Honda: ಹೋಂಡಾ ಆಕ್ಟಿವಾ ನಂ.1 ಸ್ಕೂಟರ್.. ಆದರೂ ಗ್ರಾಹಕರು ಖರೀದಿಸುತ್ತಿಲ್ಲ, ಕಾರಣವೇನು?
ಹೋಂಡಾ ಆಕ್ಟಿವಾ (Honda Activa) ಜನಪ್ರಿಯ ಸ್ಕೂಟರ್ ಆಗಿದ್ದು, ಹಲವು ವರ್ಷಗಳಿಂದ ದೇಶೀಯ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಮಾರಾಟವಾಗುತ್ತಿದೆ. ವಿಶ್ವಾಸಾರ್ಹತೆಗೂ ಹೆಸರುವಾಸಿಯಾಗಿದೆ. ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಖರೀದಿಗೆ ಮಾಡುತ್ತಿದ್ದಾರೆ. ಆದರೂ ದಿನದಿಂದ ದಿನಕ್ಕೆ ಈ ಆಕ್ಟಿವಾ ಸ್ಕೂಟರ್ ಮಾರಾಟ ಸಂಖ್ಯೆ ಕುಸಿತವಾಗುತ್ತಿದೆ. ಅದು ಈ 'ಮೇ' ತಿಂಗಳಲ್ಲೂ ಮುಂದುವರಿದಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಕಳೆದ ತಿಂಗಳು (ಮೇ-2025) ಹೋಂಡಾ ಕಂಪನಿಯು ಒಟ್ಟು 1,90,713 ಯುನಿಟ್ 'ಆಕ್ಟಿವಾ' ಸ್ಕೂಟರ್‌ಗಳನ್ನು ಮಾರಾಟಗೊಳಿಸಿದೆ. 2024ರ ಇದೇ ಅವಧಿಯಲ್ಲಿ 2,16,352 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಅಂಕಿಸಂಖ್ಯೆಗೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -11.85% ಇಳಿಮುಖವಾಗಿದೆ. ಆದರೂ ಸ್ಕೂಟರ್ ವಿಭಾಗದಲ್ಲಿ ಆಕ್ಟಿವಾ ನಂಬರ್ 1 ಸ್ಥಾನದಲ್ಲಿ ಮುಂದುವರಿದಿದೆ.

ಹೋಂಡಾ ಆಕ್ಟಿವಾ ಸ್ಕೂಟರ್ ಮಾರಾಟ ಸಂಖ್ಯೆ ಇಳಿಕೆಯಾಗಲು ಹಲವು ಕಾರಣಗಳನ್ನು ಪಟ್ಟಿ ಮಾಡಲಾಗಿದೆ. ಪ್ರಮುಖವಾಗಿ ಆಕ್ಟಿವಾ ಬೆಲೆಗೆ ಬೇರೆ ಕಂಪನಿಯ ಸ್ಕೂಟರ್‌ಗಳು ಖರೀದಿಗೆ ಲಭ್ಯವಿದ್ದು, ಗ್ರಾಹಕರು ಅವುಗಳತ್ತ ಒಲವನ್ನು ತೋರುತ್ತಿದ್ದಾರೆ. ಜೊತೆಗೆ ಆಕ್ಟಿವಾದ ವೈಶಿಷ್ಟ್ಯಗಳಲ್ಲಿ ಒಂದಷ್ಟು ಕೊರತೆಯಿದೆ. ಹೀಗಾಗಿ, ಈ ಸ್ಕೂಟರ್ ಮಾರಾಟ ಸಂಖ್ಯೆ ಇಳಿಕೆಯಾಗುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಸದ್ಯ ದೇಶೀಯವಾಗಿ ಹೋಂಡಾ ಆಕ್ಟಿವಾ ವಿವಿಧ ರೂಪದಲ್ಲಿ ಖರೀದಿ ಲಭ್ಯವಿದೆ. ಇವು ಬೆಲೆಗೆ ತಕ್ಕಂತೆ ಅತ್ಯಾಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿವೆ. ಇದರೊಂದಿಗೆ ಉತ್ತಮ ಇಂಧನ ದಕ್ಷತೆಯನ್ನು ಒಳಗೊಂಡಿದ್ದು, 1 ಲೀಟರ್ ಪೆಟ್ರೋಲ್ ಹಾಕಿಸಿದರೂ ಹೆಚ್ಚು ಮೈಲೇಜ್ ನೀಡಲಿವೆ.

ಹೋಂಡಾ ಆಕ್ಟಿವಾ 125 (Honda Activa 125):
ಇದು ಜನಪ್ರಿಯ ಸ್ಕೂಟರ್ ಆಗಿದೆ. ಅತ್ಯಂತ ಕೈಗೆಟುಕುವ ಬೆಲೆಯಲ್ಲಿಯೂ ಖರೀದಿಗೆ ಲಭ್ಯವಿದೆ. ರೂ.94,000 ರಿಂದ ರೂ.97,000 (ಎಕ್ಸ್ ಶೋರೂಂ) ದರವನ್ನು ಪಡೆದಿದೆ. 123.92 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 47 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಪರ್ಲ್ ಡೀಪ್ ಗ್ರೌಂಡ್ ಗ್ರೇ, ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಪರ್ಲ್ ಸೈರನ್ ಬ್ಲೂ ಮತ್ತು ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ದೊರೆಯುತ್ತದೆ.
ಈ ಸ್ಕೂಟರ್ 110 ಕೆಜಿ ತೂಕವಿದ್ದು, 5.3 ಲೀ.ನಷ್ಟು ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ. ಟಿಎಫ್‌ಟಿ ಕನ್ಸೋಲ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಹಾಗೂ ಐಡಲ್ ಸ್ಟಾರ್ಟ್/ ಸ್ಟಾಪ್ ಸಿಸ್ಟಮ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.

ಹೋಂಡಾ ಆಕ್ಟಿವಾ 110 (Honda Activa 110):
ಈ ಸ್ಕೂಟರ್ ರೂ.81,000 (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. 109.51 ಸಿಸಿ ಪೆಟ್ರೋಲ್ ಎಂಜಿನ್ ಪಡೆದಿದ್ದು, 59.5 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. 4.2-ಇಂಚಿರುವ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕನ್ಸೋಲ್ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸವಾರರ ರಕ್ಷಣೆಗಾಗಿ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.
ಹೋಂಡಾ ಆಕ್ಟಿವಾ ಇ (Honda Activa e) ಸಹ ಖರೀದಿ ಲಭ್ಯ:
ಇದೊಂದು ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ರೂ.1.17 ಲಕ್ಷದಿಂದ ರೂ.1.52 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 1.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ 2 ಬ್ಯಾಟರಿ ಪ್ಯಾಕ್‌ನ್ನು ಹೊಂದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 102 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಹೆಚ್-ಸ್ಮಾರ್ಟ್ ಕೀ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.


Click it and Unblock the Notifications








