ಹೊಸ ಇವಿ ಬ್ರಾಂಡ್‌ಗಳಿಗೆ ನಡುಕ ಶುರು: ಆಕ್ಟೀವಾ, ಜುಪಿಟರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬಿಡುಗಡೆಗೆ ಸಜ್ಜು!
ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಕಳೆದ ಎರಡು ವರ್ಷಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಯಾರಿಗೂ ಗೊತ್ತಿಲ್ಲ ಅಷ್ಟೇ, ಮಾರಾಟದಲ್ಲಿ ಇವಿ ಸ್ಕೂಟರ್‌ಗಳು ಸಾಮಾನ್ಯ ಸ್ಕೂಟರ್‌ಗಳಿಗೆ ಪೈಪೋಟಿ ನೀಡುವ ಮಟ್ಟಿಗೆ ಬಂದಿವೆ. ಪ್ರಮುಖ ಕಂಪನಿಗಳಾದ ಎಥರ್, ಓಲಾ ಕಂಪನಿಗಳಿಗೆ ಈ ಮಟ್ಟದ ಬೇಡಿಕೆ ಇದ್ದರೇ, ಹೋಂಡಾ ತನ್ನ ಆಕ್ಟೀವಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದ್ರೆ ಈ ಬೇಡಿಕೆ ಯಾವ ಮಟ್ಟಕ್ಕೆ ಹೋಗಬಹುದು ಒಮ್ಮೆ ಊಹಿಸಿ ನೋಡಿ. ಈ ಮಾತುಗಳು ನಿಜವಾಗುವ ಸಮಯ ಬಂದಿದೆ. ಹೌದು ಹೋಂಡಾ, ಟಿವಿಎಸ್, ಸುಜುಕಿ ಕಂಪನಿಗಳು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಿಡುಗಡೆಗೆ ಸಜ್ಜಾಗಿವೆ.
ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ 2025 ಸಮೀಪಿಸುತ್ತಿರುವುದರಿಂದ, ಹಲವಾರು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು ಭಾರತೀಯ ರಸ್ತೆಗಳನ್ನು ಪ್ರವೇಶಿಸುವ ನಿರೀಕ್ಷೆ ಹೆಚ್ಚಾಗಿದೆ. ಈ ಲೇಖನದಲ್ಲಿ, ಮುಂಬರುವ 3 ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೋಡೋಣ. ಇವು ದೇಶದ ಜನಪ್ರಿಯ ಐಸಿಇ ಮಾಡೆಲ್‌ಗಳ ಇವಿ ಆವೃತ್ತಿಗಳಾಗಿರುವುದು ವಿಶೇಷ.

ಟಿವಿಎಸ್ ಜುಪಿಟರ್ ಇವಿ: ಟಿವಿಎಸ್ ಈಗಾಗಲೇ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರಾಟ ಮಾಡುತ್ತಿದ್ದು, ಇದರ ಜೊತೆಗೆ ಹೊಸ ಜುಪಿಟರ್‌ನ ಎಲೆಕ್ಟ್ರಿಕ್ ಆವೃತ್ತಿಯನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಭಾರತದಲ್ಲಿ ಮುಂದಿನ 6 ತಿಂಗಳುಗಳಲ್ಲಿ ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವುದಾಗಿ ಕಂಪನಿಯೇ ದೃಢಪಡಿಸಿದೆ. ಬಿಡುಗಡೆ ದಿನಾಂಕವಷ್ಟೆ ಅಧಿಕೃತವಾಗಿ ಹೊರಬರಬೇಕಿದೆ.
ಹೊಸ ಜುಪಿಟರ್ ಇವಿ ಭಾರತದಲ್ಲಿ ಕಂಪನಿಯ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಸ್ಕೂಟರ್ ಆಗಲಿದೆ. ಮೂಲಗಳ ಪ್ರಕಾರ ಈ ಸ್ಕೂಟರ್ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ. 1 ಲಕ್ಷಕ್ಕಿಂತ ಕಡಿಮೆ ಇರಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 70 ರಿಂದ 80 ಕಿ.ಮೀ ಓಡುವ ಸಾಮರ್ಥ್ಯವನ್ನು ಹೊಂದಿರಲಿದೆ. ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಜುಪಿಟರ್ ಇವಿ, ಓಲಾ ಎಸ್ 1 ಎಕ್ಸ್‌ಗೆ ಪೈಪೋಟಿ ನೀಡಲಿದೆ.

ಸುಜುಕಿ ಬರ್ಗ್‌ಮ್ಯಾನ್ ಇವಿ: ದೇಶದಲ್ಲಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್, ಬರ್ಗ್‌ಮ್ಯಾನ್ ಇವಿ ಆಗಿರಲಿದೆ. ರಸ್ತೆಗಳಲ್ಲಿ ಟೆಸ್ಟಿಂಗ್ ಮಾಡುವಾಗ ಹಲವು ಬಾರಿ ಕ್ಯಾಮರಾ ಕಣ್ಣಿಗೆ ಈ ಸ್ಕೂಟರ್ ಕಾಣಿಸಿಕೊಂಡಿದೆ. ಇದನ್ನು ಜನವರಿಯಲ್ಲಿ ನಡೆಯಲಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ಅನಾವರಣಗೊಳಿಸುವ ಸಾಧ್ಯತೆ ಇದೆ. ಸುಜುಕಿ ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಾರ್ಷಿಕವಾಗಿ 25,000 ವಾಹನಗಳನ್ನು ಮಾತ್ರ ಮಾರಾಟ ಮಾಡಲಿದೆ.
ಹೋಂಡಾ ಆಕ್ಟಿವಾ ಇವಿ: ಬಹುನಿರೀಕ್ಷಿತ ಹೋಂಡಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಮಾರ್ಚ್ 2025 ರಲ್ಲಿ ಮಾರಾಟ ಮಾಡಲಾಗುವುದು. ಇದು ಆಕ್ಟಿವಾದ ಎಲೆಕ್ಟ್ರಿಕ್ ಆವೃತ್ತಿ ಎಂಬುದು ಬಹುತೇಕ ಖಚಿತವಾಗಿದೆ. ಬೇರ್ಪಡಿಸಬಹುದಾದ ಮತ್ತು ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್‌ನೊಂದಿಗೆ ಬರಲಿದೆ. ಜನವರಿಯಲ್ಲಿ ದೆಹಲಿಯಲ್ಲಿ ನಡೆಯಲಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ 2025 ರಲ್ಲಿ ಪಾದಾರ್ಪಣೆ ಮಾಡಲಿದೆ.

ಹೋಂಡಾ ಆಕ್ಟೀವಾ ಇವಿ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ. 1 ಲಕ್ಷಕ್ಕಿಂತ ಹೆಚ್ಚಿರಬಹುದು. ಒಂದು ಬಾರಿ ಚಾರ್ಜ್ ಮಾಡಿದರೆ 100 ಕಿ.ಮೀ ಓಡುವ ನಿರೀಕ್ಷೆಯಿದೆ. ಸಂಪೂರ್ಣ ಡಿಜಿಟಲ್ ಟಚ್ ಸ್ಕ್ರೀನ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಕೀಲೆಸ್ ಸ್ಟಾರ್ಟ್ / ಸ್ಟಾಪ್ ಮತ್ತು ಸಂಪರ್ಕಿತ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಇದು ಎಥೆರ್ 450, ಓಲಾ ಎಸ್1, ಟಿವಿಎಸ್ ಐಕ್ಯೂಬ್ ವಾಹನಗಳಿಗೆ ಪೈಪೋಟಿ ನೀಡಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications