Yamaha: ಗುಡ್‌ನ್ಯೂಸ್.. ಈ ನೂತನ ಯಮಹಾ ಮೋಟಾರ್‌ಸೈಕಲ್ ಬೆಲೆ ದಿಢೀರ್ ಇಳಿಕೆ.. ಹೊಸ ದರ ಇಷ್ಟೇನಾ?
ಯಮಹಾ ಆರ್15 (Yamaha R15) ಜನಪ್ರಿಯ ಬೈಕ್ ಎಂದೇ ಹೆಸರುವಾಸಿಯಾಗಿದೆ. ಇದು ನೋಡಲು ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಸಿಗುತ್ತದೆ. ಯುವ ಗ್ರಾಹಕರು ಕೂಡ ಮೆಚ್ಚಿಕೊಂಡಿದ್ದಾರೆ. ಸದ್ಯ, 'ಯಮಹಾ ಮೋಟಾರ್' 70ನೇ ವಾರ್ಷಿಕೋತ್ಸವ ಪ್ರಯುಕ್ತ ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಇದೇ 'ಆರ್15' ರೂಪಾಂತರಗಳ (ವೇರಿಯೆಂಟ್) ಬೆಲೆಯನ್ನು ರೂ.5,000 ವರೆಗೆ ಇಳಿಕೆ ಮಾಡಿದೆ. ಜನವರಿ 5 ರಿಂದ ನೂತನ ದರಗಳು ಜಾರಿಗೆ ಬರಲಿವೆ.
ಬೆಲೆ ಪರಿಷ್ಕರಣೆಯ ನಂತರ, ಆರಂಭಿಕ ಶ್ರೇಣಿ 'ಯಮಹಾ ಆರ್15 ಎಸ್' ರೂಪಾಂತರ ರೂ.1.50 ಲಕ್ಷ ದರವನ್ನು ಹೊಂದಿದೆ. ಮಧ್ಯಮ ಶ್ರೇಣಿ 'ಯಮಹಾ ಆರ್15 ವಿ4' ರೂಪಾಂತರ ರೂ.1.66 ಲಕ್ಷ ಹಾಗೂ ಗರಿಷ್ಠ ಶ್ರೇಣಿ 'ಯಮಹಾ ಆರ್15 ಎಂ' ರೂಪಾಂತರ ರೂ.1.81 ಲಕ್ಷ (ಎಕ್ಸ್-ಶೋರೂಂ - ನವದೆಹಲಿ) ಬೆಲೆಯನ್ನು ಒಳಗೊಂಡಿದೆ.

ನೂತನ 'ಯಮಹಾ ಆರ್15' ಮೋಟಾರ್‌ಸೈಕಲ್, ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಹಾಗೂ ಟೈಲ್ ಲ್ಯಾಂಪ್‌ನ್ನು ಪಡೆದಿದೆ. ಮೆಟಾಲಿಕ್ ಬ್ಲ್ಯಾಕ್, ಮೆಟಾಲಿಕ್ ರೆಡ್, ರೇಸಿಂಗ್ ಬ್ಲೂ, ಡಾರ್ಕ್ ನೈಟ್, ಇಂಟೆನ್ಸಿಟಿ ವೈಟ್ ಮತ್ತು ಮ್ಯಾಟ್ ಪರ್ಲ್ ವೈಟ್ ಹಾಗೂ ಮೆಟಾಲಿಕ್ ಗ್ರೇ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ.
ಇದು ಸಾಕಷ್ಟು ವಿಶಾಲ ಗಾತ್ರದಲ್ಲಿದೆ. 1,990 ಮಿ.ಮೀ ಉದ್ದ, 725 ಮಿ.ಮೀ ಅಗಲ ಮತ್ತು 1,135 ಮಿ.ಮೀ ಎತ್ತರವಿದೆ. ಜೊತೆಗೆ 170 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,325 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 142 ಕೆಜಿ ತೂಕವಿದೆ.
'ಯಮಹಾ ಆರ್15' ಹೆಚ್ಚು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 155-ಸಿಸಿ ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 10,000 ಆರ್‌ಪಿಎಂನಲ್ಲಿ 18.1 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 7,500 ಆರ್‌ಪಿಎಂನಲ್ಲಿ 14.2 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 51 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ.
ಈ ಬೈಕ್ 140 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 13.25 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ಕ್ವಿಕ್ ಶಿಫ್ಟರ್ ಹಾಗೂ ಸ್ಲಿಪ್-ಅಂಡ್-ಅಸಿಸ್ಟ್ ಕ್ಲಚ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಟ್ರ್ಯಾಕ್ ಹಾಗೂ ಸ್ಟ್ರೀಟ್ ಎಂಬ 2 ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.
ಇದು ಸವಾರರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಗಾಗಿ ಮುಂಭಾಗ (ಫ್ರಂಟ್) ಅಪ್‌ಸೈಡ್-ಡೌನ್ ಯುಎಸ್‌ಡಿ ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) ಲಿಂಕ್ಡ್-ಟೈಪ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಡುಯಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.
ಹೊಸ 'ಯಮಹಾ ಆರ್15' ಬೈಕ್‌ಗೆ ಸಾಲು - ಸಾಲು ಪ್ರತಿಸ್ಪರ್ಧಿಗಳಿವೆ. ಬಜಾಜ್ ಪಲ್ಸರ್ ಆರ್‌ಎಸ್ 200 (Bajaj Pulsar RS 200), ಕೆಟಿಎಂ ಆರ್‌ಸಿ 200 (KTM RC 200) ಹಾಗೂ ಸುಜುಕಿ ಜಿಕ್ಸರ್ ಎಸ್‌ಎಫ್ 250 (Suzuki Gixxer SF 250) ಮೋಟಾರ್‌ಸೈಕಲ್‌ಗಳು ಪ್ರಬಲವಾದ ಎದುರಾಳಿಯಾಗಿವೆ.
ಒಟ್ಟಾರೆಯಾಗಿ 'ಯಮಹಾ ಆರ್15' ಮೋಟಾರ್‌ಸೈಕಲ್ ಬೆಲೆ ಕಡಿಮೆಯಾಗಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಹೊಸ ಸ್ಪೋರ್ಟ್ ಬೈಕ್ ಹುಡುಕುವವರಿಗೆ ಅತ್ಯುತ್ತಮವಾದ ಆಯ್ಕೆಯೂ ಆಗಲಿದೆ. ಮುಂಬರುವ ದಿನಗಳಲ್ಲಿ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








