Yamaha: ಸ್ಕೂಟರ್ ಮಾಲೀಕರಿಗೆ ಬಿಗ್ ಶಾಕ್... ಕೂಡಲೇ ಸರ್ವೀಸ್ ಸೆಂಟರ್ ಬರಲು ಯಮಹಾ ಮನವಿ
ಜಾಗತಿಕ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಯಮಹಾ (Yamaha) ಭಾರತದಲ್ಲಿ ತನಗೆಂದೆ ವಿಶೇಷ ಅಭಿಮಾನಿಗಳನ್ನು ಪಡೆದುಕೊಂಡಿದೆ. ಯಮಹಾ RX100 (Yamaha RX100) ನೊಂದಿಗೆ ಭಾರತವನ್ನು ಶೇಕ್ ಮಾಡಿದ್ದ ಈ ಬ್ರಾಂಡ್, ಕೇವೆಲ ಮೋಟಾರ್‌ಸೈಕಲ್‌ಗಳು ಮಾತ್ರವಲ್ಲದೆ ತನ್ನ ಆಕರ್ಷಕ ಸ್ಕೂಟರ್ ಗಳನ್ನು ನೀಡುವ ಮೂಲಕ ದೇಶದಲ್ಲಿ ತುಂಬಾ ಹೆಸರು ಮಾಡಿದೆ. ಈಗ ಗ್ರಾಹಕರಿಗೆ ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ವಾಹನಗಳನ್ನು ತಲುಪಿಸುವ ತನ್ನ ಬದ್ಧತೆಯ ಭಾಗವಾಗಿ ಅಚ್ಚರಿಗೊಳಿಸುವ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ.
ಇಂಡಿಯಾ ಯಮಹಾ ಮೋಟಾರ್ ಪ್ರೈವೇಟ್ ಲಿಮಿಟೆಡ್ (IYM) ಮೇ 2, 2024 ರಿಂದ ಸೆಪ್ಟೆಂಬರ್ 3, 2025 ರ ನಡುವೆ ತಯಾರಿಸಲಾದ ತನ್ನ 125 - ಸಿಸಿ ಸ್ಕೂಟರ್ ಮಾಡಲ್‌ಗಳ 3,06,635 ಯೂನಿಟ್ ವಾಹನಗಳನ್ನು ಸ್ವಯಂಪ್ರೇರಿತ ಹಿಂಪಡೆಯುವ ಅಭಿಯಾನವನ್ನು ಪ್ರಾರಂಭಿಸಿದೆ, ಇದು ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ಯಮಹಾ ಪ್ರಕಟಣೆಯಲ್ಲಿ ತಿಳಿಸಿದೆ.

ಗ್ರಾಹಕ ಸುರಕ್ಷತೆಯು ಯಮಹಾದ ಅತ್ಯುನ್ನತ ಆದ್ಯತೆಯಾಗಿದೆ. ಕೆಲವು ಕಾರ್ಯಾಚರಣಾ ಪರಿಸ್ಥಿತಿಗಳಲ್ಲಿ, ಯಮಹಾ ರೇಝಡ್ಆರ್ 125 FI ಹೈಬ್ರಿಡ್ (Yamaha Ray ZR) ಮತ್ತು ಫ್ಯಾಸಿನೊ 125 FI ಹೈಬ್ರಿಡ್ (Fascino) ಸ್ಕೂಟರ್ ಮಾಡಲ್‌ಗಳ ಆಯ್ದ ಘಟಕಗಳಲ್ಲಿ ಮುಂಭಾಗದ ಬ್ರೇಕ್ ಕ್ಯಾಲಿಪರ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಗುರುತಿಸಲಾಗಿದ್ದು, ಇದನ್ನು ಪರಿಹರಿಸಲು ಮೇಲೆ ತಿಳಿಸಲಾದ ವರ್ಷಗಳಲ್ಲಿ ನಿರ್ಮಾಣವಾಗಿರುವ ಸ್ಕೂಟರ್ ಗಳನ್ನು ಮಾಲೀಕರಿಂದ ಕಂಪನಿಯು ಹಿಂಪಡೆಯುತ್ತಿರುವುದಾಗಿ ತಿಳಿಸಿದೆ.
ಈ ಅಭಿಯಾನದ ಅಡಿಯಲ್ಲಿ ಬರುವ ಎಲ್ಲಾ ಯಮಹಾ ರೇಝಡ್ಆರ್ 125 FI ಹೈಬ್ರಿಡ್ ಮತ್ತು ಫ್ಯಾಸಿನೊ 125 FI ಹೈಬ್ರಿಡ್ ಸ್ಕೂಟರ್‌ಗಳಿಗೆ ನಿರ್ದಿಷ್ಟ ಭಾಗದ ಬದಲಿಯನ್ನು ಉಚಿತವಾಗಿ ಕೈಗೊಳ್ಳಲಾಗುತ್ತದೆ. ಗ್ರಾಹಕರಿಂದ ಒಂದು ರೂಪಾಯಿ ಹಣ ಪಡೆಯುವುದಿಲ್ಲ, ಲೋಪವಿದೆ ಎಂದು ತಿಳಿದುಬಂದ ಮುಂಭಾಗದ ಬ್ರೇಕ್ ಕ್ಯಾಲಿಪರ್ ಸಂಬಂಧಿತ ಘಟಕಗಳನ್ನು ಉಚಿತವಾಗಿ ಬದಲಾಯಿಸಿ ಕೊಡುವುದಾಗಿ ಕಂಪನಿ ತಿಳಿಸಿದೆ.

ಹಿಂಪಡೆಯುವಿಕೆಗೆ ಅರ್ಹತೆಯನ್ನು ಪರಿಶೀಲಿಸಲು, ಗ್ರಾಹಕರು ಇಂಡಿಯಾ ಯಮಹಾ ಮೋಟಾರ್ ವೆಬ್‌ಸೈಟ್‌ನ 'ಸರ್ವಿಸ್ ಸೆಕ್ಷನ್'ಗೆ ಭೇಟಿ ನೀಡಬಹುದು (https://www.yamaha-motor-india.com/). ಮೇಂಟೇನ್ಸ್ ಅಡಿಯಲ್ಲಿ, 'ಸ್ವಯಂ ಹಿಂಪಡೆಯುವಿಕೆ ಅಭಿಯಾನ' ('Voluntary Recall Campaign)ದ ಮೇಲೆ ಕ್ಲಿಕ್ ಮಾಡಿ, ನಂತರ ನಿಮ್ಮ ವಾಹನ ಈ ಅಭಿಯಾನದ ಅಡಿಯಲ್ಲಿ ಬರುತ್ತದೆಯೇ ಎಂದು ಪರಿಶೀಲಿಸಲು 'ಸ್ಕೂಟರ್ 125' ವಿಭಾಗದಲ್ಲಿ ನಿಮ್ಮ ವಾಹನದ ಚಾಸಿಸ್ ಸಂಖ್ಯೆ ನಮೂದಿಸಿ ತಿಳಿದುಕೊಳ್ಳಬಹುದು.
ಇದಲ್ಲದೆ, ಗ್ರಾಹಕರು ತಮ್ಮ ಹತ್ತಿರದ ಅಧಿಕೃತ ಯಮಹಾ ಶೋರೂಂಗೆ ಭೇಟಿ ನೀಡಬಹುದು ಅಥವಾ ಟೋಲ್ - ಫ್ರೀ ಸಂಖ್ಯೆ - 1800-420-1600 ನಲ್ಲಿ ಇಂಡಿಯಾ ಯಮಹಾ ಮೋಟಾರ್ ಅನ್ನು ಸಂಪರ್ಕಿಸಬಹುದು. ಹೆಚ್ಚಿನ ಸಹಾಯಕ್ಕಾಗಿ [email protected] ನಲ್ಲಿ ಇಮೇಲ್ ಮೂಲಕ ಸಂವಹನ ನಡೆಸಬಹುದು ಎಂದು ಕಂಪನಿ ಪ್ರಕಣೆಯಲ್ಲಿ ತಿಳಿಸಿದೆ.
ಯಮಹಾ ಫ್ಯಾಸಿನೊ 125 ಮತ್ತು ರೇ ZR 125 ಬೇರೆ ಬೇರೆ ಡಿಸೈನ್‌ನೊಂದಿಗೆ ಬಂದರೂ ಒಂದೇ ಪ್ಲಾಟ್‌ಫಾರ್ಮ್ ಆಧರಿಸಿವೆ. 8.04bh ಪವರ್ ಮತ್ತು 10.3Nm ಉತ್ಪಾದಿಸುವ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಒಂದೇ ರೀತಿಯ 125cc ಎಂಜಿನ್ ಅನ್ನು ಪಡೆದಿವೆ. ಎರಡೂ ಸ್ಕೂಟರ್‌ಗಳು 99kg (ಕರ್ಬ್) ತೂಗುತ್ತವೆ. ಎರಡೂ ಸ್ಕೂಟರ್‌ಗಳು ಆಯಾ ವಿಭಾಗದಲ್ಲಿ ಸ್ಟೈಲಿಷ್ ಆಗಿ ಕಾಣುತ್ತವೆ.
ಇನ್ನು ಎರಡೂ ಸ್ಕೂಟರ್‌ಗಳು 5.2-ಲೀಟರ್ ಫ್ಯೂಲ್ ಟ್ಯಾಂಕ್ ಹೊಂದಿವೆ. ಅವು ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಮೊನೊಶಾಕ್‌ನೊಂದಿಗೆ 12-10 ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿವೆ. ಹೆಚ್ಚುವರಿ ಸುರಕ್ಷತೆಗಾಗಿ ಸಂಯೋಜಿತ ಬ್ರೇಕಿಂಗ್ ಸಿಸ್ಟಮ್‌ನೊಂದಿಗೆ ಎರಡೂ ತುದಿಗಳಲ್ಲಿ ಡ್ರಮ್ ಬ್ರೇಕ್‌ಗಳನ್ನು ನೀಡಲಾಗಿದೆ. ಟಾಪ್ - ಸ್ಪೆಕ್ ಸ್ಕೂಟರ್‌ಗಳು ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಪಡೆಯುತ್ತವೆ.


Click it and Unblock the Notifications








