ಅತಿಕಡಿಮೆ ಬೆಲೆಗೆ ಟಿವಿಎಸ್ ರೈಡರ್ 125 ನೂತನ ವೇರಿಯೆಂಟ್ ಮಾರಾಟಕ್ಕೆ: ನೀವು ತಿಳಿದುಕೊಳ್ಳಬೇಕಾದ ವಿಚಾರಗಳಿವು!
ತಮಿಳುನಾಡು ಮೂಲದ ಟಿವಿಎಸ್ ಮೋಟಾರ್ (TVS Motor) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ಹಲವು ಬೈಕ್ ಮತ್ತು ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ದೊಡ್ಡ ಸಂಖ್ಯೆಯಲ್ಲಿ ಖರೀದಿದಾರರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸೆಪ್ಟೆಂಬರ್ 24ರಂದು ಪ್ರಖ್ಯಾತ ರೈಡರ್ 125 (Raider 125) ಮೋಟಾರ್‌ಸೈಕಲ್‌ನ ನೂತನ ರೂಪಾಂತರವನ್ನು (ವೇರಿಯೆಂಟ್) ಮಾರಾಟಕ್ಕೆ ತಂದಿದೆ. ಇಲ್ಲಿ ಹೊಸ ಬೈಕ್‌ನ ಬೆಲೆ ಹಾಗೂ ವಿಶೇಷತೆ ಕುರಿತ ಪ್ರಮುಖಾಂಶಗಳನ್ನು ತಿಳಿಯೋಣ.
ಬೆಲೆ: ಟಿವಿಎಸ್ ರೈಡರ್ 125 ಮೋಟಾರ್‌ಸೈಕಲ್‌ನ ಡ್ರಮ್ ಬ್ರೇಕ್ (Drum Brake) ರೂಪಾಂತರ ಬಿಡುಗಡೆಗೊಂಡಿದೆ. ಇದು ಅತ್ಯಂತ ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ರೂ.84,469 (ಎಕ್ಸ್ ಶೋರೂಂ - ನವದೆಹಲಿ) ಬೆಲೆಯನ್ನು ಪಡೆದಿದೆ. ಇದರಿಂದ ಮೂಲ ಬೆಲೆ (ಬೇಸ್ ಪ್ರೈಸ್) ಬರೋಬ್ಬರಿ ರೂ.11,000 ಕಡಿಮೆಯಾಗಿದೆ.

ವಿನ್ಯಾಸ: ಹೊಚ್ಚ ಹೊಸ ಟಿವಿಎಸ್ ರೈಡರ್ 125 ಡ್ರಮ್ ಬ್ರೇಕ್ ರೂಪಾಂತರದ ವಿನ್ಯಾಸದಲ್ಲಿ (ಡಿಸೈನ್) ಕೂಡ ಯಾವುದೇ ದೊಡ್ಡ ಮಾರ್ಪಾಡುಗಳನ್ನು ಮಾಡಲಾಗಿಲ್ಲ. ಆದರೂ ಈ ಮೋಟಾರ್‌ಸೈಕಲ್ ಸಿಂಗಲ್ ಪೀಸ್ ಸೀಟ್ ಆಯ್ಕೆಯೊಂದಿಗೆ ಮಾತ್ರ ದೊರೆಯಲಿದ್ದು, ಸ್ಟ್ರೈಕಿಂಗ್ ರೆಡ್ ಹಾಗೂ ವಿಕೆಡ್ ಬ್ಲ್ಯಾಕ್ ಎಂಬ 2 ಆಕರ್ಷಕ ಬಣ್ಣಗಳನ್ನು ಒಳಗೊಂಡಿದೆ.
ಕಾರ್ಯಕ್ಷಮತೆ: ಈ ಬೈಕ್ 124.8 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 11.12 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 11.2 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೂ ಲಭ್ಯವಿದೆ. ಸರಿ ಸುಮಾರು 67 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡಬಹುದು ಎನ್ನಲಾಗಿದೆ.
ವೈಶಿಷ್ಟ್ಯಗಳು: ನೂತನ ಟಿವಿಎಸ್ ರೈಡರ್ 125 ಡ್ರಮ್ ಬ್ರೇಕ್ ರೂಪಾಂತರವು ಹಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಪಡೆದಿದೆ. ಎಲ್ಇಡಿ ಲೈಟಿಂಗ್, ವಿವಿಧ ರೈಡಿಂಗ್ ಮೋಡ್‌ಗಳು ಮತ್ತು ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ್ನು ಒಳಗೊಂಡಿದೆ. ಈ ಬೈಕ್, ಬರೋಬ್ಬರಿ 123 ಕೆಜಿ ತೂಕವಿದ್ದು, 10 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಹೊಂದಿದೆ.
ಬ್ರೇಕಿಂಗ್ ಸಿಸ್ಟಮ್ & ಸಸ್ಪೆನ್ಷನ್ ಸೆಟಪ್: ಈ ಬೈಕ್ ಹೆಸರೇ ಹೇಳುವಂತೆ ಹ್ಯಾಂಡಲ್ ಬಾರ್‌ನ ಎರಡು ತುದಿಯಲ್ಲಿ ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) 5-ಸ್ಟೆಪ್ ಪ್ರಿಲೋಡ್ ಅಡ್ಜಸ್ಟೆಬಲ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಅನ್ನು ಪಡೆದಿದೆ.
ಹೊಸ ಟಿವಿಎಸ್ ಜುಪಿಟರ್ 110 ಸ್ಕೂಟರ್ ಕೂಡ ಮಾರಾಟಕ್ಕೆ: ಕಳೆದ ತಿಂಗಳು ನವೀಕರಿಸಿದ ಹೊಚ್ಚ ಹೊಸ ಟಿವಿಎಸ್ ಜುಪಿಟರ್ 110 (TVS Jupiter 110) ಸ್ಕೂಟರ್‌ನ್ನು ಬಿಡುಗಡೆಗೊಳಿಸಲಾಗಿತ್ತು. ಇದು ರೂ.73,700 ಆರಂಭಿಕ ಬೆಲೆಯನ್ನು ಪಡೆದಿದೆ. 113 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. 60 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ ಎಂದು ಹೇಳಲಾಗಿದೆ. ಇಂಟಲಿಜೆಂಟ್ ಸ್ಟಾರ್ಟ್/ ಸ್ಟಾಪ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








