ಬೆಲೆಯೂ ಅಗ್ಗ.. ಬಜಾಜ್ ಪಲ್ಸರ್ ಎನ್160 ಮೋಟಾರ್‌ಸೈಕಲ್‌ನ ನೂತನ ವೇರಿಯೆಂಟ್ ಕುರಿತ ಪ್ರಮುಖಾಂಶಗಳಿವು!
ಇತ್ತೀಚೆಗೆ ಬಜಾಜ್ ಪಲ್ಸರ್ ಎನ್160 (Bajaj Pulsar N160) ಬೈಕ್‌ನ ಹೊಚ್ಚ ಹೊಸ ಸಿಂಗಲ್ ಸೀಟ್ - ಡುಯಲ್ ಚಾನೆಲ್ ಎಬಿಎಸ್ ರೂಪಾಂತರವನ್ನು (ವೇರಿಯೆಂಟ್) ಮಾರಾಟಕ್ಕೆ ತರಲಾಗಿತ್ತು. ಇದು ಕಡಿಮೆ ಬೆಲೆಯಲ್ಲಿಯೂ ಖರೀದಿ ಲಭ್ಯವಿದ್ದು, ಅತ್ಯುತ್ತಮವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಬನ್ನಿ, ನೂತನ ರೂಪಾಂತರದ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಪ್ರಮುಖಾಂಶಗಳನ್ನು ತಿಳಿಯೋಣ.
ಬೆಲೆ (Price):
ಬಜಾಜ್ ಪಲ್ಸರ್ ಎನ್160 ಮೋಟಾರ್‌ಸೈಕಲ್‌ನ ಹೊಸ ಸಿಂಗಲ್ ಸೀಟ್ - ಡುಯಲ್ ಚಾನೆಲ್ ಎಬಿಎಸ್ ರೂಪಾಂತರ, ಅಗ್ಗದ ದರದಲ್ಲೂ ಮಾರಾಟಕ್ಕೆ ಬಂದಿದೆ. ಇದು ರೂ.1.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಜೊತೆಗೆ ಸಿಂಗಲ್ ಸೀಟ್ (ರೂ.1.22 ಲಕ್ಷ), ಸ್ಪ್ಲಿಟ್ ಸೀಟ್ (ರೂ.1.26 ಲಕ್ಷ) ಹಾಗೂ ಇನ್ವೆರ್ಟೆಡ್ ಫೋರ್ಕ್ (ರೂ.1.36 ಲಕ್ಷ) ಎಂಬ ರೂಪಾಂತರಗಳೊಂದಿಗೂ ಲಭ್ಯವಿದೆ.

ವಿನ್ಯಾಸ (Design):
ಈ ನೂತನ ರೂಪಾಂತರದ ವಿನ್ಯಾಸದಲ್ಲೂ ಯಾವುದೇ ಪ್ರಮುಖವಾದ ಬದಲಾವಣೆಗಳಿಲ್ಲ. ಇದು ಸ್ಟ್ಯಾಂಡರ್ಡ್ 'ಪಲ್ಸರ್ ಎನ್160'ನಂತೆಯೇ ಇದೆ. ಸಿಂಗಲ್ ಸೀಟ್ ಪಡೆದುಕೊಂಡಿರುವುರಿಂದ ಸವಾರರು ಸುಲಭವಾಗಿ ಓಡಾಟ ನಡೆಸಬಹುದು. ಹಾಗೆಯೇ ಸ್ಪ್ಲಿಟ್ ರೇರ್ ಗ್ರಾಬ್ ರೈಲ್‌ಗಳ ಬದಲಾಗಿ ಸಿಂಗಲ್ ಪೀಸ್ ಗ್ರಾಬ್ ರೈಲ್‌ನ್ನು ತನ್ನದಾಗಿಸಿಕೊಂಡಿದೆ. ಹಾರ್ಬರ್ ಗ್ರೇ-ಸಿಲ್ವರ್, ಬ್ರೂಕ್ಲಿನ್ ಬ್ಲ್ಯಾಕ್ ಮತ್ತು ಪರ್ಲ್ ಮೆಟಾಲಿಕ್ ವೈಟ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಸಿಗುತ್ತದೆ.
ಕಾರ್ಯಕ್ಷಮತೆ (Performance):
ಹೊಸ ರೂಪಾಂತರವು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 164.82 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 16 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 14.65 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 59 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ.
ವೈಶಿಷ್ಟ್ಯಗಳು (Features):
ನೂತನ ಬಜಾಜ್ ಪಲ್ಸರ್ ಎನ್160 ಬೈಕ್‌ನ ಸಿಂಗಲ್ ಸೀಟ್ - ಡುಯಲ್ ಚಾನೆಲ್ ಎಬಿಎಸ್ ರೂಪಾಂತರ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಮೋಟಾರ್‌ಸೈಕಲ್ ಸರಿ ಸುಮಾರು 154 ಕೆಜಿ ತೂಕವಿದೆ. 14 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‍ನ್ನು ಪಡೆದುಕೊಂಡಿದೆ.
ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking system):
ಇದು ಮುಂಭಾಗ (ಫ್ರಂಟ್) 37 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಒಳಗೊಂಡಿದ್ದು, ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ. 17 ಇಂಚಿರುವ ಅಲಾಯ್ ವೀಲ್‌ಗಳು & ಟ್ಯೂಬ್ ಲೆಸ್ ಟೈರ್‌ಗಳನ್ನು ಒಳಗೊಂಡಿದೆ.
ಡುಯಲ್ ಚಾನೆಲ್ ಎಬಿಎಸ್ ಎಂಬುದು ಏಕೆ ಬೇಕು:
ಸವಾರರ ಜೀವ ಉಳಿಸಲು ಡುಯಲ್ ಚಾನೆಲ್ ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್) ಎಂಬ ಸುರಕ್ಷಿತ ವೈಶಿಷ್ಟ್ಯವು ಬಹುಮುಖ್ಯವಾದ ಪಾತ್ರ ವಹಿಸುತ್ತದೆ. ಮೋಟಾರ್‌ಸೈಕಲ್‌ನ್ನು ಚಲಾಯಿಸುವಾಗ ಹಠಾತ್ತನೆ ಎದುರಾಗುವ ವಿಷಮ ಪರಿಸ್ಥಿತಿ ಸಂದರ್ಭದಲ್ಲಿ ದಿಢೀರನೆ ಬ್ರೇಕ್ ಹಾಕಿದಾಗ, ವೀಲ್‌ಗಳು ಲಾಕ್ ಆಗುವುದನ್ನು ತಡೆಗಟ್ಟುತ್ತದೆ. ಜೊತೆಗೆ ಸ್ಕಿಡ್ ಆಗುವುದನ್ನು ತಪ್ಪಿಸುವುದರೊಂದಿಗೆ ಅಪಘಾತವಾಗುವ ಸಂಭವನೀಯತೆಯನ್ನು ದೂರ ಮಾಡುತ್ತದೆ.
ಒಟ್ಟಾರೆಯಾಗಿ ಬಜಾಜ್ ಪಲ್ಸರ್ ಎನ್160 ಬೈಕ್‌ನ ನೂತನ ರೂಪಾಂತರವು ಬಿಡುಗಡೆಯಾಗಿರುವುದು ಯುವ ಜನತೆಗೆ ದೊಡ್ಡ ಮಟ್ಟದಲ್ಲಿ ಸಂತಸವನ್ನು ತಂದಿದೆ. ಇದು ಬಜೆಟ್ ಬೆಲೆಯಲ್ಲಿಯೂ ಸಿಗಲಿದೆ. ಅದಕ್ಕೆ ತಕ್ಕಂತೆ ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಮುಂಬರುವ ದಿನಗಳಲ್ಲಿ ಈ ಬೈಕ್‌ಗೆ ಗ್ರಾಹಕರಿಂದಲೂ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆಯಿದೆ.


Click it and Unblock the Notifications








