ಟಿವಿಎಸ್, ಬಜಾಜ್‌ನಿಂದ ತೀವ್ರ ಸ್ಪರ್ಧೆ.. ಆದರೂ ನಂಬರ್ 1 ಸ್ಥಾನ ಉಳಿಸಿಕೊಂಡ ಓಲಾ, ಮತ್ತೆ ಗೇಮ್ ಚೇಂಜರ್ ಆಗುತ್ತಾ?
ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ನವೆಂಬರ್ ತಿಂಗಳಲ್ಲಿ ಅಗ್ರ ಸ್ಥಾನಕ್ಕೇರಲು ಓಲಾ ಎಲೆಕ್ಟ್ರಿಕ್, ಟಿವಿಎಸ್ ಮೋಟಾರ್ ಹಾಗೂ ಬಜಾಜ್ ಆಟೋ ಕಂಪನಿಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟಿತ್ತು. ಅಂತಿಮವಾಗಿ ಓಲಾ ಕಂಪನಿಯೇ ಮೊದಲ ಸ್ಥಾನದಲ್ಲಿದೆ. ಆದರೆ, ಟಿವಿಎಸ್ ಹಾಗೂ ಬಜಾಜ್‌ಗೆ ಹೋಲಿಕೆ ಮಾಡಿದರೆ, ಹೆಚ್ಚಿನ ನಷ್ಟ ಅನುಭವಿದೆ. ಕೇಂದ್ರ ಸರ್ಕಾರದ 'ವಾಹನ್' ವೆಬ್‌ಸೈಟ್ ಪ್ರಕಾರ, 27,746 ಯುನಿಟ್ ಓಲಾ ಸ್ಕೂಟರ್‌ಗಳು ನೋಂದಣಿಯಾಗಿವೆ. ಈ ಮೂಲಕ ಕಂಪನಿಯು ಶೇಕಡ 25.09% ಮಾರುಕಟ್ಟೆ ಪಾಲನ್ನು ತನ್ನದಾಗಿಸಿಕೊಂಡಿದೆ.
ಎರಡನೇ ಸ್ಥಾನದಲ್ಲಿ ಟಿವಿಎಸ್ ಮೋಟಾರ್ ಇದ್ದು, ಕಂಪನಿಯ 26,036 ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಗ್ರಾಹಕರು ನೋಂದಣಿ ಮಾಡಿದ್ದಾರೆ. ಇದರೊಂದಿಗೆ ಶೇಕಡ 23.55% ಮಾರುಕಟ್ಟೆ ಪಾಲನ್ನು ಹೊಂದಿದೆ. ಮೂರನೇ ಸ್ಥಾನದಲ್ಲಿ ಬಜಾಜ್ ಆಟೋ ಇದ್ದು, ಕಂಪನಿಯ 24,978 ಯುನಿಟ್ 'ಚೇತಕ್' ಇ-ಸ್ಕೂಟರ್‌ಗಳನ್ನು ಖರೀದಿದಾರರು ನೋಂದಾಯಿಸಿದ್ದಾರೆ. ಈ ಮೂಲಕ ಶೇಕಡ 22.59% ಮಾರುಕಟ್ಟೆ ಪಾಲನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಈ ನವೆಂಬರ್‌ನಲ್ಲಿ ಯಾವುದೇ ಹಬ್ಬಗಳಿಲ್ಲದ ಕಾರಣ, ಒಟ್ಟಾರೆ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟವು ಭಾರೀ ಪ್ರಮಾಣದಲ್ಲಿ ಕುಸಿತವಾಗಿದೆ. ಅದು ಶೇಕಡ 18% ಇಳಿಕೆಯಾಗಿದೆ. ಅದರಲ್ಲೂ ಓಲಾ ಹೆಚ್ಚಿನ ನಷ್ಟ ಅನುಭವಿಸಿದ್ದು, ಮಾರಾಟ ಪ್ರಮಾಣ ಶೇಕಡ 40% ಇಳಿಕೆಯಾಗಿದೆ. ಟಿವಿಎಸ್ ಮತ್ತು ಬಜಾಜ್ ಕಂಪನಿಗಳಿಗೂ ಹಿನ್ನೆಡೆಯಾಗಿದ್ದು, ಕ್ರಮವಾಗಿ ಶೇಕಡ 13.4% ಮತ್ತು 12% ಕುಸಿತವನ್ನು ದಾಖಲಿಸಿವೆ.
ಇಷ್ಟೆಲ್ಲ ನಷ್ಟವಾದರೂ ವಾರ್ಷಿಕ ಮಾರಾಟದಲ್ಲಿ 392,176 ಯುನಿಟ್ ಮಾರಾಟದೊಂದಿಗೆ ಓಲಾ ಪ್ರಥಮ ಸ್ಥಾನದಲಿದ್ದು, ಶೇಕಡ 37% ಮಾರುಕಟ್ಟೆ ಪಾಲನ್ನು ತನ್ನದಾಗಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಟಿವಿಎಸ್ ಮೋಟಾರ್ (201,966 ಯುನಿಟ್) ಶೇಕಡ 19.5%, ಮೂರನೇ ಸ್ಥಾನದಲ್ಲಿರುವ ಬಜಾಜ್ ಆಟೋ (173,721 ಯುನಿಟ್) ಶೇಕಡ 16.6% ಹಾಗೂ ನಾಲ್ಕನೇ ಸ್ಥಾನದಲ್ಲಿರುವ ಎಥರ್ ಎನರ್ಜಿ (1 ಲಕ್ಷ ಯುನಿಟ್) ಶೇಕಡ 11% ಮಾರುಕಟ್ಟೆ ಪಾಲನ್ನು ಹೊಂದಿವೆ.

ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟ ತೀವ್ರವಾಗಿ ಕುಸಿತವಾದ ಹಿನ್ನೆಲೆ, ಸೋಮವಾರ ಮುಂಬೈ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಕಂಪನಿಯ ಷೇರುಗಳ ಮೌಲ್ಯ 5% ಕುಸಿತವಾಯಿತು. ಆ ಬಳಿಕ, ವಹಿವಾಟಿನಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಬಂದಿತು. ಶೇಕಡ 3% ಹೆಚ್ಚಳಗೊಂಡು ವಹಿವಾಟು ಧನಾತ್ಮಕವಾಗಿ ಮುಂದುವರಿಯಿತು.
ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಓಲಾ (Ola) ಕಂಪನಿಯು ವಿವಿಧ 'ಎಸ್1' ಸೀರೀಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಅವುಗಳಲ್ಲಿ 'ಎಸ್1 ಎಕ್ಸ್' ಆರಂಭಿಕ ಶ್ರೇಣಿ ರೂಪಾಂತರ (ಎಂಟ್ರಿ ಲೆವೆಲ್ ಮಾಡೆಲ್) ಆಗಿದೆ. ಇದು ರೂ.74,999 ರಿಂದ ರೂ.99,999 (ಎಕ್ಸ್ ಶೋರೂಂ) ಬೆಲೆಯಲ್ಲಿ ಒಳಗೊಂಡಿದೆ. ವಿವಿಧ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 91 ರಿಂದ 190 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ.
ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಮಧ್ಯಮ ಶ್ರೇಣಿ ರೂಪಾಂತರ (ಮಿಡ್ ಲೆವೆಲ್ ಮಾಡೆಲ್) ಎಂದೇ ಹೆಸರುವಾಸಿಯಾಗಿದೆ. ಈ ಸ್ಕೂಟರ್ ರೂ.1.01 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. 3 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿಯನ್ನು ಒಳಗೊಂಡಿದೆ. ಪೂರ್ತಿ ಚಾರ್ಜ್‌ನಲ್ಲಿ 151 ಕಿಲೋಮೀಟರ್‌ವರೆಗೆ ಕ್ರಮಿಸುತ್ತದೆ.
ಓಲಾ ಎಸ್1 ಪ್ರೊ ಗರಿಷ್ಠ ಶ್ರೇಣಿ ರೂಪಾಂತರ (ಟಾಪ್ ಎಂಡ್ ವೇರಿಯೆಂಟ್) ಆಗಿ ಹೊರಹೊಮ್ಮಿದೆ. ಇದು ರೂ.1.28 ಲಕ್ಷ ಎಕ್ಸ್ ಶೋರೂಂ ದರವನ್ನು ಒಳಗೊಂಡಿದ್ದು, ಶಕ್ತಿಯುತವಾದ 4 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 195 ಕಿಲೋಮೀಟರ್‌ವರೆಗೆ ಓಡುತ್ತದೆ.
ಇನ್ನು, ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟ ಕುಸಿತವಾಗಿರುವ ಬಗ್ಗೆ ಓಲಾ ಕಂಪನಿಯು ಯಾವುದೇ ನಿಖರವಾದ ಕಾರಣಗಳನ್ನು ಬಹಿರಂಗಪಡಿಸಿಲ್ಲ. ಆದರೆ, ಈ ಡಿಸೆಂಬರ್‌ನಲ್ಲಿ ಕ್ರಿಸ್‍ಮಸ್ ಹಬ್ಬ ಬರುವ ಹಿನ್ನೆಲೆ, ಮಾರಾಟ ಪ್ರಮಾಣ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಮುಂಬರುವ ದಿನಗಳಲ್ಲಿ ಓಲಾ ಕಂಪನಿಯ ಇ-ಸ್ಕೂಟರ್‌ಗಳು ಹೇಗೆ ಮಾರಾಟವಾಗುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications