Ather: ಟ್ರಕ್ ಭರ್ತಿ ಬೆಂಗಳೂರಿನ ನೂರಾರು ಎಥರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ವಿದೇಶಕ್ಕೆ ರಫ್ತು!
ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಎಥರ್ ಎನರ್ಜಿ (Ather Energy) ಪ್ರಖ್ಯಾತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Electric Two wheeler) ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವ ವಿವಿಧ ಇ-ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಆಗಸ್ಟ್‌ನಲ್ಲಿ ಕಂಪನಿಯು ಶ್ರೀಲಂಕಾ ಮಾರುಕಟ್ಟೆಯನ್ನು ಪ್ರವೇಶಿಸುವುದಾಗಿ ಘೋಷಣೆ ಮಾಡಿತ್ತು. ಸದ್ಯ, ಆ ದೇಶಕ್ಕೆ ಮೊದಲ ಬ್ಯಾಚ್‌ನ ಎಲ್ಲ 450 ಸರಣಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ರಫ್ತು ಮಾಡುವುದಕ್ಕೆ ಶುರು ಮಾಡಿದೆ. ಕೆಲವೇ ದಿನಗಳಲ್ಲಿ ನೂತನ ಇ-ಸ್ಕೂಟರ್‌ಗಳು ಶ್ರೀಲಂಕಾ ಗ್ರಾಹಕರಿಗೆ ವಿತರಣೆಯಾಗಲಿವೆ ಎಂದು ವರದಿಯಾಗಿದೆ.
ಈ ಕುರಿತಂತೆ 'ಎಕ್ಸ್' ಖಾತೆಯಲ್ಲಿ ಎಥರ್ ಎನರ್ಜಿ ಸಿಇಒ ತರುಣ್ ಮೆಹ್ತಾ (Tarun Mehta) ಅವರು, ಟ್ರಕ್‌ನಲ್ಲಿ ಹೊಚ್ಚ ಹೊಸ 450 ಸರಣಿ (450 Series) ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತುಂಬುತ್ತಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನೊಂದಿಗೆ ಎಥರ್‌ನ 450 ಎಲೆಕ್ಟ್ರಿಕ್ ಸ್ಕೂಟರ್‌ಗಳು ಗೋಡನ್‌ನಿಂದ ಶ್ರೀಲಂಕಾಕ್ಕೆ ಹೊರಟಿವೆ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಕಳೆದ ವರ್ಷದ ನವೆಂಬರ್‌ನಲ್ಲಿ ಎಥರ್ ಎನರ್ಜಿ ತನ್ನ ಮೊದಲ ಅಂತರರಾಷ್ಟ್ರೀಯ ಡೀಲರ್‌ಶಿಪ್‌ನ್ನು ನೇಪಾಳದ ಕಠ್ಮಂಡುನಲ್ಲಿ ವೈದ್ಯ ಎನರ್ಜಿ ಸಹಭಾಗಿತ್ವದಲ್ಲಿ ಪ್ರಾರಂಭಿಸಿತ್ತು. ಅಲ್ಲಿ '450ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಿಡುಗಡೆಗೊಳಿಸಿತ್ತು. ಎಥರ್ ಎನರ್ಜಿ ತನ್ನ ವ್ಯಾಪಾರೋದ್ಯಮ ವಿಸ್ತರಿಸಲು ಬಹಳಷ್ಟು ಶ್ರಮಿಸುತ್ತಿದೆ. ಅದರ ಭಾಗವಾಗಿ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ರೂ.2,000 ಕೋಟಿ ಹೂಡಿಕೆಯೊಂದಿಗೆ 3ನೇ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗಿದೆ. ಈ ಸಂಬಂಧ ಮಹಾರಾಷ್ಟ್ರ ಸರ್ಕಾರದೊಂದಿಗೂ ಮಾತುಕತೆ ನಡೆಸಲಾಗಿತ್ತು.
ಎಥರ್ ಎನರ್ಜಿ ಹಲವು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುವುದರೊಂದಿಗೆ 2024ರ ಹಣಕಾಸು ವರ್ಷದಲ್ಲಿ ರೂ.1,753.8 ಕೋಟಿ ಆದಾಯ ಗಳಿಸಿತ್ತು. ಈ ಸೆಪ್ಟೆಂಬರ್‌ನಲ್ಲಿ ಬರೋಬ್ಬರಿ 12,579 ಯುನಿಟ್ ಇ-ಸ್ಕೂಟರ್‌ಗಳನ್ನು ಮಾರಾಟಗೊಳಿಸಿದೆ. 2023ರ ಇದೇ ಅವಧಿಯಲ್ಲಿ ಮಾರಾಟ ಮಾಡಿದ 7,169 ಯುನಿಟ್‌ಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ 75% ಬೆಳವಣಿಗೆ ಕಂಡಿದೆ.

ಶ್ರೀಲಂಕಾಕ್ಕೆ ರವಾನಿಸಿರುವ ಎಥರ್ 450 ಸರಣಿ (Ather 450 Series) ಇ-ಸ್ಕೂಟರ್‌ಗಳು ವಿವಿಧ ರೂಪದಲ್ಲಿ ಖರೀದಿಗೆ ಲಭ್ಯವಿವೆ. ಇದರ 450ಎಸ್ ಎಲೆಕ್ಟ್ರಿಕ್ ಸ್ಕೂಟರ್ ರೂ.1.26 ಲಕ್ಷ (ಎಕ್ಸ್ ಶೋರೂಂ - ಬೆಂಗಳೂರು) ಬೆಲೆಯನ್ನು ಹೊಂದಿದೆ. 2.9 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಒಳಗೊಂಡಿದ್ದು, ಭರ್ತಿ ಚಾರ್ಜ್‌ನಲ್ಲಿ 115 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ.
ಈ ಎಥರ್ 450ಎಸ್ ಇ-ಸ್ಕೂಟರ್ 5.4 ಕೆಡಬ್ಲ್ಯೂ ಮೋಟಾರ್ ಒಳಗೊಂಡಿದ್ದು, 90 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 2.9 ಸೆಕೆಂಡುಗಳಲ್ಲಿ 0-40 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. ಸ್ಮಾರ್ಟ್ ಇಕೋ, ಇಕೋ, ರೈಡ್ ಹಾಗೂ ಸ್ಪೋರ್ಟ್ ಎಂಬ ಮೋಡ್‌ಗಳನ್ನು ಹೊಂದಿದೆ. ಟಚ್‌ಸ್ಕ್ರೀನ್ ಟಿಎಫ್‌ಟಿ ಯುನಿಟ್, ಟರ್ನ್-ಬೈ-ಟರ್ನ್ ನ್ಯಾವಿಗೇಶನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಎಥರ್ 450ಎಕ್ಸ್ (Ather 450X) ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೇಳುವುದಾದರೆ, ಇದು ರೂ.1.41 ರಿಂದ ರೂ.1.55 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 2.9 ಕೆಡಬ್ಲ್ಯೂಹೆಚ್ ಮತ್ತು 3.7 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 111 ರಿಂದ 150 ಕಿಲೋಮೀಟರ್‌ವರೆಗೆ ಓಡುತ್ತದೆ. ಎಥರ್ 450ಅಪೆಕ್ಸ್ (Ather 450Apex) ಇ-ಸ್ಕೂಟರ್ ರೂ.1.95 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ.
ಇನ್ನು, ದೇಶದಲ್ಲಿ ಜನಪ್ರಿಯವಾಗಿರುವ ಎಥರ್ 450 ಸರಣಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಶೀಲಂಕಾಕ್ಕೆ ರಫ್ತಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ವಿವಿಧ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟುಪಟ್ಟು ಕಂಪನಿಯ ಸ್ಕೂಟರ್‌ಗಳನ್ನು ಖರೀದಿಸುತ್ತಿರುವುದರಿಂದ ಮಾರಾಟ ಪ್ರಮಾಣ ದಿನದಿಂದ ದಿನಕ್ಕೆ ಪ್ರಗತಿಯಾಗುತ್ತಿದ್ದು, ಮುಂಬರುವ ತಿಂಗಳಲ್ಲಿ ಮತ್ತಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








