64,000 ರೂಪಾಯಿ, 100 ಕಿ.ಮೀ ರೇಂಜ್.. ಬೆಂಗಳೂರಿನ ಈ ಕಂಪನಿಯಿಂದ ಮೊದಲ ಎಲೆಕ್ಟ್ರಿಕ್ ಬೈಕ್ ಬಿಡುಗಡೆ!
ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Electric Two Wheeler) ತಯಾರಕ ಸ್ಟಾರ್ಟ್ಅಪ್ ಕಂಪನಿಯಾಗಿ ಝೆನೋ ಅರ್ಥ್ (Zeno Earth) ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಮಂಗಳವಾರ ತನ್ನ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದಿಕೊಂಡಿದ್ದು, ಅತ್ಯಂತ ಕೈಗೆಟುಕುವ ಬೆಲೆಯಲ್ಲಿಯೂ ಗ್ರಾಹಕರ ಖರೀದಿಗೆ ಲಭ್ಯವಾಗಲಿದೆ. ಬನ್ನಿ, ಈ ನೂತನ ಇ-ಬೈಕ್‌ನ ದರ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.
ಹೊಸ ಝೆನೋ ಎಮಾರಾ (Zeno Emara) ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ್ನು ಅತಿ ಕಡಿಮೆ ಬೆಲೆಯಲ್ಲಿಯೂ ಪರಿಚಯಿಸಲಾಗಿದೆ. ಇದು ರೂ.1 ಲಕ್ಷ ಬೆಲೆಯನ್ನು ಹೊಂದಿದೆ. ಈ ದರದಲ್ಲಿ ಕೇವಲ 5,000 ಗ್ರಾಹಕರಿಗೆ ಮಾತ್ರ ಮಾರಾಟಗೊಳಿಸಲಾಗುತ್ತದೆ. ಆ ನಂತರ, ನೂತನ ಬೈಕ್ ರೂ.1.19 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿದಾರರಿಗೆ ಸಿಗಲಿದೆ.

ಹೊಸ ಝೆನೋ ಎಮಾರಾ ಮೋಟಾರ್‌ಸೈಕಲ್‌ನ್ನು ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ವಿಧಾನದಲ್ಲೂ ಮಾರಾಟ ಮಾಡಲಾಗುತ್ತದೆ. ಈ ಮಾದರಿಯಲ್ಲಿ ನೂತನ ಇ-ಬೈಕ್ ರೂ.64,000 ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಆದರೆ, ಹೆಚ್ಚುವರಿಯಾಗಿ ತಿಂಗಳಿಗೆ ಚಂದಾದಾರಿಕೆ ಶುಲ್ಕವಾಗಿ ರೂ.1,500 ಪಾವತಿ ಮಾಡಬೇಕು. ಈಗಾಗಲೇ ಬುಕ್ಕಿಂಗ್ ಶುರುವಾಗಿದ್ದು, ಆಸಕ್ತರು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ರೂ.999 ಪವಾವತಿಸುವ ಮೂಲಕ ಆರ್ಡರ್ ಮಾಡಬಹುದು.
ಝೆನೋ ಅರ್ಥ್ ದೆಹಲಿ ಸಮೀಪ ಬೃಹತ್ ಉತ್ಪಾದನಾ ಘಟಕವನ್ನು ಹೊಂದಿದೆ. ಅಲ್ಲಿ ಮಾಸಿಕ 1,000 ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳನ್ನು ತಯಾರಿಸಬಹುದು. ಈ ವರ್ಷಾಂತ್ಯದೊಳಗೆ ಬೆಂಗಳೂರಿನಲ್ಲಿ ಮೊದಲಿಗೆ ಹೊಸ ಎಮಾರಾ ಇ-ಬೈಕ್‌ಗಳ ವಿತರಣೆಗಳು ಶುರುವಾಗಲಿದೆ. ಆ ಬಳಿಕ 2026ರಿಂದ ದೆಹಲಿ ಹಾಗೂ ಮುಂಬೈನಂತಹ ಮಹಾನಗರಗಳಲ್ಲಿ ಡೆಲಿವರಿ ಮಾಡಲು ಕಂಪನಿಯು ಯೋಜಿಸಿದೆ.
ನೂತನ ಝೆನೋ ಎಮಾರಾ ಎಲೆಕ್ಟ್ರಿಕ್ ಮೋಟಾರ್‌ಸೈಕಲ್, ಶಕ್ತಿಯುತವಾದ 2 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಎರಡು ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 100 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. 95 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ.
ಈ ಇ-ಬೈಕ್ ಕೇವಲ 7.8 ಸೆಕೆಂಡುಗಳಲ್ಲಿ 0-60 ವೇಗವನ್ನು ಪಡೆಯಲಿದೆ. ಇದರಲ್ಲಿರುವ ಬ್ಯಾಟರಿ ಪ್ಯಾಕ್, 500-ವ್ಯಾಟ್ ಆನ್‌ಬೋರ್ಡ್ ಚಾರ್ಜರ್ ಬಳಕೆಯಲ್ಲಿ 5 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗಿ ಬಿಡುತ್ತದೆ. ಮತ್ತೊಂದು ಡಿಸಿ ಫಾಸ್ಟ್ ಚಾರ್ಜರ್ ಉಪಯೋಗ ಮಾಡಿದಾಗ ಕೇವಲ 90 ನಿಮಿಷದಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ.
ಹೊಸ ಝೆನೋ ಎಮಾರಾ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದೆ. 6.3-ಇಂಚಿನ ಡಿಜಿಟಲ್ ಡ್ಯಾಶ್‌ಬೋರ್ಡ್ ಮತ್ತು ಯುಎಸ್‌ಬಿ ಚಾರ್ಜರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಬೈಕ್ 160 ಕೆಜಿ ತೂಕವಿದೆ. ಸವಾರರ ಅನುಕೂಲಕ್ಕಾಗಿ ಹಿಂಭಾಗ (ರೇರ್) 100-ಲೀ.ನಷ್ಟು 'ಸ್ಟೋರೇಜ್ ಬಾಕ್ಸ್'ನ್ನು ಅಳವಡಿಕೆ ಮಾಡಬಹುದು.
ನೂತನ ಎಮಾರಾ ಎಲೆಕ್ಟ್ರಿಕ್ ಬೈಕ್ ಸವಾರರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಟ್ವಿನ್ ಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಜೊತೆಗೆ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ. 17-ಇಂಚಿನ ವೀಲ್‌ಗಳನ್ನು ಒಳಗೊಂಡಿದ್ದು, ರಸ್ತೆಯ ಮೇಲೆ ಬಿಗಿಯಾದ ಹಿಡಿತ ಒದಗಿಸಲು ಉತ್ತಮವಾದ ಟೈರ್‌ಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








