2014 ಫೋರ್ಡ್ ಫಿಯೆಸ್ಟಾ ಟೆಸ್ಟ್ ಡ್ರೈವ್ ರಿಪೋರ್ಟ್
ಭಾರಿ ನಿರೀಕ್ಷೆಗಳನ್ನು ಹೊತ್ತುಕೊಂಡಿದ್ದ 2014 ಫೋರ್ಡ್ ಫಿಯೆಸ್ಟಾ ಮಧ್ಯಮ ಗಾತ್ರದ ಸೆಡಾನ್ ಮಾದರಿಯು ಕಳೆದ ಜೂನ್ ತಿಂಗಳಲ್ಲಿ ಭಾರತ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿತ್ತು.
ಇವನ್ನೂ ಓದಿ: ಕೊನೆಗೂ ಬಂತು ಒಂದು ಉತ್ತಮ ಟಾಟಾ ಕಾರು
ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲೇ ಪ್ರದರ್ಶನ ಕಂಡಿದ್ದ ಹೊಸ ಫಿಯೆಸ್ಟಾಗೆ ಮಾರುಕಟ್ಟೆಯಲ್ಲಿ ಎದುರಾಗಿರುವ ಪೈಪೋಟಿ ಕಡಿಮೆಯೇನಲ್ಲ. ಇದು ಮಾರುತಿಯ ಸಿಯಾಝ್, ಹೋಂಡಾ ಸಿಟಿ, ಫೋಕ್ಸ್‌ವ್ಯಾಗನ್ ವೆಂಟೊ, ಹ್ಯುಂಡೈ ವೆರ್ನಾ ಹಾಗೂ ನಿಸ್ಸಾನ್ ಸನ್ನಿಗಳಂತಹ ಘಟಾನುಘಟಿಗಳ ಸವಾಲನ್ನು ಎದುರಿಸಬೇಕಾಗಿತ್ತು. ಇದೇ ಕಾರಣಕ್ಕಾಗಿ ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯ ಮೇಲೆ ಜವಾಬ್ದಾರಿ ಬಹಳಷ್ಟಿತ್ತು. ಈ ಎಲ್ಲ ನಿರೀಕ್ಷೆಗಳೊಂದಿಗೆ ಫಿಯೆಸ್ಟಾ ಪಯಣಕ್ಕೆ ತೆರಳಿದ ನಮ್ಮ ವಾಹನ ತಜ್ಞರಿಗೆ ಲಭ್ಯವಾಗಿರುವ ಪ್ರತಿಕ್ರಿಯೆಯು ಅದ್ಭುತವಾಗಿತ್ತು.

1903ನೇ ಇಸವಿಯಲ್ಲಿ ಹೆನ್ರಿ ಫೋರ್ಡ್‌ನಿಂದ ಆರಂಭವಾಗಿರುವ ಫೋರ್ಡ್ ಸಂಸ್ಥೆಯು ವಾಹನ ಜಗತ್ತಿನ ಬದಲಾವಣೆಗೆ ತಕ್ಕಂತೆ ನಿರಂತರ ಅಂತರಾಳದಲ್ಲಿ ಗ್ರಾಹಕರ ಬೇಡಿಕೆಗಳಿಗೆ ಅನುಸಾರವಾಗಿ ಹೊಸ ಹೊಸ ಮಾದರಿಗಳನ್ನು ಪರಿಚಯಿಸುವುದರಲ್ಲಿ ಬದ್ದವಾಗಿದೆ. ಇದರಂತೆ ಬಿಡುಗಡೆಯಾಗಿರುವ ಹೊಸ ಫಿಯೆಸ್ಟಾ ಮಾದರಿಯು ಇತರ ಸ್ಪರ್ಧಿಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ನೋಡೋಣ...

ಅವಲೋಕನ
ಪರೀಕ್ಷೆ ಮಾಡಿದ ಮಾದರಿ: 2014 ಫೋರ್ಡ್ ಫಿಯೆಸ್ಟಾ, ಟೈಟಾನಿಯಂ
ಇಂಧನ ವಿಧ: ಡೀಸೆಲ್
ಎಂಜಿನ್: 1.5 ಲೀಟರ್ ಟಿಡಿಸಿಐ (ಟಿಡಿಸಿಐ)
ಚಾಲನಾ ವಿಧ: ಫ್ರಂಟ್ ವೀಲ್ ಡ್ರೈವ್
ಟ್ರಾನ್ಸ್‌ಮಿಷನ್: 5 ಸ್ಪೀಡ್ ಮ್ಯಾನುವಲ್
ರಸ್ತೆ ಪರೀಕ್ಷೆ: ಮುಂಬೈ
ಬೆಲೆ: 11,66,370 ರು. (ಆನ್ ರೋಡ್ ಬೆಂಗಳೂರು)

ವಿನ್ಯಾಸ - ಮುಂಭಾಗ
ಮೊದಲ ನೋಟದಲ್ಲೇ 2014 ಫೋರ್ಡ್ ಫಿಯೆಸ್ಟಾ ಕಾರಿನಲ್ಲಿ ನಮ್ಮನ್ನು ಆಕರ್ಷಿಸುತ್ತಿರುವುದು ಕಾರಿನ ಮುಂಭಾಗದಲ್ಲಿರುವ ಆಸ್ಟನ್ ಮಾರ್ಟಿನ್ ಪ್ರೇರಿತ ಫ್ರಂಟ್ ಗ್ರಿಲ್. ಜೊತೆಗೆ ಬೊನೆಟ್ ಮೇಲೆ ಉಬ್ಬಿದ ರೇಖೆ, ಎಡ್ಜ್ ಫಿನಿಶ್ ಹೆಡ್ ಲೈಟ್ ಮುಂತಾದ ವೈಶಿಷ್ಟ್ಯಗಳು ಆಕರ್ಷಣೀಯವಾಗಿದೆ. ಇವೆಲ್ಲವು ಕಾರಿಗೆ ಫ್ಯೂಚರ್ ಲುಕ್ ನೀಡುತ್ತದೆ ಅಂದರೆ ತಪ್ಪಾಗಲಾರದು.

ವಿನ್ಯಾಸ - ಬದಿ
ಫೋರ್ಡ್ ಎಂಜಿನಿಯರ್‌ಗಳು ಫಿಯೆಟ್ ಬದಿಯ ವಿನ್ಯಾಸಕ್ಕೂ ಸಾಕಷ್ಟು ಬೆವರಿಳಿಸಿದ್ದಾರೆ. ಇದು ನಿಂತ ರೇಖೆಯಲ್ಲೂ ಕಾರು ಚಲಿಸುವ ನೋಟ ನೀಡುತ್ತಿದೆ. ಫೋರ್ಡ್‌ನಿಂದ ಭಾರತದಲ್ಲಿ ಪರಿಚಯವಾಗಲಿರುವ ಎಲ್ಲ ಭವಿಷ್ಯದ ಕಾರುಗಳಲ್ಲಿ ಕೈನಾಟಿಕ್ ಡಿಸೈನ್ 2.0 (Kinetic Design 2.0) ತಂತ್ರಗಾರಿಕೆ ದೊರಕಲಿದೆ. ಇದರ ಡಬಲ್ ಸ್ಪೋಕ್ ಅಲಾಯ್ ವೀಲ್‌ಗಳು ಕಾರಿನ ವ್ಯಕ್ತಿತ್ವವನ್ನು ಗುರುತಿಸುತ್ತಿದೆ.

ವಿನ್ಯಾಸ- ಹಿಂದುಗಡೆ
2014 ಫಿಯೆಸ್ಟಾ ಹಿಂಭಾಗವು ಶುಭ್ರವಾಗಿದ್ದು, ಚೊಕ್ಕಟವಾಗಿದೆ. ಇದು ದೊಡ್ಡದಾದ ಟೈಲ್ ಲ್ಯಾಂಪ್ ಪಡೆದುಕೊಂಡಿದ್ದು, ಸ್ಪೋರ್ಟಿ ಸೆಡಾನ್‌ಗೆ ಬೇಕಾಗುವ ಎಲ್ಲ ಮಾನದಂಡಗಳನ್ನು ಪಾಲಿಸಿವೆ. ಆದರೆ ಅಚ್ಚರಿಯೆಂಬಂತೆ ಇದರ ಎಕ್ಸಾಸ್ಟ್ ರಂಧ್ರಗಳನ್ನು ಮುಚ್ಚಿಡುವಲ್ಲಿ ಫೋರ್ಡ್ ಎಂಜಿನಿಯರ್‌ಗಳು ಯಶ ಕಂಡಿದ್ದಾರೆ.

ಎಂಜಿನ್
2014 ಫೋರ್ಡ್ ಫಿಯೆಸ್ಟಾದಲ್ಲಿ 1.5 ಲೀಟರ್ ಟಿಡಿಸಿಐ (TDCi) ಡೀಸೆಲ್ ಎಂಜಿನ್ ಆಳವಡಿಸಲಾಗಿದೆ. ಇದು 90 ಬಿಎಚ್‌ಪಿ ಉತ್ಪಾದಿಸುತ್ತಿದ್ದು, 203 ಎನ್‌ಎಂ ಪೀಕ್ ಟಾರ್ಕ್ ನೀಡಲಿದೆ. ಅಂತೆಯೇ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಸಹ ಲಭ್ಯವಿರಲಿದೆ. ಆದರೆ ಸದ್ಯಕ್ಕೆ ಪೆಟ್ರೋಲ್ ಮಾದರಿಯು ಬಿಡುಗಡೆಗೊಂಡಿಲ್ಲ.

ಮೈಲೇಜ್
ನಮ್ಮ ಟೆಸ್ಟಿಂಗ್ ವೇಳೆ ಸಿಟಿ ಹಾಗೂ ಹೈವೇ ಎರಡೂ ಸೇರಿ ಪ್ರತಿ ಲೀಟರ್‌ಗೆ 12.5 ಕೀ.ಮೀ. ಮೈಲೇಜ್ ನೀಡುವಲ್ಲಿ ಯಶಸ್ವಿಯಾಗಿದೆ. ಇದು ಖಂಡಿತವಾಗಿಯೂ ನಿರಾಸೆಗೆ ಕಾರಣವಾಗಿದೆ. ಆದರೆ ಇದರ ಎನ್‌ವಿಎಚ್ (ನಾಯ್ಸ್, ವೈಬ್ರೇಷನ್, ಹಾರ್ಚ್) ಮಟ್ಟ ಕಡಿಮೆಯಾಗಿರುವುದು ತೃಪ್ತಿದಾಯಕವಾಗಿದೆ.
ಭಾರತ ವಾಹನ ತಯಾರಿಕ ಸಂಸ್ಥೆಯ ಮಾನ್ಯತೆಯ ಇಂಧನ ಕ್ಷಮತೆ 25.01 ಕೀ.ಮೀ.

ಟ್ರಾನ್ಸ್‌ಮಿಷನ್ (ಗೇರ್ ಬಾಕ್ಸ್)
2014 ಫಿಯೆಸ್ಟಾ ಆಟೋಮ್ಯಾಟಿಕ್ ವೆರಿಯಂಟ್‌ನಲ್ಲಿ ಇಲ್ಲದಿರುವುದು ದೊಡ್ಡ ಹಿನ್ನೆಡೆಯೆಂದೇ ಹೇಳಬಹುದು. ಇದು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನಿಂದ ನಿಯಂತ್ರಿಸಲ್ಪಟ್ಟಿದೆ. ಆದರೂ ಮ್ಯಾನುವಲ್ ಗೇರ್ ಬಾಕ್ಸ್ ಇಷ್ಟಪಡುವ ಚಾಲಕರಿಗೂ ಶ್ರೇಷ್ಠ ಆಯ್ಕೆಯಾಗಿರಲಿದೆ. ಇದರ ಗೇರ್‌ಗಳು ನಯವಾಗಿದ್ದು, ಸುಲಭವಾಗಿ ಬದಲಾಯಿಸಬಹುದಾಗಿದೆ. ಹಾಗಿದ್ದರೂ ನಿಂತು ನಿಂತು ಸಾಗುವ ವಾಹನ ದಟ್ಟಣೆಯಲ್ಲಿ ಕ್ಲಚ್ ಸ್ವಲ್ಪ ಭಾರವಾದಂತೆ ಭಾಸವಾಗಲಿದೆ. ಒಟ್ಟಾರೆಯಾಗಿ ಹೊಸ ಫಿಯೆಸ್ಟಾ ಉತ್ತಮ ಟ್ರಾನ್ಸ್‌ಮಿಷನ್ ಕಾಪಾಡಿಕೊಂಡು ಬಂದಿದೆ.

ಚಾಲನೆ ಹಾಗೂ ಹ್ಯಾಂಡ್ಲಿಂಗ್
ಮ್ಯಾನುವಲ್ ಟ್ರಾನ್ಸ್‌ಮಿಷನ್ ಇಷ್ಟಪಡುವ ವಾಹನ ಪ್ರಿಯರಿಗೆ ಇಂದೊಂದು ಸಂಪೂರ್ಣ ಕಾರು ಎಂಬುದನ್ನು ನಾವು ಮಗದೊಮ್ಮೆ ನೆನಪಿಕೊಳ್ಳಲು ಇಷ್ಟಪಡುತ್ತಿದ್ದೇವೆ. ಟ್ರಾಫಿಕ್ ಪರಿಸ್ಥಿತಿಯಲ್ಲಿ ಹಗುರವಾಗಿ ಭಾಸವಾಗಲಿರುವ ಇದರ ಸ್ಟೀರಿಂಗ್, ತೆರೆದ ರಸ್ತೆ ಹಾಗೂ ಹೆದ್ದಾರಿಯಲ್ಲಿ ಅತ್ಯುತ್ತಮ ಚಾಲನಾ ಅನುಭವ ನೀಡುತ್ತದೆ. ಬಹುಬೇಗನೇ ಬದಲಾಯಿಸುವುದಾದ ಗೇರ್ ವ್ಯವಸ್ಥೆ ಹಾಗೂ ಚೈತನ್ಯ ವಿತರಣೆಯಲ್ಲೂ ಯಾವುದೇ ವಿಳಂಬವಿಲ್ಲದ ಕಾರಣ ಓವರ್‌ಟೇಕಿಂಗ್‌ನಲ್ಲೂ ಉತ್ತಮ ಅನುಭವ ನೀಡುತ್ತದೆ.

ಒಳಮೈ
2014 ಫೋರ್ಡ್ ಫಿಯೆಸ್ಟಾ ಒಳಮೈಯಲ್ಲಿ ಹೆಚ್ಚಿನ ಬದಲಾವಣೆಗಳೇನು ಕಂಡುಬಂದಿಲ್ಲ. ಇದು ತನ್ನ ಹಿಂದಿನ ಮಾದರಿಗೆ ಸಮಾನವಾದ ಡ್ಯಾಶ್ ಬೋರ್ಡ್ ಪಡೆದುಕೊಂಡಿದೆ. ಇದರ ರಚನೆ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿಗೆ ಸಾಮತ್ಯೆ ಕಂಡುಬಂದಿದೆ. ಇದರ ಮಧ್ಯ ಭಾಗದಲ್ಲಿರುವ ಸರಳ ಹಾಗೂ ಸೊಗಸಾದ ಎಂಟರ್ಟೈನ್‌ಮೆಂಟ್ ಕನ್ಸಾಲ್ ನಮ್ಮ ಮೆಚ್ಚುಗೆಗೆ ಪಾತ್ರವಾಗಿದೆ. ಇದು ಗ್ರೇ ಹಾಗೂ ಬೀಜ್ ಸಂಯೋಜನೆಯನ್ನು ಪಡೆದುಕೊಂಡಿದೆ. ಸ್ಪೀಡೋಮೀಟರ್ ಸಹ ಸುಲಭ ವೀಕ್ಷಣೆಗೆ ಸಹಕಾರಿಯಾಗಿದೆ. ನೀಲಿ ಬೆಳಕು ಚೆಲ್ಲುವ ಎಲ್ಲ ಉಪಕರಣಗಳು ಸಹ ಆಕರ್ಷಕವೆನಿಸಿದೆ.

ಒಳಮೈ
ಹಿಂದುಗಡೆ ಸೀಟುಗಳನ್ನು ಆಕರ್ಷಕವಾಗಿ ರಚಿಸಲಾಗಿದ್ದು, ಹೆಡ್ ರೂಂ ಹಾಗೂ ಲೆಗ್ ರೂಂನತ್ತವೂ ಗಮನ ಹರಿಸಲಾಗಿದೆ. ಹೊಂದಾಣಿಸಬಹುದಾದ ಹೆಡ್ ರೆಸ್ಟ್ ಉತ್ತಮ ಆಯ್ಕೆಯಾಗಿದ್ದು, ಆರ್ಮ್ ರೆಸ್ಟ್ ಸಹ ಪಡೆದುಕೊಂಡಿದೆ. ಅಂತೆಯೇ ಸಣ್ಣ ಬಾಟಲಿ ಹೋಲ್ಡರ್‌ಗೂ ಅವಕಾಶ ಕೊಡಲಾಗಿದೆ.

ಇನ್ಸ್ಟುಮೆಂಟ್
ಜಾಗತಿಕವಾಗಿ ಪೋರ್ಡ್ ಸಂಸ್ಥೆಯು ತಮ್ಮ ಇನ್ಸ್ಟುಮೆಂಟ್ ಹಾಗೂ ಮನರಂಜನಾ ಉಪಕರಣಗಳನ್ನು ಸರಳ ಹಾಗೂ ಚೊಕ್ಕಟವಾಗಿ ಇಡಲಾಗಿದೆ. ಇದರಲ್ಲಿ ಫೋರ್ಡ್ ಸಿಂಕ್ ವ್ಯವಸ್ಥೆ ಆಳವಡಿಸಲಾಗಿದ್ದು, ದೊಡ್ಡದಾದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ನೀಲಿ ಬಣ್ಣದ ಬೆಳಕಿನ ವೀಕ್ಷಣೆ ನೀಡುತ್ತಿದೆ. ಇನ್ನು ಟೈಟಾನಿಯಂ ವೆರಿಯಂಟ್ ಕೀಲೆಸ್ ಎಂಟ್ರಿ ಹಾಗೂ ಫುಶ್ ಬಟನ್ ಸ್ಟಾರ್ಟ್/ಸ್ಟಾಪ್ ಇದರಲ್ಲಿದೆ.

ನಮಗಿಷ್ಟವಾದ ವಿಷಯಗಳು
ಫೋರ್ಡ್ ಫಿಯೆಸ್ಟಾ ಬೂಟ್ ಸ್ಪೇಸ್ ವಿಚಾರದಲ್ಲಿ ಯಾವುದೇ ರಾಜಿಗೂ ತಯಾರಾಗಿಲ್ಲ. ಇದು 430 ಲೀಟರ್ ಲಗ್ಗೇಜ್ ಸ್ಪೇಸ್ ಹೊಂದಿದೆ. ಅಂದರೆ ಸಂಪೂರ್ಣ ಫ್ಯಾಮಿಲಿ ಪ್ರಯಾಣ ಕೈಗೊಳ್ಳುವುದಕ್ಕೆ ಹೆಚ್ಚು ಅನುಕೂಲವಾಗಲಿದೆ.

ನಮಗಿಷ್ಟವಾದ ವಿಷಯಗಳು
ಈ ಮೊದಲೇ ಉಲ್ಲೇಖಿಸಿರುವಂತೆಯೇ ಈ ಸೆಗ್ಮೆಂಟ್‌ನಲ್ಲೇ ಅತ್ಯುತ್ತಮವಾದ ಸೀಟುಗಳನ್ನು ಇದು ಹೊಂದಿರುತ್ತದೆ. ಇದರಲ್ಲಿ ಶೋಲ್ಡರ್ ಹೋಲ್ಡರ್ ಕಾಣಬಹುದು. ಹಾಗೆಯೇ ಚಾಲನೆ ವೇಳೆ ಹೆಚ್ಚು ಆರಾಮದಾಯಕತೆಯ ಅನುಭವ ಪಡೆಯಬಹುದು.

ನಮಗಿಷ್ಟವಾದ ವಿಷಯಗಳು
2014 ಫೋರ್ಡ್ ಫೆಯೆಸ್ಟಾ ಮಾದರಿಯು 15 ಇಂಚಿನ ಅಲಾಯ್ ವೀಲ್ ಜೊತೆಗೆ 195/60 ಆರ್15 ಗುಡ್ ಇಯರ್ ಈಗಲ್ ಎನ್‌ಸಿಟಿ 5 ಟ್ಯೂಬ್‌ಲೆಸ್ ಚಕ್ರಗಳನ್ನು ಪಡೆದುಕೊಂಡಿದೆ. ಇದು ಉತ್ತಮ ಗ್ರಿಪ್ ಹಾಗೂ ಚಾಲನಾ ಅನುಭವ ನೀಡುತ್ತದೆ. ಇಲ್ಲಿ ದರ ವಿಚಾರಕ್ಕೆ ಗಮನ ಕೊಡದೆ ಗುಣಮಟ್ಟದ ಚಕ್ರಗಳಿಗೆ ಆದ್ಯತೆ ಕೊಟ್ಟಿರುವುದು ಪ್ರಶಂನೀಯವಾಗಿದೆ.

ನಮಗಿಷ್ಟವಾಗದ ಸಂಗತಿಗಳು
ಹಾಗಿದ್ದರೂ ಹೊಸ ಫೋರ್ಡ್ ಫಿಯೆಸ್ಟಾದಲ್ಲಿ ನಮಗೆ ಇಷ್ಟವಾಗದ ಕೆಲವು ಅಂಶಗಳಿವೆ. ಅವುಗಳಲ್ಲಿ ಮೊದಲಯನೇಯದ್ದು ಸ್ಟೀರಿಂಗ್ ವೀಲ್. ಈ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಮೊದಲು ಬಳಕೆ ಮಾಡುವವರಿಗೆ ಕಠಿಣವೆನಿಸಲಿದೆ.

ನಮಗಿಷ್ಟವಾಗದ ಸಂಗತಿಗಳು
ಸಾಮಾನ್ಯವಾಗಿ ಬೊನೆಟ್ ಓಪನ್ ಮಾಡುವ ಉಪಕರಣವನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ. ಆದರೆ ಫೋರ್ಡ್ ಕಾರಿನಲ್ಲಿ ಇದರ ಸ್ಥಾನಪಲ್ಲಟವಾಗಿದೆ ಅಂದರೆ ತಪ್ಪಾಗಲಾಗರು. ಚಾಲಕ ಬಲಗಾಲಿನ ಸಮೀಪದಲ್ಲಿರುವ ಇದನ್ನು ಬಳಕೆ ಮಾಡುವುದು ಸ್ವಲ್ಪ ಕಷ್ಟಕರವೆನಿಸುತ್ತದೆ.

ನಮಗಿಷ್ಟವಾಗದ ಸಂಗತಿಗಳು
ರಿಯರ್ ವ್ಯೂ ಹಿಂಬದಿಯ ಗೋಚರತೆ ವೀಕ್ಷಣೆಗೆ ಚಾಲಕನಿಗೆ ಸಹಕಾರಿಯಾಗುತ್ತದೆ. ಆದರೆ ಹಿಂಬದಿಯ ಪ್ರಯಾಣಿಕರು ಸ್ವಲ್ಪ ಎತ್ತರದಲ್ಲಿ ಒರಗಿದ್ದಲ್ಲಿ ತೊಂದರೆ ಎದುರಾಗಲಿದೆ. ಇದರಿಂದಾಗಿ ಸಹಜವಾಗಿಯೇ ಫೋರ್ಡ್‌ನ ರಿಯರ್ ಪಾರ್ಕಿಂಗ್ ಸೆನ್ಸಾರ್‌ಗೆ ಮೊರೆ ಹೋಗಬೇಕಾಗುತ್ತದೆ.

ನಮಗಿಷ್ಟವಾಗದ ಸಂಗತಿಗಳು
ನಮ್ಮ ಗಮನಕ್ಕೆ ಬಂದಿರುವ ಇನ್ನೊಂದು ಮಹತ್ವದ ಸಂಗತಿಯೆಂದರೆ ಫಿಯೆಸ್ಟಾ ಬ್ರೇಕ್‌ಗಳು. ಇದು ಉತ್ತಮವಾಗಿಯೇ ಇದ್ದರೂ ಕೆಲವೊಂದು ಬಾರಿ ನಿಖರತೆಯ ಕೊರತೆಯಿದ್ದಂತೆ ಭಾಸವಾಗುತ್ತದೆ. ಉದಾಹರಣೆಗೆ ಗಾಡಿ ತಟ್ಟನೆ ನಿಲ್ಲಿಸಬೇಕು ಎಂದು ಅನಿಸಿದ್ದಲ್ಲಿ ಇದರ ಪ್ರತಿಕ್ರಿಯೆ ಅಷ್ಟು ನಿಖರತೆ ಕಾಯ್ದುಕೊಂಡಿರುವುದಿಲ್ಲ.

ಸ್ಪರ್ಧಿಗಳು
ಮೇಲೆ ತಿಳಿಸಿರುವಂತೆಯೇ 2014 ಫೋರ್ಡ್ ಫಿಯೆಸ್ಟಾ ಓಟ ಅಷ್ಟು ಸುಲಭವಲ್ಲ. ಇದು ಮಾರುಕ್ಟಟೆಯಲ್ಲಿ ಹ್ಯುಂಡೈ ವೆರ್ನಾ, ಫೋಕ್ಸ್‌ವ್ಯಾಗನ್ ವೆಂಟೊ, ಫಿಯೆಟ್ ಲಿನಿಯಾಗಳಂತಹ ಸ್ಪರ್ಧಿಗಳನ್ನು ಎದುರಿಸಬೇಕಾಗುತ್ತದೆ. ಈ ಪೈಕಿ ಫಿಯೆಸ್ಟಾ ಹಾಗೂ ವೆಂಟೊ ಮಾದರಿಗಳು ಸಮಾನವಾದ 1.5 ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಂಡಿದೆ. ಇನ್ನೊಂದೆಡೆ ವೆರ್ನಾ ಹಾಗೂ ಲಿನಿಯಾ ಮಾದರಿಗಳಲ್ಲಿ 1.4 ಹಾಗೂ 1.3 ಲೀಟರ್ ಡೀಸೆಲ್ ಎಂಜಿನ್‌ಗಳು ಇರಲಿದೆ.
ಆದರೆ ಸುರಕ್ಷತೆ ವಿಚಾರಕ್ಕೆ ಬಂದಾಗ ಬೇಸ್ ವೆರಿಯಂಟ್‌ನಲ್ಲೇ ಎಬಿಎಸ್ ಹಾಗೂ ಏರ್ ಬ್ಯಾಗ್ ಸೌಲಭ್ಯವಿರಲಿದೆ. ಒಟ್ಟಿನಲ್ಲಿ ಉತ್ತಮ ಚಾಲನಾ ಅನುಭವ ನೀಡಲಿದೆ.

ನಿಮಗಿದು ಗೊತ್ತೇ?
ಆಸ್ಟನ್ ಮಾರ್ಟಿನ್ ಜೊತೆ ಕಾರ್ಯ ನಿರ್ವಹಿಸಿದ್ದ ಇಬಾಬ್ ಕೌದ್ (Ehab Kaoud) ಮುಖ್ಯ ವಿನ್ಯಾಸಗಾರನಾಗಿ ಫೋರ್ಡ್ ಸಂಸ್ಥೆಯನ್ನು ಸೇರಿಕೊಂಡಿದ್ದರು. ಇವರ ಪ್ರವೇಶದ ಬಳಿಕ ಫೋರ್ಡ್ ಸಹ ಆಸ್ಟನ್ ಮಾರ್ಟಿನ್ ಶೈಲಿಯ ಗ್ರಿಲ್ ಪಡೆದುಕೊಂಡಿತ್ತು. ಫೋರ್ಡ್ ಇಕೊಸ್ಪೋರ್ಟ್ ಅಭಿವೃದ್ಧಿಯಲ್ಲೂ ಇಬಾಬ್ ಮುಖ್ಯ ಪಾತ್ರ ವಹಿಸಿದ್ದರು. ಮುಂಬರುವ ಫಿಗೊ ಸೆಡಾನ್ ಹಾಗೂ ಹ್ಯಾಚ್‌ಬ್ಯಾಕ್ ಮಾದರಿಗಳು ಸಹ ಇದಕ್ಕೆ ಸಮಾನವಾದ ಹೊಸ ವಿನ್ಯಾಸ ತಂತ್ರಗಾರಿಕೆಯನ್ನು ಪಡೆಯಲಿದೆ.

ಅಂತಿಮ ತೀರ್ಪು
2014 ಫಿಯೆಸ್ಟಾ ಸೆಡಾನ್ ಕಾರಿನ ಮೂಖಾಂತರ ಭಾರತ ವಾಹನ ಮಾರುಕಟ್ಟೆಯಲ್ಲಿ ಫೋರ್ಡ್ ಹೊಸ ತಿರುವನ್ನು ಪಡೆದುಕೊಂಡಿದೆ. ಇದು ಅತ್ಯುತ್ತಮ ಎಂಜಿನ್, ವಿನ್ಯಾಸ ಹಾಗೂ ನಿರ್ವಹಣೆಯನ್ನು ಕಾಪಾಡಿಕೊಂಡಿದೆ. ಖಂಡಿತವಾಗಿಯೂ ಕೆಲವೊಂದು ಕುಂದು ಕೊರತೆಗಳಿದ್ದರೂ ಇದರ ಧನಾತ್ಮಕ ಅಂಶಗಳು ಇವೆಲ್ಲವನ್ನು ಹಿಮ್ಮೆಟ್ಟಿಸುತ್ತಿದೆ. ಹಾಗೊಂದು ವೇಳೆ ಪೆಟ್ರೋಲ್ ಎಂಜಿನ್ ಸಹ ಲಭ್ಯವಾಗಿದ್ದರೆ ಇನ್ನು ಚೆನ್ನಾಗಿರುತ್ತಿತ್ತು. ಈ ಪೈಕಿ ಇಕೊಬೂಸ್ಟ್ ಎಂಜಿನ್ ಹಾಗೂ ಆಟೋಮ್ಯಾಟಿಕ್ ವೆರಿಯಂಟ್ ಮಹತ್ವದೆನಿಸಲಿದೆ.
ಆದರೆ ಜನಪ್ರಿಯ ಮಾರುತಿ ಸಿಯಾಝ್ ಹಾಗೂ ಹೋಂಡಾ ಸಿಟಿಗಳಂತಹ ಕಾರುಗಳನ್ನು ಹೋಲಿಸಿದಾಗ 2014 ಫಿಯೆಸ್ಟಾ ಸೆಡಾನ್ ಪೈಪೋಟಿಯಲ್ಲಿ ಸ್ವಲ್ಪ ಹಿಂದೆ ಬಿದ್ದಿದೆ.


Click it and Unblock the Notifications








