Ola: ಓಲಾ ಸ್ಕೂಟರ್‌ಗಳಿಗಾಗಿ ಕ್ಯೂ ನಿಂತ ಗ್ರಾಹಕರು, ದಾಖಲೆ ಮಟ್ಟದಲ್ಲಿ ನೋಂದಣಿ
ಬೆಂಗಳೂರು ಮೂಲದ ಓಲಾ ಎಲೆಕ್ಟ್ರಿಕ್ (Ola Electric) ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಖ್ಯಾತಿಗಳಿಸಿದೆ. ಸೋಮವಾರ ಮಾರ್ಚ್ ತಿಂಗಳ ಮಾರಾಟದ ಅಂಕಿಅಂಶ ಕುರಿತ ವಿವರವನ್ನು ಪ್ರಕಟಿಸಿದ್ದು, ನಿರೀಕ್ಷೆಗೂ ಮೀರಿ ಪ್ರಗತಿಯನ್ನು ಸಾಧಿಸಿದೆ. ದಾಖಲೆ ಸಂಖ್ಯೆಯಲ್ಲಿ ಓಲಾ ಸ್ಕೂಟರ್‌ಗಳು ನೋಂದಣಿಯಾಗಿವೆ.
ವಾಹನ್ ಪೋರ್ಟಲ್ ಪ್ರಕಾರ, ಮಾರ್ಚ್‌ನಲ್ಲಿ 53,000ಕ್ಕೂ ಹೆಚ್ಚು ಓಲಾ ಸ್ಕೂಟರ್‌ಗಳು ನೋಂದಣಿಯಾಗಿವೆ. ಈ ಮೂಲಕ ಸತತ 5ನೇ ತಿಂಗಳು ಕೂಡ ಅತಿಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟಗೊಳಿಸಿದ ಹಿರಿಮೆಗೆ ಕಂಪನಿಯು ಪಾತ್ರವಾಗಿದೆ. 2023ರ ಹಣಕಾಸಿನ ವರ್ಷಕ್ಕೆ ಹೋಲಿಸಿದರೆ (1,52,741 ಯುನಿಟ್) 2024ರ ಹಣಕಾಸು ವರ್ಷದಲ್ಲಿ 3,28,785 ಯುನಿಟ್ ಮಾರಿ ಶೇಕಡ 115% ಬೆಳವಣಿಗೆ ಕಂಡಿದೆ.

ಸದ್ಯ, ದೇಶೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಓಲಾ ಕಂಪನಿಯು ತನ್ನ ಪಾರುಪತ್ಯವನ್ನು ಯಾವುದೇ ಅಡೆತಡೆಯಿಲ್ಲದೆ ಮುಂದಿವರಿಸಿದ್ದು, ತ್ರೈಮಾಸಿಕ ಮಾರಾಟದಲ್ಲೂ ಉತ್ತಮವಾದ ಪ್ರಗತಿಯನ್ನು ಸಾಧಿಸಿದೆ. 2024ರ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ 1,19,310 ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟಗೊಳಿಸುವ ಮೂಲಕ ಶೇಕಡ 42% ಮುನ್ನಡೆಯನ್ನು ಕಾಯ್ದುಕೊಂಡಿದೆ.
ಭಾರತದಲ್ಲಿ 'ಓಲಾ ಎಲೆಕ್ಟ್ರಿಕ್' ಎಸ್1 ಸರಣಿಯ ಹಲವು ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತದೆ. ಎಂಟ್ರಿ ಲೆವೆಲ್ (ಆರಂಭಿಕ ಆವೃತ್ತಿ) ಮಾದರಿಯಾಗಿರುವ ಎಸ್1 ಎಕ್ಸ್ ಪ್ಲಸ್ (S1 X+), ರೂ.84,999 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 3 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದ್ದು, ಭರ್ತಿ ಚಾರ್ಜ್ ನಲ್ಲಿ 151 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಗಂಟೆಗೆ 90 ಕಿ.ಮೀ ಗರಿಷ್ಠ ವೇಗ(ಟಾಪ್ ಸ್ವೀಡ್)ವನ್ನು ಹೊಂದಲಿದೆ.

ಓಲಾ ಎಸ್1 ಏರ್ (Ola S1 Air) ಎಲೆಕ್ಟ್ರಿಕ್ ಸ್ಕೂಟರ್, ರೂ.1.05 ಲಕ್ಷ ಎಕ್ಸ್ ಶೋರೂಂ ದರದಲ್ಲಿ ದೊರೆಯುತ್ತದೆ. 3 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 151 ಕಿಲೋಮೀಟರ್ ಓಡುತ್ತದೆ. ಇದರಲ್ಲಿ ಬಳಕೆ ಮಾಡಿರುವ ಹಬ್ ಮೋಟಾರ್ 6 ಕೆಡಬ್ಲ್ಯೂ ಪವರ್ (ಶಕ್ತಿ) ಹೊರಹಾಕುತ್ತದೆ. ಜೊತೆಗೆ 90 ಕೆಎಂಪಿಹೆಚ್ ಗರಿಷ್ಠ ವೇಗವನ್ನು ಪಡೆಯಲಿದೆ.
ಟಾಪ್ ಎಂಡ್ (ಗರಿಷ್ಠ ಶ್ರೇಣಿ) ರೂಪಾಂತರವಾದ ಓಲಾ ಎಸ್1 ಪ್ರೊ (Ola S1 Pro), ರೂ.1.30 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ 4 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಉಪಯೋಗಿಸಲಾಗಿದ್ದು, ಪೂರ್ತಿ ಚಾರ್ಜ್ ನಲ್ಲಿ 195 ಕಿಲೋಮೀಟರ್ ಕ್ರಮಿಸುತ್ತದೆ. ಗಂಟೆಗೆ 120 ಕಿ.ಮೀ ಗರಿಷ್ಠ ವೇಗವನ್ನು ಪಡೆಯಲಿದೆ. ಈ ಎಲೆಕ್ಟ್ರಿಕ್ ಸ್ಕೂಟರ್, 7-ಇಂಚಿನ ಟಿಎಫ್‌ಟಿ ಡಿಸ್ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ದೇಶೀಯ ಮಾರುಕಟ್ಟೆಯಲ್ಲಿ ಓಲಾ ಕಂಪನಿ ಸ್ಕೂಟರ್‌ಗಳಿಗೆ ಟಿವಿಎಸ್, ಹೀರೋ, ಬಜಾಜ್ ಹಾಗೂ ಎಥರ್ ಎನರ್ಜಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳು ದೊಡ್ಡ ಎದುರಾಳಿಯಾಗಿವೆ. ಆದರೂ ಓಲಾದ ಇವಿಗಳು ಆಕರ್ಷಕ ವಿನ್ಯಾಸ, ವೈಶಿಷ್ಟ್ಯ ಹಾಗೂ ಒಳ್ಳೆಯ ಕಾರ್ಯಕ್ಷಮತೆಯನ್ನು ಹೊಂದಿರುವುದರಿಂದ ಹೆಚ್ಚಿನ ಮಂದಿ ಇಷ್ಟಪಟ್ಟ ಕೊಂಡುಕೊಳ್ಳುತ್ತಾರೆ. ಹೀಗೆ ಬೇಡಿಕೆ ಮುಂದುವರಿದರೆ ತಿಂಗಳಿಗೆ 1 ಲಕ್ಷಕ್ಕೂ ಅಧಿಕ ಸ್ಕೂಟರ್‌ಗಳು ಮಾರಾಟಗೊಂಡರೂ ಅಚ್ಚರಿಯಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








