Royal Enfield: ಹೊಸ ರಾಯಲ್ ಎನ್‌ಫೀಲ್ಡ್ ಮಿಟಿಯೋರ್ 350 ಬೈಕ್ ಬಿಡುಗಡೆ.. ಬೆಲೆ ಇಷ್ಟೇನಾ, ವಿಶೇಷತೆಗಳೇನು?
ಬಹುನಿರೀಕ್ಷಿತ 2025ರ ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಮಿಟಿಯೋರ್ 350 (Royal Enfield Meteor 350) ಮೋಟಾರ್‌ಸೈಕಲ್, ಸೋಮವಾರ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಈ ಬೈಕ್‌ನ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ನವೀಕರಣಕ್ಕೆ ಒಳಪಡಿಸಲಾಗಿದೆ. ಇದನ್ನು ಕೈಗೆಟುಕುವ ದರದಲ್ಲೂ ಮಾರಾಟಕ್ಕೆ ತರಲಾಗಿದ್ದು, ಯುವ ಜನತೆಗೆ ಹೇಳಿ ಮಾಡಿಸಿದ ರೀತಿಯಲ್ಲಿದೆ. ಬನ್ನಿ, ನೂತನ ಮೋಟಾರ್‌ಸೈಕಲ್‌ನ ಬೆಲೆ, ಕಾರ್ಯಕ್ಷಮತೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ಹೊಸ ರಾಯಲ್ ಎನ್‌ಫೀಲ್ಡ್ ಮಿಟಿಯೋರ್ 350 ಬೈಕ್ ಅಗ್ಗದ ದರದಲ್ಲೂ ಗ್ರಾಹಕರ ಖರೀದಿಗೆ ಲಭ್ಯವಿದೆ. ರೂ.1.95 ಲಕ್ಷದಿಂದ ರೂ.2.15 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಫೈರ್‌ಬಾಲ್, ಸ್ಟೆಲ್ಲಾರ್, ಅರೋರಾ ಹಾಗೂ ಸೂಪರ್‌ನೋವಾ ಎಂಬ 4 ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.

ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಪಡೆದಿದ್ದು, ನೋಡುಗರ ಸೆಳೆಯುವಂತಿದೆ. ನವೀನವಾದ ಎಲ್‌ಇಡಿ ಹೆಡ್‌ಲ್ಯಾಂಪ್ ಹಾಗೂ ಎಲ್‌ಇಡಿ ಟರ್ನ್ ಇಂಡಿಕೇಟರ್‌ಗಳನ್ನು ಪಡೆದಿದೆ. ಫೈರ್‌ಬಾಲ್ ಆರೆಂಜ್, ಫೈರ್‌ಬಾಲ್ ಗ್ರೇ, ಸ್ಟೆಲ್ಲಾರ್ ಮ್ಯಾಟ್ ಗ್ರೇ, ಸ್ಟೆಲ್ಲಾರ್ ಮೆರೈನ್ ಬ್ಲೂ, ಅರೋರಾ ರೆಟ್ರೊ ಗ್ರೀನ್, ಅರೋರಾ ರೆಡ್ ಹಾಗೂ ಸೂಪರ್‌ನೋವಾ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ.
ಈ ಮೋಟಾರ್‌ಸೈಕಲ್ ಗಾತ್ರದಲ್ಲಿ ದೊಡ್ಡದಾಗಿದೆ. 2,140 ಎಂಎಂ ಉದ್ದ, 845 ಎಂಎಂ ಅಗಲ ಹಾಗೂ 1,140 ಎಂಎಂ ಎತ್ತರವಿದೆ. ಜೊತೆಗೆ 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,400 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 191 ಕೆಜಿ ತೂಕವಿದೆ.
ನೂತನ ರಾಯಲ್ ಎನ್‌ಫೀಲ್ಡ್ ಮಿಟಿಯೋರ್ 350 ಬೈಕ್ ಪವರ್‌ಟ್ರೇನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹಳೆಯ ಮಾಡೆಲ್‌ನಂತೆಯೇ ಇದೆ. 349 ಸಿಸಿ ಏರ್/ಕೋಲ್ಡ್ ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 6,100 ಆರ್‌ಪಿಎಂನಲ್ಲಿ 20.2 ಬಿಎಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 4,000 ಆರ್‌ಪಿಎಂನಲ್ಲಿ 27 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 35 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ ಎಂದು ಅಂದಾಜಿಸಲಾಗಿದೆ.
ಹೊಸ ಮಿಟಿಯೋರ್ 350 ಮೋಟಾರ್‌ಸೈಕಲ್ ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಯುಎಸ್‌ಬಿ ಟೈಪ್-ಸಿ ಫಾಸ್ಟ್-ಚಾರ್ಜಿಂಗ್ ಪೋರ್ಟ್, ಅಸಿಸ್ಟ್ & ಸ್ಲಿಪ್ಪರ್ ಕ್ಲಚ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 15 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ಪಡೆದಿದೆ. ಸೀಟ್ ಎತ್ತರ 765 ಎಂಎಂ ಇದೆ.
ಇದು ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) ಟ್ವಿನ್ ಟ್ಯೂಬ್ ಎಮಲ್ಷನ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಡುಯಲ್ ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಡುಯಲ್ ಡಿಕ್ಸ್ ಬ್ರೇಕ್‌ಗಳನ್ನು ಒಳಗೊಂಡಿದೆ.
ನೂತನ ರಾಯಲ್ ಎನ್‌ಫೀಲ್ಡ್ ಮಿಟಿಯೋರ್ 350 ಬೈಕ್‌ಗಾಗಿ ಬುಕ್ಕಿಂಗ್ ಹಾಗೂ ಟೆಸ್ಟ್ ರೈಡ್‌ಗಳು ಕೂಡ ಶುರುವಾಗಿವೆ. ಆಸಕ್ತ ಗ್ರಾಹಕರು ಸಮೀಪದ ಶೋರೂಂಗೆ ಭೇಟಿ ನೀಡಿ, ಮಾಹಿತಿ ಪಡೆಯಬಹುದು. ಸೆಪ್ಟೆಂಬರ್ 22 ರಿಂದ ವಿತರಣೆಗಳು ಆರಂಭವಾಗಲಿದೆ ಎಂದು ವರದಿಯಾಗಿದೆ.
ಒಟ್ಟಾರೆಯಾಗಿ ಹೊಸ 'ಮಿಟಿಯೋರ್ 350' ಮೋಟಾರ್‌ಸೈಕಲ್ ಮಾರಾಟಕ್ಕೆ ಬಂದಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ತುಂಬಾ ಚೆನ್ನಾಗಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಈ ಬೈಕ್‌ನ ವಿತರಣೆಗಳು ಪ್ರಾರಂಭಗೊಂಡ ನಂತರ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








