್ತವಾಗಿದೆ.

ಈ ನೂತನ ರೋನಿನ್ ಬೈಕ್‌ಗಳ ನಾಲ್ಕು ಮಾದರಿಗಳು ವಿಭಿನ್ನವಾದ ಹೆಸರನ್ನು ಹೊಂದಿವೆ. ಆದರೆ, ಬೇರೆ, ಬೇರೆ ಕಂಪನಿಗಳು ಅವುಗಳನ್ನು ಮರು ವಿನ್ಯಾಸ ಮಾಡಿವೆ. 'ಮುಸಾಶಿನಿ' ಮಾದರಿಯನ್ನು ಇಂಡೋನೇಷ್ಯಾದ ಸ್ಮೋಕ್ಡ್ ಗ್ಯಾರೇಜ್ ಅಭಿವೃದ್ಧಿಪಡಿದೆ. ಜರ್ಮನಿಯ ಜೆವಿಬಿ ಮೋಟೋ 'ಅಗೊಂಡಾ' ಮಾದರಿಯನ್ನು ತಯಾರಿಸಿದೆ. ರಜಪೂತಾನ ಕಸ್ಟಮ್ಸ್ 'ವಾಕಿಜಾಶಿ' ಮಾದರಿಯನ್ನು ವಿನ್ಯಾಸ ಮಾಡಿದ್ದು, ಟಿವಿಎಸ್ ಕಂಪನಿಯ ಡಿಸೈನ್ ಟೀಮ್ 'ಎಸ್‌ಸಿಆರ್' ಮಾದರಿಯನ್ನು ರೆಡಿ ಮಾಡಿದೆ.
ಟಿವಿಎಸ್ ಕಂಪನಿಯು ರೋನಿನ್ ಬೈಕ್‌ಗಳ ಮೂಲಕ ಫ್ಲಾಟ್ ಟ್ರ್ಯಾಕ್ ರೇಸಿಂಗ್‌ಗೆ ಎಂಟ್ರಿ ಕೊಡುವುದಾಗಿಯೂ ಘೋಷಣೆ ಮಾಡಿದೆ. ಆದರೆ, ಈ ಬೈಕ್‌ಗಳು ಯಾವಾಗ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಆದರೆ, ಆಕರ್ಷಕ ಲುಕ್ ಪಡೆದಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಖರೀದಿಸಬಹುದು. ಇದು ಸರಿ ಸುಮಾರು ರೂ.1.50 ಲಕ್ಷ ಆರಂಭಿಕ ಬೆಲೆಯಲ್ಲಿ ಸಿಗಬಹುದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

ಈ ಬೈಕ್ ಗಳು ಹತ್ತಾರು ವೈಶಿಷ್ಟ್ಯಗಳೊಂದಿಗೆ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು. ಪ್ರಮುಖವಾಗಿ ಬ್ಲೂಟೂತ್ ಕನೆಕ್ಟ್ದ್, ವಿವಿಧ ರೈಡಿಂಗ್ ಮೋಡ್‌ಗಳು, ದೊಡ್ಡದಾದ ಹ್ಯಾಂಡಲ್‌ಬಾರ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಡ್ಯುಯಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ ಹೊಂದಿರಬಹುದು. ಟಿವಿಎಸ್ ರೋನಿನ್ ಬೈಕ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು ಮುಂಬರಲಿರುವ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ 225.9 ಸಿಸಿ ಎಂಜಿನ್ ಹೊಂದಿರಲಿದ್ದು, 20.1 bhp ಪವರ್, 19.93 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.
ಮೋಟೋಸೊಲ್ ಕಾರ್ಯಕ್ರಮದ ಆಯೋಜನೆ ಬಗ್ಗೆ ಮಾತನಾಡಿದ ಟಿವಿಎಸ್ ಮೋಟಾರ್ ಕಂಪನಿಯ ಎಂಡಿ ಸುದರ್ಶನ್ ವೇಣು, ನಮ್ಮ ಗ್ರಾಹಕರಿಗಾಗಿ ಈ ಕಾರ್ಯಕ್ರಮ ಆಯೋಜಿಸುತ್ತಿರುವುದು ಸಂತೋಷ ತಂದಿದೆ. ಜಾಗತಿಕವಾಗಿ 50 ಲಕ್ಷ ರೋನಿನ್ ಹಾಗೂ ಅಪಾಚೆ ಸರಣಿಯ ಬೈಕ್ ಗಳನ್ನೂ ಮಾರಾಟ ಮಾಡಿರುವುದು ನಮ್ಮ ದೊಡ್ಡ ಸಾಧನೆಯಾಗಿದೆ. ಈಗ ರೋನಿನ್ ಹೊಸ ಆವೃತ್ತಿಗಳನ್ನು ಪ್ರದರ್ಶಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಹೊಸ ಖರೀದಿದಾರನ್ನು ಸೆಳೆಯಲು ಮತ್ತಷ್ಟು ಅತ್ಯಾಕರ್ಷಕ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಎರಡನೇ ದಿನದ ಕಾರ್ಯಕ್ರಮದಲ್ಲಿ ಟಿವಿಎಸ್ ಕಂಪನಿಯು ತನ್ನ ಗ್ರಾಹಕರಿಗಾಗಿ ಎರಡು ಬಹುಪಯೋಗಿ ಸ್ಮಾರ್ಟ್ ಕನೆಕ್ಟ್ ಎಸ್10ಎಕ್ಸ್ (Smart Xonnect S10X) ಹಾಗೂ ಎಸ್20ಎಕ್ಸ್ ಎಂಬ ಹೆಲ್ಮೆಟ್ ಸಂವಹನ ಸಾಧನಗಳನ್ನು (communication devices) ಬಿಡುಗಡೆ ಮಾಡಿದೆ. ಸ್ಮಾರ್ಟ್ ಕನೆಕ್ಟ್ ಎಸ್10ಎಕ್ಸ್ ರೂ.8,499 ಬೆಲೆಯನ್ನು ಹೊಂದಿದ್ದರೆ, ಸ್ಮಾರ್ಟ್ ಕನೆಕ್ಟ್ ಎಸ್20ಎಕ್ಸ್ ರೂ.10,999 ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ ಎಂದು ಹೇಳಬಹುದು.
ಇವರೆಡು ಹೆಲ್ಮೆಟ್ ಗಳು ನವೀಕರಣಗೊಂಡಿರುವ ಟಿವಿಎಸ್ ಕನೆಕ್ಟ್ ಅಪ್ಲಿಕೇಶನ್‌ನೊಂದಿಗೆ ಸಂಪರ್ಕಿತಗೊಂಡಿದ್ದು, ಇದರಲ್ಲಿರುವ ಇಂಟರ್‌ಕಾಮ್ ವ್ಯವಸ್ಥೆಯಿಂದ ಅಪ್ಲಿಕೇಶನ್‌ಗೆ ಕನೆಕ್ಟ್ ಆಗಿರುವ ರೈಡರ್‌ಗಳೊಂದಿಗೆ 1.2 ಕಿಲೋಮೀಟರ್ ದೂರದವೆರೆಗೆ ಮಾತುಕತೆ ನಡೆಸಸಲು ಅನುಮತಿಸಲಾಗಿದೆ. ಜೊತೆಗೆ ಬ್ಲೂಟೂತ್ ಸಹ ಬೆಂಬಲಿಸುತ್ತದೆ. ಮೊಬೈಲ್ ಜಿಪಿಎಸ್ ನ್ಯಾವಿಗೇಷನ್‌ಗೂ ಅವಕಾಶ ನೀಡುತ್ತದೆ. ಅಲ್ಲದೆ, ಹತ್ತಾರು ವೈಶಿಷ್ಟ್ಯಗಳನ್ನು ಇವು ಪಡೆದುಕೊಂಡಿವೆ ಎಂದು ಹೇಳುವುದರಲ್ಲಿ ತಪ್ಪಿಲ್ಲ.
ಎರಡನೇ ದಿನದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಟಿವಿಎಸ್ ಮೋಟಾರ್ ಕಂಪನಿಯ ಬ್ಯುಸಿನೆಸ್ ವಿಭಾಗದ ಮುಖ್ಯಸ್ಥ ವಿಮಲ್ ಸುಂಬ್ಲಿ ಅವರು, 'ನಮ್ಮ ಗ್ರಾಹಕರು, ಮೋಟಾರ್ ಸೈಕಲ್ ಹಾಗೂ ಸಂಗೀತ ಪ್ರಿಯರಿಗೆ ಈ ಕಾರ್ಯಕ್ರಮ ಒಳ್ಳೆಯ ಅನುಭವವನ್ನು ನೀಡಿದೆ ಎಂದು ಭಾವಿಸುತ್ತೇವೆ. ಅಂತಿಮವಾಗಿ, ಇದರ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು, ಈ ವರ್ಷ ಗ್ರಾಹಕರಿಂದ ಪಡೆದ ಪ್ರತಿಕ್ರಿಯೆಗಳು ತುಂಬಾ ಉತ್ತೇಜನಕಾರಿಯಾಗಿದೆ' ಎಂದು ಹೇಳಿದ್ದಾರೆ.


Click it and Unblock the Notifications