Matter Aera: ದೇಶದ ಮೊದಲ ಎಲೆಕ್ಟ್ರಿಕ್ ಗೇರ್ ಬೈಕ್.. ರಾಜಧಾನಿಯಲ್ಲಿ ಬಿಡುಗಡೆ, 172 Km ರೇಂಜ್.. ಬೆಲೆ ಇಷ್ಟೇನಾ?
ಅಹಮದಾಬಾದ್ ಮೂಲದ ಮ್ಯಾಟರ್ (Matter), ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಸ್ಟಾರ್ಟ್ಅಪ್ ಕಂಪನಿಯಾಗಿ ಗುರುತಿಸಿಕೊಂಡಿದೆ. ಹಬ್ಬಗಳು ಸಮೀಪಿಸುತ್ತಿರುವಾಗಲೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನೂತನ 'ಏರಾ' ಇ-ಮೋಟಾರ್‌ಸೈಕಲ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ಇದು 1.93 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದ್ದು, ಹಲವು ವಿಶೇಷತೆಗಳಿಗೂ ಸಾಕ್ಷಿಯಾಗಿದೆ. ಈ ಎಲೆಕ್ಟ್ರಿಕ್ ಬೈಕ್‌ಗಾಗಿ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್‌ನ್ನು ತೆರೆಯಲಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಹೊಚ್ಚ ಹೊಸ ಮ್ಯಾಟರ್ ಏರಾ (Matter Aera) ಇ-ಬೈಕ್‌ನ್ನು ದೇಶದಲ್ಲೇ ಅಚ್ಚುಕಟ್ಟಾಗಿ ವಿನ್ಯಾಸಗೊಳಿಸಿ, ತಯಾರಿಸಲಾಗಿದೆ. ಇದು ಭಾರತದ ಮೊಟ್ಟ ಮೊದಲ ಎಲೆಕ್ಟ್ರಿಕ್ ಗೇರ್ ಮೋಟಾರ್‌ಸೈಕಲ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. 4-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹಾಗೂ ಹೈಪರ್‌ಶಿಫ್ಟ್ ಆಯ್ಕೆಯನ್ನು ಹೊಂದಿದೆ.

ಈ ಏರಾ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಹೆಚ್ಚು ಶಕ್ತಿಯುತವಾದ ಲಿಕ್ವಿಡ್-ಕೂಲ್ಡ್ ಪವರ್‌ಟ್ರೇನ್‌ನ್ನು ಹೊಂದಿದೆ. ಐಪಿ67 ಮಾನದಂಡಗಳನ್ನು ಪೂರೈಸಿರುವ 5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 172 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ.
ನೂತನ ಮ್ಯಾಟರ್ ಏರಾ ಇ-ಬೈಕ್ 105 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 2.8 ಸೆಕೆಂಡುಗಳಲ್ಲಿ 0 ರಿಂದ 40 ಕೆಎಂ/ಹೆಚ್ ವೇಗವನ್ನು ಪಡೆಯಲಿದೆ. ಇದರಲ್ಲಿ ಬಳಕೆ ಮಾಡಿರುವ ಬ್ಯಾಟರಿ ಪ್ಯಾಕ್ 5 ಗಂಟೆಗಳಲ್ಲಿ ಶೇಕಡ 0 ರಿಂದ 80% ಚಾರ್ಜ್ ಆಗಿ ಬಿಡುತ್ತದೆ.
ಹೊಸ ಏರಾ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ನೋಡಲು ತುಂಬಾ ಚೆನ್ನಾಗಿದ್ದು, ಎಲ್ಇಡಿ ಹೆಡ್‌ಲ್ಯಾಂಪ್ ಹಾಗೂ ಎಲ್ಇಡಿ ಡಿಆರ್‌ಎಲ್‌ಗಳನ್ನು ಒಳಗೊಂಡಿದೆ. ಕಾಸ್ಮಿಕ್ ಬ್ಲೂ, ಕಾಸ್ಮಿಕ್ ಬ್ಲ್ಯಾಕ್, ನಾರ್ಡ್ ಗ್ರೇ, ಬ್ಲೇಜ್ ರೆಡ್ ಹಾಗೂ ಗ್ಲೇಸಿಯರ್ ವೈಟ್ ಎಂಬ 5 ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ಈ ಮ್ಯಾಟರ್ ಏರಾ ಇ-ಬೈಕ್ ನಗರ ಪ್ರಯಾಣಕ್ಕೆ ಹೇಳಿ ಮಾಡಿಸಿದ ರೀತಿಯಲ್ಲಿದ್ದು, ಪ್ರತಿ ಕಿಲೋಮೀಟರ್ ಓಡಿಸಲು ರೂ.25 ಪೈಸೆ ವೆಚ್ಚವಾಗುತ್ತದೆ. ಇದು 168 ಕೆಜಿ ತೂಕವಿದೆ. ಸೀಟ್ ಹೈಟ್ 790 ಎಂಎಂ ಇದ್ದು, 183 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1355 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ.
ನೂತನ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬಹುಮುಖ್ಯವಾಗಿ 7-ಇಂಚಿರುವ ಟಚ್‌ಸ್ಕ್ರೀನ್ ಡಿಸ್ಪ್ಲೇ, ಮ್ಯೂಸಿಕ್ ಕಂಟ್ರೋಲ್, ಒಟಿಎ ಅಪ್ಡೇಟ್ಸ್, ಜಿಯೋ ಫೆನ್ಸಿಂಗ್, ರೈಡ್ ಅನಾಲಿಟಿಕ್ಸ್, ರಿಮೋಟ್ ಲಾಕ್/ಅನ್‌ಲಾಕ್, ಸ್ಮಾರ್ಟ್ ಪಾರ್ಕ್ ಅಸಿಸ್ಟ್, ಲೈವ್ ಟ್ರ್ಯಾಕಿಂಗ್ ಹಾಗೂ ಸ್ಮಾರ್ಟ್ ಕೀಯನ್ನು ಹೊಂದಿದೆ. ಇಕೋ, ಸಿಟಿ & ಸ್ಪೋರ್ಟ್ ಎಂಬ 3 ರೈಡಿಂಗ್ ಮೋಡ್‌ಗಳನ್ನು ಪಡೆದಿದೆ.
ಹೊಸ ಏರಾ ಬೈಕ್ ಸವಾರರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) 33 ಎಂಎಂ ಟೆಲಿಸ್ಕೋಪಿಕ್ ಫೊರ್ಕ್ಸ್ ಹಾಗೂ ಹಿಂಭಾಗ (ರೇರ್) 5-ಸ್ಟೆಪ್ ಪ್ರಿಲೋಡ್ ಟ್ವಿನ್ ಗ್ಯಾಸ್ ಚಾರ್ಜ್ಡ್ ಶಾಕ್ ಅಬ್ಸಾರ್ಬರ್ಸ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಹೊಂದಿದೆ. ಜೊತೆಗೆ ಡುಯಲ್ ಡಿಸ್ಕ್ ಬ್ರೇಕ್‌ಗಳು ಹಾಗೂ ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್) ಆಯ್ಕೆಯನ್ನು ಹೊಂದಿದೆ.
ನವದೆಹಲಿಯಲ್ಲಿ ಈ ಮ್ಯಾಟರ್ ಏರಾ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ ಬಗ್ಗೆ ಕಂಪನಿಯ ಸಿಒಒ ಅರುಣ್ ಪ್ರತಾಪ್ ಸಿಂಗ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. 'ಏರಾವನ್ನು ನಗರ ಸಂಚಾರಕ್ಕೆ ಅನುಗುಣವಾಗುವಂತೆ ಸಿದ್ಧಪಡಿಸಲಾಗಿದೆ. ಇದು ಅತ್ಯುತ್ತಮ ಕಾರ್ಯಕ್ಷಮತೆ, ತಂತ್ರಜ್ಞಾನ ಹಾಗೂ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿದೆ' ಎಂದು ಹೇಳಿದ್ದಾರೆ.


Click it and Unblock the Notifications