ಹರ್ಲಿ ಪ್ರತಿಸ್ಪರ್ಧಿ ಥಂಡರ್‌ಬರ್ಡ್ ಎಲ್‌ಟಿ ಕ್ರೂಸರ್ ಬೈಕ್ ಲಾಂಚ್
ದೇಶದ ಪ್ರೀಮಿಯಂ ಕ್ರೂಸರ್ ಬೈಕ್ ವಿಭಾಗ ಶಿಪ್ರ ಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ಇದರಂತೆ ಪ್ರಮುಖ ವಾಹನ ತಯಾರಕ ಸಂಸ್ಥೆಗಳು ತನ್ನ ಅಚ್ಚುಮೆಚ್ಚಿನ ಆವೃತ್ತಿಗಳೊಂದಿಗೆ ಗ್ರಾಹಕರನ್ನು ತಲುಪವಲ್ಲಿ ನಿರತವಾಗಿದೆ.
ಇದರಂತೆ ಬ್ರಿಟನ್ ಮೂಲದ ಐಕಾನಿಕ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಟ್ರಯಂಪ್ ಮೋಟಾರ್‌ಸೈಕಲ್ಸ್, ಅತಿ ನೂತನ ಥಂಡರ್‌ಬರ್ಡ್ ಎಲ್‌ಟಿ ಕ್ರೂಸರ್ ಬೈಕನ್ನು ಭಾರತ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ಈ 1699 ಸಿಸಿ ಕ್ರೂಸರ್ ಬೈಕ್ ದೆಹಲಿ ಎಕ್ಸ್ ಶೋ ರೂಂ ಬೆಲೆ 15.75 ಲಕ್ಷ ರು.ಗಳಾಗಿರಲಿದೆ. ಇದರೊಂದಿಗೆ ಕ್ರೂಸರ್ ರೇಂಜ್ ಬೈಕ್‌ಗಳ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಸಂಸ್ಥೆಯು ಈಗಾಗಲೇ ಥಂಡರ್ ಬರ್ಡ್ ಸ್ಟ್ರೋಮ್ ಮತ್ತು ರಾಕೆಟ್ III ಮಾದರಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಅಂದ ಹಾಗೆ ಥಂಡರ್‌ಬರ್ಡ್ ಸ್ಟ್ರೋಮ್ ತಲಹದಿಯಲ್ಲೇ ನಿರ್ಮಾಣವಾಗಿರುವ ಹೊಸ ಕ್ರೂಸರ್ ಬೈಕ್ ಹರ್ಲಿ ಡೇವಿಡ್ಸನ್ ಮಾದರಿಗಳಿಗೆ ನೇರ ಪೈಪೋಟಿ ಒಡ್ಡಲಿದೆ.

ದೊಡ್ಡದಾದ ಇಂಧನ ಟ್ಯಾಂಕ್, ಕ್ರೋಮ್ ಸ್ಪರ್ಶ, ಹ್ಯಾಂಡಲ್ ಬಾರ್, ವೈರ್ ಸ್ಪೋಕ್ ವೀಲ್ಸ್, ವೈಟ್ ವಾಲ್ ಟೈರ್, ಲೆಥರ್ ಸೀಟುಗಳು ಮತ್ತು ವಿಶೇಷ ಕ್ರೂಸರ್ ಶೈಲಿ ಥಂಡರ್‌ಬರ್ಡ್ ಎಲ್‌ಟಿ ಮಾದರಿಯನ್ನು ವಿಭಿನ್ನವಾಗಿಸಲಿದೆ.

ಟ್ರಿಪಲ್ ಹ್ಯಾಂಡಲ್‌ಲ್ಯಾಂಪ್, ಕ್ವಿಕ್ ರಿಲೀಸ್ ವಿಂಡ್‌ಶೀಲ್ಡ್, ಬದಲಾಯಿಸಬಹುದಾದ ಲೆಥರ್ ಸ್ಯಾಡಲ್‌ಬ್ಯಾಗ್, ಸ್ಕಿಡ್ ಪ್ಲೇಟ್ ಮುಂತಾದ ಇತರ ವೈಶಿಷ್ಟ್ಯಗಳು ಸೇರಿಕೊಳ್ಳಲಿದೆ.

ನೂತನ ಥಂಡರ್‌ಬರ್ಡ್ ಎಲ್‌ಟಿ ಬೈಕ್ ಥಂಡರ್‌ಬರ್ಡ್ ಸ್ಟ್ರೋಮ್‌ಗೆ ಸಮಾನವಾದ 1699ಸಿಸಿ, ಲಿಕ್ವಿಡ್ ಕೂಲ್ಡ್, ಪ್ಯಾರಲಲ್ ಟ್ವಿನ್ ಮೋಟಾರ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 94 ಪಿಎಸ್ (151 ಎನ್‌ಎಂ ಟಾರ್ಕ್) ಉತ್ಪಾದಿಸಲು ನೆರವಾಗಲಿದೆ.

22 ಲೀಟರ್ ಇಂಧನ ಟ್ಯಾಂಕ್ ಹೊಂದಿರುವ ಥಂಡರ್‌ಬರ್ಡ್ ಎಲ್ಟಿ 339 ಕೆ.ಜಿ ತೂಕವನ್ನು ಹೊಂದಿದೆ. ಇದು ಹರ್ಲಿ ಡೇವಿಡ್ಸನ್ ಫ್ಯಾಟ್‌ಬಾಯ್ ಮಾದರಿಗೆ ಪ್ರತಿಸ್ಪರ್ಧೆ ಒಡ್ಡಲಿದೆ.

ಈಗಾಗಲೇ ದೇಶದಲ್ಲಿ ಏಳು ಸೇಲ್ಸ್ ಆಂಡ್ ಸರ್ವಿಸ್ ಔಟ್ಲೆಟ್ ಆರಂಭಿಸಿರುವ ಈ ಬ್ರಿಟನ್ ಮೂಲದ ಸಂಸ್ಥೆಯು ಮುಂಬರುವ ನವೆಂಬರ್‌ನಲ್ಲಿ ಇನ್ನೆರಡು ಶೋ ರೂಂಗಳನ್ನು ತೆರೆಯುವ ಇರಾದೆ ಹೊಂದಿದೆ.


Click it and Unblock the Notifications








