ಬೆಂಗಳೂರಿನ ಎಥರ್‌ನಿಂದ ಮಹಾರಾಷ್ಟ್ರದಲ್ಲಿ ರೂ.2,000 ಕೋಟಿ ಹೂಡಿಕೆ: ರಾಜಕೀಯ ಕೆಸರೆರೆಚಾಟ ಜೋರು!
ಬೆಂಗಳೂರು ಮೂಲದ ಎಥರ್ ಎನರ್ಜಿ (Ather Energy) ತನ್ನ ಉದ್ಯಮವನ್ನು ವಿಸ್ತರಿಸಲು ಮುಂದಾಗಿದ್ದು, ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ರೂ.2,000 ಕೋಟಿ ಬಂಡವಾಳ ಹೂಡಿಕೆಯೊಂದಿಗೆ ಮೂರನೇ ತಯಾರಿಕಾ ಘಟಕವನ್ನು ಸ್ಥಾಪಿಸುತ್ತಿದೆ. ಈ ಕುರಿತಂತೆ ಬುಧವಾರ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಅಧಿಕೃತ ಘೋಷಣೆ ಮಾಡಿದ್ದರು. 'ಎಥರ್ ಎನರ್ಜಿ ಸಂಸ್ಥಾಪಕ ಸ್ವಪ್ನಿಲ್ ಜೈನ್ ಅವರೊಂದಿಗೆ ಸಭೆ ನಡೆಸಲಾಯಿತು. ಕಂಪನಿಯು ತನ್ನ 3ನೇ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಮಹಾರಾಷ್ಟ್ರದ ಔರಂಗಾಬಾದ್‌ನ್ನು ಆಯ್ಕೆ ಮಾಡಿದೆ. ನನಗೆ ಅದು ಸಂತೋಷವನ್ನು ತಂದಿದೆ' ಎಂದು ಹೇಳಿದ್ದರು. ಇದು ಕರ್ನಾಟಕದಲ್ಲಿ ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿದೆ.
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಅಧ್ಯಕ್ಷ ಬಿ.ವೈ ವಿಜಯೇಂದ್ರ (B.Y Vijayendra), ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 'ನಾಚಿಕೆಗೇಡಿನ ಸಂಗತಿ, ನಿರ್ಲಕ್ಷತೆ ಹಾಗೂ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿಯ ಕೊರತೆಯಿಂದಾಗಿ ರಾಜ್ಯ ಸರ್ಕಾರವು ರೂ.2000 ಕೋಟಿ ಹೂಡಿಕೆಯ ಅವಕಾಶವನ್ನು ಕಳೆದುಕೊಂಡಿದೆ' ಎಂದು ಹೇಳಿದ್ದಾರೆ.

'ಎಥರ್ ಎನರ್ಜಿ ಕರ್ನಾಟಕದಲ್ಲಿ ಮುಖ್ಯ ಕಚೇರಿ ಹೊಂದಿದ್ದರೂ ಮಹಾರಾಷ್ಟ್ರದಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದೆ. ಇದು ಹೂಡಿಕೆಗೆ ಮೊದಲ ಆಯ್ಕೆಯ ತಾಣವಾಗಿದ್ದ ಕರ್ನಾಟಕದ ಸ್ಥಾನಮಾನವನ್ನು ನಾಶಪಡಿಸಿದೆ. ಕಾಂಗ್ರೆಸ್ ಸರ್ಕಾರ ನಿದ್ರೆಯಿಂದ ಎಚ್ಚೆತ್ತುಕೊಂಡು ಹೊಸ ಹೂಡಿಕೆಗಳಿಗೆ ಆದ್ಯತೆಯ ರಾಜ್ಯವಾಗಿ ಕರ್ನಾಟಕವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ' ಎಂದಿದ್ದಾರೆ.
ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ (Arvind Bellad) ಕೂಡ ಪತ್ರಿಕಾ ಪ್ರಕಟಣೆಯನ್ನು ಹೊರಡಿಸುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. 'ಎಥರ್ ಎನರ್ಜಿ ರಾಜ್ಯದಲ್ಲಿ ರೂ.2 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿ, 4 ಸಾವಿರ ಜನರಿಗೆ ಉದ್ದೇಶಿಸಿತ್ತು. ಆದರೆ, ರಾಜ್ಯ ಸರ್ಕಾರ ಸ್ಪಂದಿಸದ ಹಿನ್ನೆಲೆ, ಮಹಾರಾಷ್ಟ್ರದಲ್ಲಿ ತನ್ನ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಿದೆ. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ದೊಡ್ಡಮಟ್ಟದಲ್ಲಿ ಅವಕಾಶಗಳಿದ್ದರೂ ಸರ್ಕಾರ ಕಂಪನಿಯೊಂದಿಗೆ ಮಾತುಕತೆ ನಡೆಸಿ, ಮನವೊಲಿಸಲು ವಿಫಲವಾಗಿದೆ' ಎಂದು ಟೀಕಿಸಿದ್ದಾರೆ.
ಈ ಕುರಿತಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (M.B.Patil) ಎಕ್ಸ್ ಖಾತೆಯಲ್ಲಿ ಬಿ.ವೈ ವಿಜಯೇಂದ್ರ ಹಾಗೂ ಅರವಿಂದ ಬೆಲ್ಲದ ಅವರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. 'ವಿದ್ಯುತ್ ಚಾಲಿತ ವಾಹನ ತಯಾರಿಕೆ ಕ್ಷೇತ್ರದಲ್ಲಿ ಹೆಸರು ಮಾಡಿರುವ ಎಥರ್ ಕಂಪನಿ ರಾಜ್ಯವನ್ನು ಬಿಟ್ಟು ಮಹಾರಾಷ್ಟ್ರಕ್ಕೆ ಸ್ಥಳಾಂತರಗೊಳ್ಳುವ ನಿರ್ಧಾರ ಮಾಡಿರುವುದಕ್ಕೆ ಈ ಹಿಂದಿನ ಬಿಜೆಪಿ ಸರ್ಕಾರದ ವೈಫಲ್ಯವೇ ಕಾರಣವಾಗಿದೆ' ಎಂದಿದ್ದಾರೆ.
'ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರವಿದ್ದಾಗ ಎಥರ್ ಕಂಪನಿಯು ತನ್ನ ಉತ್ಪಾದನಾ ಘಟಕ ನಿರ್ಮಾಣಕ್ಕೆ 50 ಎಕರೆ ಜಾಗವನ್ನು ಕೇಳಿತ್ತು. ಅವರ ಸರ್ಕಾರವು ಕೇವಲ 35 ಎಕರೆ ಮಂಜೂರು ಮಾಡಿತ್ತು. ಇದರಲ್ಲೂ 5 ಎಕರೆ ವಿವಾದಕ್ಕೆ ಒಳಗಾಗಿತ್ತು. ಇದರಿಂದ ರೋಸಿ ಹೋದ ಕಂಪನಿಯು ತನ್ನ 35 ಎಕರೆಯನ್ನು ಸರ್ಕಾರಕ್ಕೆ ಹಿಂದಿರುಗಿಸಿ, ರಾಜ್ಯವನ್ನು ಬಿಟ್ಟು ಮಹಾರಾಷ್ಟ್ರಕ್ಕೆ ತೆರಳಿತು' ಎಂದು ಹೇಳಿದ್ದಾರೆ.
'2017ರಲ್ಲಿ ಕಾಂಗ್ರೆಸ್ ಸರ್ಕಾರ ಇವಿ ನೀತಿ ರೂಪಿಸಿತ್ತು. ಆನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ಸೂಕ್ತ ತೀರ್ಮಾನಗಳನ್ನು ಕೈಗೊಳ್ಳದೆ, ಎಲ್ಲದರಲ್ಲೂ ವಿಫಲವಾಯಿತು. ಈಗ ಆ ಪಕ್ಷದ ನಾಯಕರು ಎಥರ್ ಕಂಪನಿಯ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರ ಕಾಲದಲ್ಲಿ ಓಲಾ ಕಂಪನಿಯು ರಾಜ್ಯದಿಂದ ತಮಿಳುನಾಡಿಗೆ ಹೋಯಿತು' ಎಂದು ತಿಳಿಸಿದ್ದಾರೆ.
'ಎಥರ್ ಕಂಪನಿಯನ್ನು ರಾಜ್ಯದಲ್ಲೇ ಉಳಿಸಿಕೊಳ್ಳಲು ನಮ್ಮ ಸರ್ಕಾರ ಹರಳೂರು - ಮುದ್ದೇನಹಳ್ಳಿ ನಡುವೆ 50 ಎಕರೆ ಜಮೀನು ಕೊಡುವ ಭರವಸೆ ನೀಡಿದೆವು. ಆದರೆ, ಆ ವೇಳೆಗಾಗಲೇ ಕಂಪನಿಯು ಮಹರಾಷ್ಟ್ರಕ್ಕೆ ತೆರಳಿ ಆಗಿತ್ತು. ಸತ್ಯ ಅರಿಯದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಶಾಸಕ ಅರವಿಂದ ಬೆಲ್ಲದ ಅವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ' ಎಂದು ಎಂ.ಬಿ ಪಾಟೀಲ್ ಹೇಳಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications