2024 Kia Sonet Review: ಕಿಯಾ ಸೋನೆಟ್ ಫೇಸ್‌ಲಿಫ್ಟ್‌ನ್ನು ಎಲ್ಲರೂ ಮೆಚ್ಚುವುದು ಗ್ಯಾರಂಟಿ, ಹೇಗಿದೆ ಗೋತ್ತಾ?
ಜಗತ್ತು 2020ರಲ್ಲಿ ಭಯಾನಕ ಮಾಹಾಮಾರಿ ಕೊರೋನಾಗೆ ತುತ್ತಾಗಿತ್ತು. ಲಕ್ಷಾಂತರ ಜನರು ಸೋಂಕಿನಿಂದ ಭಾದಿತರಾಗಿದ್ದರು. ಅದೇ ವರ್ಷ ಕಿಯಾ (Kia) ತನ್ನ ಜನಪ್ರಿಯ ಸೋನೆಟ್ (Sonet) ಕಾರನ್ನು ವಿಶ್ವಕ್ಕೆ ತೋರಿಸಿತ್ತು. ಆಗಸ್ಟ್‌ನಲ್ಲಿ ಜಾಗತಿಕವಾಗಿ ಅನಾವರಣಗೊಂಡಿದ್ದ ಈ ಸಬ್-4 ಮೀಟರ್ ಎಸ್‌ಯುವಿ, ಮರು ತಿಂಗಳು ಮಾರಾಟಕ್ಕೆ ಬಂದಿತ್ತು.
ಸಹೋದರ ಸಂಸ್ಥೆ ಹ್ಯುಂಡೈ (Hyundai) ಸೇರಿದಂತೆ ವಿವಿಧ ಬ್ರಾಂಡ್‌ಗಳು, ತಮ್ಮ ಕಾರುಗಳನ್ನು ನವೀಕರಿಸಿ ಕಿಯಾ ಕಂಪನಿಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದನ್ನು ಶುರು ಮಾಡಿದವು. ಎದುರಾಳಿಗಳಿಗೆ ತೀವ್ರ ಪೈಪೋಟಿಯೊಡ್ಡಲು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕಿಯಾ, ಮೇಲ್ದರ್ಜೆಗೇರಿಸಿದ ಸೋನೆಟ್ (Sonet Facelift) ಎಸ್‌ಯುವಿಯನ್ನು ಪರಿಚಯಿಸಿತ್ತು. ನಮ್ಮ ತಂಡಕ್ಕೆ ಈ ಕಾರಿನ ಟೆಸ್ಟ್ ಡ್ರೈವ್ ನಡೆಸಲು ಅವಕಾಶ ದೊರೆಯಿತು. ಬನ್ನಿ ಹೇಗಿದೆ ಎಂಬುದನ್ನು ತಿಳಿಯೋಣ.

ಕಿಯಾ ಸೋನೆಟ್ ಫೇಸ್‌ಲಿಫ್ಟ್ (Kia Sonet Facelift) ವಿನ್ಯಾಸ ಮತ್ತು ವೈಶಿಷ್ಟ್ಯ: ನೂತನ ಕಾರು ಹೊರಭಾಗ ಹಾಗೂ ಒಳಭಾಗದ ವಿನ್ಯಾಸ (design)ದಲ್ಲಿ ಹಲವು ಬದಲಾವಣೆಗಳನ್ನು ಹೊಂದಿದೆ. ಹೊರಭಾಗ ಮೊದಲಿಗಿಂತ ಹೆಚ್ಚು ಆಕರ್ಷಣಿಯವಾಗಿದ್ದು, ನೋಡುಗರನ್ನು ಸೆಳೆಯುತ್ತದೆ. ಮುಂಭಾಗ ನವೀಕರಿಸಿದ ದೊಡ್ಡದಾದ ಹುಲಿಯ ಮೂಗಿನ (Tiger Nose) ಆಕಾರದ ಗ್ರೀಲ್ ಅನ್ನು ಒಳಗೊಂಡಿದೆ.
ಮೇಲ್ದರ್ಜೆಗೇರಿಸಿದ ಗ್ರೀಲ್ ತುದಿಗಳಲ್ಲಿ ನವೀನ ಕ್ರೌನ್ ಜ್ಯುವೆಲ್ ಎಲ್‌ಇಡಿ ಹೆಡ್‌ಲ್ಯಾಂಪ್, ಅತ್ಯಾಧುನಿಕ ಎಲ್ಇಡಿ ಡಿಆರ್‌ಎಲ್ ಹೊಂದಿದೆ. ಜೊತೆಗೆ ಮುಂಭಾಗದಲ್ಲಿರುವ ಬಂಪರ್‌ನ್ನು ಅತ್ಯಾಕರ್ಷಕವಾಗಿ ಮರುವಿನ್ಯಾಸಗೊಳಿಸಲಾಗಿದ್ದು, ಹೊಸದಾದ ಎಲ್‌ಇಡಿ ಫಾಗ್ ಲ್ಯಾಂಪ್ ಅನ್ನು ಪಡೆದಿದೆ. ಹಿಂದಿನ ಮಾದರಿಗೆ ಹೋಲಿಸಿದರೆ, ಸೈಡ್ (ಬದಿ) ವಿನ್ಯಾಸ ಅಷ್ಟಾಗಿ ಬದಲಾಗಿಲ್ಲ. 16 - ಇಂಚಿನ ಡುಯಲ್-ಟೋನ್ ಅಲಾಯ್ ವೀಲ್ಸ್ ಅನ್ನು ಹೊಂದಿದೆ.

ಹೊಚ್ಚ ಹೊಸ ಕಿಯಾ ಸೋನೆಟ್ ಫೇಸ್‌ಲಿಫ್ಟ್ ಎಸ್‌ಯುವಿಯ ಹಿಂಭಾಗದ ವಿನ್ಯಾಸವು ಅತ್ಯುತ್ತಮವಾಗಿದ್ದು, ಈ ಕಾರು ಸ್ಪೋರ್ಟ್ಸ್ ಎಲ್ಇಡಿ ಕನೆಕ್ಟ್ದ್ ಟೈಲ್‌ಲೈಟ್ ಅನ್ನು ಒಳಗೊಂಡಿದೆ. ಇತರೆ ಪ್ರಮುಖ ಬದಲಾವಣೆಯೆಂದರೆ ಜಿಟಿಎಕ್ಸ್ ಹಾಗೂ ಎಕ್ಸ್ ರೂಪಾಂತರಗಳು ನವೀನವಾದ ಸ್ಪಾಯ್ಲರ್ ಹಾಗೂ ಬಂಪರ್‌ನಲ್ಲಿ ಫಾಕ್ಸ್ ಸ್ಕಿಡ್ ಪ್ಲೇಟ್ಸ್ ಅನ್ನು ಪಡೆದಿವೆ.
ಈ ಕಿಯಾ ಸೋನೆಟ್ ಫೇಸ್‌ಲಿಫ್ಟ್ ಒಳಭಾಗದಲ್ಲೂ ಹಲವು ನವೀಕರಣಗಳನ್ನು ಹೊಂದಿದೆ. ಸ್ಟೀರಿಂಗ್ ವೀಲ್ ಚಾಲಕನಿಗೆ ಉತ್ತಮ ಅನುಭವವನ್ನು ನೀಡುತ್ತದೆ. ಇದರೊಂದಿಗೆ ಹೊಸದಾದ 10.25 - ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಸಹ ನವೀನವಾಗಿದ್ದು, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಕಿಯಾ ಕನೆಕ್ಟ್ ಸೂಟ್ (ಇದು ಆಟೋಮೆಟಿಕ್ ಎಸಿಯನ್ನು ಆಕ್ಟಿವ್ ಮಾಡುತ್ತದೆ), ಒಟಿಎ ಅಪ್ಡೇಟ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಇದರೊಂದಿಗೆ ಸೆಂಟ್ರಲ್ ಏರ್ ವೆಂಟ್ಸ್, ಸ್ಮಾರ್ಟ್ ಏರ್ ಪ್ಯೂರಿಫೈಯರ್ ಸಿಸ್ಟಮ್, 4 - ವೇ ಪವರ್ ಡ್ರೈವರ್ ಸೀಟ್, 7 - ಸ್ಪೀಕರ್ ಪ್ರೀಮಿಯಂ ಆಡಿಯೊ ಸಿಸ್ಟಮ್ ಸೇರಿದಂತೆ ವಿವಿಧ ಫೀಚರ್ಸ್ ಇವೆ. ಕಾರಿನ ಸೀಟುಗಳು ಸಹ ಆರಾಮದಾಯಕವಾಗಿದ್ದು, ಈ ಕಿಯಾ ಸೋನೆಟ್ ಫೇಸ್‌ಲಿಫ್ಟ್ ಸುರಕ್ಷತೆಯ ವಿಚಾರದಲ್ಲಿ ಸಾಕಷ್ಟು ಬದಲಾಗಿದ್ದು, ಅತ್ಯುತ್ತಮ ಸೇಫ್ಟಿ ಫೀಚರ್ಸ್ ಅನ್ನು ಒಳಗೊಂಡಿದೆ.
ಈ ಕಾರು 6 ಏರ್‌ಬ್ಯಾಗ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್ ಅಸಿಸ್ಟ್, ಫ್ರಂಟ್, ರೇರ್ ಪಾರ್ಕಿಂಗ್ ಸೆನ್ಸಾರ್ಸ್, 360-ಡಿಗ್ರಿ ಕ್ಯಾಮೆರಾ, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಆಲ್-ವೀಲ್ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಪ್ರಮುಖವಾಗಿ ಅಪಘಾತವನ್ನು ತಡೆಯಲು ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಅನ್ನು ಪಡೆದಿದೆ. ಇದು ಲೇನ್ ಫಾಲೋ ಅಸಿಸ್ಟ್, ಲೇನ್ ಕೀಪಿಂಗ್ ಅಸಿಸ್ಟ್ ಸೇರಿದಂತೆ ವಿವಿಧ ಅಂಶಗಳನ್ನು ಹೊಂದಿದೆ.

ಕಿಯಾ ಸೋನೆಟ್ ಫೇಸ್‌ಲಿಫ್ಟ್ ಕಾರ್ಯಕ್ಷಮತೆ: ಈ ಕಾರಿನ ಪವರ್ ಟ್ರೈನ್ ಯಾವುದೇ ರೀತಿಯಲ್ಲಿ ಬದಲಾಗದೆ ಹಿಂದಿನ ಮಾದರಿಯಂತೆ ಇದ್ದು, 1.2 - ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 82 bhp ಪವರ್ ಮತ್ತು 115 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 5 - ಸ್ವೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದಿದೆ.
ಈ ಕಾರಿನ ಮತ್ತೊಂದು 998 ಸಿಸಿ ಟರ್ಬೋಚಾರ್ಜ್ಡ್ (Turbocharged) 3 - ಸಿಲಿಂಡರ್ ಪೆಟ್ರೋಲ್ ಎಂಜಿನ್ 182 bhp ಗರಿಷ್ಠ ಪವರ್ ಹಾಗೂ 172 Nm ಪೀಕ್ ಟಾರ್ಕ್ ಹೊರಹಾಕುತ್ತದೆ. 6 - ಸ್ವೀಡ್ ಐಎಂಟಿ, 7 - ಸ್ವೀಡ್ ಡಿಸಿಟಿ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ.

ಕಿಯಾ ಸೋನೆಟ್ ಫೇಸ್‌ಲಿಫ್ಟ್ ಎಸ್‌ಯುವಿಯ ಡೀಸೆಲ್ ಪವರ್ ಟ್ರೈನ್ ಕೊಂಚ ಶಕ್ತಿಯುತವಾಗಿದೆ. 1.5 - ಲೀಟರ್ ಟರ್ಬೊ ಡಿಸೇಲ್ ಎಂಜಿನ್ 114 bhp ಪವರ್ ಮತ್ತು 250 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 - ಸ್ವೀಡ್ ಮ್ಯಾನುವಲ್, 6 - ಸ್ವೀಡ್ ಐಎಂಟಿ ಹಾಗೂ 6 - ಸ್ವೀಡ್ ಟಾರ್ಕ್ ಕನ್ವರ್ಟರ್ ಆಟೋಮೆಟಿಕ್ ಟ್ರಾನ್ಸ್ಮಿಷನ್ (ಗೇರ್‌ಬಾಕ್ಸ್) ಆಯ್ಕೆಯನ್ನು ಒಳಗೊಂಡಿದೆ.
ಡ್ರೈವಿಂಗ್ ಇಂಪ್ರೆಷನ್: ನಮ್ಮ ತಂಡ, ಕಿಯಾ ಸೋನೆಟ್ ಫೇಸ್‌ಲಿಫ್ಟ್ ಎಸ್‌ಯುವಿಯ ಡೀಸೆಲ್ ಆಟೋಮೆಟಿಕ್ (ಟಾರ್ಕ್ ಕನ್ವರ್ಟರ್) ಆವೃತ್ತಿಯನ್ನು ಟೆಸ್ಟ್ ಡ್ರೈವ್ ನಡೆಸಿತು. ಈಗಾಗಲೇ ಎಲ್ಲಿಯೋ ಚಾಲನೆ ಮಾಡಿದಂತೆ ಭಾಸವಾಗುತ್ತಿತ್ತು. ಇದರ ಎಂಜಿನ್ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿತು. ಲೀಲಾಜಾಲವಾಗಿ 100 km/h ವೇಗವನ್ನು ಪಡೆಯುವುದು ಡ್ರೈವ್ ಮಾಡುವವರಿಗೆ ಒಂದು ತರಹ ಮುದ ನೀಡುತ್ತದೆ.

6 - ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮೆಟಿಕ್ ಗೇರ್‌ಬಾಕ್ಸ್ ವೀಲ್ ಗಳಿಗೆ ಸುಲಭವಾಗಿ ಪವರ್ (ಶಕ್ತಿ) ವರ್ಗಾಯಿಸುತ್ತದೆ. ಆದರೆ, ಪ್ಯಾಡಲ್ ಶಿಫ್ಟರ್ ಬಳಸುವಾಗ ಅವು ಕೊಂಚ ನಿಧಾನವೆಂಬಂತೆ ಅನಿಸುತ್ತದೆ. ಹಿಂದಿನ ಸೋನೆಟ್ ಮಾದರಿಗೆ ಹೋಲಿಸಿದರೆ, ಸಸ್ಪೆನ್ಷನ್ ಸೆಟಪ್ ಅದಕ್ಕಿಂತ ಅತ್ಯುತ್ತಮವಾಗಿದ್ದು, ಹಳ್ಳ - ದಿಣ್ಣೆ, ಉಬ್ಬು - ತಗ್ಗುಗಳಿಂದ ಕೂಡಿರುವ ರಸ್ತೆಗಳಲ್ಲಿ ಸುಲಭವಾಗಿ ಚಲಿಸಲು ಸಹಾಯಕವಾಗಿದೆ.
ಬ್ರೇಕಿಂಗ್ ಬಗ್ಗೆ ಹೇಳುವುದಾದರೆ, ಕಿಯಾ ಸೋನೆಟ್ ಫೇಸ್‌ಲಿಫ್ಟ್ ಎಸ್‌ಯುವಿಯ ಆಲ್ - ವೀಲ್ ಡಿಸ್ಕ್ ಬ್ರೇಕ್ಸ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಇದು ಕಾರು ಓಡಿಸುವಾಗ ಚಾಲಕರಿಗೆ ನೇರವಾಗುತ್ತದೆ. ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್)ನಂತಹ ಸುರಕ್ಷತಾ ವೈಶಿಷ್ಟ್ಯವು ಇದ್ದು, ಲೇನ್ ಕೀಪ್ ಅಸಿಸ್ಟ್ ಒಳಗೊಂಡಂತೆ ಹಲವು ಅಂಶಗಳನ್ನು ಹೊಂದಿದೆ. ಡ್ರೈವ್ ವೇಳೆ ಸಾಕಷ್ಟು ಸಹಾಯಕವಾಗಲಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ: ನೂತನ ಕಿಯಾ ಸೋನೆಟ್ ಫೇಸ್‌ಲಿಫ್ಟ್, ಆಕರ್ಷಕ ವೈಶಿಷ್ಟ್ಯಗಳೊಂದಿಗೆ ವಿನ್ಯಾಸದ ದೃಷ್ಟಿಯಿಂದಲೂ ಅತ್ಯುತ್ತಮವಾಗಿದೆ. ಇದರಿಂದ ಈ ಕಾರು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಬಹುದು. ಒಮ್ಮೆ ಖರೀದಿದಾರರಿಗೆ ವಿತರಣೆಯಾದ ಬಳಿಕ ಅವರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುವ ನೀರಿಕ್ಷೆಯಿದ್ದು, ಕಂಪನಿಗೆ ಹೆಚ್ಚಿನ ಲಾಭ ತಂದುಕೊಡಬಹುದು. ಪ್ರತಿಸ್ಪರ್ಧಿಗಳಿಗೂ ತೀವ್ರ ಪೈಪೋಟಿ ನೀಡಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








