ವಿಮರ್ಶೆ: ಹೋಂಡಾ ಜಾಝ್ ಸಣ್ಣಕಾರು ನೋಡಿರಣ್ಣ
ಜಪಾನಿನ ಹೋಂಡಾ ಕಂಪನಿಯು ದೇಶಕ್ಕೆ ಪರಿಚಯಿಸಿದ ಮೊದಲ ಸಣ್ಣಕಾರಿನ ಹೆಸರು ಜಾಝ್. ಮಾರುತಿ ಸ್ವಿಫ್ಟ್, ಹ್ಯುಂಡೈ ಐ20, ಸ್ಕೋಡಾ ಫಾಬಿಯಾ ಮುಂತಾದ ಅತಿರಥ ಮಹಾರಥ ಹ್ಯಾಚ್ ಬ್ಯಾಕ್ ಸೆಗ್ಮೆಂಟಿನಲ್ಲಿ ಜಾಝ್ ಕಾರಿಗೂ ಪ್ರಮುಖ ಸ್ಥಾನವಿದೆ.
ಗುಣಮಟ್ಟದ ಫೀಚರುಗಳು ಮತ್ತು ಸಾಕಷ್ಟು ಇಂಟರಿಯರ್ ಸ್ಥಳಾವಕಾಶದ ಜೊತೆಗೆ ಅತ್ಯುತ್ತಮ ಶೈಲಿಯ ವಿನ್ಯಾಸದಿಂದಾಗಿ ಜಾಝ್ ಗಮನ ಸೆಳೆಯುತ್ತದೆ. ದೇಶಕ್ಕೆ ಇದು ಪ್ರಪ್ರಥಮ ಬಾರಿಗೆ ಆಗಮಿಸಿದ್ದು 2009ರಲ್ಲಿ. ಅಲ್ಲಿಂದಿಲ್ಲಿವರೆಗೆ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಕುರಿತು ಜಾಝ್ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ.
ಜನಮೆಚ್ಚುಗೆ ಪಡೆದರೂ ಇದರ ಮಾರಾಟ ಕೊಂಚ ಕಡಿಮೆಯಾಗಲು ಮುಖ್ಯ ಕಾರಣವೆಂದರೆ ದುಬಾರಿ ದರ. ಹಳೆಯ ಹೋಂಡಾ ಜಾಝ್ ದರ ಸುಮಾರು 7.5 ಲಕ್ಷ ರುಪಾಯಿ ಆಸುಪಾಸಿನಲ್ಲಿತ್ತು. ಕಳೆದ ವರ್ಷ ಪರಿಷ್ಕೃತ ನೂತನ ಜಾಝ್ ರಸ್ತೆಗಿಳಿದಿತ್ತು. ಆದರೆ ಮೊನ್ನೆವರೆಗೆ ಜಾಝ್ ಬುಕ್ಕಿಂಗ್ ಸ್ಥಗಿತಗೊಳಿಸಲಾಗಿತ್ತು. ಗ್ರಾಹಕರ ಬೇಡಿಕೆಗೆ ತಕ್ಕಂತೆ ಪೂರೈಸಲು ಸಾಧ್ಯವಾಗದೆ ಇದ್ದಕಾರಣ ಬುಕ್ಕಿಂಗ್ ಸ್ಥಗಿತಗೊಳಿಸಲಾಗಿತ್ತು.
2011ರಲ್ಲಿ ಆಗಮಿಸಿದ ಜಾಝ್ ದರ ಕೊಂಚ ಕಡಿಮೆಯಾಗಿದೆ. ಸುಮಾರು 5.75 ಲಕ್ಷ ರು.ನಿಂದ 6.31 ಲಕ್ಷ ರು. ದರದಲ್ಲಿ ಈಗ ಜಾಝ್ ಖರೀದಿಸಬಹುದಾಗಿದೆ. ದರ ಕಡಿಮೆ ಮಾಡಿರುವುದರಿಂದ ಫೀಚರ್ಸ್ ಕಡಿಮೆಯಾಗಿದ್ದಿರಬಹುದು ಎಂದು ಭಾವಿಸಬೇಕಿಲ್ಲ. ಅಲಾಯ್ ವೀಲ್, ಫಾಗ್ ಲ್ಯಾಂಪ್, ಹೆಚ್ಚು ಶಕ್ತಿ ಸೇರಿದಂತೆ ಒಂದಿಷ್ಟು ಹೆಚ್ಚುವರಿ ಫೀಚರುಗಳನ್ನು ಅಳವಡಿಸಲಾಗಿದೆ.
ಜಾಝ್ ವಿನ್ಯಾಸದ ಕುರಿತು ನಾವು ತುಟಿಕ್ ಪಿಟಕ್ ಎನ್ನೋದಿಲ್ಲ. ಯಾಕೆಂದರೆ ಅದರ ಶಾರ್ಪ್ ಗೆರೆಗಳು, ಮುಂಭಾಗದ ಪ್ರೀಮಿಯಂ ಕ್ರೊಮ್ ಗ್ರಿಲ್ಲು, ಅಲಾಯ್ ವೀಲ್ ಇತ್ಯಾದಿಗಳು ಕಣ್ಮನ ಸೆಳೆಯುತ್ತವೆ. ಇದರ ಸಣ್ಣ ಅಥವಾ ಕಾಂಪ್ಯಾಕ್ಟ್ ವಿನ್ಯಾಸದಿಂದಾಗಿ ಪಾರ್ಕಿಂಗ್ ಸುಲಭ. ಪಾರ್ಕಿಂಗ್ ಮಾಡಲು ಹೆಚ್ಚು ಸ್ಥಳಾವಕಾಶ ಬಯಸುವುದಿಲ್ಲ. ಹೀಗಾಗಿ ಜಾಝ್ ಸಿಟಿ ರಸ್ತೆಗೆ ಸೂಕ್ತ. ಜಾಝ್ ಫೀಚರುಗಳು, ಬಣ್ಣಗಳು ಆಕರ್ಷಕ.
ನೂತನ ಜಾಝ್ ಹ್ಯಾಚ್‌ಬ್ಯಾಕ್ ಕಾರು ಲೀಟರಿಗೆ ಸುಮಾರು 16.7 ಕಿ.ಮೀ. ಮೈಲೇಜ್ ನೀಡುತ್ತದೆ. ಇದು 1.2 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿದೆ. ಇದೇ ಎಂಜಿನ್ ಹೋಂಡಾ ಸಿಟಿ ಕಾರಿನ ಬಾನೆಟ್ ಎತ್ತಿ ನೋಡಿದ್ರೂ ಕಾಣುತ್ತದೆ. ಶಕ್ತಿಶಾಲಿ ಎಂಜಿನಿಗೆ ಹೋಲಿಸಿದರೆ ಇದರ ಮೈಲೇಜ್ ಹೆಚ್ಚು ತೃಪ್ತಿದಾಯಕ ಅನಿಸೋದಿಲ್ಲ. ಆದ್ರೂ ಓಕೆ ಎನ್ನಬಹುದು.
ನಾಲ್ಕು ಸಿಲಿಂಡರಿನ ಜಾಝ್ ಎಂಜಿನ್ 6,200 ಆವರ್ತನಕ್ಕೆ 90 ಅಶ್ವಶಕ್ತಿ ಮತ್ತು 4,800 ಆವರ್ತನಕ್ಕೆ 110 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಈ ಕಾರಲ್ಲಿ ಕೇವಲ 11.2 ಸೆಕೆಂಡಿನಲ್ಲಿ 100 ಕಿ.ಮೀ. ವೇಗ ಪಡೆದುಕೊಳ್ಳಬಹುದು. ಜಾಝ್ ಕಾರು 5 ಸ್ಪೀಡಿನ ಮ್ಯಾನುಯಲ್ ಗೇರ್ ಹೊಂದಿದ್ದು, ಗಂಟೆಗೆ ಗರಿಷ್ಠ 165 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ.
ಹೋಂಡಾ ಜಾಝ್ ಮೂರು ಆವೃತ್ತಿಗಳಲ್ಲಿ ದೊರಕುತ್ತದೆ. ಅಂದ್ರೆ ಹೋಂಡಾ ಝಾಜ್, ಹೋಂಡಾ ಜಾಝ್ ಸೆಲೆಕ್ಟ್ ಮತ್ತು ಹೋಂಡಾ ಜಾಝ್ ಎಕ್ಸ್. ಈ ಮೂರು ಆವೃತ್ತಿಗಳ ಮುಂಭಾಗದಲ್ಲಿ ಎರಡು ಏರ್ ಬ್ಯಾಗ್, ಸೈಡ್ ಏರ್ ಬ್ಯಾಗ್, ಎಬಿಎಸ್ ಮತ್ತು ಇಬಿಎಸ್ ಮುಂತಾದ ಸುರಕ್ಷತೆಯ ಫೀಚರುಗಳನ್ನು ಹೊಂದಿದೆ. ಜೊತೆಗೆ ಚರ್ಮದ ಸೀಟು, ಕಿಲೆಸ್ ಎಂಟ್ರಿ, ಪವರ್ ಸ್ಟಿಯರಿಂಗ್, ಪವರ್ ವಿಂಡೋಸ್, ಏರ್ ಕಂಡಿಷನ್, ಸಿಡಿ ಎಂಪಿ3 ಪ್ಲೇಯರ್ ಮತ್ತು ಆಟೋಮ್ಯಟಿಕ್ ಹೆಡ್ ಲೈಟ್ ಇತ್ಯಾದಿ ಹೆಚ್ಚುವರಿ ಫೀಚರುಗಳನ್ನು ಹೊಂದಿದೆ.
ಒಂದಿಷ್ಟು ಹೆಚ್ಚುವರಿ ಸ್ಥಳಾವಕಾಶ ಮತ್ತು ಅತ್ಯುತ್ತಮ ಚಾಲನೆ ಅನುಭವ ಪಡೆಯಲು ಬಯಸುವಿರಾದರೆ ನೀವು ಜಾಝ್ ಖರೀದಿಸಬಹುದು. ಹೋಂಡಾ ಕಂಪನಿಯ ವಿಶ್ವಾಸನೀಯತೆ ಮತ್ತು ನಿರ್ಮಾಣ ಗುಣಮಟ್ಟದ ಹಿನ್ನಲೆಯನ್ನು ಗಮನದಲ್ಲಿಟ್ಟುಕೊಂಡರೆ ಜಾಝ್ ಮೇಲೆ ನಂಬಿಕೆ ಇಡಬಹುದು. ಡೀಸೆಲ್ ಆವೃತ್ತಿಯ ಜಾಝ್ ದೊರಕುವುದಿಲ್ಲವೆನ್ನುವುದು ಮಾತ್ರ ಇದರ ಮೇಲಿರುವ ದೂರು. ಆದರೆ ಭವಿಷ್ಯದಲ್ಲಿ ಡೀಸೆಲ್ ಜಾಝ್ ಕೂಡ ಹೊರತರುವ ಭರವಸೆಯನ್ನು ಹೋಂಡಾ ನೀಡಿದೆ. ( ಕಾರು ವಿಮರ್ಶೆಗಳನ್ನು ಓದಿ)


Click it and Unblock the Notifications









