Hero: ಹೀರೋಗೆ ಸ್ಪ್ಲೆಂಡರ್ ಒಂದೇ ಸಾಕು... ಕಂಪನಿಗೆ ಅಗ್ರಸ್ಥಾನ ತಂದುಕೊಟ್ಟ ಬಡವರ ಬಂಡಿ!
ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೋಕಾರ್ಪ್ (Hero MotoCorp), ಆರ್ಥಿಕ ವರ್ಷ 2025 ರಲ್ಲಿ (ಏಪ್ರಿಲ್ 2024 ರಿಂದ ಮಾರ್ಚ್ 2025) 58,99,187 ಯುನಿಟ್ ವಾಹನಗಳ (5.9 ಮಿಲಿಯನ್) ಮಾರಾಟವನ್ನು ದಾಖಲಿಸಿದೆ. ಡಿಸೆಂಬರ್ 2024 ರಲ್ಲಿ, ಕಂಪನಿಯು ಸತತ 24 ವರ್ಷಗಳ ಕಾಲ ತನ್ನ ಮಾರುಕಟ್ಟೆ ನಾಯಕತ್ವವನ್ನು ಉಳಿಸಿಕೊಳ್ಳುವ ಮೂಲಕ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. ಈ ಪರಂಪರೆಯನ್ನು ಆಧರಿಸಿ, ಕಂಪನಿಯು ತನ್ನ ನಾಯಕತ್ವದ ವೇಗವನ್ನು 25ನೇ ವರ್ಷಕ್ಕೆ ವಿಸ್ತರಿಸಿರುವುದಾಗಿ ಕಂಪನಿ ಹೇಳಿಕೊಂಡಿದೆ.
2025 ಮಾರ್ಚ್ ತಿಂಗಳವೊಂದರಲ್ಲಿ ಹೀರೋ ಮೋಟೋಕಾರ್ಪ್ 5,49,604 ಯುನಿಟ್ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಇದು ಹಿಂದಿನ ವರ್ಷದ ಇದೇ ತಿಂಗಳಲ್ಲಿ ಮಾರಾಟವಾಗಿದ್ದಕ್ಕೆ ಹೋಲಿಸಿದರೆ ಶೇ12 ರಷ್ಟು ಬೆಳವಣಿಗೆಯಾಗಿದೆ. ಇನ್ನು ಹೊರ ದೇಶಗಳಿಗೆ ರಫ್ತು ಮಾಡಿರುವುದನ್ನು ನೋಡಿಕೊಂಡರೆ 39,518 ಯುನಿಟ್ ವಾಹನಗಳನ್ನು ರವಾನಿಸಿದೆ. ಕಳೆದ ವರ್ಷ ಮಾರ್ಚ್‌ಗೆ ಹೋಲಿಸಿದರೆ ಶೇ27 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಹೀರೋ ಮೋಟೋಕಾರ್ಪ್ ಭಾರತವೊಂದರಲ್ಲಿ 56,11,758 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಹಿಂದಿನ ಆರ್ಥಿಕ ವರ್ಷಕ್ಕಿಂತ (24ನೇ ಹಣಕಾಸು ವರ್ಷ) ಉತ್ತಮ ಬೆಳವಣಿಗೆಯನ್ನು ಸಾಧಿಸಿದೆ. ಅಂತರಾಷ್ಟ್ರೀಯವಾಗಿ ಹೀರೋ ಮೋಟೋಕಾರ್ಪ್ 2025ನೇ ಆರ್ಥಿಕ ವರ್ಷದಲ್ಲಿ 2,87,429 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಹಿಂದಿನ ಆರ್ಥಿಕ ವರ್ಷದಲ್ಲಿ (2024) ಮಾರಾಟವಾದ 2,00,923 ಯುನಿಟ್‌ಗಳಿಂದ ಶೇ43 ರಷ್ಟು ದೃಢವಾದ ಹೆಚ್ಚಳವನ್ನು ದಾಖಲಿಸಿದೆ.
ಹೀರೋದಿಂದ ನಡೆಸಲ್ಪಡುವ VIDA, ಏಪ್ರಿಲ್ 2024 ಮತ್ತು ಮಾರ್ಚ್ 2025ರ ನಡುವೆ 58,000ಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುವ ಮೂಲಕ, EV ವಿಭಾಗದಲ್ಲಿ ಕಂಪನಿಯ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ. ಗ್ರಾಹಕರ ಅನುಭವವನ್ನು ಹೆಚ್ಚಿಸಲು ಮತ್ತು ತೊಂದರೆ-ಮುಕ್ತ ಸವಾರಿ ಅನುಭವವನ್ನು ನೀಡಲು, ಕಂಪನಿಯು ಭಾರತದ 250 ನಗರಗಳಲ್ಲಿ 3,600ಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್‌ಗಳೊಂದಿಗೆ ವಿಸ್ತಾರವಾದ VIDA ಫಾಸ್ಟ್-ಚಾರ್ಜಿಂಗ್ ನೆಟ್‌ವರ್ಕ್ ಅನ್ನು ಸ್ಥಾಪಿಸಿದೆ.

ಕಂಪನಿಯು ಆರ್ಥಿಕ ವರ್ಷ 2025 ರಲ್ಲಿ 11,000 ಕ್ಕೂ ಹೆಚ್ಚು ಯೂನಿಟ್ ಹಾರ್ಲೆ-ಡೇವಿಡ್ಸನ್ X440 ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಿದೆ. ಪ್ರೀಮಿಯಂ ಮೋಟಾರ್‌ಸೈಕಲ್ ವಿಭಾಗದಲ್ಲಿಯೂ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ. ಹೀರೋ ಮೋಟೋಕಾರ್ಪ್ ಇಲ್ಲಿಯವರೆಗೆ ದೇಶಾದ್ಯಂತ 80 ಕ್ಕೂ ಹೆಚ್ಚು ಪ್ರೀಮಿಯಂ ಡೀಲರ್‌ಶಿಪ್‌ಗಳನ್ನು ಸ್ಥಾಪಿಸಿದೆ.
ಈ ಅತ್ಯಾಧುನಿಕ ಔಟ್‌ಲೆಟ್‌ಗಳು ಹೀರೋ, VIDA ಮತ್ತು ಹಾರ್ಲೆ-ಡೇವಿಡ್ಸನ್ ಉತ್ಪನ್ನಗಳಿಗೆ ಮೀಸಲಾದ ವಿಭಾಗಗಳನ್ನು ಒಳಗೊಂಡಿವೆ. ಹೊಸ ಡೆಸ್ಟಿನಿ 125 ಸ್ಕೂಟರ್ ಅನ್ನು ಬಿಡುಗಡೆ ಮಾಡಿದ ನಂತರ, ಕಂಪನಿಯು ಮಾರ್ಚ್ 2025 ರಲ್ಲಿ ಜೂಮ್ 125 ಸ್ಕೂಟರ್‌ನ ವಿತರಣೆಯನ್ನು ಪ್ರಾರಂಭಿಸಿತು. ನಂತರ ಕಂಪನಿಯ ಹೆಚ್ಚು ನಿರೀಕ್ಷಿತ Xpulse 210 ಮತ್ತು Xtreme 250R ಪ್ರೀಮಿಯಂ ಮೋಟಾರ್‌ಸೈಕಲ್‌ಗಳಿಗೆ ಬುಕಿಂಗ್‌ಗಳನ್ನು ಸಹ ಪ್ರಾರಂಭಿಸಿತು.

ಮಾರ್ಚ್ 2025 ರಲ್ಲಿ, ಹೀರೋ ಮೋಟೋಕಾರ್ಪ್ ಯೂಲರ್ ಮೋಟಾರ್ಸ್‌ನಲ್ಲಿ ಗಮನಾರ್ಹ ಪಾಲನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ವರ್ಗದಲ್ಲಿ ಕಾರ್ಯತಂತ್ರದ ಹೂಡಿಕೆಯನ್ನು ಮಾಡುವುದಾಗಿ ಘೋಷಿಸಿದೆ. ಕಂಪನಿಯ ಮಂಡಳಿಯು ಯೂಲರ್ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ರೂ. 525 ಕೋಟಿಗಳವರೆಗಿನ ಹೂಡಿಕೆಯನ್ನು ಅನುಮೋದಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








