ಸಿಎನ್‌ಜಿ ಬೆಲೆ ಏರಿಕೆ ಶಾಕ್: ಬಜಾಜ್ ಫ್ರೀಡಂ 125 vs ಪೆಟ್ರೋಲ್ ಬೈಕ್, ತಿಂಗಳಿಗೆ ಎಷ್ಟು ಉಳಿತಾಯ?
ಮುಂಬೈ ಮೆಟ್ರೋಪಾಲಿಟನ್ ಪ್ರಾಂತ್ಯದ ವಾಹನ ಸವಾರರಿಗೆ ಇಂದಿನಿಂದ (ನವೆಂಬರ್ 15) ಸಿಎನ್‌ಜಿ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಮಹಾನಗರ್ ಗ್ಯಾಸ್ ಕಂಪನಿಯು ಸಿಎನ್‌ಜಿ ದರವನ್ನು ಕೆಜಿಗೆ ₹1.50 ಹೆಚ್ಚಿಸಿದ್ದು, ಈಗ ಹೊಸ ದರ ಕೆಜಿಗೆ ₹91.50 ತಲುಪಿದೆ. ಇತ್ತ ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್‌ಗೆ ₹111.21 ರಷ್ಟಿದೆ. ಹೋಲಿಕೆಗೆ ನೋಡುವುದಾದರೆ, ದೆಹಲಿಯಲ್ಲಿ ಸಿಎನ್‌ಜಿ ಕೆಜಿಗೆ ₹86.98 ಇದ್ದರೆ, ಬೆಂಗಳೂರಿನಲ್ಲಿ ₹99 ಇದೆ. ಈ ಬೆಲೆ ಏರಿಕೆಯಿಂದಾಗಿ ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್ ಮತ್ತು 70ಕ್ಕೂ ಹೆಚ್ಚು ಮೈಲೇಜ್ ಕೊಡುವ ಪೆಟ್ರೋಲ್ ಬೈಕ್‌ಗಳ ನಿರ್ವಹಣಾ ವೆಚ್ಚದ (ರನ್ನಿಂಗ್ ಕಾಸ್ಟ್) ಲೆಕ್ಕಾಚಾರವೇ ಬದಲಾಗಿದೆ.
ಸಿಟಿ ಟೆಸ್ಟ್ ಹಾಗೂ ಇಂದಿನ ಇಂಧನ ದರಗಳನ್ನು ಲೆಕ್ಕಹಾಕಿದರೆ, ಮುಂಬೈನಲ್ಲಿ ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್‌ನ ಪ್ರತಿ ಕಿಲೋಮೀಟರ್ ಪ್ರಯಾಣ ವೆಚ್ಚ ಕೇವಲ ₹0.97 ಆಗುತ್ತದೆ. ಆದರೆ ಇದೇ ದರದ ಪೆಟ್ರೋಲ್ ಬೈಕ್‌ಗಳ ನಿರ್ವಹಣಾ ವೆಚ್ಚ ಮೈಲೇಜ್‌ಗೆ ಅನುಗುಣವಾಗಿ ಕಿಲೋಮೀಟರ್‌ಗೆ ₹1.49 ರಿಂದ ₹1.85 ರಷ್ಟಾಗುತ್ತದೆ. ದೆಹಲಿಯಲ್ಲಿ ಸಿಎನ್‌ಜಿ ದರ ಕಡಿಮೆಯಿರುವುದರಿಂದ ಫ್ರೀಡಂ ಬೈಕ್‌ನ ವೆಚ್ಚ ಕಿಲೋಮೀಟರ್‌ಗೆ ₹0.93ಕ್ಕೆ ಇಳಿಯುತ್ತದೆ. ಆದರೆ ಬೆಂಗಳೂರಿನಲ್ಲಿ ಇದು ₹1.05 ಆಗುತ್ತದೆ. ನಗರ ಪ್ರದೇಶಗಳಲ್ಲಿ ಸಿಎನ್‌ಜಿ ನೀಡುವ ಉತ್ತಮ ಮೈಲೇಜ್ ಹಾಗೂ ಬೇರೆ ಬೇರೆ ನಗರಗಳ ಇಂಧನ ದರಗಳ ಆಧಾರದ ಮೇಲೆ ಈ ವೆಚ್ಚ ವ್ಯತ್ಯಾಸವಾಗುತ್ತದೆ.

ಮುಂಬೈನಲ್ಲಿ ಸಿಎನ್‌ಜಿ ದರ: ಫ್ರೀಡಂ 125 vs ಪೆಟ್ರೋಲ್ ಬೈಕ್‌ಗಳು (ಕಿಮೀಗೆ ಎಷ್ಟು ಖರ್ಚು?)
ಮುಂಬೈನಲ್ಲಿ ಇಂದಿನ ಸಿಎನ್‌ಜಿ ಮತ್ತು ಪೆಟ್ರೋಲ್ ದರಗಳು ರನ್ನಿಂಗ್ ಕಾಸ್ಟ್ ಲೆಕ್ಕಾಚಾರವನ್ನೇ ಬದಲಿಸಿವೆ. ಇತ್ತೀಚಿನ ರಿಯಲ್-ವರ್ಲ್ಡ್ ಮೈಲೇಜ್ ಟೆಸ್ಟ್ ಮತ್ತು ಬೈಕ್ ಮಾಲೀಕರಿಂದ ಸಿಕ್ಕ ಮಾಹಿತಿಯ ಆಧಾರದ ಮೇಲೆ, ಮುಂಬೈ ದರಕ್ಕೆ ತಕ್ಕಂತೆ ಪ್ರತಿ ಕಿಲೋಮೀಟರ್‌ಗೆ ತಗುಲುವ ವೆಚ್ಚವನ್ನು ಇಲ್ಲಿ ಲೆಕ್ಕ ಹಾಕಲಾಗಿದೆ. ನಿಮ್ಮ ನಗರದ ಇಂಧನ ದರ ಮತ್ತು ಮೈಲೇಜ್ ಆಧಾರದ ಮೇಲೆಯೂ ನೀವು ಇದೇ ರೀತಿ ಲೆಕ್ಕ ಹಾಕಿಕೊಳ್ಳಬಹುದು. ಪ್ರತಿದಿನದ ಅಂದಾಜು ಖರ್ಚಿನ ಸಂಪೂರ್ಣ ವಿವರ ಇಲ್ಲಿದೆ:
| ಮಾಡೆಲ್ | ಬಳಸಿದ ಸಿಟಿ ಮೈಲೇಜ್ (FE) | ಮುಂಬೈನಲ್ಲಿ ವೆಚ್ಚ (₹/ಕಿಮೀ) |
|---|---|---|
| ಬಜಾಜ್ ಫ್ರೀಡಂ 125 ಸಿಎನ್‌ಜಿ | 94 km/kg | 0.97 |
| ಬಜಾಜ್ ಪ್ಲಾಟಿನಾ 100 | 74.5 km/l | 1.49 |
| ಹೀರೋ ಸ್ಪ್ಲೆಂಡರ್+ | 62 km/l | 1.79 |
| ಹೀರೋ ಪ್ಯಾಶನ್ ಎಕ್ಸ್‌ಟೆಕ್ | 60 km/l | 1.85 |
| ಹೋಂಡಾ ಶೈನ್ 125 | 62 km/l | 1.79 |
ಮೈಲೇಜ್ ಮೂಲ (FE): ಫ್ರೀಡಂ ಸಿಟಿ ಟೆಸ್ಟ್; ಪ್ಲಾಟಿನಾ ರೈಡರ್ಸ್ ನೀಡಿರುವ ಮಾಹಿತಿ; ಸ್ಪ್ಲೆಂಡರ್ ಓನರ್ ಪೇಜ್; ಪ್ಯಾಶನ್ ಬೈಕ್ ಸವಾರರ ವರದಿ; ಶೈನ್ ಸಿಟಿ ಟೆಸ್ಟ್.
ದಿನನಿತ್ಯದ ಸವಾರರು ಗಮನಿಸಿ: ಬಜಾಜ್ ಫ್ರೀಡಂ 125 ಇಂಧನ ಖರ್ಚು, ಕ್ಯೂ ಮತ್ತು ರೈಡಿಂಗ್ ರೇಂಜ್
ನೀವು ಪ್ರತಿದಿನ 50 ಕಿಮೀ ಪ್ರಯಾಣಿಸುತ್ತಿದ್ದರೆ, ಫ್ರೀಡಂ ಬೈಕ್‌ನ ತಿಂಗಳ ಇಂಧನ ಖರ್ಚು ಸುಮಾರು ₹1,260 ಆಗುತ್ತದೆ. ಅದೇ ಸ್ಪ್ಲೆಂಡರ್ ಬೈಕ್‌ನಲ್ಲಿ ಇದು ₹2,330 ತಲುಪಲಿದ್ದು, ತಿಂಗಳಿಗೆ ₹1,070 ಉಳಿತಾಯವಾಗಲಿದೆ. ಒಂದು ವೇಳೆ ದಿನಕ್ಕೆ 80 ಕಿಮೀ ಓಡಿಸಿದರೆ, ಫ್ರೀಡಂನಲ್ಲಿ ಖರ್ಚು ₹2,020 ಮತ್ತು ಸ್ಪ್ಲೆಂಡರ್‌ನಲ್ಲಿ ₹3,720 ಆಗಲಿದ್ದು, ತಿಂಗಳಿಗೆ ಬರೋಬ್ಬರಿ ₹1,700 ಉಳಿಸಬಹುದು! ಸ್ಪ್ಲೆಂಡರ್‌ಗಿಂತ ಫ್ರೀಡಂ ಬೈಕ್ ಆನ್-ರೋಡ್ ಬೆಲೆ ₹30,000 ಹೆಚ್ಚಿದ್ದರೂ, 18 ರಿಂದ 28 ತಿಂಗಳುಗಳಲ್ಲಿ ಈ ಹೆಚ್ಚುವರಿ ಹಣ ವಾಪಸ್ ಬರುತ್ತದೆ (ಪೇಬ್ಯಾಕ್). "ಸಿಎನ್‌ಜಿ ಬಂಕ್‌ಗಳಲ್ಲಿ ದ್ವಿಚಕ್ರ ವಾಹನಗಳನ್ನು ಸಾಲಿನ ಮುಂದೆ ಕರೆದುಕೊಂಡು ಹೋಗುತ್ತಾರೆ, ಕೇವಲ 2 ನಿಮಿಷದಲ್ಲಿ ಗ್ಯಾಸ್ ಭರ್ತಿಯಾಗುತ್ತದೆ," ಎನ್ನುತ್ತಾರೆ ಸವಾರರು.
ಡೆಲಿವರಿ ಕೆಲಸ ಮಾಡುವವರಿಗೆ ಬೈಕ್‌ನ ನಿಜವಾದ ಮೈಲೇಜ್ ರೇಂಜ್ ಅತ್ಯಂತ ಮುಖ್ಯ. ಫ್ರೀಡಂ ಬೈಕ್‌ನಲ್ಲಿರುವ 2 ಕೆಜಿ ಸಿಎನ್‌ಜಿ ಸಿಲಿಂಡರ್ ಮತ್ತು 2 ಲೀಟರ್ ಪೆಟ್ರೋಲ್ ಟ್ಯಾಂಕ್‌ನಿಂದಾಗಿ, ಒಮ್ಮೆ ಸಿಎನ್‌ಜಿ ಫುಲ್ ಮಾಡಿದರೆ ಸುಮಾರು 180–200 ಕಿಮೀ ಹಾಗೂ ಪೆಟ್ರೋಲ್ ಬ್ಯಾಕಪ್ ಮೂಲಕ ಹೆಚ್ಚುವರಿಯಾಗಿ 90–110 ಕಿಮೀ ಪ್ರಯಾಣಿಸಬಹುದು. ಪೆಟ್ರೋಲ್ ಬಂಕ್‌ಗಳಿಗೆ ಹೋಲಿಸಿದರೆ ಸಿಎನ್‌ಜಿ ಬಂಕ್‌ಗಳಲ್ಲಿ ಕ್ಯೂ ಹೆಚ್ಚಿರುತ್ತದೆ ನಿಜ. ಆದರೆ, ಈಗ ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಆದ್ಯತೆ ನೀಡಲಾಗುತ್ತಿದೆ. ರಶ್ ಇರು ಅವಧಿಯಲ್ಲಿ ವೇಗವಾಗಿ ಗ್ಯಾಸ್ ತುಂಬಿಸುವ ಬಂಕ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು.
₹1 ಲಕ್ಷದೊಳಗಿನ ಅತ್ಯುತ್ತಮ ಬೈಕ್‌ಗಳು: ಸಿಎನ್‌ಜಿ ಬೈಕ್ ಯಾರಿಗೆ ಸೂಕ್ತ?
ನಿಮ್ಮ ಆನ್-ರೋಡ್ ಬಜೆಟ್ ₹1 ಲಕ್ಷದಷ್ಟಿದ್ದರೆ, ಬಜಾಜ್ ಪ್ಲಾಟಿನಾ ಮತ್ತು ಹೀರೋ ಸ್ಪ್ಲೆಂಡರ್ ಬೈಕ್‌ಗಳು ಈಗಲೂ ಸುರಕ್ಷಿತ ಹಾಗೂ ಮೈಲೇಜ್ ನೀಡುವ ಅತ್ಯುತ್ತಮ ಆಯ್ಕೆಗಳಾಗಿವೆ. ಇವುಗಳಲ್ಲಿ ಇಂಧನ ತುಂಬಿಸುವುದು ಸುಲಭ ಹಾಗೂ ದೊಡ್ಡ ಟ್ಯಾಂಕ್ ಸಾಮರ್ಥ್ಯವಿದೆ. ಆದರೆ ನೀವು ಪ್ರತಿದಿನ 50 ರಿಂದ 80 ಕಿಮೀ ಪ್ರಯಾಣಿಸುವವರಾಗಿದ್ದರೆ, ನಿಮ್ಮ ಮನೆಯ ಹತ್ತಿರ ಸಿಎನ್‌ಜಿ ಬಂಕ್ ಇದ್ದು, ಕಿಲೋಮೀಟರ್‌ಗೆ ಅತ್ಯಂತ ಕಡಿಮೆ ಖರ್ಚು ಬೇಕು ಎಂದರೆ ಬಜಾಜ್ ಫ್ರೀಡಂ 125 ಅತ್ಯುತ್ತಮ ಬೈಕ್. ಇನ್ನು ಅಪರೂಪಕ್ಕೆ ಬೈಕ್ ಬಳಸುವವರು ಅಥವಾ ಸಿಎನ್‌ಜಿ ಬಂಕ್‌ಗಳಿಂದ ದೂರವಿರುವ ಸವಾರರಿಗೆ ಪೆಟ್ರೋಲ್ ಬೈಕ್‌ಗಳೇ ಸೂಕ್ತ ಮತ್ತು ಬಳಸಲು ಸುಲಭ.


Click it and Unblock the Notifications
