Hyundai Exter Review: ಬೈಕ್‌ನಂತೆ ಮೈಲೇಜ್ ನೀಡುವ ಹ್ಯುಂಡೈ ಎಕ್ಸ್‌ಟರ್ ವಿಮರ್ಶೆ
ಭಾರತದ ಕಾರು ಮಾರುಕಟ್ಟೆಯಲ್ಲಿ ಎಸ್‌ಯುವಿ ವಿಭಾಗವು ದಿನದಿಂದ ದಿನಕ್ಕೆ ದೊಡ್ಡಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಅದರಲ್ಲೂ ಕೈಗೆಟುಕುವ ಬೆಲೆ, ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳೊಂದಿಗೆ ಖರೀದಿಗೆ ದೊರೆಯುವ ಬಾಕ್ಸಿ ವಿನ್ಯಾಸದ ಮೈಕ್ರೋ ಎಸ್‌ಯುವಿಗಳಿಗೆ ಭಾರೀ ಡಿಮ್ಯಾಂಡ್ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಕೊಂಡುಕೊಳ್ಳುತ್ತಾರೆ.
ದೇಶದಲ್ಲಿ ಮೊದಲಿಗೆ ಈ ಮೈಕ್ರೋ ಎಸ್‌ಯುವಿ ವಿಭಾಗಕ್ಕೆ ಪ್ರವೇಶಿಸಿದ ಕಾರು, ಮಹೀಂದ್ರಾ KUV100. ಆ ಬಳಿಕ, ಬಿಡುಗಡೆಗೊಂಡ ಟಾಟಾ ಪಂಚ್ ಈ ವಿಭಾಗದಲ್ಲಿ ಪಾರುಪತ್ಯ ಮೆರೆಯುವುದನ್ನು ಮುಂದುವರಿಸಿದೆ. ಇತ್ತೀಚೆಗೆ ಹ್ಯುಂಡೈ (Hyundai) ಭಾರತದ ಮಾರುಕಟ್ಟೆಯಲ್ಲಿ ಹೊಚ್ಚ ಹೊಸ ಎಕ್ಸ್‌ಟರ್ (Exter) ಮೈಕ್ರೋ ಎಸ್‌ಯುವಿಯನ್ನು ಲಾಂಚ್ ಮಾಡಿದೆ. ನಮ್ಮ ತಂಡಕ್ಕೆ ಈ ಕಾರಿನ ಟೆಸ್ಟ್ ಡ್ರೈವ್ ಮಾಡಲು ಅವಕಾಶ ದೊರೆಯಿತು. ಬನ್ನಿ ಹೇಗಿದೆ ಎಂಬುದನ್ನು ತಿಳಿಯೋಣ.

ಹ್ಯುಂಡೈ ಎಕ್ಸ್‌ಟರ್ ವಿನ್ಯಾಸ ಹಾಗೂ ವೈಶಿಷ್ಟ್ಯ: ಈ ಕಾರಿನ ಒಂದಷ್ಟು ಡಿಸೈನ್ ಹಾಗೂ ಫೀಚರ್ಸ್ ಗ್ರ್ಯಾಂಡ್ ಐ10 ನಿಯೋಸ್ ಹ್ಯಾಚ್‌ಬ್ಯಾಕ್ ಹಾಗೂ ಔರಾ ಸೆಡಾನ್‌ಗೆ ಹೋಲಿಕೆಯಾಗುತ್ತದೆ. ಕಂಪನಿಯು, ಎಕ್ಸ್‌ಟರ್ ಎಸ್‌ಯುವಿಯನ್ನು ಬೇರೆ ಲುಕ್ ಹೊಂದಿರುವಂತೆ ವಿನ್ಯಾಸ ಮಾಡಿದ್ದು, ಫ್ರಂಟ್ ಭಾಗವು ಅತ್ಯಾಕರ್ಷಕವಾಗಿದೆ. ಸ್ಪ್ಲಿಟ್ ಹೆಡ್‌ಲೈಟ್ ಸೆಟಪ್ ಹಾಗೂ ಪ್ಯಾರಾಮೆಟ್ರಿಕ್ ಗ್ರಿಲ್ ನೋಡುಗರನ್ನು ಸೆಳೆಯುತ್ತದೆ.
ಪ್ಯಾರಾಮೆಟ್ರಿಕ್ ಗ್ರಿಲ್‌ನ ಎರಡು ಬದಿಗಳಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳಿದ್ದು, ಇನ್-ಬಿಲ್ಟ್ ಹೆಚ್ ಆಕಾರದ ಎಲ್ಇಡಿ DRL ಸಿಂಪಲ್ ಲುಕ್ ಹೊಂದಿದೆ. ಬಂಪರ್ ಕೆಳಗೆ ಸಿಲ್ವರ್ ಸ್ಕಿಡ್ ಪ್ಲೇಟ್ ಇದ್ದು, ಬಾನೆಟ್ ಮೇಲೆ ಹ್ಯುಂಡೈ ಬ್ಯಾಡ್ಜ್ ಅನ್ನು ಒಳಗೊಂಡಿದೆ. ಎಕ್ಸ್‌ಟರ್ ನೇಮ್‌ಪ್ಲೇಟ್ ಸ್ಪ್ಲಿಟ್ ಲೈಟಿಂಗ್ ಸೆಟಪ್ ನಡುವೆಯಿದೆ.

ಸೈಡ್ ನಲ್ಲಿ ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿ 15 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ ಪಡೆದಿದೆ. ಸಿ-ಪಿಲ್ಲರ್‌ನಲ್ಲಿ ಬ್ಲ್ಯಾಕ್ ರೂಫ್ ರೈಲ್ಸ್ ಇದ್ದು, ಶಾರ್ಕ್ ಫಿನ್ ಆಂಟೆನಾ, ಬಾಡಿ ಕ್ಲಾಡಿಂಗ್ ಹೈಲೆಟ್ ಆಗಿವೆ. ಹಿಂಭಾಗದಲ್ಲೂ ಅತ್ಯಾಧುನಿಕ ವಿನ್ಯಾಸ ಹೊಂದಿದ್ದು, ಟೈಲ್‌ಲೈಟ್ಸ್ ಹ್ಯುಂಡೈ ಬ್ಯಾಡ್ಜ್‌ನೊಂದಿಗೆ ಕನೆಕ್ಟ್ ಆಗಿವೆ. ಇದಿಷ್ಟೇ ಅಲ್ಲದೆ, ಸಿಲ್ವರ್ ಬಣ್ಣದ ಸ್ಕಿಡ್ ಪ್ಲೇಟ್ ಹಾಗೂ ಬ್ಲ್ಯಾಕ್ ಬಣ್ಣದ ರೂಫ್-ಮೌಂಟೆಡ್ ಸ್ಪಾಯ್ಲರ್ ಅನ್ನು ಒಳಗೊಂಡಿದೆ.
ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿ ಕ್ಯಾಬಿನ್‌ನೊಳಗೆ ಪ್ರವೇಶಿಸಿದಾಗ ಹಿಂದೆಲ್ಲೂ ಈ ಕಾರಿನಲ್ಲಿ ಓಡಾಡಿದಂತೆ ಭಾಸವಾಗುತ್ತದೆ. ಬಹುತೇಕ ಒಳಭಾಗದ ವಿನ್ಯಾಸ ಐ10 ಮತ್ತು ಔರಾಗೆ ಹೋಲಿಕೆಯಾಗುತ್ತದೆ. ಡ್ಯಾಶ್‌ಬೋರ್ಡ್ ಮತ್ತು ಡೋರ್ ಪ್ಯಾನೆಲ್ ಬ್ಲ್ಯಾಕ್-ಔಟ್ ಥೀಮ್ ಪಡೆದಿದ್ದು, ನೋಡುಗರನ್ನು ಸೆಳೆಯುತ್ತದೆ. ಈ ಕಾರು, ಅತ್ಯಾಧುನಿಕ ಹಾಗೂ ನವೀನವಾಗಿರುವ ಭರಪೂರ ವೈಶಿಷ್ಟ್ಯವನ್ನು ಪಡೆದಿದೆ.

ಪ್ರಮುಖವಾಗಿ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ ಹೊಂದಿದ್ದು, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಹ್ಯುಂಡೈನ ಬ್ಲೂ ಲಿಂಕ್ ಕನೆಕ್ಟೆಡ್ ಕಾರ್ ಸೆಟಪ್ ಹಾಗೂ ಬಿಲ್ಟ್ ಇನ್ ನ್ಯಾವಿಗೇಶನ್‌ಯನ್ನು ಸಪೋರ್ಟ್ ಮಾಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವಾಯ್ಸ್ ಆಕ್ಟಿವೇಟೆಡ್ ಕಮಂಡ್ಸ್, ಎಲೆಕ್ಟ್ರಿಕ್ ಸನ್‌ರೂಫ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜಿಂಗ್ ಹಾಗೂ OTA ಅಪ್ಡೇಟ್ ಅನ್ನು ಪಡೆದಿದೆ.
ಹ್ಯುಂಡೈ ಎಕ್ಸ್‌ಟರ್ ಸೀಟುಗಳು ಲೆಥೆರೆಟ್ ಅಪ್‌ಹೋಲ್‌ಸ್ಟರಿ ಫೀಚರ್ಸ್ ಹೊಂದಿದ್ದು, ಎಲ್ಲ ವಯಸ್ಸಿನವರು ಆರಾಮದಾಯಕವಾಗಿ ಪ್ರಯಾಣಿಸಬಹುದು. ಸುರಕ್ಷತೆಯ ದೃಷ್ಟಿಯಿಂದ ಈ ಕಾರು ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್ ಅಸಿಸ್ಟ್ ಕಂಟ್ರೋಲ್, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಸೀಟ್‌ಬೆಲ್ಟ್ ರಿಮೈಂಡರ್, ISOFIX ಚೈಲ್ಡ್ ಸೀಟ್ ಆಂಕರ್ ಹೊಂದಿದೆ.

ಹ್ಯುಂಡೈ ಎಕ್ಸ್‌ಟರ್ ಸುತ್ತಳತೆ ಹಾಗೂ ಕಾರ್ಯಕ್ಷಮತೆ: ಈ ಕಾರು, 3,815 ಎಂಎಂ ಉದ್ದ, 1,710 ಎಂಎಂ ಅಗಲ ಮತ್ತು 1,631 ಎಂಎಂ ಎತ್ತರವನ್ನು ಹೊಂದಿದೆ. ವೀಲ್‌ಬೇಸ್ 2,450 ಎಂಎಂ ಉದ್ದವಿದ್ದು, ಗ್ರೌಂಡ್ ಕ್ಲಿಯರೆನ್ಸ್ 185 ಎಂಎಂ ಇದೆ. ಪೆಟ್ರೋಲ್ ಆವೃತ್ತಿ 391 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಪಡೆದಿದೆ.
ಈ ಎಸ್‌ಯುವಿ, 1.2-ಲೀಟರ್, 4 ಸಿಲಿಂಡರ್ (ಪೆಟ್ರೋಲ್) ಎಂಜಿನ್ ಹೊಂದಿದ್ದು, 81.8 bhp ಗರಿಷ್ಠ ಪವರ್ ಹಾಗೂ 113.8 Nm ಪಿಕ್ ಟಾರ್ಕ್ ಉತ್ಪಾದಿಸುತ್ತದೆ. ಸಿಎನ್‌ಜಿ ಮೋಡ್ ನಲ್ಲಿ 67.7 bhp ಪವರ್ ಮತ್ತು 95.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪೆಟ್ರೋಲ್ ಆವೃತ್ತಿಯು ಮ್ಯಾನ್ಯುವಲ್ ಮತ್ತು AMT ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ.

ಸಿಎನ್‌ಜಿ ಆವೃತ್ತಿಯು ಮ್ಯಾನ್ಯುವಲ್ (5 ಸ್ಪೀಡ್) ಗೇರ್‌ಬಾಕ್ಸ್ ಅನ್ನು ಪಡೆದಿದೆ. ಹ್ಯುಂಡೈ ಎಕ್ಸ್‌ಟರ್ ಕಾರಿನ ಮೈಲೇಜ್ ವಿಚಾರವಾಗಿ ಮಾತನಾಡುವದಾದರೆ, ಪೆಟ್ರೋಲ್ ಚಾಲಿತ ಕಾರು, 19.2km/l - 19.4km/l ಇಂಧನ ದಕ್ಷತೆಯನ್ನು ಹೊಂದಿದೆ. ಸಿಎನ್‌ಜಿ ಚಾಲಿತ ಕಾರು ಗರಿಷ್ಠ 27.1km/kg ಮೈಲೇಜ್ ನೀಡುತ್ತದೆ.
ಹ್ಯುಂಡೈ ಎಕ್ಸ್‌ಟರ್ ಡ್ರೈವಿಂಗ್ ಇಂಪ್ರೆಷನ್ಸ್: ರಾಜಸ್ಥಾನದ ಜೈಪುರದಲ್ಲಿ ಈ ಕಾರಿನ ಪೆಟ್ರೋಲ್ AMT ಆವೃತ್ತಿಯನ್ನು ಟೆಸ್ಟ್ ಡ್ರೈವ್ ಮಾಡುವ ಅವಕಾಶ ನಮ್ಮ ತಂಡಕ್ಕೆ ದೊರೆಯಿತು. ಎಕ್ಸ್‌ಟರ್ ಚಾಲನೆ ಮಾಡುವುದು ಎಲೆಕ್ಕ್ಟ್ರಿಕ್ ಕಾರನ್ನು ಓಡಿಸಿದ ಅನುಭವ ನೀಡುತ್ತದೆ. ಆಸನಗಳು ಕೊಂಚ ಗಟ್ಟಿ ಇದ್ದರೂ ಆರಾಮದಾಯಕವಾಗಿ ಲಾಂಗ್ ಡ್ರೈವ್ ಹೋಗಬಹುದು. ಪ್ರಯಾಣದ ಅವಧಿಯಲ್ಲಿ ತುಂಬಾ ಖುಷಿಯ ಅನುಭವ ನೀಡುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಸ್ಟೇರಿಂಗ್ ವೀಲ್ ಕೂಡ ಅದ್ಬುತವಾಗಿದ್ದು, ಟ್ರಾಫಿಕ್ ಸೇರಿದಂತೆ ಎಂತಹ ಸನ್ನಿವೇಶದಲ್ಲಿ ಬೇಕಾದರೂ ಕಾರನ್ನು ಸುಲಭವಾಗಿ ಚಲಾಯಿಸಬಹುದು. ಸಸ್ಪೆನ್ಶನ್ ಸೆಟಪ್ ಸ್ವಲ್ಪ ಗಟ್ಟಿಯಾಗಿದ್ದು, ಹಳ್ಳ ಬಿದ್ದಿರುವ ರಸ್ತೆಯಲ್ಲಿ ಓಡಿಸುವಾಗ ಸಮಸ್ಯೆಯಾಬಹುದು. ಆದರೆ, ಎಷ್ಟೇ ವೇಗವಾಗಿ ಚಲಾಯಿಸಿದರೂ ಅಲ್ಲಾಡುವುದಿಲ್ಲ. ಫ್ರಂಟ್ ಡಿಸ್ಕ್, ರೇರ್ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದ್ದು, ಗರಿಷ್ಠ ಸ್ವೀಡ್ ನಲ್ಲಿ ಇದ್ದರೂ ಬೇಗ ಹತೋಟಿಗೆ ಬರುತ್ತದೆ. ಬಾಡಿ ರೋಲ್ ಕೊಂಚ ಇರುವುದು ಬಿಟ್ಟರೆ, ಈ ಕಾರು ಅತ್ಯುತ್ತಮವಾಗಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ: ದಕ್ಷಿಣ ಕೊರಿಯಾದ ಹ್ಯುಂಡೈನ ಎಕ್ಸ್‌ಟರ್ ಟಾಟಾ ಪಂಚ್‌ಗೆ ಭಾರೀ ಪೈಪೋಟಿ ನೀಡಲಿದ್ದು, ಭಾರತದ ಮಾರುಕಟ್ಟೆಯಲ್ಲಿ ರೂ.6 ಲಕ್ಷದಿಂದ ರೂ.10.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ದರಕ್ಕೆ ತಕ್ಕಂತೆ ಅತ್ಯದ್ಭುತ ವೈಶಿಷ್ಟ್ಯ ಹಾಗೂ ವಿನ್ಯಾಸವನ್ನು ಹೊಂದಿದೆ. ರಸ್ತೆಯಲ್ಲಿ ಅದ್ಬುತವಾಗಿ ಓಡಿಸಬಹುದಾಗಿದ್ದು, ಮುಂಬರುವ ದಿನಗಳಲ್ಲಿ ದೇಶೀಯ ಗ್ರಾಹಕರಿಗೆ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುದು ಕಾದು ನೋಡಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








