ಬಜೆಟ್‌ನಲ್ಲಿ ಒಂದೊಳ್ಳೆ ಬೈಕ್ ಹುಡುಕುತ್ತಿದ್ದೀರಾ? ರಿವರ್ಸ್ ಗೇರ್ ಇದೆ.. ನಿತ್ಯ 175 ಕಿ.ಮೀ ಓಡಿಸಬಹುದು!
ಪ್ರಮುಖ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಕಂಪನಿ ಓಬೆನ್ ಎಲೆಕ್ಟ್ರಿಕ್ (Oben Electric) ತನ್ನ ರೋರ್ ಇಝಡ್ ಸಿಗ್ಮಾ (Rorr EZ Sigma) ವನ್ನು ಇತ್ತೀಚೆಗೆ ರೂ.1.27 ಲಕ್ಷ (ಎಕ್ಸ್ ಶೋರೂಂ) ಪರಿಚಯಾತ್ಮಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಈ ಮುಂದಿನ ಪೀಳಿಗೆಯ ಎಲೆಕ್ಟ್ರಿಕ್ ಬೈಕ್ ಅಂತರ್ನಿರ್ಮಿತ ನ್ಯಾವಿಗೇಷನ್, ರಿಯಲ್-ಟೈಮ್ ಕರೆ ಮತ್ತು SMS ಅಲರ್ಟ್, ಮ್ಯೂಸಿಕ್ ಕಂಟ್ರೋಲ್ ಮತ್ತು ಹೆಚ್ಚಿನ ನಗರ ಟ್ರಾಫಿಕ್ ಸ್ಥಳಗಳಲ್ಲಿ ಸುಲಭವಾಗಿ ಚಲಿಸಲು ಹೊಸ ರಿವರ್ಸ್ ಮೋಡ್ ಸೇರಿದಂತೆ ಹಲವು ಆಧುನಿಕ ಫೀಚರ್ಸ್ ಒಳಗೊಂಡಿದೆ. ಈ ಬೈಕ್ ಕುರಿತ ಹೆಚ್ಚಿನ ವಿವರಗಳು ಇಲ್ಲಿವೆ.
ನಗರ ಪ್ರಯಾಣಕ್ಕಾಗಿ ವಿಶೇಷವಾಗಿ ನಿರ್ಮಾಣವಾಗಿರುವ ಈ ವಾಹನವು, ಅನುಭವ ಮತ್ತು ಉಪಯುಕ್ತತೆ ಎರಡನ್ನೂ ಹೆಚ್ಚಿಸಲು ಪ್ರಮುಖ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅಪ್‌ಗ್ರೇಡ್‌ಗಳೊಂದಿಗೆ ಬಿಡುಗಡೆಯಾಗಿದೆ. ಎರಡು ವೇರಿಯೆಂಟ್‌ಗಳನ್ನು ಹೊಂದಿದ್ದು, 3.4 ಕಿಲೋವ್ಯಾಟ್ ಬ್ಯಾಟರಿ ರೂಪಾಂತರಕ್ಕೆ ರೂ.1.27 ಲಕ್ಷ ಮತ್ತು 4.4 ಕಿಲೋವ್ಯಾಟ್ ರೂಪಾಂತರಕ್ಕೆ ರೂ.1.37 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

3.4 kWh ಬ್ಯಾಟರಿ ಒಳಗೊಂಡಿರುವ ವೇರಿಯೆಂಟ್ ಒಮ್ಮೆ ಚಾರ್ಜ್ ಮಾಡಿದರೆ 140 ಕಿ.ಮೀ ಓಡಬಲ್ಲದು. ಹಾಗೆಯೇ ದೊಡ್ಡ 4.4 kWh ಬ್ಯಾಟರಿ ಹೊಂದಿರುವ ಸ್ಕೂಟರ್ ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 175 ಕಿ.ಮೀ ರೇಂಜ್ ನೀಡುತ್ತದೆ. ರೋರ್ ಇಝಡ್ ಸಿಗ್ಮಾ ಮೋಟಾರ್‌ಸೈಕಲ್ 52 Nm ಟಾರ್ಕ್ ನೀಡುವ ಪವರ್‌ಫುಲ್ 7.5 kW ಮೋಟಾರ್ ಹೊಂದಿದೆ.
ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರುವ ಇದು, ಗಂಟೆಗೆ 95 ಕಿ.ಮೀ ಟಾಪ್ ಸ್ಪೀಡ್ ಹೋಗಬಲ್ಲದು, ಸುಮಾರು 1.5 ರಿಂದ 2 ಗಂಟೆಗಳಲ್ಲಿ ಈ ಬೈಕ್ ಅನ್ನು ಶೇ 80 ರಷ್ಟು ಚಾರ್ಜ್ ಮಾಡಬಹುದಾಗಿದೆ. ಬೈಕ್ ವೇರಿಯೆಂಟ್ ಅವಲಂಬಿಸಿ 143 ರಿಂದ 148 ಕೆ.ಜಿ ತೂಗುತ್ತದೆ. 810 ಮಿ.ಮೀ ಸೀಟ್ ಎತ್ತರವನ್ನು ಹೊಂದಿದೆ.

ಫೀಚರ್ಸ್ ವಿಷಯಕ್ಕೆ ಬಂದರೆ ಬ್ಲೂಟೂತ್‌ನೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಕಳ್ಳತನ ವಿರೋಧಿ ಅಲಾರಂಗಳು, ಜಿಯೋ-ಫೆನ್ಸಿಂಗ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಡ್ರೈವರ್ ಅಲರ್ಟ್ ಸಿಸ್ಟಮ್, ಎಲ್‌ಇಡಿ ಹೆಡ್‌ಲೈಟ್‌ನೊಂದಿಗೆ ನಿಯೋ-ರೆಟ್ರೊ ಸ್ಟೈಲಿಂಗ್, ಎಲ್‌ಇಡಿ ಟೈಲ್ ಲ್ಯಾಂಪ್‌ಗಳನ್ನು ಹೊಂದಿದೆ. ಎಲೆಕ್ಟ್ರಿಕ್ ರೆಡ್, ಫೋಟಾನ್ ವೈಟ್, ಎಲೆಕ್ಟ್ರೋ ಆಂಬರ್ ಮತ್ತು ಸರ್ಜ್ ಸಯಾನ್‌ನಂತಹ ಬಣ್ಣಗಳ ಆಯ್ಕೆಗಳಿವೆ.
ಒಟ್ಟಾರೆ ಸುರಕ್ಷತೆ ಹೆಚ್ಚಿಸಲು ಮುಂಭಾಗ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಪ್ರೀ ಲೋಡ್ - ಹೊಂದಾಣಿಕೆ ಮಾಡಬಹುದಾದ ಟ್ವಿನ್ ಹಿಂಭಾಗದ ಶಾಕ್ ಅಬ್ಸಾರ್ಬರ್‌ಗಳನ್ನು ನೀಡಲಾಗಿದೆ. ಬ್ರೇಕಿಂಗ್ ವಿಷಯಕ್ಕೆ ಬಂದರೆ 270mm ಮುಂಭಾಗದ ಡಿಸ್ಕ್ ಮತ್ತು 240mm ಹಿಂಭಾಗದ ಡಿಸ್ಕ್ ಜೊತೆಗೆ CBS ನೀಡಲಾಗಿದೆ.

ಒಬೆನ್ ಎಲೆಕ್ಟ್ರಿಕ್ ಖರೀದಿಯೊಂದಿಗೆ ಉಚಿತ ಒಂದು ವರ್ಷದ ಚಂದಾದಾರಿಕೆಯಾಗಿ GPS ಟ್ರ್ಯಾಕಿಂಗ್, ರಿಮೋಟ್ ಡಯಾಗ್ನೋಸ್ಟಿಕ್ಸ್ ಮತ್ತು ಆಂಟಿ - ಥೆಫ್ಟ್ ರಿಮೋಟ್ ಲಾಕ್ ಕಾರ್ಯವನ್ನು ಹೊಂದಿರುವ ಅಪ್ಲಿಕೇಶನ್ ಅನ್ನು ಸಹ ನೀಡಲಾಗಿದೆ. ರೋರ್ ಇಝಡ್ ಸಿಗ್ಮಾ ಆಧುನಿಕ ನಗರ ಪ್ರಯಾಣಿಕರಿಗೆ ವಿಶೇಷ ಡಿಸೈನ್, ತಂತ್ರಜ್ಞಾನ ಮತ್ತು ಪ್ರಾಯೋಗಿಕತೆಯ ಮಿಶ್ರಣದೊಂದಿಗೆ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ದೀರ್ಘಾವಧಿಯ ಮಾಲೀಕತ್ವ ಮೌಲ್ಯವನ್ನು ಮತ್ತಷ್ಟು ಬಲಪಡಿಸಲು, ಒಬೆನ್ ಕೇವಲ ರೂ.9,999 ಗೆ ರೋರ್ ಇಝಡ್ ಸಿಗ್ಮಾದೊಂದಿಗೆ ಬ್ಯಾಟರಿ ಪ್ರೊಟೆಕ್ಟ್ 8/80 ಯೋಜನೆಯನ್ನು ನೀಡುತ್ತಿದೆ. ಇದು ದೀರ್ಘಾವಧಿಯ ಮಾಲೀಕತ್ವ ಮೌಲ್ಯವನ್ನು ಹೆಚ್ಚಿಸಲು ಮತ್ತು ಮರುಮಾರಾಟ ವಿಶ್ವಾಸವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ವರ್ಗಾಯಿಸಬಹುದಾದ 8-ವರ್ಷ ಅಥವಾ 80,000 ಕಿ.ಮೀ ಬ್ಯಾಟರಿ ಖಾತರಿಯೊಂದಿಗೆ ಬರುತ್ತದೆ ಎಂದು ಕಂಪನಿ ತಿಳಿಸಿದೆ.


Click it and Unblock the Notifications








