330 Km ಮೈಲೇಜ್.. 95 ಸಾವಿರದ ಬಜಾಜ್ ಫ್ರೀಡಂ CNG ಬೈಕ್‌ಗಾಗಿ ಕ್ಯೂ ನಿಂತ ಗ್ರಾಹಕರು: ರೆಕಾರ್ಡ್ ಸಂಖ್ಯೆಯಲ್ಲಿ ಮಾರಾಟ!
ಪುಣೆ ಮೂಲದ ಬಜಾಜ್ ಆಟೋ (Bajaj Auto) ಜನಪ್ರಿಯ ದ್ವಿಚಕ್ರ ವಾಹನ (Two wheller) ತಯಾರಕ ಕಂಪನಿಯಾಗಿಯಾಗಿದೆ. ಕಳೆದ ಜುಲೈನಲ್ಲಿ ವಿಶ್ವದ ಮೊದಲ ಸಿಎನ್‌ಜಿ ಬೈಕ್ 'ಫ್ರೀಡಂ 125'ನ್ನು ಬಿಡುಗಡೆಗೊಳಿಸಲಾಗಿತ್ತು. ಅಂದಿನಿಂದಲೇ ಈ ಮೋಟಾರ್‌ಸೈಕಲ್‌ಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಖರೀದಿದಾರರೂ ಸಹ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ನೂತನ ಬಜಾಜ್ ಫ್ರೀಡಂ 125 ಬೈಕ್ ಮಾರಾಟದ ಅಂಕಿಅಂಶಗಳು ಬಹಿರಂಗಗೊಂಡಿವೆ. ದಸರಾ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆ, ಈ ಅಕ್ಟೋಬರ್‌ನಲ್ಲಿ ದಾಖಲೆ ಸಂಖ್ಯೆಯಲ್ಲಿ ಮಾರಾಟಗೊಂಡಿವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಬಜಾಜ್ ಕಂಪನಿಯು ಜುಲೈನಿಂದ ನವೆಂಬರ್ 3 ರವರೆಗೆ ಒಟ್ಟು 20,942 ಯುನಿಟ್ 'ಫ್ರೀಡಂ 125' ಬೈಕ್‌ಗಳನ್ನು ಮಾರಾಟ ಮಾಡಿದೆ. ಅದರಲ್ಲಿ ಅಕ್ಟೋಬರ್‌ವೊಂದರಲ್ಲೇ 11,041 ಯುನಿಟ್, ಸೆಪ್ಟೆಂಬರ್‌ನಲ್ಲಿ 4,937 ಯುನಿಟ್, ಆಗಸ್ಟ್‌ನಲ್ಲಿ 4,111 ಯುನಿಟ್ ಹಾಗೂ ಜುಲೈನಲ್ಲಿ 272 ಯುನಿಟ್ ಮೋಟಾರ್‌ಸೈಕಲ್‌ನ್ನು ಮಾರಾಟ ಮಾಡಲಾಗಿದೆ. ವಿಶೇಷವಾಗಿ ನವೆಂಬರ್ 1 ರಿಂದ 3 ರವರೆಗೆ 581 ಯುನಿಟ್‌ಗಳನ್ನು ಮಾರಲಾಗಿದೆ.

ದೇಶಾದ್ಯಂತ 77 ನಗರಗಳಲ್ಲಿ ಹೊಚ್ಚ ಹೊಸ 'ಬಜಾಜ್ ಫ್ರೀಡಂ 125' ಬೈಕ್, ಖರೀದಿಗೆ ಲಭ್ಯವಿದೆ. ಇದು ಕನಿಷ್ಠ ರೂ.95 ಸಾವಿರದಿಂದ ಗರಿಷ್ಠ ರೂ.1.10 ಲಕ್ಷದವರೆಗೆ (ಎಕ್ಸ್ ಶೋರೂಂ) ಬೆಲೆಯನ್ನು ಪಡೆದಿದೆ. ಡ್ರಮ್, ಡ್ರಮ್ ಎಲ್ಇಡಿ ಹಾಗೂ ಡಿಸ್ಕ್ ಎಲ್ಇಡಿ ಎಂಬ 3 ಆಕರ್ಷಕ ರೂಪಾಂತರಗಳನ್ನು (ವೇರಿಯೆಂಟ್) ಒಳಗೊಂಡಿದೆ.
ಈ ಬಜಾಜ್ ಫ್ರೀಡಂ 125 (Bajaj Freedom 125) ಮೋಟಾರ್‌ಸೈಕಲ್ 125 ಸಿಸಿ ಏರ್-ಕೂಲ್ಡ್ ಸಿಂಗಲ್-ಸಿಲಿಂಡರ್ ಪೆಟ್ರೋಲ್/ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿದ್ದು, 9.4 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 9.7 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ.

ನೂತನ ಮೋಟಾರ್‌ಸೈಕಲ್ ತಲಾ 2 ಲೀಟರ್/ಕೆಜಿ ಸಾಮರ್ಥ್ಯದ ಪೆಟ್ರೋಲ್ & ಸಿಎನ್‌ಜಿ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಪಡೆದಿದೆ. ಒಟ್ಟು 330 ಕಿಲೋಮೀಟರ್ (ಪೆಟ್ರೋಲ್ ಮೋಡ್ - 130 ಕಿಲೋಮೀಟರ್, ಸಿಎನ್‌ಜಿ ಮೋಡ್ - 200 ಕಿಲೋಮೀಟರ್) ಮೈಲೇಜ್ ನೀಡುತ್ತದೆ. ಸಿಎನ್‌ಜಿ ಪವರ್‌ಟ್ರೇನ್ ಹೊಂದಿರುವುದರಿಂದ ವಾತಾವರಣಕ್ಕೆ ಸೇರುವ ಇಂಗಾಲದ ಪ್ರಮಾಣವು ಬಹಳಷ್ಟು ಕಡಿಮೆಯಾಗುತ್ತದೆ.
ಹೊಚ್ಚ ಹೊಸ ಬಜಾಜ್ ಫ್ರೀಡಂ 125 ಬೈಕ್ ಸಾಕಷ್ಟು ಅತ್ಯಾಧುನಿಕವಾಗಿರುವ ವಿನ್ಯಾಸವನ್ನು ಒಳಗೊಂಡಿದೆ. ಎಲ್ಇಡಿ ಹೆಡ್‌ಲೈಟ್, ಬ್ಲೂಟೂತ್ ಕನೆಕ್ಟಿವಿಟಿ, ಎಲ್‌ಸಿಡಿ ಡಿಸ್‌ಪ್ಲೇ ಸೇರಿದಂತೆ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ಕೆರಿಬಿಯನ್ ಬ್ಲೂ, ಎಬೊನಿ ಬ್ಲ್ಯಾಕ್-ಗ್ರೇ, ಪ್ಯೂಟರ್ ಗ್ರೇ-ಬ್ಲ್ಯಾಕ್ & ರೇಸಿಂಗ್ ರೆಡ್ ಸೇರಿದಂತೆ ಹಲವು ಬಣ್ಣಗಳೊಂದಿಗೂ ಲಭ್ಯವಿದೆ.
ಈ ಬೈಕ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಸವಾರರ ರಕ್ಷಣೆಗಾಗಿ ಡಿಸ್ಕ್ & ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ. 147 ಕೆಜಿ ತೂಕ ಸಹ ಇದ್ದು, ಅತ್ಯುತ್ತಮವಾಗಿರುವ ವೀಲ್‌ಗಳು ಮತ್ತು ಟೈರ್‌ಗಳನ್ನು ಒಳಗೊಂಡಿದೆ.
ಒಟ್ಟಾರೆಯಾಗಿ ವಿಶ್ವದ ಮೊದಲ ಸಿಎನ್‌ಜಿ ಬೈಕ್ ಆಗಿರುವ 'ಬಜಾಜ್ ಫ್ರೀಡಂ 125'ನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಬೈಕ್, ಗರಿಷ್ಠ ಮೈಲೇಜ್ ನೀಡುವುದರೊಂದಿಗೆ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಸಹ ಖರೀದಿ ಮಾಡುವ ನಿರೀಕ್ಷೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








