ಹೊಸ ರೂಪದಲ್ಲಿ 2014 ಯಮಹಾ ಎಫ್‌ಝಡ್-ಎಸ್ ಲಾಂಚ್
ಭಾರತೀಯ ದ್ವಿಚಕ್ರ ಮಾರುಕಟ್ಟೆಯಲ್ಲಿ ಕ್ಷಿಪ್ರ ಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿರುವ ವಾಹನ ಸಂಸ್ಥೆಗಳ ಪೈಕಿ ಜಪಾನ್ ಮೂಲದ ಯಮಹಾ ಮೋಟಾರು ಇಂಡಿಯಾ ಕೂಡಾ ಒಂದಾಗಿದೆ.
ದೇಶದ ಯುವ ಗ್ರಾಹಕರ ಮನೋಸ್ಥಿತಿಯನ್ನು ಸ್ಪಷ್ಟವಾಗಿ ಅರಿತುಕೊಂಡಿರುವ ಈ ದೈತ್ಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯು ಇದೀಗ ನೂತನ ಮಾದರಿಯನ್ನು ದೇಶಕ್ಕೆ ಪರಿಚಯಿಸಿದೆ. ಅದುವೇ 2014 ಯಮಹಾ ಎಫ್‌ಝಡ್-ಎಸ್. ನಿಮ್ಮ ಮಾಹಿತಿಗಾಗಿ 2008ನೇ ಇಸವಿಯಲ್ಲಿ ಮೊದಲ ಬಾರಿಗೆ ಎಫ್‌ಝಡ್-16 ಮಾದರಿಯನ್ನು ಯಮಹಾ ಪರಿಚಯಿಸಿತ್ತು. ಇಂದು ಇದೀಗ ಫ್ಯೂಯಲ್ ಇಂಜೆಕ್ಷನ್ ತಂತ್ರಜ್ಞಾನದ ಎಫ್‌ಝಡ್-ಎಸ್ ಭರ್ಜರಿ ಕಮ್ ಬ್ಯಾಕ್ ಮಾಡಿಕೊಂಡಿದೆ.

ಸಂಸ್ಥೆಯ ಮುಖ್ಯ ಪ್ರಚಾರ ರಾಯಭಾರಿ ಆಗಿರುವ ಬಾಲಿವುಡ್ ಸ್ಟಾರ್ ಜಾನ್ ಅಬ್ರಹಾಂ ನೂತನ ಬೈಕ್ ಅನಾವರಣಗೊಳಿಸಿದ್ದಾರೆ.

ಮಗದೊಂದು ವಿಶೇಷತೆ ಏನೆಂದರೆ ನೂತನ ಎಫ್‌ಝಡ್-ಎಸ್ ಬೈಕ್‌ನಲ್ಲಿ ಸಂಸ್ಥೆಯ ಹೊಸ ತಲೆಮಾರಿನ 'ಬ್ಲೂ ಕೋರ್' ತಂತ್ರಜ್ಞಾನ ಆಳವಡಿಸಲಾಗಿದೆ. ಇದು ಎಂಜಿನ್ ಘರ್ಷಣೆ ಕಡಿಮೆ ಮಾಡಲು ನೆರವಾಗಲಿದೆ.

ನೂತನ ಯಮಹಾ ಎಫ್‌ಝಡ್-ಎಸ್ 149 ಸಿಸಿ 4 ಸ್ಟ್ರೋಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಅಂದರೆ ಈಗಿನ ಆವೃತ್ತಿಗಿಂತಲೂ ಸ್ವಲ್ಪ ಕಡಿಮೆ ಸಾಮರ್ಥ್ಯ ಹೊಂದಿರಲಿದೆ. ಇದು 13.1 ಪಿಎಪ್ ಪವರ್ (12.8 ಎನ್‌ಎಂ) ಉತ್ಪಾದಿಸಲಿದೆ. ಹಿಂದಿನ ಆವೃತ್ತಿಯು 153ಸಿಸಿ ಎಂಜಿನ್ ಪಡೆದುಕೊಂಡಿತ್ತು. ಹಾಗೆಯೇ ಫೈವ್ ಸ್ಪೀಡ್ ಗೇರ್ ಬಾಕ್ಸ್ ಹೊಂದಿರಲಿದೆ.

ಪವರ್ ವಿತರಣೆ ಸ್ವಲ್ಪ ಕಡಿಮೆಯಾಗಿರುವ ಹೊರತಾಗಿಯೂ ನಿರ್ವಹಣೆಯಲ್ಲಿ ಯಾವುದೇ ರಾಜಿಗೂ ಮುಂದಾಗಿಲ್ಲ ಎಂದು ಯಮಹಾ ಸ್ಪಷ್ಟಪಡಿಸಿದೆ. ಹಾಗೆಯೇ ಹೊರ ಹೋಗಲಿರುವ ಮಾದರಿಗಿಂತಲೂ 3 ಕೆ.ಜಿ ಕಡಿಮೆ ಭಾರ ಹೊಂದಿರಲಿದೆ.

ಹೊರ ವಿನ್ಯಾಸದ ಬಗ್ಗೆ ಮಾತನಾಡುವುದಾದ್ದಲ್ಲಿ, ಹೊಸ ಹೆಡ್ ಲ್ಯಾಂಪ್ ವಿನ್ಯಾಸ, ವಿಭಜಿತ ಸೀಟು ಮತ್ತು ನೂತನ ಬಣ್ಣಗಳ ಆಯ್ಕೆಗಳು ಗ್ರಾಹಕರನ್ನು ಹೆಚ್ಚು ಆಕರ್ಷಿಸಲಿದೆ.

ಎಫ್‌ಝಡ್ ಮಾದರಿಗಳು ಪ್ಯಾಂಥರ್ ಬ್ಲ್ಯಾಕ್ ಹಾಗೂ ಸ್ಕಾರ್ಚಿಂಗ್ ರೆಡ್ ಬಣ್ಣಗಳಲ್ಲಿ ಲಭ್ಯವಾಗಿದ್ದರೆ ಹೊಸ ಎಫ್‌ಝಡ್-ಎಸ್ ಮಾದರಿಗಳು ಆಸ್ಟ್ರಲ್ ಬ್ಲೂ, ಮೂನ್‌ವಾಕ್ ವೈಟ್, ಸೈಬರ್ ಗ್ರೀನ್ ಮತ್ತು ಮೋಲ್ಟನ್ ಓರೆಂಜ್ ಬಣ್ಣಗಳಲ್ಲಿ ಲಭ್ಯವಾಗಲಿದೆ.

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ನೂತನ ಯಮಹಾ ಎಫ್‌ಝಡ್-ಎಸ್ ಎಫ್ಐ ವರ್ಷನ್ 2.0 ಹಾಗೂ ಎಫ್‌ಝಡ್ ಎಫ್‌ಐ ವರ್ಷನ್ 2.0 ಆವೃತ್ತಿಗಳು ಅನುಕ್ರಮವಾಗಿ 76,250 ಹಾಗೂ 78,250 ರು.ಗಳಷ್ಟು ದುಬಾರಿಯೆನಿಸಲಿದೆ.

ಅದೇ ರೀತಿ ಎಫ್‌ಝಡ್ಎಸ್ ವರ್ಷನ್ 2.0 ಮೀಟರ್ ಕನ್ಸೋಲ್ ಸಹ ಸಂಪೂರ್ಣವಾಗಿ ಹೊಸತಾಗಿದ್ದು, ಫುಲ್ ಡಿಜಿಟಲ್ ಲಿಕ್ವಿಡ್ ಕ್ರೈಸ್ಟರ್ ಡಿಸ್‌ಪ್ಲೇ (ಎಲ್‌ಸಿಡಿ) ಪಡೆದುಕೊಂಡಿದೆ. ಇದು ಸ್ಪೀಡೋಮೀಟರ್, ಟ್ಯಾಕೋಮೀಟರ್, ಟ್ರಿಪ್ ಮೀಟರ್, ಫ್ಯೂಯಲ್ ಗೇಜ್ ಮತ್ತು ಇನ್ನಿತರ ಇಂಡಿಕೇಟರ್ ಪಡೆದುಕೊಂಡಿದ್ದು, ಹೆಚ್ಚು ಸರಳವೆನಿಸಿದೆ.


Click it and Unblock the Notifications








