TVS iQube: ಜನಪ್ರಿಯ ಟಿವಿಎಸ್ ಐಕ್ಯೂಬ್ ಇ-ಸ್ಕೂಟರ್ ಬೆಲೆ ಏರಿಕೆ.. ಕರ್ನಾಟಕದಲ್ಲಿ ಎಷ್ಟು, ಸಬ್ಸಿಡಿ ಇದ್ಯಾ?
ಟಿವಿಎಸ್ ಐಕ್ಯೂಬ್ (TVS iQube) ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಹೊಂದಿರುವುದರಿಂದ ಬಹುತೇಕರು ಇಷ್ಟಪಟ್ಟು ಖರೀದಿಸುತ್ತಾರೆ. ಸದ್ಯ, ಫೇಮ್ II (FAME II) ಸಬ್ಸಿಡಿ ಮುಕ್ತಾಯಗೊಂಡಿದ್ದು, ಐಕ್ಯೂಬ್ ಬೆಲೆಯನ್ನು ಪರಿಷ್ಕರಿಸಲಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಟಿವಿಎಸ್ ಮೋಟಾರ್, ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ನ ನೂತನ ದರದ ಕುರಿತ ವಿವರವನ್ನು ಪ್ರಕಟಿಸಿದೆ. ಫೇಮ್ II (ಪಾಸ್ಟರ್ ಅಡಾಪ್ಷನ್ & ಮ್ಯಾನುಫ್ಯಾಕ್ಟರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್) ಸಬ್ಸಿಡಿ ಅವಧಿ ಮುಗಿದಿರುವ ಹಿನ್ನೆಲೆ, ನೂತನ ದರಗಳು ಜಾರಿ ಬಂದಿದೆ. ಕಂಪನಿಯು ಗ್ರಾಹಕರ ಜೇಬಿಗೆ ದೊಡ್ಡ ಪ್ರಮಾಣದಲ್ಲಿ ಕತ್ತರಿ ಹಾಕದೆಯೇ, ಸ್ವಲ್ಪ ಮಟ್ಟಿಗೆ ಬೆಲೆಯನ್ನು ಹೆಚ್ಚಿಸಿದೆ.

ವಿಶೇಷವಾಗಿ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿದಾರರ ಅನುಕೂಲಕ್ಕೆ EMPS (ಎಲೆಕ್ಟ್ರಿಕ್ ಮೊಬಿಲಿಟಿ ಪ್ರಮೋಷನ್ ಸ್ಕೀಮ್) ಸಬ್ಸಿಡಿ ಯೋಜನೆಯು ಲಭ್ಯವಿದೆ. ಇದು ರೂ.10,000 ಸಬ್ಸಿಡಿ ಮೊತ್ತವನ್ನು ಹೊಂದಿದ್ದು, ಜುಲೈ 2024 ರವರೆಗೆ ಮಾತ್ರ ಅನ್ವಯವಾಗಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯ ಐಕ್ಯೂಬ್ ರೂಪಾಂತರ ರೂ.1,46,628 ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಇಎಂಪಿಎಸ್ ಸಬ್ಸಿಡಿ ಕಳೆದು, ರೂ.1,36,628 ದರವಿರುತ್ತದೆ.
ಟಿವಿಎಸ್ ಐಕ್ಯೂಬ್ 'ಎಸ್' ಮಾದರಿ ರೂ.1,56,420 ಎಕ್ಸ್ ಶೋರೂಂ ದರವನ್ನು ಹೊಂದಿದ್ದು, ಇಎಂಪಿಎಸ್ ಸಬ್ಸಿಡಿಯ ರೂ.10,000 ಮೊತ್ತವನ್ನು ಕಳೆದು ರೂ.1,46,420 ಬೆಲೆಯನ್ನು ಒಳಗೊಂಡಿದೆ. ಇನ್ನುಳಿದಂತೆ ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ಬಹುತೇಕ ನಗರಗಳಲ್ಲಿಯೂ ಇದೇ ದರವಿದೆ. ಆದರೆ, ದೆಹಲಿ ಹಾಗೂ ಪಂಜಾಬ್ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳ ಖರೀದಿಯನ್ನು ಉತ್ತೇಜಿಸಲು ಕ್ರಮವಾಗಿ ರೂ.17,000 ಮತ್ತು 10,000 ಹೆಚ್ಚುವರಿ ಸಬ್ಸಿಡಿಯನ್ನು ನೀಡುತ್ತಿವೆ.

ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ನ ಎರಡು ರೂಪಾಂತರಗಳು, 3.04 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಪಡೆದಿವೆ. 140 ಎನ್ಎಂ ಪೀಕ್ ಟಾರ್ಕ್ ಹೊರಹಾಕಬಲ್ಲ 4.4 ಕೆಡಬ್ಲ್ಯೂ (kW) ಹಬ್-ಮೌಂಟೆಡ್ ಮೋಟಾರ್ ಒಳಗೊಂಡಿದ್ದು, ಭರ್ತಿ ಚಾರ್ಜ್ ನಲ್ಲಿ 100 ಕಿಲೋಮಿಟರ್ ಕ್ರಮಿಸಬಲ್ಲವು.
ಇವೆರೆಡು ಮಾದರಿಗಳು ಗಂಟೆಗೆ 75 ಕಿಲೋಮೀಟರ್ ಗರಿಷ್ಠ ವೇಗವನ್ನು ಪಡೆಯಲಿದ್ದು, ಕೇವಲ 4 ಗಂಟೆ 30 ನಿಮಿಷದಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬ್ಯಾಟರಿ 0-80% ಚಾರ್ಜ್ ಆಗುತ್ತವೆ. ಪ್ರಮುಖವಾಗಿ ಫುಲ್ ಕಲರ್ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮೊಬೈಲ್ ಚಾರ್ಜ್ ಮಾಡಲು ಯುಎಸ್‌ಬಿ ಸಾಕೆಟ್ ಸೇರಿದಂತೆ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿವೆ. ಜೊತೆಗೆ 32 ಲೀಟರ್ ಸಾಮರ್ಥ್ಯದ ಸ್ಟೋರೇಜ್ ಅನ್ನು ಪಡೆದಿವೆ.

ಇಕೋ, ಸ್ಪೋರ್ಟ್ ಎಂಬ ರೈಡಿಂಗ್ ಮೋಡ್ ಆಯ್ಕೆಯನ್ನು ಈ ಆವೃತ್ತಿಗಳು ಹೊಂದಿದ್ದು, ಸುರಕ್ಷತೆಗಾಗಿ ಮುಂಭಾಗ (ಫ್ರಂಟ್) ಡಿಸ್ಕ್ ಹಾಗೂ ಹಿಂಭಾಗ (ರೇರ್) ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿವೆ. ಸಸ್ಪೆನ್ಷನ್ ಸೆಟಪ್ ಬಗ್ಗೆ ತಿಳಿಯುವುದಾದರೆ, ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್, ರೇರ್ ಡುಯಲ್ ಶಾಕ್ ಅಬ್ಸಾರ್ಬರ್ ಸೆಟಪ್ ಅನ್ನು ಒಳಗೊಂಡಿವೆ. ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ಗೆ ಬಜಾಜ್ ಚೇತಕ್ ಪ್ರಬಲ ಎದುರಾಳಿಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








