ಫಸ್ಟ್ ಡ್ರೈವ್ ರಿವ್ಯೂ: ಎಂಪಿವಿ ಕಾರುಗಳಿಗೆ ಪೈಪೋಟಿ ನೀಡಲು ಸಜ್ಜಾದ ಕಿಯಾ ಕಾರೆನ್ಸ್ ವಿಶೇಷತೆಗಳೇನು?
ಭಾರತೀಯ ಆಟೋ ಉದ್ಯಮವು ಕಳೆದ ಒಂದು ದಶಕದ ಅವಧಿಯಲ್ಲಿ ಸಾಕಷ್ಟು ಹೊಸ ಬದಲಾವಣೆ ಕಾರಣವಾಗಿದ್ದು, ಗ್ರಾಹಕರ ಬೇಡಿಕೆಗಳಿಗೆ ತಕ್ಕಂತೆ ವಾಹನ ಉದ್ಯಮದಲ್ಲಿ ಹಲವಾರು ಮಾರ್ಪಾಡುಗಳಾಗಿವೆ. ಜೊತೆಗೆ ಗ್ರಾಹಕರ ಅಭಿರುಚಿಗಳಿಗೆ ತಕ್ಕಂತೆ ಆಟೋ ಉದ್ಯಮವು ಸಾಕಷ್ಟು ಬೆಳವಣಿಗೆ ಸಾಧಿಸುತ್ತಿದ್ದು, ಇದೇ ಕಾರಣಕ್ಕೆ ಕಾರು ಮಾರಾಟವು ಇಂದು ಹಲವಾರು ಹೊಸತನಗಳಿಗೆ ಸಾಕ್ಷಿಯಾಗಿದೆ.

ಪ್ರಯಾಣಿಕ ಕಾರು ಮಾರಾಟದಲ್ಲಿ ಕೆಳ ವರ್ಷಗಳ ಹಿಂದೆ ಪ್ರಮುಖ ಎರಡರಿಂದ ಮೂರು ಸೆಗ್ಮೆಂಟ್ ಹೊರತುಪಡಿಸಿ ಇನ್ನುಳಿದ ಯಾವುದೇ ಮಾದರಿಯ ಕಾರುಗಳ ಖರೀದಿಗೆ ಅವಕಾಶವಿರಲಿಲ್ಲ. ಆದರೆ ಗ್ರಾಹಕರ ಬೇಡಿಕೆಯಲ್ಲಿ ಆದ ಬದಲಾವಣೆಗಳು ಇಂದು ಹಲವಾರು ಹೊಸ ಕಾರು ಮಾದರಿಗಳ ನಿರ್ಮಾಣಕ್ಕೆ ಪ್ರಮುಖ ಕಾರಣವಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಕಂಪನಿಗಳು ಕಳೆದ ದಿನಗಳಲ್ಲಿ ವಿವಿಧ ಸೆಗ್ಮೆಂಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ.

ಹೊಸ ಮಾದರಿಯ ಸೆಗ್ಮೆಂಟ್ ಪರಿಚಯಿಸುವಲ್ಲಿ ಯಶಸ್ವಿಯಾಗುತ್ತಿರುವ ದಕ್ಷಿಣ ಕೊರಿಯಾದ ಕಿಯಾ ಕಂಪನಿಯು ಸಹ ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಕಂಪನಿಯು ಇದೀಗ ಮತ್ತೊಂದು ಹೊಸ ಕಾರು ಮಾದರಿಯನ್ನು ಪರಿಚಯಿಸಲು ಸಿದ್ದವಾಗಿದೆ. ಎಸ್‌ಯುವಿ ಮತ್ತು ಎಂಪಿವಿ ನಡುವಿನ ಸ್ಥಾನದಲ್ಲಿ ತನ್ನ ಹೊಸ ಕಾರೆನ್ಸ್ ಎಸ್‌ಯುವಿ ಕಾರು ಮಾದರಿಯನ್ನು ಪರಿಚಯಿಸುತ್ತಿದ್ದು, ಹೊಸ ಕಾರು ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಭಾರತದಲ್ಲಿ ಕಿಯಾ ಕಂಪನಿಯು ಮೊದಲ ಬಾರಿಗೆ 2019ರಲ್ಲಿ ಸೆಲ್ಟೊಸ್ ಬಿಡುಗಡೆಯ ನಂತರ ಕಾರು ಮಾರಾಟದಲ್ಲಿ ಹಲವಾರು ಹೊಸ ದಾಖಲೆಗಳನ್ನು ನಿರ್ಮಿಸಿದ್ದು, ಸೆಲ್ಟೊಸ್ ನಂತರ ಕಾರ್ನಿವಾಲ್, ಸೊನೆಟ್ ಮಾದರಿಗಳನ್ನು ಬಿಡುಗಡೆಗೊಳಿಸಿ ಗ್ರಾಹಕರ ಆಯ್ಕೆಯಲ್ಲಿ ಯಶಸ್ವಿಯಾಗಿದೆ. ಇದೀಗ ತನ್ನ ನಾಲ್ಕನೇ ಕಾರು ಮಾದರಿಯಾಗಿ ಕಾರೆನ್ಸ್ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಕಾರಿನ ಕಾರ್ಯಕ್ಷಮತೆ ಕುರಿತಂತೆ ಪರೀಕ್ಷಿಸಲು ಕಿಯಾ ಕಂಪನಿಯು ಡ್ರೈವ್‌ಸ್ಪಾರ್ಕ್ ತಂಡವನ್ನು ಸಹ ಆಹ್ವಾನಿಸಿತ್ತು.

ಮೊದಲ ಚಾಲನಾ ಅನುಭವದಲ್ಲಿ ನಮ್ಮ ಪ್ರಕಾರ ಹೊಸ ಕಾರು ಹಲವಾರು ಪ್ರಯೋಗಾತ್ಮಕ ವಿಧಾನಗಳನ್ನು ಆಧರಿಸಿ ನಿರ್ಮಾಣವಾಗಿರುವುದು ಸಾಬೀತಾಗಿದ್ದು, ಹೊಸ ಕಾರು ಪ್ರತಿಸ್ಪರ್ಧಿಗಳಿಂತಲೂ ಭಿನ್ನವಾಗಿದೆ. ಹಾಗಾದರೆ ಹೊಸ ಕಾರಿನಲ್ಲಿ ಏನೆಲ್ಲಾ ಹೊಸತನವಿದೆ ಮತ್ತು ಇನ್ನು ಏನೆಲ್ಲಾ ಬದಲಾವಣೆಗಳನ್ನು ಪಡೆದುಕೊಳ್ಳಬಹುದಿತ್ತು ಎನ್ನುವುದನ್ನು ಈ ವಿಮರ್ಶೆ ಲೇಖನದಲ್ಲಿ ವಿಸ್ತೃತವಾದ ಮಾಹಿತಿಯನ್ನು ತಿಳಿಯೋಣ.

ವಿನ್ಯಾಸ ಮತ್ತು ಶೈಲಿ
ಕಿಯಾ ಕಾರೆನ್ಸ್ ಕಾರು ಮಾದರಿಯನ್ನು ಯಾವುದೇ ಕೋನದಿಂದಲೂ ನೋಡಿದರೂ ಸಹ ಉತ್ತಮ ವಿನ್ಯಾಸದೊಂದಿಗೆ ಇದು ಸಾಕಷ್ಟು ವಿಶಿಷ್ಟ್ಯವಾದ ಗುಣಲಕ್ಷಣಗಳನ್ನು ಹೊಂದಿದೆ. ಬ್ರಷ್ಡ್ ಅಲ್ಯೂಮಿನಿಯಂನೊಂದಿಗೆ ನೀಡಲಾದ ಸೂಪರ್ ಸ್ಟೈಲಿಶ್ ಹೊಸ 'KIA' ಲೋಗೋ ಕಾರಿನ ಪ್ರಮುಖ ಆಕರ್ಷಣೆಯಾಗಿದ್ದು, ತದನಂತರ ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಹೆಡ್‌ಲ್ಯಾಂಪ್ ಸೆಟಪ್ ಸಹ ಗಮನ ಸೆಳೆಯುತ್ತವೆ.

ಹೊಸ ಕಾರಿನ ಎಲ್ಇಡಿ ಡಿಆರ್‌ಎಲ್‌ಗಳನ್ನು ನಕ್ಷತ್ರಗಳ ಸಮೂಹದ ಸ್ಪೂರ್ತಿಯಿಂದ ತೆಗೆದುಕೊಂಡಿರುವುದಾಗಿ ಕಂಪನಿಯೇ ಹೇಳಿಕೊಂಡಿದ್ದು, ಪರಿಣಾಮವಾಗಿ ಹೊಸ ಕಾರಿನ ಡಿಆರ್‌ಎಲ್ ಆಕಾರವು ಟರ್ನ್ ಸಿಗ್ನಲ್ ಸೂಚಕಗಳಂತೆ ದ್ವಿಗುಣಗೊಳ್ಳುತ್ತವೆ.

ಡಿಆರ್‌ಎಲ್‌ಗಳ ಕೆಳಗೆ ಮೂರು-ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‌ಲ್ಯಾಂಪ್ ಘಟಕಗಳಿದ್ದು, ಇದರಲ್ಲಿ ಸಂಪೂರ್ಣವಾಗಿ ಬ್ಲ್ಯಾಕ್-ಔಟ್ ಎಕ್ಸ್-ಆಕಾರದ ಅಂಶವು ಒಂದು ಭಾಗವಾಗಿದೆ. ಅದು ಫಾಕ್ಸ್ ಗ್ರಿಲ್ ಅನ್ನು ಸಹ ಒಳಗೊಂಡಿದ್ದು, ಈ ಗ್ರಿಲ್ ನರ್ಲ್ಡ್ ಮಾದರಿಯನ್ನು ಹೊಂದಿದೆ. ಹಾಗೆಯೇ ಕಾರಿನ ಅಗಲವನ್ನು ಆಕ್ರಮಿಸಿದ್ದು, ಇದರ ಕೆಳಗೆ ಕಿಯಾ ಕಂಪನಿಯ ಸಿಗ್ನೆಚರ್ ಟೈಗರ್-ನೋಸ್ ಗ್ರಿಲ್ ಹನಿಕೊಂಬ್ ಮಾದರಿಯೊಂದಿಗೆ ಅದರ ಹಿಂದೆ ಸೇರಿಸಲಾಗಿರುವ ರೇಡಿಯೇಟರ್‌ಗಳು ಏರ್ ಇನ್‌ಟಕ್‌ಗೆ ಅನುಮತಿಸುತ್ತದೆ.

ಹೊಸ ಕಾರಿನ ಟೈಗರ್-ನೋಸ್ ಗ್ರಿಲ್‌ನಲ್ಲಿ ಕಿಯಾ ಸಿಗ್ನೇಚರ್ ಐಸ್ ಕ್ಯೂಬ್ ಫಾಗ್ ಲ್ಯಾಂಪ್ ಸೆಟಪ್ ಹೊಂದಿದ್ದು, ಇದು ಬಾನೆಟ್ ಸ್ವಲ್ಪಮಟ್ಟಿಗೆ ಏರಿದಂತೆ ಮತ್ತು ಹೆಡ್‌ಲ್ಯಾಂಪ್ ಘಟಕವು ಸ್ವೆಪ್‌ಬ್ಯಾಕ್ ಆಗಿರುವಂತೆ ಕಾಣುತ್ತದೆ. ಇದು ಸೈಡ್ ಪ್ರೊಫೈಲ್‌ನಲ್ಲಿಯೂ ಸಹ ಸ್ಪಷ್ಟವಾಗಿ ಗೋಚರಿಸಲಿದ್ದು, ಸ್ಪಷ್ಟವಾದ ಬಾಡಿ ಲೈನ್‌ಗಳು ಕಾರಿನ ವಿನ್ಯಾಸಕ್ಕೆ ಸಹಕಾರಿಯಾಗಿವೆ.

ಕಿಯಾ ಕಾರೆನ್ಸ್ ಉದ್ದಳತೆ ಪ್ರಮಾಣವನ್ನು ಸೈಡ್ ಪ್ರೊಫೈಲ್‌ನಿಂದ ನೋಡಿದಾಗ ಸ್ಪಷ್ಟವಾಗುತ್ತದೆ. ಎ, ಬಿ ಮತ್ತು ಸಿ ಪಿಲ್ಲರ್‌ಗಳು ಕಪ್ಪು ಬಣ್ಣದಲ್ಲಿದ್ದು, ಡಿ-ಪಿಲ್ಲರ್ ಅನ್ನು ದೇಹದ ಬಣ್ಣದಲ್ಲಿ ಕೊನೆಗೊಳಿಸಲಾಗಿದೆ. ಬ್ರಷ್ಡ್ ಅಲ್ಯೂಮಿನಿಯಂ ಸ್ಟ್ರಿಪ್ ಇದ್ದು, ಅದು ಡಿ-ಪಿಲ್ಲರ್‌ನಿಂದ ಪ್ರಾರಂಭವಾಗುತ್ತದೆ ಮತ್ತು ವಿಂಡೋ ಸಿಲ್‌ಗಳನ್ನು ರೂಪಿಸಲು ಸಹಕಾರಿಯಾಗಿದ್ದು, ಡೋರ್ ಹ್ಯಾಂಡಲ್‌ಗಳು ಉತ್ತಮವಾದ ಮತ್ತು ಸ್ಪಷ್ಟವಾದ ಕ್ರೊಮ್‌ನಲ್ಲಿ ಮುಕ್ತಾಯಗೊಂಡಿವೆ.

ಕಾರೆನ್ಸ್ ಕಾರಿನಲ್ಲಿ ಕಿಯಾ ಕಂಪನಿಯು 16-ಇಂಚಿನ ಮಿಶ್ರಲೋಹದ ಚಕ್ರಗಳನ್ನು ಜೋಡಣೆ ಮಾಡಿದ್ದು, ಇವು ಬಹುತೇಕ ಟರ್ಬೈನ್ ತರಹದ ವಿನ್ಯಾಸವನ್ನು ಹೊಂದಿವೆ ಮತ್ತು ಡ್ಯುಯಲ್-ಟೋನ್ ಫಿನಿಶ್ ಅನ್ನು ಪಡೆಯುತ್ತವೆ. ವಾಹನದ ಸುತ್ತಲೂ ರನ್ನಿಂಗ್ ಮ್ಯಾಟ್-ಕಪ್ಪು ಹೊದಿಕೆಯ ವ್ಹೀಲ್ ಆರ್ಚ್ ಕಾಣಬಹುದಾಗಿದ್ದು, ಇದು ಸೈಡ್ ಕ್ಲಾಡಿಂಗ್‌ನಲ್ಲಿ ಸಿಲ್ವರ್ ಸ್ಟ್ರಿಪ್‌ನೊಂದಿಗೆ ಬರುತ್ತದೆ.

ಕಾರೆನ್ಸ್ ಕಾರು ಹಿಂಬದಿಯಿಂದ ಎಸ್‌ಯುವಿ ಗತ್ತು ಹೊಂದಿರುವ ಸ್ಪಷ್ಟವಾಗಿದ್ದು, ಇದರಲ್ಲಿ ನಿಮ್ಮ ಗಮನವನ್ನು ಸೆಳೆಯುವ ದೊಡ್ಡ ಅಂಶವೆಂದರೆ ಅದು ಟೈಲ್ ಲ್ಯಾಂಪ್. ಇದು ವಿಭಜಿತ ಎಲ್ಇಡಿ ಟೈಲ್ ಲ್ಯಾಂಪ್ ಆಗಿದ್ದು, ನಕ್ಷತ್ರ ಪುಂಜದ ವಿನ್ಯಾಸ ಸ್ಫೂರ್ತಿಯನ್ನು ತೆಗೆದುಕೊಳ್ಳುತ್ತದೆ. ಹೊಸ ಕಾರಿನ ಎರಡೂ ತುದಿಗಳಲ್ಲೂ ಟೈಲ್ ಲ್ಯಾಂಪ್‌ಗಳ ಮಧ್ಯದಲ್ಲಿ ಫಾಕ್ಸ್ ಟೈಲ್ ಲ್ಯಾಂಪ್‌ನಿಂದ ಸಂಪರ್ಕ ಹೊಂದಿದ್ದು, ಟೈಲ್‌ಗೇಟ್ ಗಾತ್ರದಲ್ಲಿ ದೊಡ್ಡದಾಗಿದೆ ಮತ್ತು ಸ್ಟೈಲಿಶ್ ಕಿಯಾ ಲೋಗೋ ಮತ್ತೊಮ್ಮೆ ಗಮನಸೆಳೆಯುತ್ತದೆ.

ಇನ್ನು ಕೆಳಭಾಗದಲ್ಲಿ ಕ್ರೋಮ್ ಸ್ಟ್ರಿಪ್‌ನೊಂದಿಗೆ ಆಕರ್ಷಕ ಬಂಪರ್ ಇದ್ದು, ಅದು ನರ್ಲ್ಡ್ ಮಾದರಿಯನ್ನು ಹೊಂದಿದೆ. ಈ ಕ್ರೋಮ್ ಸ್ಟ್ರಿಪ್ ಸ್ವಲ್ಪ ಹೊರಗೆ ಹೊದಂತೆ ಭಾಸವಾಗಲಿದ್ದು, ಮೇಲ್ಭಾಗದಲ್ಲಿ ಸ್ಟಾಪ್ ಲ್ಯಾಂಪ್‌ನೊಂದಿಗೆ ಸ್ಪಾಯ್ಲರ್ ಅನ್ನು ಸಂಯೋಜಿಸಲಾಗಿದೆ.

ಮೇಲೆ ತಿಳಿಸಿದಂತೆ, ಕಿಯಾ ಕಾರೆನ್ಸ್ ಅನೇಕ ಹೊಸ ವಿನ್ಯಾಸದ ಅಂಶಗಳಿಂದ ಕೂಡಿದ್ದು, ಇದು ಕೆಲವು ಕೋನಗಳಲ್ಲಿ ಉತ್ತಮವಾಗಿ ಕಂಡುಬಂದರೂ ಇನ್ನು ಕೆಲವು ಕಡೆಗಳಲ್ಲಿ ಗೊಂದಲಮಯವಾಗಿ ಕಾಣಬಹುದು. ಅದರಲ್ಲೂ ಸೈಡ್ ಪ್ರೊಫೈಲ್ ತುಂಬಾ ಗೊಂದಲಮಯವಾಗಿ ಕಾಣುತ್ತದೆ. ಏಕೆಂದರೆ ಅದು ವಿವಿಧ ವಿನ್ಯಾಸಗಳು ಚೆನ್ನಾಗಿ ಮಿಶ್ರಣಗೊಳ್ಳದ ಹಲವಾರು ವಿನ್ಯಾಸ ಅಂಶಗಳಿಂದ ಕೂಡಿದೆ. ಆದಾಗ್ಯೂ ಹೊಸ ಕಾರು ಪ್ರಸ್ತುತ ಸೆಗ್ಮೆಂಟ್‌ನಲ್ಲಿ ಉತ್ತಮವಾಗಿದೆ ಎನ್ನಬಹುದು.

ಕಾಕ್‌ಪಿಟ್ ಮತ್ತು ಇಂಟಿರಿಯರ್
ಹೊಸ ಕಾರೆನ್ಸ್ ಕಾರಿನಲ್ಲಿರುವ ಆಕರ್ಷಕ ಕ್ರೋಮ್ ಡೋರ್ ಹ್ಯಾಂಡಲ್‌ಗಳನ್ನು ಟಗ್ ಮಾಡಿದಾದ ನಿಮಗೆ ವಿಶಾಲವಾದ ಮತ್ತು ಉತ್ತಮವಾದ ಆಸನ ಸೌಲಭ್ಯ ಹೊಂದಿರುವ ಕ್ಯಾಬಿನ್ ನಿಮ್ಮನ್ನು ಸ್ವಾಗತಿಸುತ್ತದೆ. ಮೊದಲ ನೋಟದಲ್ಲಿಯೇ ಕಾರೆನ್ಸ್ ಕಾರಿನಲ್ಲಿ ಸಾಕಷ್ಟು ತಂತ್ರಜ್ಞಾನ ಸೌಲಭ್ಯಗಳನ್ನು ಪಡೆದುಕೊಂಡಿರುವುದು ಸ್ಪಷ್ಟವಾಗುತ್ತದೆ.

ನಾವು ಹೊಸ ಕಾರಿನ ಟಾಪ್-ಸ್ಪೆಕ್ ಚಾಲನೆ ಮಾಡಿದ್ದರಿಂದ ಇತರೆ ಮಾದರಿಗಳಿಂತಲೂ ಹೆಚ್ಚಿನ ತಂತ್ರಜ್ಞಾನ ಸೌಲಭ್ಯಗಳನ್ನು ಹೊಂದಿತ್ತು. ಇದು ವಿಶಿಷ್ಟವಾದ ಡ್ಯುಯಲ್-ಟೋನ್ ಇಂಟೀರಿಯರ್ ಪಡೆದುಕೊಂಡಿದ್ದು, ಇದು ನೇವಿ ಬ್ಲೂ ಮತ್ತು ಬೀಜ್ ಅನ್ನು ಸಂಯೋಜಿಸುವ ಮೂಲಕ ಕ್ಲಾಸಿ ಆಗಿ ಹೊರಹೊಮ್ಮಿದೆ ಎನ್ನಬಹುದು.

ಕಿಯಾ ಕಾರೆನ್ಸ್ ಒಳಭಾಗಗವು ಮೊದಲ ನೋಟದಲ್ಲಿಯೇ ಗಮನಸೆಳೆಯಲಿದ್ದು, ಇದರಲ್ಲಿನ ಡ್ಯಾಶ್‌ಬೋರ್ಡ್‌ನ ಮೇಲ್ಭಾಗವನ್ನು ನೆವಿ ಬಣ್ಣದಲ್ಲಿ ಅಲಂಕರಿಸಲಾಗಿದೆ ಮತ್ತು ಕೆಳಭಾಗವನ್ನು ಬೀಜ್ ಬಣ್ಣದಲ್ಲಿ ವಿನ್ಯಾಸಗೊಳಿಸಲಾಗಿದೆ. ಹಾಗೆಯೇ ಪಿಯಾನೋ ಬ್ಲ್ಯಾಕ್ ಫಿನಿಶ್ ಅನ್ನು ಅದರ ಮೇಲೆ ವಿಶಿಷ್ಟವಾದ ಆಧಾರವಾಗಿರುವ ಮಾದರಿಯನ್ನು ಪಡೆಯಬಹುದಾಗಿದ್ದು, ಇದು ಕೂಡಾ ನಕ್ಷತ್ರಪುಂಜದ ಸ್ಫೂರ್ತಿಯೊಂದಿಗೆ ವಿನ್ಯಾಸಗೊಂಡಿದೆ

ಹೊಸ ಕಾರಿನ ಡ್ಯಾಶ್‌ಬೋರ್ಡ್ ಮಧ್ಯದಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಇರಿಸಲಾಗಿದ್ದು, ಇದು ಪ್ರತಿ ಡ್ರೈವ್ ಅನ್ನು ಸಾಕಷ್ಟು ಆಸಕ್ತಿದಾಯಕವಾಗಿಸುತ್ತದೆ. ಇದು ಆ್ಯಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯಿಡ್ ಆಟೋ ಸರ್ಪೊಟ್ ಹೊಂದಿದ್ದರೂ ಈ ಎರಡು ವೈಶಿಷ್ಟ್ಯಗಳಿಗಾಗಿ ಇದು ವೈರ್‌ಲೆಸ್ ಸಂಪರ್ಕವನ್ನು ನೀಡಲಾಗಿಲ್ಲ. ಅದರ ಬದಲಾಗಿ ಬ್ಲೂಟೂತ್ ಸಂಪರ್ಕವನ್ನು ನೀಡಲಾಗಿದ್ದು, ಸಿಸ್ಟಂನೊಂದಿಗೆ ನಿಮ್ಮ ಫೋನ್ ಅನ್ನು ಜೋಡಿಸುವುದು ಸುಲಭವಾಗಿದೆ.

ಹೊಸ ಕಾರಿನಲ್ಲಿ ಬಾಷ್ ನಿರ್ಮಾಣದ 8-ಸ್ಪೀಕರ್ ಸಿಸ್ಟಂ ಮತ್ತು ಧ್ವನಿ ಸೌಲಭ್ಯ ಉತ್ತಮವಾಗಿದ್ದು, ಸೆಲ್ಟೋಸ್ ಸಹ ಬೋಸ್ ಆಡಿಯೊ ಸಿಸ್ಟಮ್‌ನೊಂದಿಗೆ ಬರುತ್ತದೆ. ಆದಾಗ್ಯೂ, ಧ್ವನಿ ಗುಣಮಟ್ಟದ ಬಗೆಗೆ ಹೇಳುವುದಾದರೆ ಇನ್ನು ತುಸು ಸುಧಾರಣೆಗೊಂಡಿದ್ದರೆ ಅತ್ಯುತ್ತಮವಾಗಿರುತ್ತಿತ್ತು ಎನ್ನಬಹುದು.

ಹಾಗೆಯೇ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಫೋನ್ ಕರೆಗಳನ್ನು ಮಾಡಲು, ಟೆಕ್ಸ್ಟ್ ಸಂದೇಶಗಳನ್ನು ಓದಲು, 64-ಬಣ್ಣದ ಆಂಬಿಯೆಂಟ್ ಲೈಟಿಂಗ್ ಮತ್ತು ಇತರ ವಿವಿಧ ವಾಹನ ಕಾರ್ಯಗಳನ್ನು ನಿಯಂತ್ರಿಸಲು ಸಹ ಬಳಸಬಹುದಾಗಿದ್ದು, ಗ್ರಾಹಕರು ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ ಕಿಯಾ ಕನೆಕ್ಟೆಡ್ ವೈಶಿಷ್ಟ್ಯತೆಯನ್ನು ಪಡೆಯಲಿದ್ದಾರೆ. ಕಿಯಾ ಕೆನೆಕ್ಟೆಡ್ ಮೂಲಕ ವಾಹನವನ್ನು ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ ಮೇಲ್ವಿಚಾರಣೆ ಮಾಡಬಹುದಾಗಿದೆ.

ಇನ್ನುಳಿದಂತೆ ಕಾರಿನ ಕ್ಯಾಬಿನ್‌ನಲ್ಲಿ ಇನ್ಫೋಟೈನ್‌ಮೆಂಟ್ ಸಿಸ್ಟಂನ ಕೆಳಗಿನ ಡ್ಯಾಶ್‌ಬೋರ್ಡ್ ಉದ್ದಕ್ಕೂ ಚಲಿಸುವ ವಿಶಿಷ್ಟ ರೇಖೆಯನ್ನು ಬ್ರಷ್ ಮಾಡಿದ ಅಲ್ಯೂಮಿನಿಯಂನಲ್ಲಿ ಪೂರ್ಣಗೊಳಿಸಲಾಗಿದ್ದು, ಇದು AC ವೆಂಟ್‌ಗಳನ್ನು ಸಹ ಮರೆಮಾಡುವ ಮೂಲಕ ಉತ್ತಮ ಫಿನಿಷಿಂಗ್ ನೀಡುತ್ತದೆ.

ಒಟ್ಟಾರೆಯಾಗಿ ಡ್ಯಾಶ್‌ಬೋರ್ಡ್ ಮತ್ತು ಸೆಂಟರ್ ಕನ್ಸೋಲ್‌ನಲ್ಲಿರುವ ಎಲ್ಲಾ ಅಂಶಗಳು ಎಷ್ಟು ಅಚ್ಚುಕಟ್ಟಾಗಿ ಮತ್ತು ಸಲೀಸಾಗಿ ವಿಲೀನಗೊಂಡಿರುವುದು ಅದ್ಭುತವಾದ ಒಳಾಂಗಣ ವಿನ್ಯಾಸವನ್ನು ಪ್ರದರ್ಶಿಸುತ್ತದೆ. ಸೆಂಟರ್ ಕನ್ಸೋಲ್ ಪ್ರಾಯೋಗಿಕ ಮತ್ತು ತುಂಬಾ ಉಪಯುಕ್ತವಾಗಿದ್ದು, ಡ್ರೈವ್ ಮೋಡ್‌ಗಳನ್ನು ಬದಲಾಯಿಸಲು, ಹಿಲ್ ಡಿಸೆಂಟ್ ಕಂಟ್ರೋಲ್ ಅನ್ನು ಆನ್/ಆಫ್ ಮಾಡಲು ಮತ್ತು ಮುಂಭಾಗದ ಸೀಟ್‌ಗಳಿಗೆ ವೆಂಟಿಲೆಷನ್‌ಗಾಗಿ ಮುಂಭಾಗದಲ್ಲಿ ಕೆಲವು ಬಟನ್‌ಗಳನ್ನು ನೀಡಲಾಗಿದೆ.

ಮುಂಭಾಗದಲ್ಲಿ ಕಾಣುವ ಪ್ರಮುಖ ಬಟನ್‌ಗಳ ನಡುವೆ ಮತ್ತು ಗೇರ್ ಲಿವರ್ ಮತ್ತು ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಪ್ಯಾಡ್ ಅನ್ನು ಇರಿಸಲಾಗಿದ್ದು, ಬಿಡುವಿನ ಸ್ಥಳದ ಮೇಲ್ಭಾಗದಲ್ಲಿ ಇನ್ಫೋಟೈನ್‌ಮೆಂಟ್‌ಗಾಗಿ ಯುಎಸ್‌ಬಿ ಪೋರ್ಟ್, 12ವೊಲ್ಟ್ ಸಾಕೆಟ್ ಮತ್ತು ಯುಎಸ್‌ಬಿ ಟೈಪ್-C ಚಾರ್ಜಿಂಗ್ ಪೋರ್ಟ್, ಬ್ರಷ್ಡ್ ಅಲ್ಯೂಮಿನಿಯಂ ಹೊಂದಿರುವ ಆಕರ್ಷಕವಾದ ಗೇರ್ ಲಿವರ್ ಪ್ರೀಮಿಯಂ ಸ್ಪರ್ಶ ನೀಡುವುದರ ಜೊತೆಗೆ ಕಾರು ಚಾಲನೆಗೆ ಐಷಾರಾಮಿ ಅನುಭವವನ್ನು ನೀಡುತ್ತವೆ.

ಗೇರ್ ಲಿವರ್‌ನ ಹಿಂಭಾಗದಲ್ಲಿ ಕೂಲಿಂಗ್ ಒಳಗೊಂಡಿರುವ ಕಪ್‌ಹೋಲ್ಡರ್ ಸಹ ಇದ್ದು, ಇದು ಪಾನೀಯ/ನೀರಿನ ಬಾಟಲಿಯನ್ನು ಕಪ್‌ಹೋಲ್ಡರ್‌ನಲ್ಲಿ ಯಾವಾಗಲೂ ತಂಪಾಗಿ ಇಡಬಹುದು. ಕಪ್‌ಹೋಲ್ಡರ್‌ನ ಹಿಂದೆ ಚಾಲಕ ಮತ್ತು ಸಹ-ಚಾಲಕನಿಗೆ ಆರ್ಮ್‌ರೆಸ್ಟ್ ಸಹ ಇದ್ದು, ಆರ್ಮ್‌ರೆಸ್ಟ್ ಅನ್ನು ಮೇಲಕ್ಕೆತ್ತಿ ನಿಮ್ಮ ವ್ಯಾಲೆಟ್‌ಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ತೆಗೆಯಬಹುದಾದ ಟ್ರೇ ಅನ್ನು ಸಹ ಬಳಸಿಕೊಳ್ಳಬಹುದಾಗಿದೆ.

ಕಾಕ್‌ಪಿಟ್ ಒಳಗೆ ಹೋಗುವಾಗ ಕಿಯಾ ಕಾರೆನ್ಸ್ ಸ್ಟೀರಿಂಗ್ ಚಕ್ರವು ಮೇಲಿನ ಒಂದೆರಡು ವಿಭಾಗಗಳಲ್ಲಿಯೂ ಸಹ ಅತ್ಯಂತ ಪ್ರೀಮಿಯಂ ಘಟಕಗಳನ್ನು ನೋಡಬಹುದಾಗಿದ್ದು, ಲೆದರ್‌ನಿಂದ ವ್ಯಾರ್ಪ್ ಮಾಡಲಾದ ವಿಶಿಷ್ಟವಾದ ಫ್ಲಾಟ್-ಬಾಟಮ್ ಸ್ಟೀರಿಂಗ್ ಚಕ್ರವು ಇನ್ಫೋಟೈನ್‌ಮೆಂಟ್, ಕ್ರೂಸ್ ಕಂಟ್ರೋಲ್, ವಾಯ್ಸ್ ಕಮಾಂಡ್‌ಗಳು ಇತ್ಯಾದಿಗಳಿಗೆ ಸಂಯೋಜಿತ ನಿಯಂತ್ರಣಗಳನ್ನು ಸಹ ಒಳಗೊಂಡಿದೆ.

ಸ್ಟೀರಿಂಗ್ ಚಕ್ರದ ಹಿಂದೆ ಕಾಣುವ ಅತ್ಯಂತ ವಿಸ್ತಾರವಾದ ಎಂಡಿಐ ಸಾಧನ ಪ್ರದರ್ಶನವು ಪ್ರಮುಖವಾಗಿದ್ದು, ಮಧ್ಯದಲ್ಲಿ ಸಣ್ಣದಾದ 4.2-ಇಂಚಿನ ಎಂಐಡಿ ಹೊಂದಿದೆ. ಈ ಎಂಐಡಿಯಲ್ಲಿ ಸರಾಸರಿ ಇಂಧನ ದಕ್ಷತೆ, ಡ್ರೈವಿಂಗ್ ಮೋಡ್‌ಗಳು ಮತ್ತು ನ್ಯಾವಿಗೇಶನ್ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಇದೆಲ್ಲದರ ಜೊತೆಗೆ ಕಾಕ್‌ಪಿಟ್ ಅನುಭವವನ್ನು ಪೂರ್ಣಗೊಳಿಸುವುದು ಮತ್ತೊಂದು ಪ್ರಮುಖ ಫೀಚರ್ಸ್ ಅಂದರೆ ಅದು ಪ್ರೀಮಿಯಂ ಫಿಲ್ ಹೊಂದಿರುವ ಸಾಫ್ಟ್ ಟಚ್ ಡೋರ್ ಪ್ಯಾನೆಲ್‌ಗಳು, ಆರ್ಮ್‌ರೆಸ್ಟ್ ಅನ್ನು ಲೆದರ್ ವ್ಯಾರ್ಪ್ ಮೂಲಕ ಪೂರ್ಣಗೊಳಿಸಿರುವುದು ನಂತರ ಬಾಷ್ ಸ್ಪೀಕರ್ ಮತ್ತು ಎರಡು ಬದಿಯಲ್ಲಿ 1-ಲೀಟರ್ ಸಾಮರ್ಥ್ಯದ ಬಾಟಲ್ ಹೋಲ್ಡರ್‌ಗಳು ಆಕರ್ಷಕವಾಗಿವೆ.

ಕಂಫರ್ಟ್ ಮತ್ತು ಕ್ಯಾಬಿನ್
ಕಿಯಾ ಕಾರೆನ್ಸ್ ಮಾದರಿಯು ಮೇಲೆ ಹೇಳಿದಂತೆ ಹಲವಾರು ಪ್ರಯೋಗಾತ್ಮಕ ಅಂಶಗಳಿಂದ ಕೂಡಿದ್ದು, ವೆಂಟಿಲೇಟೆಡ್/ಕೂಲ್ಡ್ ಫ್ರಂಟ್ ಸೀಟ್‌ಗಳನ್ನು ಮೊದಲ ಆಕರ್ಷಣೆ ಎನ್ನಬಹುದು. ಇದು ಆರಾಮದಾಯಕ ಕಾರು ಚಾಲನೆಗೆ ಸಹಕಾರಿಯಾಗಿದ್ದು, ಹೊಸ ಕಾರಿನ ಲಗ್ಷುರಿ ಪ್ಲಸ್ ಟ್ರಿಮ್‌ನಲ್ಲಿನ ಎರಡನೇ ಸಾಲಿನಲ್ಲೂ ಸಹ ಎರಡು ಕ್ಯಾಪ್ಟನ್ ಸೀಟ್‌ಗಳನ್ನು ಹೊಂದಿದೆ.

ಎರಡೂ ಕ್ಯಾಪ್ಟನ್ ಆಸನಗಳು ಆರ್ಮ್‌ರೆಸ್ಟ್‌ಗಳನ್ನು ಸಹ ಒಳಗೊಂಡಿರಲಿದ್ದು, ಈ ಆಸನಗಳನ್ನು ಮುಂದಕ್ಕೆ ಮತ್ತು ಹಿಂದಕ್ಕೆ ಸರಿಹೊಂದಿಸುವ ಮೂಲಕ ಆರಾಮದಾಯಕವಾಗಿ ಒರಗಿಕೊಳ್ಳಬಹುದು. ಕ್ಯಾಪ್ಟನ್ ಆಸನದಲ್ಲಿ ಎರಡು ಬದಿಯಲ್ಲೂ ಟಂಬಲ್ ಫೀಚರ್ಸ್ ನೀಡಲಾಗಿದ್ದು, ಈ ಮೂಲಕ ಮೂರನೇ ಸಾಲಿಗೆ ಪ್ರವೇಶವು ತುಂಬಾ ಸುಲಭವಾಗಿಸುತ್ತದೆ.

ಕಿಯಾ ಕಂಪನಿಯು ಹೊಸ ಕಾರೆನ್ಸ್ ಮಾದರಿಯನ್ನು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಮೂರನೇ ಸಾಲಿನ ಆಸನಗಳೊಂದಿಗೆ 6 ಮತ್ತು 7 ಆಸನಗಳ ಸೌಲಭ್ಯದೊಂದಿಗೆ ಮಾರಾಟ ಮಾಡಲಿದೆ. ಆರು ಆಸನ ಹೊಂದಿರುವ ಮಾದರಿಗಳು 2+2+2 ಮಾದರಿಯಲ್ಲಿ ಆಸನ ಸೌಲಭ್ಯ ಹೊಂದಿದ್ದರೆ ಏಳು ಆಸನ ಮಾದರಿಯು 2+3+2 ಮಾದರಿಯಲ್ಲಿ ಆಸನ ಸೌಲಭ್ಯ ಹೊಂದಿರಲಿದೆ.

ಮೂರನೇ ಸಾಲಿನಲ್ಲಿರುವ ಆಸನಗಳು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಹೆಚ್ಚು ಒಳಾಂಗಣದೊಂದಿಗೆ ವಯಸ್ಕ ಪ್ರಯಾಣಿಕರೂ ಸಹ ಆರಾಮವಾಗಿ ಕುಳಿತುಕೊಳ್ಳಬಹುದಾಗಿದ್ದು,ಮೂರನೇ ಸಾಲಿನ ಆಸನಗಳು ರಿಕ್ಲೈನ್ ಕಾರ್ಯವನ್ನು ಹೊಂದಿದೆ ಮತ್ತು ಹೊಂದಾಣಿಕೆಯ ಹೆಡ್‌ರೆಸ್ಟ್‌ಗಳನ್ನು ಸಹ ಪಡೆಯುತ್ತದೆ.

ಮೂರನೇ ಸಾಲಿನಲ್ಲಿ ಎರಡೂ ಪ್ರಯಾಣಿಕರಿಗೂ ಓವರ್‌ಹೆಡ್ ಎಸಿ ವೆಂಟ್‌ಗಳನ್ನು ಹೊಂದುವ ಹೆಚ್ಚುವರಿ ಅನುಕೂಲವಿದ್ದು, ಟೈಪ್-ಸಿ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಸ್ಲಾಟ್ ಮತ್ತು ಫೋನ್/ಟ್ಯಾಬ್ಲೆಟ್ ಹೋಲ್ಡರ್ ಜೊತೆಗೆ ಕಪ್ ಹೋಲ್ಡರ್ ಅನ್ನು ಸಹ ಪಡೆಯುತ್ತಾರೆ.

ಇದು ಎರಡನೇ ಸಾಲಿನ ಕ್ಯಾಪ್ಟನ್ ಸೀಟ್‌ಗಳಂತೆಯೇ ಆರಾಮದಾಯಕವಾಗಿದ್ದು, ಒಂದು ವೇಳೆ ಕಡಿಮೆ ಪ್ರಯಾಣಿಕರಿದ್ದು ಮೂರನೇ ಸಾಲಿನ ಆಸನಗಳ ಸ್ಥಾನವು ಬೇಕಿದ್ದಲ್ಲಿ ಮಡಚಬಹುದಾಗಿದೆ. ಇದರಿಂದ ದೊಡ್ಡದಾದ ಫ್ಲಾಟ್‌ಬೆಡ್ ಪಡೆಯಬಹುದಾಗಿದ್ದು, ಹೆಚ್ಚಿನ ಲಗೇಜ್ ಇದ್ದಲ್ಲಿ ಇದು ಅನುಕೂಲಕರವಾಗಿರುತ್ತದೆ.

ಆದಾಗ್ಯೂ ಹೊಸ ಕಾರಿನಲ್ಲಿ ಕೆಲವು ಕೊರತೆಗಳು ಪ್ರೀಮಿಯಂ ಫೀಚರ್ಸ್ ಬಯಸುವ ಗ್ರಾಹಕರಿಗೆ ಅಸಮಾಧನ ಉಂಟುಮಾಡಬಹುದಾಗಿದ್ದು, ಮುಂಭಾಗದ ಆಸನಗಳಲ್ಲಿ ವೆಂಟಿಲೆಟೆಡ್ ಸೌಲಭ್ಯ ನೀಡಲಾಗಿದ್ದರೂ ಚಾಲಕನ ವಿಭಾಗದ ಆಸನದಲ್ಲಿ ವಿದ್ಯುತ್ ಮೂಲಕ ಹೊಂದಾಣಿಕೆ ಮಾಡಬಹುದಾದ ವೈಶಿಷ್ಟ್ಯ ನೀಡಲಾಗಿಲ್ಲ. ತದನಂತರ ಹೊಸ ಕಾರಿನಲ್ಲಿ ಓವರ್‌ಹೆಡ್ ಎಸಿ ವೆಂಟ್ಸ್ ನೀಡಿದ್ದು, ವಿಹಂಗಮ ನೋಟಕ್ಕಾಗಿ ದೊಡ್ಡ ಸನ್‌ರೂಫ್ ಬದಲಾಗಿ ಸಿಂಗಲ್ ಪೇನ್ ಸನ್‌ರೂಫ್ ನೀಡಲಾಗಿದೆ.

ಇದರೊಂದಿಗೆ ಕಿಯಾ ಕಾರೆನ್ಸ್ ಕಾರು ಕೆಲವು ಅನನ್ಯ ಆಯ್ಕೆಗಳೊಂದಿಗೆ ಬರಲಿದ್ದು, ಅದು ಖಂಡಿತವಾಗಿಯ ಕಾರು ಚಾಲನೆಯನ್ನು ಹೆಚ್ಚು ಅನುಕೂಲಕರವಾಗಿಸಲಿದೆ. ಅವುಗಳಲ್ಲಿ ಪ್ರಮುಖ ಅಂಶಗಳೆಂದರೆ ಹೊಸ ಕಾರಿನ ಎರಡನೇ ಸಾಲಿನಲ್ಲಿ ಎಡ-ಬದಿಯ ಪ್ರಯಾಣಿಕರಿಗೂ ಫೋಲ್ಡ್-ಅಪ್ ಡೈನಿಂಗ್ ಟ್ರೇ/ಮಿನಿ ವರ್ಕ್ ಡೆಸ್ಕ್ ಮತ್ತು ಅತಿದೊಡ್ಡ ಸ್ಮಾರ್ಟ್ ಏರ್ ಪ್ಯೂರಿಫೈಯರ್‌ಗಳು ಹೊಸ ಕಾರಿನ ಪ್ರಮುಖ ವೈಶಿಷ್ಟ್ಯತೆಗಳಾಗಿವೆ ಎನ್ನಬಹುದು.

ಹೊಸ ಕಾರಿನ ಉದ್ದಳತೆ
ಕಾರೆನ್ಸ್ ಕಾರು ಎಸ್‌ಯುವಿ ಮತ್ತು ಎಂಪಿವಿ ಕಾರುಗಳಿಗೆ ಪೈಪೋಟಿಯಾಗಿ ನಿರ್ಮಣಗೊಂಡಿದ್ದು, ಹೊಸ ಕಾರು 4,540 ಎಂಎಂ ಉದ್ದ, 1,800 ಎಂಎಂ ಅಗಲ, 1,708 ಎತ್ತರ ಮತ್ತು 2,780 ಎಂಎಂ ವ್ಹೀಲ್ ಬೆಸ್ ಹೊಂದಿದೆ.

ಎಂಜಿನ್ ಮತ್ತು ಪರ್ಫಾಮೆನ್ಸ್
ಕಾರೆನ್ಸ್ ಎಸ್‌ಯುವಿ ಕಾರು ಮಾದರಿಯು ವಿವಿಧ ಎಂಜಿನ್ ಆಯ್ಕೆಯೊಂದಿಗೆ ಪ್ರಮುಖ ವೆರಿಯೆಂಟ್‌ಗಳಲ್ಲಿ ಬಿಡುಗಡೆಯಾಗಲಿದ್ದು, ಹೊಸ ಕಾರು ಸೆಲ್ಟೊಸ್ ಎಸ್‌ಯುವಿ ಮಾದರಿಯಲ್ಲಿರುವಂತೆಯೇ 1.5-ಲೀಟರ್ ಸಾಮಾನ್ಯ ಪೆಟ್ರೋಲ್, 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಂಡಿದೆ.

ಹೊಸ ಕಾರನ್ನು ವಿವಿಧ ಎಂಜಿನ್ ಆಯ್ಕೆಯೊಂದಿಗೆ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಯನ್ನು ಆಯ್ಕೆ ಮಾಡಬಹುದಾಗಿದ್ದು, ಕಾರೆನ್ಸ್ ಕಾರಿನ 1.5-ಲೀಟರ್ ಪೆಟ್ರೋಲ್ ಮಾದರಿಯು 113-ಬಿಎಚ್‌ಪಿ, 144-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.4-ಲೀಟರ್ ಟರ್ಬೊ ಪೆಟ್ರೋಲ್ ಮಾದರಿಯು 138-ಬಿಎಚ್‌ಪಿ, 242-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಹಾಗೆಯೇ 1.5-ಲೀಟರ್ ಡೀಸೆಲ್ ಮಾದರಿಯು 113.4-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, 1.4-ಲೀಟರ್ ಟರ್ಬೊ ಮಾದರಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಲಭ್ಯವಿದ್ದರೆ 1.5-ಲೀಟರ್ ಸಾಮಾನ್ಯ ಪೆಟ್ರೋಲ್ ಮಾದರಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಮಾತ್ರ ಖರೀದಿಗೆ ಲಭ್ಯವಿರಲಿದೆ. ಹಾಗೆಯೇ ಡೀಸೆಲ್ ಮಾದರಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಬಹುದು.

ಕಿಯಾ ಕಂಪನಿಯು ಹೊಸ ಕಾರಿನಲ್ಲಿ ಕಾರು ಚಾಲನೆಯನ್ನು ಸುಲಭಗೊಳಿಸಲು ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಡ್ರೈವ್ ಮೋಡ್‌ಗಳನ್ನು ಸಹ ನೀಡಿದ್ದು, ಡ್ರೈವ್ ಮೋಡ್ ಸೌಲಭ್ಯವನ್ನು ಕಾರೆನ್ಸ್ ಕಾರಿನ ಆಟೋಮ್ಯಾಟಿಕ್ ಮಾದರಿಗಳಲ್ಲಿ ಮಾತ್ರ ಪಡೆದುಕೊಳ್ಳಬಹುದಾಗಿದೆ.

ಒಟ್ಟಾರೆಯಾಗಿ ಕಿಯಾ ಕಾರೆನ್ಸ್ ಉತ್ತಮ ಚಾಲನಾ ಅನುಭವವನ್ನು ನೀಡಲಿದ್ದು, ಹೆಚ್ಚಿನ ಪರ್ಫಾಮೆನ್ಸ್ ಬಯಸುವ ಡ್ರೈವಿಂಗ್ ಉತ್ಸಾಹಿಗಳನ್ನು ಮೆಚ್ಚಿಸದಿದ್ದರೂ ವಾಹನದಲ್ಲಿರುವ ಎಲ್ಲಾ ಆರು ಅಥವಾ ಏಳು ಪ್ರಯಾಣಿಕರನ್ನು ಖಂಡಿತವಾಗಿ ಮೆಚ್ಚಿಸುತ್ತದೆ ಎನ್ನಬಹುದು.

ಸುರಕ್ಷಾ ಸೌಲಭ್ಯಗಳು
ಹೊಸ ಕಾರಿನಲ್ಲಿ ಕಿಯಾ ಕಂಪನಿಯು ಬೆಸ್ ವೆರಿಯೆಂಟ್‌ನಲ್ಲೂ ಲಭ್ಯವಾಗುವಂತೆ ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ನೀಡಿದ್ದು, ಇದು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಉನ್ನತ ಮಟ್ಟದೊಂದಿಗೆ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.

ಕಾರೆನ್ಸ್ ಕಾರಿನಲ್ಲಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ವೆಹಿಕಲ್ ಸ್ಟ್ಯಾಬಿಲಿಟಿ ಮ್ಯಾನೆಜ್‌ಮೆಂಜ್ ಸಿಸ್ಟಂ, ಆಲ್-ವ್ಹೀಲ್ ಡಿಸ್ಕ್ ಬ್ರೇಕ್‌ಗಳು, ಬ್ರೇಕ್ ಅಸಿಸ್ಟ್ ಸಿಸ್ಟಂ, ಡೌನ್‌ಹಿಲ್ ಬ್ರೇಕ್ ಕಂಟ್ರೋಲ್, ಹಿಲ್ ಆಸೆಂಟ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಆ್ಯಂಟಿ ಲಾಕ್ ಬ್ರೇಕ್, ರಿಯರ್ ಪಾರ್ಕಿಂಗ್ ಸೆನ್ಸಾರ್, ISOFIX ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್ ಸೌಲಭ್ಯವಿಗಳಿವೆ.

ಹೊಸ ಕಾರೆನ್ಸ್ ಕುರಿತಾಗಿ ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಕಿಯಾ ಕಂಪನಿಯು ಕಾರೆನ್ಸ್ ಮಾದರಿಯನ್ನು ಪ್ರಯೋಗಾತ್ಮಕವಾಗಿ ಅಭಿವೃದ್ದಿಗೊಳಿಸುವಲ್ಲಿ ಯಶಸ್ವಿಯಾಗಿದೆ ಎನ್ನಬಹುದಾಗಿದ್ದು, ಹೊಸ ಕಾರಿನ ಬೆಲೆಗಳು ಕಾರಿನ ಬೇಡಿಕೆಯನ್ನು ನಿರ್ಧರಿಸಲಿವೆ. ಹೊಸ ಕಾರು ಫೆಬ್ರವರಿ ಮಧ್ಯಂತರದಲ್ಲಿ ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಲಿದ್ದು, ಹೊಸ ಕಾರಿನ ಮೂರನೇ ಸಾಲಿನ ಆಸನದಲ್ಲಿರುವ ಉತ್ತಮ ಸ್ಥಳಾವಕಾಶವು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿದೆ.

ಕೆಲವೊಮ್ಮೆ ಮಕ್ಕಳು ಸಹ ಪ್ರಮುಖ ಎಂಪಿವಿ ಮಾದರಿಗಳ ಮೂರನೇ ಸಾಲಿನಲ್ಲಿಯೂ ಇಕ್ಕಟ್ಟಾದ ಭಾವನೆಯನ್ನು ಅನುಭವಿಸುತ್ತಾರೆ. ಆದರೆ ಕಿಯಾ ಕಾರೆನ್ಸ್ ಮಾದರಿಯಲ್ಲಿ ಇದು ಸಾಕಷ್ಟು ಬದಲಾಗಿದ್ದು, ಕಾರಿನ ಹೊಸ ವೈಶಿಷ್ಟ್ಯತೆಗಳು ಮತ್ತು ಹೆಚ್ಚಿನ ಸಂಖ್ಯೆಯ ಸುರಕ್ಷಾ ಸೌಲಭ್ಯಗಳು ಸಹ ಕಾರಿನ ಆಯ್ಕೆಗೆ ಪ್ರಮುಖ ಮಾನದಂಡವಾಗಲಿದೆ ಎನ್ನಬಹುದು.

ಇದರೊಂದಿಗೆ ಹೊಸ ಕಾರು ಮಧ್ಯಮ ಕ್ರಮಾಂಕದ ಎಸ್‌ಯುವಿ ಶ್ರೇಣಿಯಲ್ಲಿರುವ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯ ಹೊಂದಿರುವ ಹ್ಯುಂಡೈ ಅಲ್ಕಾಜರ್, ಮಹೀಂದ್ರಾ ಎಕ್ಸ್‌ಯುವಿ700 ಮತ್ತು ಎಂಜಿ ಹೆಕ್ಟರ್ ಪ್ಲಸ್, ಟಾಟಾ ಸಫಾರಿ ಮತ್ತು ಎಂಪಿವಿ ಕಾರು ಮಾದರಿಗಳಾದ ಎರ್ಟಿಗಾ ಹಾಗೂ ಇನೋವಾ ಕ್ರಿಸ್ಟಾ ಆರಂಭಿಕ ಮಾದರಿಗಳಿಗೂ ಇದು ಪೈಪೋಟಿ ನೀಡಲಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18 ಲಕ್ಷದ ತನಕ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದೆಂದು ಅಂದಾಜಿಸಲಾಗಿದೆ.


Click it and Unblock the Notifications








