2026ರ ಫೆಬ್ರವರಿ ಎಲೆಕ್ಟ್ರಿಕ್ ಟೂ-ವೀಲರ್ ಸೇಲ್ಸ್.. ಟಿವಿಎಸ್ ನಂ.1.. ಬಜಾಜ್ ಸೆಕೆಂಡ್.. ಓಲಾದ ಸ್ಥಾನವೆಷ್ಟು?
ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Electric 2-Wheeler) ಮಾರುಕಟ್ಟೆ ವೇಗವನ್ನು ಬೆಳವಣಿಗೆಯಾಗುತ್ತಿದೆ. ಗ್ರಾಹಕರು ಕೂಡ 'ಇವಿ'ಗಳನ್ನು ನಾ ಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಈ 2026ರ ಫೆಬ್ರವರಿಯಲ್ಲಿ ಎಲ್ಲ ಕಂಪನಿಗಳು ಸೇರಿ ಒಟ್ಟು 1,11,680 ಯುನಿಟ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿವೆ. 2025ರ ಇದೇ ಅವಧಿಯಲ್ಲಿ 76,720 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 46% ಪ್ರಗತಿಯಾಗಿದೆ. ಸದ್ಯ, ಅತಿಹೆಚ್ಚು 'ಇವಿ'ಗಳನ್ನು ಮಾರಾಟಗೊಳಿಸಿದ ಪ್ರಮುಖ 10 ಕಂಪನಿಗಳ ಪಟ್ಟಿಯೂ ಪ್ರಕಟಗೊಂಡಿದೆ. ಟಿವಿಎಸ್ ಮೋಟಾರ್ ಅಗ್ರ ಸ್ಥಾನದಲ್ಲಿದ್ದರೆ, ರಿವೋಲ್ಟ್ ಮೋಟಾರ್ಸ್ ಕಡೆಯ ಸ್ಥಾನದಲ್ಲಿದೆ.
ಟಿವಿಎಸ್ ಮೋಟಾರ್ (Tvs Motor):
ಇದು ಜನಪ್ರಿಯ ಕಂಪನಿಯಾಗಿದ್ದು, ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ. ಇದೇ ಫೆಬ್ರವರಿಯಲ್ಲಿ ಸರಿ ಸುಮಾರು 31,600 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2025ರ ಫೆಬ್ರವರಿ ತಿಂಗಳಲ್ಲಿ 18,955 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಈ ಮೂಲಕ ಶೇಕಡ 28% ಬೆಳವಣಿಗೆಯಾಗಿದೆ. ವಿಶೇಷವಾಗಿ ಐಕ್ಯೂಬ್ ಹಾಗೂ ಆರ್ಬಿಟರ್ ಇ-ಸ್ಕೂಟರ್‌ಗಳು 'ಗೇಮ್ ಚೇಂಜರ್' ಆಗಿ ಹೊರಹೊಮ್ಮಿವೆ.

ಬಜಾಜ್ ಆಟೋ (Bajaj Auto):
ಈ ಕಂಪನಿಯ ಏಕೈಕ 'ಚೇತಕ್' ಎಲೆಕ್ಟ್ರಿಕ್ ಸ್ಕೂಟರ್‌ನ್ನು ಗ್ರಾಹಕರು ಮೆಚ್ಚಿದ್ದಾರೆ. ಹಲವು ವಿಧದಲ್ಲೂ ಖರೀದಿಗೆ ದೊರೆಯುತ್ತದೆ. ಈ 2026ರ ಫೆಬ್ರವರಿಯಲ್ಲಿ ಬರೋಬ್ಬರಿ 25,323 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದ್ದು, ಎರಡನೇ ಸ್ಥಾನದಲ್ಲಿದೆ. 2025ರಲ್ಲಿ ಇದೇ ಅವಧಿಯಲ್ಲಿ 21,571 ಯುನಿಟ್‌ಗಳನ್ನು ಮಾರಲಾಗಿತ್ತು. ಇದರೊಂದಿಗೆ ಶೇಕಡ 17% ಅಭಿವೃದ್ಧಿಯಾಗಿದೆ.
ಎಥರ್ ಎನರ್ಜಿ (Ather Energy):
ಇದೊಂದು ಬೆಂಗಳೂರು ಮೂಲಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದ್ದು, ಮೂರನೇ ಸ್ಥಾನದಲ್ಲಿದೆ. ಈ ಫೆಬ್ರವರಿಯಲ್ಲಿ ಒಟ್ಟು 20,581ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2025ರಲ್ಲಿ ಫೆಬ್ರವರಿ ತಿಂಗಳಲ್ಲಿ 11,978 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಈ ಅಂಕಿಸಂಖ್ಯೆಯನ್ನು ವಿಶ್ಲೇಷಿಸಿದಾಗ, ಮಾರಾಟ ಪ್ರಮಾವು ವರ್ಷದಿಂದ 72% ಪ್ರಗತಿಯಾಗಿದೆ. ರಿಜ್ಟಾ ಹಾಗೂ 450 ಇ-ಸ್ಕೂಟರ್‌ಗಳನ್ನು ಗ್ರಾಹಕರು ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ.

ಹೀರೋ ಮೋಟೋಕಾರ್ಪ್ (Hero MotoCorp):
ಈ ಕಂಪನಿಯು ನಾಲ್ಕನೇ ಸ್ಥಾನದಲ್ಲಿದೆ. 'ವಿಡಾ' ಬ್ರ್ಯಾಂಡ್ನಡಿ ವಿಡಾ ವಿ2 ಹಾಗೂ ವಿಡಾ ವಿಎಕ್ಸ್2 ಎಂಬ 2 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಇದೇ ಫೆಬ್ರವರಿಯಲ್ಲಿ 12,512 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಿದೆ. 2025ರಲ್ಲಿ ಫೆಬ್ರವರಿಯಲ್ಲಿ 2,696 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಮೂಲಕ ಶೇಕಡ 364% ಅಭಿವೃದ್ಧಿಯಾಗಿದೆ.
ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ (Greaves Electric Mobility):
ಇದು ಪ್ರಮುಖ ಕಂಪನಿಯಾಗಿದ್ದು, ಐದನೇ ಸ್ಥಾನದಲ್ಲಿದೆ. ಈ 2026ರ ಫೆಬ್ರವರಿಯಲ್ಲಿ ಸರಿ ಸುಮಾರು 4,725 ಯುನಿಟ್ ಇ-ಸ್ಕೂಟರ್‌ಗಳನ್ನು ಮಾರಾಟಗೊಳಿಸಿದೆ. 2025ರ ಇದೇ ಅವಧಿಯಲ್ಲಿ 3,730 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದರೊಂದಿಗೆ ಶೇಕಡ 27% ಬೆಳವಣಿಗೆಯಾಗಿದೆ. 'ಗ್ರೀವ್ಸ್ ಎಲೆಕ್ಟ್ರಿಕ್' ಆಂಪಿಯರ್ ಸರಣಿಯ ವಿವಿಧ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ.

ಓಲಾ ಎಲೆಕ್ಟ್ರಿಕ್ (Ola Electric):
ಈ ಕಂಪನಿಯು ಆರನೇ ಸ್ಥಾನದಲ್ಲಿದೆ. ಇದೇ ಫೆಬ್ರವರಿಯಲ್ಲಿ 3,968 ಯುನಿಟ್‌ಗಳನ್ನು ಮಾರಾಟಗೊಳಿಸಿದೆ. 2025ರ ಫೆಬ್ರವರಿಯಲ್ಲಿ 7,531 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -54.26 ಕುಸಿತವಾಗಿದೆ. ಎಸ್1 ಇ-ಸ್ಕೂಟರ್ ಹಾಗೂ ರೋಡ್‌ಸ್ಟರ್ ಇ-ಬೈಕ್‌ನ್ನು ಮಾರಾಟ ಮಾಡುತ್ತಿದೆ.

ಉಳಿದಂತೆ ಏಳನೇ ಸ್ಥಾನದಲ್ಲಿ ಬಿಗಾಸ್ ಆಟೋ ಇದ್ದು, 2,411 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಎಂಟನೇ ಸ್ಥಾನದಲ್ಲಿ ರಿವರ್ ಮೊಬಿಲಿಟಿ (2,251 ಯುನಿಟ್), ಒಂಬತ್ತನೇ ಸ್ಥಾನದಲ್ಲಿ ಸಿಂಪಲ್ ಎನರ್ಜಿ (764 ಯುನಿಟ್) ಹಾಗೂ ಹತ್ತನೇ ಸ್ಥಾನದಲ್ಲಿ ರಿವೋಲ್ಟ್ ಮೋಟಾರ್ಸ್ (651 ಯುನಿಟ್) ಇದೆ.


Click it and Unblock the Notifications








