TVS: ಮುಗಿಬಿದ್ದ ಜನ.. ಅಬ್ಬರಿಸಿದ ಟಿವಿಎಸ್ ಐಕ್ಯೂಬ್.. ಪ್ರತಿದಿನ 1,200 ಸ್ಕೂಟರ್‌ಗಳು ಸೇಲ್ಸ್!
ಟಿವಿಎಸ್ ಐಕ್ಯೂಬ್ (Tvs iQube) ಜನಮೆಚ್ಚಿದ ಎಲೆಕ್ಟ್ರಿಕ್ ಸ್ಕೂಟರ್ ಎಂದೇ ಮನೆ ಮಾತಾಗಿದೆ. ಈ ಸ್ಕೂಟರ್‌ಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಜನವರಿ - 2026) ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಒಟ್ಟು 37,560 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 24,991 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 50.29% ಪ್ರಗತಿಯಾಗಿದೆ.
2025ರ ಡಿಸೆಂಬರ್‌ನಲ್ಲಿ 35,137 ಯುನಿಟ್ 'ಟಿವಿಎಸ್ ಐಕ್ಯೂಬ್' ಸ್ಕೂಟರ್‌ಗಳನ್ನು ಮಾರಾಟ ಮಾಡಲಾಗಿತ್ತು. ವಿಶೇಷವಾಗಿ ಈ ಜನವರಿಯಲ್ಲಿ ದಿನವೊಂದಕ್ಕೆ 1,211 ಯುನಿಟ್‌ಗಳು ಬಿಕರಿಯಾಗಿವೆ. 'ಐಕ್ಯೂಬ್' ಮಾರಾಟವು ಈ ಪರಿ ಪ್ರಮಾಣದಲ್ಲಿ ಅಧಿಕಗೊಳ್ಳಲು ಹಲವು ಕಾರಣಗಳಿವೆ. ಬಹುಮುಖ್ಯವಾಗಿ ಈ ಸ್ಕೂಟರ್ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, ದೀರ್ಘಕಾಲ ಬಾಳಿಕೆಯೂ ಬರುತ್ತದೆ. ಹೀಗಾಗಿ, ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ನೂತನ 'ಟಿವಿಎಸ್ ಐಕ್ಯೂಬ್' ಎಲೆಕ್ಟ್ರಿಕ್ ಸ್ಕೂಟರ್ ಹಲವು ವಿಧದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ಅವುಗಳೆಂದರೆ ಸ್ಟ್ಯಾಂಡರ್ಡ್ ಐಕ್ಯೂಬ್, ಐಕ್ಯೂಬ್ ಎಸ್ ಮತ್ತು ಐಕ್ಯೂಬ್ ಎಸ್‌ಟಿ ಎಂದು. ಇವುಗಳು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದ್ದು, ನಾನಾ ಬಗೆಯ ಹೊಸತನಗಳಿಗೂ ಸಾಕ್ಷಿಯಾಗಿವೆ. ಜೊತೆಗೆ ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತವೆ.
ಸ್ಟ್ಯಾಂಡರ್ಡ್ ಟಿವಿಎಸ್ ಐಕ್ಯೂಬ್:
ಇದು ಕನಿಷ್ಠ ರೂ.1.10 ಲಕ್ಷ ಹಾಗೂ ಗರಿಷ್ಠ ರೂ.1.30 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 2.2 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್), 3,1 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 3.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ ಕ್ರಮವಾಗಿ 94 ಕಿ.ಮೀ, 123 ಕಿ.ಮೀ ಮತ್ತು 145 ಕಿ.ಮೀ ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ.

ನೂತನ 'ಐಕ್ಯೂಬ್' ಪರ್ಲ್ ವೈಟ್, ಟೈಟಾನಿಯಂ ಗ್ರೇ, ವಾಲ್ನಟ್ ಬ್ರೌನ್, ಕಾಪರ್ ಬ್ರೌನ್ ಬೀಜ್, ಸ್ಟಾರ್ಲೈಟ್ ಬ್ಲೂ ಬೀಜ್ ಹಾಗೂ ಸೆಲೆಬ್ರೇಷನ್ ಆರೆಂಜ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. ಟಿಎಫ್‌ಟಿ ಡಿಸ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.
ಟಿವಿಎಸ್ ಐಕ್ಯೂಬ್ ಎಸ್:
ಈ ಎಲೆಕ್ಟ್ರಿಕ್ ಸ್ಕೂಟರ್ ರೂ.1.40 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 3.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಪೂರ್ತಿ ಚಾರ್ಜ್‌ನಲ್ಲಿ 145 ಕಿ.ಮೀ ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. 78 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಇದರಲ್ಲಿರುವ ಬ್ಯಾಟರಿಯು ಕೇವಲ 3 ಗಂಟೆಗಳಲ್ಲಿ 0 ರಿಂದ 80 ಚಾರ್ಜ್ ಆಗಿ ಬಿಡುತ್ತದೆ.

ಹೊಸ 'ಐಕ್ಯೂಬ್ ಎಸ್' ಮರ್ಕ್ಯುರಿ ಗ್ರೇ, ಮಿಂಟ್ ಬ್ಲೂ, ಲುಸಿಡ್ ಯೆಲ್ಲೋ, ಕಾಪರ್ ಬ್ರೌನ್ ಹಾಗೂ ಸ್ಟಾರ್‌ಲೈಟ್ ಬ್ಲೂ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ. ಟಿಎಫ್‌ಟಿ ಡಿಸ್‌ಪ್ಲೇ ಒಳಗೊಂಡಂತೆ ನಾನಾ ಬಗೆಯ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಸವಾರರ ರಕ್ಷಣೆಗಾಗಿ ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.
ಟಿವಿಎಸ್ ಐಕ್ಯೂಬ್ ಎಸ್‌ಟಿ:
ಇದು ರೂ.1.61 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 5.3 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 212 ಕಿ.ಮೀ ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. 82 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. 7-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಡಿಸ್‌ಪ್ಲೇಯಂತಹ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಡಿಸ್ಕ್/ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.


Click it and Unblock the Notifications








