TVS XL: ಎಲೆಕ್ಟ್ರಿಕ್ ರೂಪದಲ್ಲಿ ಟಿವಿಎಸ್ ಎಕ್ಸ್ಎಲ್ 100.. ಕೈನೆಟಿಕ್ ಇ ಲೂನಾಗೆ ಪ್ರತಿಸ್ಪರ್ಧಿ?
ಟಿವಿಎಸ್ ಮೋಟಾರ್ (TVS Motor) ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದ್ದು, ಆಕರ್ಷಕ ವೈಶಿಷ್ಟ್ಯ ಹಾಗೂ ವಿನ್ಯಾಸ ಹೊಂದಿರುವ ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತದೆ. ಸದ್ಯ, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುವ ಎಕ್ಸ್ಎಲ್ 100 ಅನ್ನು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಗೊಳಿಸಲು ಸಿದ್ಧತೆಯನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಟಿವಿಎಸ್, ಮುಂಬರಲಿರುವ ಎಲೆಕ್ಟ್ರಿಕ್ ಎಕ್ಸ್ಎಲ್ಗೆ ಇ-ಎಕ್ಸ್‌ಎಲ್ (E-XL) ಮತ್ತು ಎಕ್ಸ್‌ಎಲ್ ಇವಿ (XL EV) ಎಂಬ ಎರಡು ಹೆಸರನ್ನು ಟ್ರೇಡ್‌ಮಾರ್ಕ್ ರಿಜಿಸ್ಟ್ರಿಯಲ್ಲಿ ನೋಂದಣಿ ಮಾಡಿದೆ ಎಂದು ವರದಿಯಾಗಿದೆ. ಆದರೆ, ಈ ಬಗ್ಗೆ ಕಂಪನಿ ಕಡೆಯಿಂದ ಯಾವುದೇ ಅಧಿಕೃತ ವಿವರಗಳು ಲಭ್ಯವಾಗಿಲ್ಲ. ಶೀಘ್ರದಲ್ಲೇ ಘೋಷಣೆಯಾಗುವ ಸಾಧ್ಯತೆಯಿದೆ. ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಗೊಳ್ಳುವ ಟಿವಿಎಸ್ ಎಕ್ಸ್ಎಲ್ 100 ಹೆಚ್ಚಿನ ಬೆಲೆ ಹಾಗೂ ಅತ್ಯಾಧುನಿಕ ವೈಶಿಷ್ಟ್ಯದೊಂದಿಗೆ ದೊರೆಯಬಹುದು ಎಂದು ಅಂದಾಜಿಸಲಾಗಿದೆ.

ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಚಾಲಿತ ಟಿವಿಎಸ್ ಎಕ್ಸ್ಎಲ್ 100 ಮೊಪೆಡ್ ರೂ.44,999 ದಿಂದ ರೂ.57,804 ಎಕ್ಸ್ ಶೋರೂಂ ಬೆಲೆಯನ್ನು ಖರೀದಿಗೆ ದೊರೆಯುತ್ತದೆ. 99.7 ಸಿಸಿ ಏರ್ ಕೋಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 4.3 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 6.5 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಗರಿಷ್ಠ 80 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.
ಈ ಟಿವಿಎಸ್ ಎಕ್ಸ್ಎಲ್ 100 ಮೊಪೆಡ್ ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ರೇರ್) 110 ಎಂಎಂ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಜೊತೆಗೆ CBS (ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್) ಅನ್ನು ಒಳಗೊಂಡಿದ್ದು, 16-ಇಂಚಿನ ಸ್ಪೋಕ್ ವೀಲ್ಸ್ ಮತ್ತು ಟ್ಯೂಬ್ ಟೈಯರ್‌ಗಳನ್ನು ಸಹ ಪಡೆದಿದೆ. ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳು ಇದರಲ್ಲಿವೆ.

ಭಾರತದಲ್ಲಿ ಟಿವಿಎಸ್ ಮಾರಾಟಗೊಳಿಸುವ ಐಕ್ಯೂಬ್ (iQube) ಎಲೆಕ್ಟ್ರಿಕ್ ಸ್ಕೂಟರ್ ಕೂಡ ಹೆಚ್ಚಿನ ಜನಪ್ರಿಯತೆಯನ್ನು ಹೊಂದಿದೆ. ಇದು ಐಕ್ಯೂಬ್ ಹಾಗೂ ಐಕ್ಯೂಬ್ ಎಸ್ ಎಂಬ ರೂಪಾಂತರ ಆಯ್ಕೆಯಲ್ಲಿ ಸಿಗಲಿದ್ದು, ಬೆಂಗಳೂರಿನಲ್ಲಿ ರೂ.1,47,968 ಮತ್ತು ರೂ.1,53,909 ಆನ್-ರೋಡ್ ಬೆಲೆಯನ್ನು ಹೊಂದಿದೆ. ಇವೆರೆಡು ಮಾದರಿಗಳು ಭರ್ತಿ ಚಾರ್ಜ್ ನಲ್ಲಿ 100 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತವೆ.
ಎಲೆಕ್ಟ್ರಿಕ್ ರೂಪದಲ್ಲಿ ಬರಲಿದೆ ಎನ್ನಲಾಗಿರುವ ಟಿವಿಎಸ್ ಎಕ್ಸ್ಎಲ್ಗೆ ಕೈನೆಟಿಕ್ ಇ ಲೂನಾ (Kinetic E-Luna) ಮೊಪೆಡ್ ನೇರ ಪ್ರತಿಸ್ಪರ್ಧಿಯಾಗಲಿದೆ. ಕಳೆದ ಫೆಬ್ರವರಿಯಲ್ಲಿ ಇ ಲೂನಾ ಎಕ್ಸ್1 ಹಾಗೂ ಎಕ್ಸ್2 ಎಂಬ ರೂಪಾಂತರ ಆಯ್ಕೆಯಲ್ಲಿ ಬಿಡುಗಡೆಯಾಗಿತ್ತು. ಇದು ರೂ.69,990 ಆರಂಭಿಕ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ.

ಕೈನೆಟಿಕ್ ಇ ಲೂನಾ 2 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯ ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದ್ದು, ಪೂರ್ತಿ ಚಾರ್ಜ್ ನಲ್ಲಿ 110 ಕಿಲೋಮೀಟರ್ ಕ್ರಮಿಸುವ ಸಾಮರ್ಥ್ಯವನ್ನು ಪಡೆದಿದೆ. 50 ಕೆಎಂಪಿಹೆಚ್ ಗರಿಷ್ಠ ವೇಗ (ಟಾಪ್ ಸ್ವೀಡ್)ವನ್ನು ಹೊಂದಲಿದೆ. ಇದರ ಬ್ಯಾಟರಿ ಪ್ಯಾಕ್ 4 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗಲಿದ್ದು, ಡಿಜಿಟಲ್ ಮೀಟರ್, ಸ್ಯಾರಿ ಗಾರ್ಡ್, ಸೇಫ್ಟಿ ಲಾಕ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications