ಅನುಭವ: ನ್ಯಾನೊ ಜೊತೆ ನನ್ನ ದೂರ ತೀರದ ಯಾನ
"ನನ್ನ ಪರಿಚಿತರೊಬ್ಬರಿಗೆ ನ್ಯಾನೊ ಕಾರೆಂದರೆ ಹುಚ್ಚು. ಇಡೀ ಕರ್ನಾಟಕವನ್ನು ಅವರು ಆ ಕಾರಲ್ಲಿ ಸುತ್ತಿದ್ದಾರೆ" ಹಾಗಂತ ನಮ್ಮ ಕಂಪನಿಯ ಎಂಡಿ ಹೇಳುತ್ತಿದ್ದರೆ ಬೆಕ್ಕಸ ಬೆರಗಾಗುವ ಸರದಿ ನಮ್ಮದು. ಎಲ್ಲೆಲ್ಲೋ ನ್ಯಾನೊ ಕಾರಿನ ಕುರಿತು ಅಪಸ್ವರಗಳೇ ಕೇಳಿ ಬರುತ್ತಿರುವಾಗ ಇದು ಕೊಂಚ ವಿಶೇಷವೆನಿಸಿತು. ಬನ್ನಿ ಅವರನ್ನು ಪರಿಚಯಿಸಿಕೊಳ್ಳೋಣ.
ನ್ಯಾನೊ ಕಾರು ನಗರ ಪ್ರಯಾಣಕ್ಕೆ ಸೂಕ್ತವೆಂದು ಎಲ್ಲರೂ ಹೇಳುತ್ತಾರೆ. ಆದರೆ ಬೆಂಗಳೂರಿನ ಉದ್ಯಮಿ ರವಿ ಕುಮಾರ್ ಈ ಪುಟ್ಟ ನ್ಯಾನೊ ಕಾರಿನಲ್ಲಿ ರಾಜ್ಯದ ಅನೇಕ ಊರುಗಳನ್ನು ಸುತ್ತಿದ್ದಾರೆ. ಕಳೆದ ಒಂದು ವರ್ಷಗಳಿಂದ ನ್ಯಾನೊ ಕಾರಿನ ಆರಾಮದಾಯಕತೆಯನ್ನು ಅನುಭವಿಸಿದ್ದಾರೆ. ಅಂದ ಹಾಗೆ ಅವರಲ್ಲಿರುವುದು ನ್ಯಾನೊ ಹೈಎಂಡ್ ಎಲ್ಎಕ್ಸ್ ಆವೃತ್ತಿ.
ಟಾಟಾ ನ್ಯಾನೊ ಕಾರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇತರ ಸಣ್ಣಕಾರುಗಳಿಗೆ ಹೋಲಿಸಿದರೆ ನ್ಯಾನೊ ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆಯೂ ಏರಿಕೆ ಕಾಣುತ್ತಿದೆ. ಸದ್ಯದ ಪೆಟ್ರೋಲ್ ದರ ಏರಿಕೆ ಸಂದರ್ಭದಲ್ಲಿ ಪ್ರತಿಲೀಟರಿಗೆ 25 ಕಿ.ಮೀ. ಮೈಲೇಜ್ ನೀಡುವ ನ್ಯಾನೊಗೆ ಬೇಡಿಕೆ ಹೆಚ್ಚಾಗುತ್ತಿದೆ.
ನ್ಯಾನೊ ಕಾರಿನ ಕಾರ್ಯಕ್ಷಮತೆಯ ಕುರಿತು ರವಿಕುಮಾರ್ ಅಚ್ಚರಿ ವ್ಯಕ್ತಪಡಿಸುತ್ತಾರೆ. ಲಾಂಗ್ ಟ್ರಿಪ್ ಸಮಯದಲ್ಲಿ ಈ ನ್ಯಾನೊ ಕಾರು ಪ್ರತಿಲೀಟರಿಗೆ ಸುಮಾರು 23 ಕಿ.ಮೀ. ಮೈಲೇಜ್ ನೀಡಿದೆಯಂತೆ. "ಹಲವು ಗಂಟೆಗಳ ಕಾಲ ನ್ಯಾನೊ ಕಾರಲ್ಲಿ ಆರಾಮವಾಗಿ ಡ್ರೈವಿಂಗ್ ಮಾಡಬಹುದು. ಇದ್ರಲ್ಲಿ ನಾನು ಒಂದೇ ದಿನ 300 ಕಿ.ಮೀ.ಗಿಂತಲೂ ಹೆಚ್ಚು ಪ್ರಯಾಣಿಸಿದ್ದೀನಿ. ಯಾವುದೇ ತೊಂದರೆಯಾಗಿಲ್ಲ. ಈ ಕಾರಿನ ಸ್ಮೂತ್ ಸಸ್ಪೆನ್ಷನ್ ಆರಾಮವಾದ ಡ್ರೈವಿಂಗಿಗೆ ಸಹಕರಿಸುತ್ತದೆ" ಎಂದು ಅವರು ಹೇಳಿದ್ದಾರೆ.
ನ್ಯಾನೊ ಹ್ಯಾಂಡ್ಲಿಂಗ್ ವಿಷಯ ಕೂಡ ರವಿ ಕುಮಾರ್ ಗೆ ಇಷ್ಟವಾಗಿದೆ. ಈ ಕಾರನ್ನು ಪಾರ್ಕಿಂಗ್ ಮಾಡುವುದು ಕಷ್ಟವಲ್ಲ. ಬೆಂಗಳೂರಿನಂತಹ ವಾಹನ ದಟ್ಟಣೆಯ ಇಕ್ಕಟ್ಟಿನಲ್ಲಿ ಇದನ್ನು ಆರಾಮವಾಗಿ ಪಾರ್ಕ್ ಮಾಡಬಹುದು. ಹೆದ್ದಾರಿಯಲ್ಲೂ ಇದನ್ನು ಹ್ಯಾಂಡ್ಲಿಂಗ್ ಮಾಡುವುದು ಸುಲಭ. "ಬೆಂಗಳೂರಿನಿಂದ ಮಂಗಳೂರಿಗೆ ಹೋಗುವಾಗ ಏರ್ ಕಂಡಿಷನ್ ಹಾಕಿದ್ರೂ ಪ್ರತಿಲೀಟರಿಗೆ 21 ಕಿ.ಮೀ. ಮೈಲೇಜ್ ಸಿಕ್ಕಿದೆ" ಎನ್ನುತ್ತಾರೆ.
ಇವರ ಪ್ರಕಾರ ಹೆದ್ದಾರಿಯಲ್ಲಿ ನ್ಯಾನೊ ಕಾರು ಪ್ರತಿಲೀಟರಿಗೆ 20 ಕಿ.ಮೀ.ಗಿಂತ ಹೆಚ್ಚು ಮೈಲೇಜ್ ನೀಡುತ್ತದೆ. ಸಿಟಿಯಲ್ಲಿ 18 ಕಿ.ಮೀ. ಆಸುಪಾಸಿನಲ್ಲಿ ಮೈಲೇಜ್ ನೀಡುತ್ತದೆ. ಹಾಗಾದರೆ ಮೊದಲ ಬಾರಿಗೆ ಡೀಸೆಲ್ ಕಾರು ಖರೀದಿಸುವುದಕ್ಕಿಂತ ನ್ಯಾನೊ ಕಾರು ಖರೀದಿಸುವುದು ಸೂಕ್ತ. ಪೆಟ್ರೋಲ್ ದರ ದುಬಾರಿಯಾಗಿದೆ ನಿಜ. ಆದರೆ ಡೀಸೆಲ್ ಕಾರಿಗೆ ಒಂದು ಲಕ್ಷ ರುಪಾಯಿ ಜಾಸ್ತಿ ನೀಡುವುದಕ್ಕಿಂತ ಈ ಅಗ್ಗದ ಕಾರು ಒಳ್ಳೆಯದಲ್ಲವೇ?
ನ್ಯಾನೊ ಕಾರನ್ನು ಸಿಟಿ ಬಿಟ್ಟು ಹೊರಕ್ಕೆ ಕೊಂಡೊಯ್ಯಲು ಭಯಪಡುವರಿಗೆ ರವಿಕುಮಾರ್ ಅನುಭವ ಸ್ಪೂರ್ತಿ ನೀಡಬಹುದು. ನ್ಯಾನೊ ಕಾರಿನ ಕುರಿತು ನಿಮ್ಮ ಅನಿಸಿಕೆಯನ್ನು ಕೆಳಗಿನ ಕಾಮೆಂಟ್ ಬಾಕ್ಸಿನಲ್ಲಿ ಬರೆಯಿರಿ.


Click it and Unblock the Notifications









