ಅಗ್ಗದ ಸ್ಟೈಲಿಷ್ ಸ್ಕೂಟರ್ ಬಿಡುಗಡೆ: ರಿವರ್ಸ್ ಗೇರ್ ಇದೆ... ಖರ್ಚಿಲ್ಲದೆ 110 ಕಿ.ಮೀ ಓಡಬಲ್ಲದು!
ಪ್ರಮುಖ ಎಲೆಕ್ಟ್ರಿಕ್ ವಾಹನ ಕಂಪನಿಗಳಲ್ಲಿ ಒಂದಾದ ಒಮೆಗಾ ಸೀಕಿ ಮೊಬಿಲಿಟಿ (OSM), ಇಂದು ತನ್ನ ಮೊದಲ ಹೈ-ಸ್ಪೀಡ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನವಾದ 'ವೆಕ್ಸ್ಟ್ರಾ' (OSM Vextra) ಸ್ಕೂಟರ್‌ನ್ನು ರೂ.99,900 ಬೆಲೆಯಲ್ಲಿ ಬಿಡುಗಡೆ ಮಾಡಿದೆ. ದೈನಂದಿನ ಪ್ರಯಾಣ ಮತ್ತು ವೃತ್ತಿಪರ ಬಳಕೆಗಾಗಿ ಹೈ ಪರ್ಫಾಮೆನ್ಸ್, ಕೈಗೆಟುಕುವ ಬೆಲೆ ಮತ್ತು ಆಧುನಿಕ ತಂತ್ರಜ್ಞಾನದ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಹರಿಸಲು OSM ವೆಕ್ಸ್ಟ್ರಾವನ್ನು ಪರಿಚಯಿಸಿದೆ. ಈ ಸ್ಕೂಟರ್ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯಲಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.
ಹೆಚ್ಚುತ್ತಿರುವ ಇಂಧನ ಬೆಲೆಗಳು, ನಗರ ದಟ್ಟಣೆ ಮತ್ತು ಸರ್ಕಾರದ ಬೆಂಬಲದಿಂದಾಗಿ ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉದ್ಯಮವು ಬಲವಾದ ವೇಗವನ್ನು ಕಾಣುತ್ತಿದೆ. ವೈಯಕ್ತಿಕ ಪ್ರಯಾಣಿಕರು ಮತ್ತು ಕೊನೆಯ ಮೈಲಿ ವೃತ್ತಿಪರರಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳು ಆದ್ಯತೆಯ ಆಯ್ಕೆಯಾಗಿ ಹೊರಹೊಮ್ಮಿವೆ, ಇವು ಪ್ರತಿ ಕಿಲೋಮೀಟರ್‌ಗೆ ಕಡಿಮೆ ವೆಚ್ಚ ಮತ್ತು ಕನಿಷ್ಠ ಮೇಂಟೆನನ್ಸ್ ಖರ್ಚನ್ನು ನೀಡುತ್ತವೆ.

ಪ್ರಸ್ತುತ ಎಲೆಕ್ಟ್ರಿಕ್ ಸ್ಕೂಟರ್‌ಗಳು ಕಡಿಮೆ ವೇಗದಿಂದ ಹೆಚ್ಚಿನ ವೇಗದ ಲಾಂಗ್-ರೇಂಜ್ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುತ್ತಿದೆ. ಗ್ರಾಹಕರು ಉತ್ತಮ ಪರ್ಫಾಮೆನ್ಸ್, ವಿಶ್ವಾಸಾರ್ಹ ಮತ್ತು ಸ್ಮಾರ್ಟ್ ತಂತ್ರಜ್ಞಾನವನ್ನು ಬಯಸುತ್ತಿದ್ದಾರೆ. ಭಾರತದ ವಿಸ್ತರಿಸುತ್ತಿರುವ ನಗರ ಮತ್ತು ಅರೆ-ನಗರ ಜನರಿಗೆ ಪ್ರೀಮಿಯಂ, ಪ್ರಾಯೋಗಿಕ ಎಲೆಕ್ಟ್ರಿಕ್ ವಾಹನಗಳನ್ನು ನೀಡುವ ಉದ್ದೇಶದಿಂದ OSM Vextra ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದ್ದೇವೆ ಎಂದು ಕಂಪನಿ ಹೇಳಿದೆ.
ಒಮೆಗಾ ಸೀಕಿ ವೆಕ್ಸ್ಟ್ರಾ ವಿಶೇಷತೆಗಳು
ಹೊಸ ವೆಕ್ಸ್ಟ್ರಾ ಸ್ಕೂಟರ್ ಗಂಟೆಗೆ 70 ಕಿಮೀ ಟಾಪ್ ಸ್ಪೀಡ್ ಹೋಗಬಲ್ಲ ಸಾಮರ್ಥ್ಯವನ್ನು ಹೊಂದಿದೆ, ಒಮ್ಮೆ ಚಾರ್ಜ್ ಮಾಡಿ 110 ಕಿ.ಮೀ.ಕಿಂತ ಹೆಚ್ಚಿನ ದೂರ ಓಡಿಸಬಹುದು. ಈ ಸ್ಕೂಟರ್ 3.45 kWh IP67-ರೇಟೆಡ್ LMFP ಬ್ಯಾಟರಿ ಮತ್ತು 3 kW BLDC ಹಬ್ ಮೋಟಾರ್ ಹೊಂದಿದೆ. ಈ ಸ್ಕೂಟರ್, ನಗರದ ರಸ್ತೆಗಳು ಮತ್ತು ಎತ್ತರದ ಪ್ರದೇಶಗಳಲ್ಲಿ 12 ಡಿಗ್ರಿಗಳ ಗ್ರೇಡೆಬಿಲಿಟಿಯೊಂದಿಗೆ ಸ್ಥಿರವಾದ ಪರ್ಫಾಮೆನ್ಸ್ ನೀಡುತ್ತದೆ.

ಹೊಸ ವೆಕ್ಸ್ಟ್ರಾ ಸ್ಕೂಟರ್ 3.5 - ಇಂಚಿನ ಕಲರ್ LCD ಇನ್‌ಸ್ಟ್ರೂಮೆಂಟ್ ಕ್ಲಸ್ಟರ್, ರಿಯಲ್-ಟೈಮ್ SOC, ಡಿಸ್ಟೆನ್ಸ್- ಟು -ಎಂಪ್ಟಿ, USB ಚಾರ್ಜಿಂಗ್, ರಿವರ್ಸ್ ಪಾರ್ಕಿಂಗ್ ಅಸಿಸ್ಟ್ ಮತ್ತು ಐಚ್ಛಿಕ GSM ಸಂಪರ್ಕದಂತಹ ಸ್ಮಾರ್ಟ್ ಫೀಚರ್‌ಗಳ ಜೊತೆಗೆ ವೇಗದ ಹೋಮ್ ಚಾರ್ಜಿಂಗ್ ಸಪೋರ್ಟ್‌ನೊಂದಿಗೆ ಬರುತ್ತದೆ. ಹಾಗೆಯೇ ಸ್ಕೂಟರ್‌ನಲ್ಲಿ ಇಕೋ, ಸಿಟಿ ಮತ್ತು ಸ್ಪೋರ್ಟ್ಸ್ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದೆ.
OSM ವೆಕ್ಸ್ಟ್ರಾವನ್ನು ಫರಿದಾಬಾದ್‌ನಲ್ಲಿರುವ ಒಮೆಗಾ ಸೀಕಿ ಮೊಬಿಲಿಟಿಯ ಸೌಲಭ್ಯದಲ್ಲಿ ತಯಾರಿಸಲಾಗುವುದು, ಇಲ್ಲಿ ವಾರ್ಷಿಕ 25,000 ಯುನಿಟ್ ವಾಹನಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಭಾರತದಲ್ಲಿ ಮಾರಾಟ ಮಾಡುವುದರ ಜೊತೆಗೆ, ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಆಫ್ರಿಕನ್ ಮಾರುಕಟ್ಟೆಗಳಿಗೆ ರಫ್ತು ಮಾಡುವ ಮೂಲಕ ಕಂಪನಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವ ಗುರಿ ಹೊಂದಿದೆ.

OSM ಕಂಪನಿಯ 200 ಕ್ಕೂ ಹೆಚ್ಚು ಡೀಲರ್‌ಶಿಪ್‌ಗಳ ಪ್ಯಾನ್-ಇಂಡಿಯಾ ಡೀಲರ್ ನೆಟ್‌ವರ್ಕ್ ಅನ್ನು ಟೈಯರ್ I, II ಮತ್ತು III ನಗರಗಳಿಗೆ ತರಲು ಬಳಸಿಕೊಳ್ಳಲಾಗುತ್ತದೆ. ಸ್ಮಾರ್ಟ್ ಕನೆಕ್ಟೆಡ್ ಫೀಚರ್ಸ್‌ಗಳೊಂದಿಗೆ, ಭಾರತೀಯ ಸವಾರರಿಗೆ ಚಾಲನಾ ವೆಚ್ಚ ಮತ್ತು ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡಿ ಪರಿಸರ ಸ್ನೇಹಿ ಸ್ಕೂಟರ್‌ಗಳನ್ನು ಹೆಚ್ಚು ಖರೀದಿಸುವಂತೆ ಮಾಡುವ ಗುರಿಯನ್ನು ವೆಕ್ಸ್ಟ್ರಾ ಹೊಂದಿದೆ.
ಒಮೆಗಾ ಸೀಕಿ ಸಂಸ್ಥಾಪಕ ಉದಯ್ ನಾರಂಗ್ ಮಾತನಾಡಿ, ''OSM ವೆಕ್ಸ್ಟ್ರಾ ಬಿಡುಗಡೆಯೊಂದಿಗೆ, ಉತ್ತಮ ಪರ್ಫಾಮೆನ್ಸ್, ಹೆಚ್ಚಿನ ರೇಂಜ್ ಮತ್ತು ಕೈಗೆಟುಕುವ ಬೆಲೆಯಲ್ಲಿ ಸಿಗುವ ವಾಹನದೊಂದಿಗೆ ನಾವು ವೇಗದ ದ್ವಿಚಕ್ರ ವಾಹನ ವಿಭಾಗವನ್ನು ಪ್ರವೇಶಿಸುತ್ತಿದ್ದೇವೆ. ವೆಕ್ಸ್ಟ್ರಾ ದೈನಂದಿನ ಭಾರತಕ್ಕಾಗಿ ತಂತ್ರಜ್ಞಾನ ಆಧಾರಿತ ಎಲೆಕ್ಟ್ರಿಕ್ ವಾಹನಗಳನ್ನು ನಿರ್ಮಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ - ಮಹಾನಗರಗಳಿಗೆ ಮಾತ್ರವಲ್ಲ ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಿಗೂ ಈ ಸ್ಕೂಟರ್ ಹೊಂದಿಕೊಳ್ಳುತ್ತದೆ" ಎಂದರು.


Click it and Unblock the Notifications