TVS: ಸದ್ದಿಲ್ಲದೇ ಹೊಸ ಟಿವಿಎಸ್ ಇ-ಸ್ಕೂಟರ್ ಬಿಡುಗಡೆ.. 49,999 ರೂ.ಗೆ ಸಿಗುತ್ತೆ.. ವಿಶೇಷತೆಗಳೇನು?
ಟಿವಿಎಸ್ ಮೋಟಾರ್ (TVS Motor) ನಂಬಿಕಾರ್ಹ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿಂದು ಹೊಚ್ಚ ಹೊಸ 'ಆರ್ಬಿಟರ್ ವಿ1' ಹೆಸರಿನ ಇ-ಸ್ಕೂಟರ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ನವೀನತೆಗಳಿಗೂ ಸಾಕ್ಷಿಯಾಗಿದೆ. ಅಗ್ಗದ ದರದಲ್ಲೂ ಲಭ್ಯವಿದೆ. ಬನ್ನಿ, ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ನೂತನ ಟಿವಿಎಸ್ ಆರ್ಬಿಟರ್ ವಿ1 (TVS Orbiter V1) ಸ್ಕೂಟರ್, ರೂ.84,500 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಬ್ಯಾಟರಿ-ಆಸ್-ಎ-ಸರ್ವಿಸ್ (ಬಾಸ್ - BaaS) ಯೋಜನೆಯಡಿಯೂ ಖರೀದಿಗೆ ಲಭ್ಯವಿದೆ. ಆ ಮಾಡೆಲ್ ಬೆಲೆ ರೂ.49,999 ದಿಂದ ಶುರುವಾಗುತ್ತದೆ. ಚಂದಾದಾರಿಕೆಯ ಶುಲ್ಕವು ತಿಂಗಳಿಗೆ ರೂ.862 ಇದ್ದು, ಅನಿಯಮಿತವಾಗಿ ಬಳಕೆ ಮಾಡಬಹುದು. ಹಾಗೆಯೇ 5 ವರ್ಷ ಅಥವಾ 70,000 ಕಿ.ಮೀ ವರೆಗೆ ವಿಸ್ತೃತ ವಾರಂಟಿಯು ದೊರೆಯುತ್ತದೆ.

ಪ್ರಸ್ತುತವಿರುವ ಸ್ಟ್ಯಾಂಡರ್ಡ್ 'ಟಿವಿಎಸ್ ಆರ್ಬಿಟರ್' ಇ-ಸ್ಕೂಟರ್‌ನ್ನು 'ಆರ್ಬಿಟರ್ ವಿ2' ಎಂದು ಕರೆಯಲಾಗಿದೆ. ಇದು ರೂ.92,250 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಶಕ್ತಿಶಾಲಿಯಾದ 3.1 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 158 ಕಿ.ಮೀ ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ.
ಹೊಸ 'ಆರ್ಬಿಟರ್ ವಿ1' ಎಲೆಕ್ಟ್ರಿಕ್ ಸ್ಕೂಟರ್, ನಗರ ಪ್ರದೇಶದ ಚಾಲನೆಗೆ ಹೇಳಿ ಮಾಡಿಸಿದ ರೀತಿಯಲ್ಲಿದೆ. ಕಡಿಮೆ ಸಾಮರ್ಥ್ಯದ 1.8 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 86 ಕಿ.ಮೀ ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. ಇದರಲ್ಲಿ ಬ್ಯಾಟರಿಯು ಕೇವಲ 2 ಗಂಟೆ 20 ನಿಮಿಷಗಳಲ್ಲಿ 0 ರಿಂದ 80 ಚಾರ್ಜ್ ಆಗಿ ಬಿಡುತ್ತದೆ.
ಈ ಸ್ಕೂಟರ್ ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ತುಂಬಾ ಚೆನ್ನಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್ ವಿತ್ ವೈಸರ್ ಮತ್ತು ಟೈಲ್‌ಲೈಟ್‌ನ್ನು ಹೊಂದಿದೆ. ಮಾರ್ಷಿಯನ್ ಕಾಪರ್ ಹಾಗೂ ಸ್ಟೆಲ್ಲರ್ ಸಿಲ್ವರ್ ಎಂಬ 2 ಬಣ್ಣದ ಆಯ್ಕೆಯಲ್ಲಿಯೂ ಸಿಗುತ್ತದೆ. ಹೆಚ್ಚು ವಿಶಾಲವಾಗಿದೆ. 1,914 ಮಿ.ಮೀ ಉದ್ದ, 725 ಮಿ.ಮೀ ಅಗಲ ಮತ್ತು 1,142 ಮಿ.ಮೀ ಎತ್ತರವಿದೆ. 155 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,301 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ.
ಇದು ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಕಲರ್ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕನೆಕ್ಟ್ಡ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಜಿಯೋ-ಫೆನ್ಸಿಂಗ್, ಟೈಮ್-ಫೆನ್ಸಿಂಗ್ ಹಾಗೂ ಓವರ್-ದಿ-ಏರ್ ಅಪ್‌ಡೇಟ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇಕೋ ಹಾಗೂ ಪವರ್ ಎಂಬ ರೈಡಿಂಗ್ ಮೋಡ್‌ಗಳನ್ನು ಪಡೆದಿದೆ. ಸೀಟ್ ಉದ್ದವು 845 ಮಿ.ಮೀ ಇದೆ. 34-ಲೀಟರ್‌ನಷ್ಟು ಅಂಡರ್-ಸೀಟ್ ಸ್ಟೋರೇಜ್‌ನ್ನು ಹೊಂದಿದೆ.
'ಟಿವಿಎಸ್ ಆರ್ಬಿಟರ್ ವಿ1' ಸುರಕ್ಷತೆಗೂ ಹೆಸರುವಾಸಿಯಾಗಿದೆ. ಸವಾರರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಡುಯಲ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಸನ್ ಸೆಟಪ್‌ನ್ನು ಒಳಗೊಂಡಿದೆ. ಕ್ರ್ಯಾಶ್ & ಫಾಲ್ ಅಲರ್ಟ್ಸ್, ಆಂಟಿ - ಥೆಫ್ಟ್ ಅಲರ್ಟ್ಸ್, ಹಿಲ್-ಹೋಲ್ಡ್ ಅಸಿಸ್ಟ್, ಕ್ರೂಸ್ ಕಂಟ್ರೋಲ್ ಹಾಗೂ ಪಾರ್ಕಿಂಗ್ ಅಸಿಸ್ಟ್‌ನ್ನು ಪಡೆದಿದೆ. ಜೊತೆಗೆ ಡ್ರಮ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.
ಇದಕ್ಕೆ ಸಾಲು - ಸಾಲು ಎದುರಾಳಿಗಳಿವೆ. ಬಹುಮುಖ್ಯವಾಗಿ ಓಲಾ ಎಸ್1 ಎಕ್ಸ್ (Ola S1 X), ಎಥರ್ ರಿಜ್ಟಾ (Ather Rizta), ಬಜಾಜ್ ಚೇತಕ್ (Bajaj Chetak), ಹೀರೋ ವಿಡಾ ವಿಎಕ್ಸ್2 (Hero Vida VX2) ಹಾಗೂ ರಿವರ್ ಇಂಡೀ (River Indie) ಮಾಡೆಲ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications








