ABS ಕಡ್ಡಾಯ: ಇನ್ನು ಹೊಸ ಬೈಕ್ & ಸ್ಕೂಟರ್‌ಗಳನ್ನು ಮಾತಾಡಿಸಲು ಆಗಲ್ಲ, ಯಾರು ಹೇಳದ ವಿವರಗಳಿವು!
ದ್ವಿಚಕ್ರ ವಾಹನ ಸವಾರರ ಸುರಕ್ಷತೆಗಾಗಿ ಕೇಂದ್ರ ಭೂ ಸಾರಿಗೆ & ಹೆದ್ದಾರಿ ಸಚಿವಾಲಯ (Ministry of Road Transport & Highways) ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. 2026ರ ಜನವರಿ 1ರಿಂದ ಅಧಿಕೃತವಾಗಿ ಜಾರಿಗೆ ಬರುವಂತೆ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಲ್ಲ ಮೋಟಾರ್‌ಸೈಕಲ್ ಹಾಗೂ ಸ್ಕೂಟರ್‌ಗಳಲ್ಲಿ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಬನ್ನಿ, ಎಬಿಎಸ್‌ನ ಪ್ರಯೋಜನಗಳೇನು, ಇದರಿಂದ ನೂತನ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ವ್ಯತ್ಯಯವಾಗಲಿದೆಯೇ ಎಂಬುದರ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.
ಸದ್ಯ 125 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಎಂಜಿನ್‌ನ್ನು ಹೊಂದಿರುವ ಎಲ್ಲ ದ್ವಿಚಕ್ರ ವಾಹನಗಳಲ್ಲಿ ಎಬಿಎಸ್ (ABS) ಆಯ್ಕೆಯನ್ನು ಕಡ್ಡಾಯ ಮಾಡಲಾಗಿದೆ. ಇದನ್ನು 2019 ರಿಂದ ಅಧಿಕೃತವಾದ ಜಾರಿಗೊಳಿಸಲಾಯಿತು. ಆದರೂ ಸರಿ ಸುಮಾರು ಶೇಕಡ 40% ದ್ವಿಚಕ್ರ ವಾಹನಗಳು ಈ ಸುರಕ್ಷತಾ ವೈಶಿಷ್ಟ್ಯವನ್ನು ಪಡೆದುಕೊಂಡಿಲ್ಲ.

ಎಬಿಎಸ್ ಪ್ರಯೋಜನವೇನು:
ಇದು ಹೆಚ್ಚು ಉಪಯುತ್ತವಾದ ಸುರಕ್ಷತಾ ವೈಶಿಷ್ಟ್ಯವಾಗಿದೆ. ಬೈಕ್ ಹಾಗೂ ಸ್ಕೂಟರ್‌ಗಳನ್ನು ಚಲಾಯಿಸುವಾಗ ಹಠತ್ತನೆ ಬ್ರೇಕ್ ಹಾಕಿದಾಗ ವೀಲ್-ಲಾಕ್ ಆಗುವುದನ್ನು ತಪ್ಪಿಸುತ್ತದೆ. ವಾಹನದ ಮೇಲೆ ಪೂರ್ತಿ ಹಿಡಿತ ಸಾಧಿಸಲು ನೆರವಾಗಲಿದೆ. ಸ್ಕಿಡ್ ಆಗುವುದನ್ನು ತಪ್ಪಿಸಿತ್ತದೆ. ಈ ಮೂಲಕ ಅಪಘಾತವಾಗುವ ಸಾಧ್ಯತೆಯನ್ನು ಶೇಕಡ 35 ರಿಂದ 45% ಕಡಿಮೆ ಮಾಡುತ್ತದೆ.
ಡುಯಲ್ ಚಾನೆಲ್ ಎಬಿಎಸ್ ಹೆಚ್ಚು ಪರಿಣಾಮಕಾರಿ:
ವಿಶೇಷವಾಗಿ ಬೈಕ್ ಅಥವಾ ಸ್ಕೂಟರ್‌ಗಳು ಮುಂಭಾಗದ (ಫ್ರಂಟ್) ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದ್ದರೆ, ಸವಾರರು ಅದನ್ನು ಹಿಡಿಯಲು ಹೆದರಿಕೊಳ್ಳುತ್ತಾರೆ. ಬಹುತೇಕರು ಹಿಂಭಾಗದ (ರೇರ್) ಬ್ರೇಕ್‌ನ್ನು ಮಾತ್ರ ಬಳಕೆ ಮಾಡುತ್ತಾರೆ. ಅದರಲ್ಲೂ ಸಿಂಗಲ್ ಚಾನೆಲ್ ಎಬಿಎಸ್‌ನ್ನು ಮುಂದಿನ ವೀಲ್‌ನಲ್ಲಿ ಮಾತ್ರ ಬಳಕೆ ಮಾಡಲಾಗುತ್ತದೆ. ಹಾಗಾಗಿ ಹೆಚ್ಚಿನ ಸಂದರ್ಭದಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ. ಈ ಹಿನ್ನೆಲೆ ಡುಯಲ್ ಚಾನೆಲ್ ಎಬಿಎಸ್ ಹೆಚ್ಚು ಸೂಕ್ತವಾಗಲಿದೆ.
ಎಬಿಎಸ್ ಜೊತೆಗೆ ಟಿಸಿಎಸ್ ಸುರಕ್ಷತಾ ವೈಶಿಷ್ಟ್ಯವು ಬೇಕು:
ಎಬಿಎಸ್‌ನೊಂದಿಗೆ ಟಿಸಿಎಸ್ (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್) ನಂತಹ ಇತರೆ ಸುರಕ್ಷತಾ ವೈಶಿಷ್ಟ್ಯವನ್ನು ದ್ವಿಚಕ್ರ ವಾಹನಗಳಲ್ಲಿ ಪರಿಚಯಿಸುವ ಬಗ್ಗೆಯೂ ಸರ್ಕಾರ ಗಮನಹರಿಸಬೇಕು ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಇದು ರಸ್ತೆಯ ಮೇಲೆ ಬಿಗಿಯಾದ ಹಿಡಿತ ಒದಗಿಸಲು ಸಹಾಯಕವಾಗಿದೆ. ಜೊತೆಗೆ ಈ ವೈಶಿಷ್ಟ್ಯದ ನೆರವಿನಿಂದ ದ್ವಿಚಕ್ರ ವಾಹನಗಳು ಹೆಚ್ಚಿನ ವೇಗದಲ್ಲಿರುವಾಗಲು ನಿಯಂತ್ರಣ ಕಳೆದುಕೊಳ್ಳುವುಲ್ಲ. ಮಳೆಗಾಲದಲ್ಲಿ ರಸ್ತೆಗಳು ಜಾರುತ್ತವೆ. ಅಂತಹ ಸಂದರ್ಭದಲ್ಲಿ ಟಿಸಿಎಸ್ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ.
ಎಬಿಎಸ್ ಬದಲಿಗೆ ಸಿಬಿಎಸ್ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲದು:
ಎಬಿಎಸ್‌ಗೆ ಹೋಲಿಕೆ ಮಾಡಿದರೆ, ಸಿಬಿಎಸ್ (ಕಾಂಬಿ ಬ್ರೇಕಿಂಗ್ ಸಿಸ್ಟಮ್) ಅಳವಡಿಕೆ ವೆಚ್ಚವು ತುಂಬಾ ಕಡಿಮೆಯಿದೆ. ಬ್ರೇಕ್ ಹಾಕಿದಾಗ ಸಿಬಿಎಸ್ ಸಹಾಯದಿಂದ ಏಕಕಾಲದಲ್ಲಿ ಎರಡು ವೀಲ್‌ಗಳನ್ನು ನಿಯಂತ್ರಣಕ್ಕೆ ತರಬಹುದು. ಇದು ದ್ವಿಚಕ್ರ ವಾಹನಗಳ ವೇಗವನ್ನು ಪರಿಣಾಮಕಾರಿಯಾಗಿ ಕಡಿಮೆಗೊಳಿಸುತ್ತದೆ.
ಎಬಿಎಸ್ ಉಪಯೋಗದಿಂದ ದ್ವಿಚಕ್ರ ವಾಹನಗಳ ಬೆಲೆ ದುಬಾರಿ:
ಎಬಿಎಸ್ ಬಳಕೆಯಿಂದ ಬೈಕ್ ಹಾಗೂ ಸ್ಕೂಟರ್‌ಗಳ ಬೆಲೆ ಏರಿಕೆಯಾಗುವುದು ಶತಸಿದ್ಧವಾಗಿದೆ. ಸಿಂಗಲ್ ಚಾನೆಲ್ ಎಬಿಎಸ್‌ನ್ನು ಅಳವಡಿಸಿದರೂ ದ್ವಿಚಕ್ರ ವಾಹನಗಳ ದರವು ರೂ.5,000 ರಿಂದ 10,000 ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ಈ ಬೆಲೆ ಹೆಚ್ಚಳದಿಂದ ಗ್ರಾಹಕರು ಕೂಡ ದ್ವಿಚಕ್ರ ವಾಹನಗಳನ್ನು ಕೊಳ್ಳಲು ಹಿಂದೇಟು ಹಾಕಬಹುದು ಎನ್ನಲಾಗಿದೆ.
2 ಹೆಲ್ಮೆಟ್ ನಿಯಮವು ಜಾರಿಗೆ ಬರಬಹುದು:
ಎಬಿಎಸ್ ಮಾತ್ರವಲ್ಲದೆ 2026ರ ಜನವರಿ 1 ರಿಂದ ಎಲ್ಲ ಹೊಸ ದ್ವಿಚಕ್ರ ವಾಹನಗಳಿಗೆ ಬಿಐಎಸ್ ಮಾನದಂಡಗಳ ಅನ್ವಯವಾಗಿರುವ 2 ಹೆಲ್ಮೆಟ್‌ಗಳನ್ನು ಒದಗಿಸಬೇಕು. ಈ ಬಗ್ಗೆಯೂ ಕೇಂದ್ರ ಸರ್ಕಾರ ನಿಯಮಗಳನ್ನು ರೂಪಿಸುತ್ತಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ 1 ಹೆಲ್ಮೆಟ್‌ನ್ನು ಮಾತ್ರ ನೀಡಲಾಗುತ್ತಿದೆ.
ಇನ್ನು, ದ್ವಿಚಕ್ರ ವಾಹನ ಸವಾರರ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಕೈಗೊಳ್ಳಲಿದೆ ಎನ್ನಲಾದ ಎಬಿಎಸ್ ಹಾಗೂ ಎರಡು ಹೆಲ್ಮೆಟ್ ನಿಮಯ ನಿಜಕ್ಕೂ ಶ್ಲಾಘನೀಯಯಾಗಿದೆ. ಇದು ರಸ್ತೆ ಅಪಘಾತಗಳ ಸಂಖ್ಯೆಯನ್ನು ಹೇರಳವಾಗಿ ಕಡಿಮೆಗೊಳಿಸಲಿದೆ. ಆದರೆ, ಮೋಟಾರ್‌ಸೈಕಲ್ ಹಾಗೂ ಸ್ಕೂಟರ್‌ಗಳ ಬೆಲೆ ಏರಿಕೆಯಾಗಲಿದೆ ಎಂಬುದು ಮಾತ್ರ ಬೇಸರದ ಸಂಗತಿಯಾಗಿದೆ.


Click it and Unblock the Notifications