90 ಕಿ.ಮೀವರೆಗೆ ಮೈಲೇಜ್.. ಬೆಂಗಳೂರು ಪ್ಯಾಟೆಗೆ ಈ ಬೈಕ್‌ಗಳು ತುಂಬಾನೇ ಬೆಸ್ಟ್, ಬೆಲೆಯೂ ಅಗ್ಗ!
ಬೆಂಗಳೂರು (Bengaluru) ಐಟಿ ಸಿಟಿಯಾಗಿದ್ದು, ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಸರಿ ಸುಮಾರು 1.40 ಕೋಟಿಗೂ ಹೆಚ್ಚಿನ ಜನರು ವಾಸಿಸುತ್ತಾರೆ. ಅದಕ್ಕೆ ತಕ್ಕಂತೆ ಸಂಚಾರ ದಟ್ಟಣೆ ಎಂಬುದು ಬಹುದೊಡ್ಡ ಸಮಸ್ಯೆಯಾಗಿ ಮಾರ್ಪಟಿದೆ. ಕಾರುಗಳಿಗೆ ಹೋಲಿಕೆ ಮಾಡಿದರೆ, ಆಫೀಸ್‌ಗೆ ತೆರಳುವವರಿಗೆ ಬೈಕ್‌ಗಳು ಅತ್ಯುತ್ತಮವಾದ ಆಯ್ಕೆಯಾಗಿವೆ. ನಾವಿಲ್ಲಿ, ಸಿಲಿಕಾನ್ ಸಿಟಿಯ ರಸ್ತೆಗಳಿಗೆ ಸರಿ ಹೊಂದಬಲ್ಲ ಪ್ರಮುಖ 3 ಮೋಟಾರ್‌ಸೈಕಲ್‌ಗಳ ಕುರಿತಂತೆ ಸಂಕ್ಷಿಪ್ತವಾಗಿ ವಿವರಿಸಿದ್ದೇವೆ.
ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus):
ಇದು ಜನಪ್ರಿಯ ಪ್ರಯಾಣಿಕ ಬೈಕ್ ಆಗಿದ್ದು, ವಿಶ್ವಾಸಾರ್ಹತೆಗೂ ಇದು ಹೆಸರುವಾಸಿಯಾಗಿದೆ. ತುಂಬಾ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, ಬೆಂಗಳೂರಿನಂತಹ ಬೃಹತ್ ನಗರಗಳಲ್ಲಿ ಸುಲಭವಾಗಿ ಬಳಕೆ ಮಾಡಬಹುದು. ಸವಾರರು ಆರಾಮದಾಯಕವಾಗಿ ಪ್ರಯಾಣಿಸಲು ಸಾಧ್ಯವಾಗುವಂತೆ ಹಗುರವಾಗಿಯೂ ಇದ್ದು, ಉತ್ತಮವಾದ ಆಸನವನ್ನು ಪಡೆದಿದೆ.

ನೂತನ ಸ್ಪ್ಲೆಂಡರ್ ಮೋಟಾರ್‌ಸೈಕಲ್ ಅಗ್ಗದ ದರದಲ್ಲೂ ಲಭ್ಯವಿದೆ. ಕನಿಷ್ಠ ರೂ.74,651 ಹಾಗೂ ಗರಿಷ್ಠ ರೂ.82,740 ಬೆಲೆಯನ್ನು ಒಳಗೊಂಡಿದ್ದು, ಬಡ ಹಾಗೂ ಮಧ್ಯಮ ವರ್ಗದ ಸುಲಭವಾಗಿ ಕೊಂಡುಕೊಳ್ಳಬಹುದು. 97.2 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದ್ದು, 73 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ ಡಿಸ್ಕ್ ಮತ್ತು ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.
ಬಜಾಜ್ ಪ್ಲಾಟಿನಾ 100 (Bajaj Platina 100):
ಈ ಬೈಕ್ ನಗರ ಪ್ರದೇಶಕ್ಕೆ ಹೆಚ್ಚು ಸೂಕ್ತವಾಗಿದೆ. ಪ್ರತಿನಿತ್ಯ ಆಫೀಸ್‌ಗೆ ಹೋಗಲು ಬಳಕೆ ಮಾಡಬಹುದು. ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತದೆ ಎಲ್ಲ ವಿಧದ ರಸ್ತೆಯಲ್ಲಿಯೂ ಲೀಲಾಜಾಲವಾಗಿ ಚಲಿಸಬಲ್ಲದು. ಅತ್ಯುತ್ತಮವಾದ ಇಂಧನ ದಕ್ಷತೆಯಿಂದಲೂ ಮನೆ ಮಾತಾಗಿದ್ದು, ಇಡೀ ತಿಂಗಳು ಕಡಿಮೆ ಖರ್ಚಿನಲ್ಲಿ ಓಡಾಟ ನಡೆಸಬಹುದು.

ಹೊಸ ಪ್ಲಾಟಿನಾ ಬಜೆಟ್ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ರೂ.65,407 (ಎಕ್ಸ್-ಶೋರೂಂ) ದರವನ್ನು ಹೊಂದಿದ್ದು, ಶ್ರೀಸಾಮಾನ್ಯರ ಬಂಡಿ ಎಂದೇ ಖ್ಯಾತಿ ಗಳಿಸಿದೆ. 102 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದ್ದು, 75 ರಿಂದ 90 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಎಲೆಕ್ಟ್ರಿಕ್ ಸ್ಟಾರ್ಟರ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಮುಂಭಾಗ (ಫ್ರಂಟ್) & ಹಿಂಭಾಗ (ರೇರ್) ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.
ಟಿವಿಎಸ್ ರೈಡರ್ (TVS Raider):
ಇದು ಗೇಮ್ ಚೇಂಜರ್ ಮೋಟಾರ್‌ಸೈಕಲ್ ಎಂದೇ ಗುರುತಿಸಿಕೊಂಡಿದೆ. ವಿಶೇಷವಾಗಿ ಯುವ ಖರೀದಿದಾರರನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ. ಹೆಚ್ಚು ಆಧುನಿಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಪಟ್ಟಣ ಪ್ರದೇಶಕ್ಕೆ ಹೇಳಿ ಮಾಡಿಸಿರುವ ರೀತಿಯಲಿದೆ. ಆರಾಮದಾಯಕ ಪ್ರಮಾಣವನ್ನು ಒದಗಿಸಲಿದ್ದು, ಉತ್ತಮ ಇಂಧನ ದಕ್ಷತೆಯನ್ನು ಹೊಂದಿದೆ. ನಿರ್ವಹಣಾ ವೆಚ್ಚವು ಜಾಸ್ತಿಯಿಲ್ಲ.

ನೂತನ ರೈಡರ್ ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಿದೆ. ಕನಿಷ್ಠ ರೂ.80,500 ಮತ್ತು ಗರಿಷ್ಠ ರೂ.95,600 ಬೆಲೆಯನ್ನು ಹೊಂದಿದೆ. ಬಡವ ಬಲ್ಲಿದ ಎಂಬ ಬೇಧವಿಲ್ಲದೇ ಎಲ್ಲ ವರ್ಗದ ಗ್ರಾಹಕರು ಸಹ ಕಮ್ಮಿ ಖರ್ಚಿನಲ್ಲಿ ಮನೆಗೆ ತರಬಹುದು. ಅದಕ್ಕೆ ಅನುಗುಣವಾಗಿ 124.8 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 56.7 ರಿಂದ 67 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್/ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕನ್ಸೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಡಿಸ್ಕ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.
ಒಟ್ಟಾರೆಯಾಗಿ ಹೀರೋ ಸ್ಪ್ಲೆಂಡರ್ ಪ್ಲಸ್, ಬಜಾಜ್ ಪ್ಲಾಟಿನಾ 100 ಮತ್ತು ಟಿವಿಎಸ್ ರೈಡರ್ ಬೈಕ್‌ಗಳು ಬೆಂಗಳೂರಿನ ರಸ್ತೆಗಳಿಗೆ ಚೆನ್ನಾಗಿ ಹೊಂದಾಣಿಕೆಯಾಗಬಲ್ಲವು. ಜೊತೆಗೆ ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ನೀವು ನಗರ ವಾಸಿಯಾಗಿದ್ದು, ಹೊಚ್ಚ ಹೊಸ ಮೋಟಾರ್‌ಸೈಕಲ್‌ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ, ಹಾಗಾದರೆ ಈ 3 ಬೈಕ್‌ಗಳನ್ನು ತಮ್ಮ ಆಯ್ಕೆಯಾಗಿ ಪರಿಗಣಿಸಬಹುದು.


Click it and Unblock the Notifications








