ಜಗತ್ತೇ ಬದಲಾಗಿದೆ; 'ಮಹೀಂದ್ರ ಇ2ಒ'ನೊಂದಿಗೆ ನೀವು ಬದಲಾಗಿರಿ
'ಬದಲಾವಣೆಯೇ ಜಗತ್ತಿನ ನಿಯಮ' ಎಂಬ ವಾಕ್ಯದಂತೆ ಇಡೀ ಜಗತ್ತೇ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿದೆ. ಹಾಗಿರಬೇಕೆಂದರೆ ನೀವ್ಯಾಕೆ ಬದಲಾಗಬಾರದು? ವಾಹನೋದ್ಯಮದಲ್ಲೂ ಇಂತಹದೊಂದು ಪ್ರಶ್ನೆ ಹುಟ್ಟು ಹಾಕಿದರೆ ಹೆಚ್ಚೆಚ್ಚು ಚರ್ಚೆಗೆ ಗ್ರಾಸವಾಗುತ್ತದೆ. ಇಂಧನ ವಾಹನಗಳು ಅತ್ಯಂತ ದುಬಾರಿ ಹಾಗೂ ಪರಿಸರಕ್ಕೆ ಮಾರಕವಾಗಿರುವ ಹಿನ್ನಲೆಯಲ್ಲಿ ನಾವು ನಮ್ಮ ನಾಳಿನ ಪೀಳಿಗೆಗಾಗಿ ಸುಂದರವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾಗಿರುವುದ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಪರಿಸರ ಸ್ನೇಹಿ ವಾಹನಗಳನ್ನು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕಾಗಿರುವುದು ಸಹ ಅಷ್ಟೇ ಮುಖ್ಯವೆನಿಸುತ್ತದೆ.
ಬಹುತೇಕರಿಗೆ ವಿದ್ಯುತ್ ವಾಹನಗಳ ಬಗ್ಗೆ ನಂಬಿಕೆ ಹುಟ್ಟಿಕೊಂಡಿಲ್ಲ. ಆದರೆ ನೀವು ಸಾಮಾನ್ಯ ಕಾರಿನಲ್ಲಿ ಸಂಚರಿಸುವಷ್ಟೇ ಸುಮಧುರ ಅನುಭವ ನೀಡಬಹುದಾದ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಎಲೆಕ್ಟ್ರಿಕ್ ವಿಭಾಗವಾದ ಮಹೀಂದ್ರ ರೇವಾ, ಮಗದೊಂದು ಅತ್ಯಾಕರ್ಷಕ ಇ2ಒ ಪ್ರೀಮಿಯಂ ವೆರಿಯಂಟ್ ಪರಿಚಯಿಸಿದೆ. ನಿಮಗೆಲ್ಲರಿಗೂ ತಿಳಿದಿರುವಂತೆಯೇ ಇದು ಸಾಮಾನ್ಯ ಇ2ಒ ಆವೃತ್ತಿಯ ಪ್ರೀಮಿಯಂ ವೆರಿಯಂಟ್ ಆಗಿದ್ದು, ನೈಜ ಚಾಲನಾ ಅನುಭವ ನೀಡಲಿದೆ.
ಎಲೆಕ್ಟ್ರಿಕ್ ವಾಹನಗಳು ಅಮೆರಿಕ, ಜಪಾನ್, ಪಶ್ಚಿಮ ಯುರೋಪ್, ಚೀನಾಗಳಂತಹ ದೇಶದಲ್ಲಿ ಹೆಚ್ಚು ಜನಪ್ರಿಯವೆನಿಸಿದೆ. ಈ ಪೈಕಿ ಅಮೆರಿಕ ಹಾಗೂ ಜಪಾನ್ ದೇಶಗಳಲ್ಲಿ ಮಾರಾಟವಾಗುವ ಒಟ್ಟು ವಾಹನಗಳ ಪ್ರಮಾಣದ ಶೇಕಡಾ 28 ಹಾಗೂ 26ರಷ್ಟನ್ನು ಇದು ಆಕ್ರಮಿಸಿಕೊಂಡಿದೆ. ಈ ರಾಷ್ಟ್ರಗಳಲ್ಲಿ ನಿಸ್ಸಾನ್ ಲೀಫ್ ಸೇರಿದಂತೆ ಒಟ್ಟು 25 ಎಲೆಕ್ಟ್ರಿಕ್ ವಾಹನಗಳು ಮಾರಾಟದಲ್ಲಿದೆ. ಇದನ್ನು ಗಮನಿಸಿದರೆ ನಮ್ಮ ಭಾರತ ದೇಶದ ಪರಿಸ್ಥಿತಿ ಎಷ್ಟು ಶೋಚನೀಯವಾಗಿದೆ ಎಂಬುದನ್ನು ಮನಗಾಣಬಹುದು. ವಿದೇಶಗಳನ್ನು ಹೋಲಿಸಿದರೆ ಚಾರ್ಜರ್ ಪಾಯಿಂಟ್‌ಗಳಂತಹ ಮೂಲಸೌಕರ್ಯಗಳ ಕೊರತೆಯೇ ದೇಶದ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ.
ಆದರೆ 2001ನೇ ಇಸವಿಯಲ್ಲಿ ಮಹೀಂದ್ರ ರೇವಾ ಎಲೆಕ್ಟ್ರಿಕ್ ಸಂಸ್ಥೆಯಿಂದ ಪರಿಚಯವಾಗಿರುವ ರೇವಾ ನಿಧಾನವಾಗಿ ಮಹಾನಗರಗಳಲ್ಲಿ ತನ್ನ ಸಾನಿಧ್ಯವನ್ನು ಗಟ್ಟಿಪಡಿಸತೊಡಗಿದೆ. ಇದನ್ನು ಕಳೆದ ವರ್ಷ ಮಹೀಂದ್ರ ಇ2ಒ ಬದಲಾಯಿಸಿಕೊಂಡಿತ್ತು. ಸಹಜವಾಗಿಯೇ ಭವಿಷ್ಯದ ಸಂಚಾರ ವಾಹನ ಎನಿಸಿಕೊಂಡಿರುವ ಎಲೆಕ್ಟ್ರಿಕ್ ವಾಹನಗಳಿಗೆ ದೀರ್ಘಾವಧಿಯ ಯೋಜನೆಯ ಹಿನ್ನಲೆಯಲ್ಲಿ ಸರಕಾರದಿಂದ ಸಬ್ಸಿಡಿ ನೆರವು ದೊರಕುವುದು ಅತಿ ಅಗತ್ಯವೆನಿಸುತ್ತದೆ.

ನಾವು ಶೀರ್ಷಿಕೆಯಲ್ಲಿ ನೀಡಿರುವಂತೆಯೇ ಉತ್ತಮ ನಾಳಿಗಾಗಿ ಬದಲಾಗುವ ಸಮಯ ಬಂದಿದೆ. ಇದರಂತೆ ಇದೀಗ ಬಿಡುಗಡೆಯಾಗಿರುವ ಮಹೀಂದ್ರ ಇ2ಒ ಪ್ರೀಮಿಯಂ ವೆರಿಯಂಟ್‌ಗೆ ಅತ್ಯುತ್ತಮ ಉತ್ತೇಜನ ಸಿಗಬೇಕಾಗಿದೆ. ಈ ಸಂಬಂಧ ನಮ್ಮ ಡ್ರೈವ್ ಸ್ಪಾರ್ಕ್ ತಂಡದ ಹಿರಿಯ ಸಂಪಾದಕರಾಗಿರುವ ಸಂತೋಷ್ ರಾಜ್ ಕುಮಾರ್ ನಡೆಸಿರುವ ಹಳದಿ ವರ್ಣದ ಇ2ಒ ಪ್ರೀಮಿಯಂ ವೆರಿಯಂಟ್ ಟೆಸ್ಟೈ ಡ್ರೈವ್ ವರದಿಯನ್ನು ನಾವಿಲ್ಲಿ ನಿಮ್ಮ ಮುಂದಿಡಲಿದ್ದೇವೆ. ಇದು ಪಾಸು ಅಥವಾ ಫೇಲೇ ಎಂಬುದನ್ನು ತಿಳಿದುಕೊಳ್ಳಲು ಮುಂದಿನ ಪುಟಗಳನ್ನು ಒಂದೊಂದಾಗಿ ಕ್ಲಿಕ್ಕಿಸಿರಿ...

ಶೈಲಿ
ಆಧುನಿಕ ಶೈಲಿಯೇ? ಈ ಬಗ್ಗೆ ನಮ್ಮಲ್ಲೂ ಸ್ವಲ್ಪ ಅನುಮಾನ ಕಾಡಿರುವುದು ಸಹಜ. ಆದರೆ ತನ್ನದೇ ಆದ ವಿಶಿಷ್ಟ ವಿನ್ಯಾಸ ಕಾಪಾಡಿಕೊಳ್ಳಲು ಯಶ ಕಂಡಿದೆ ಅಂದರೆ ತಪ್ಪಾಗಲಾರದು. ನಾವು ಓಡಿಸಿರುವ ಹಳದಿ ವರ್ಣದ ಇ2ಒ ನೋಡಲು ರಬ್ಬರ್ ಬಾತುಕೋಳಿಯ ತರಹನೇ ಇದೆ. ಈ ನಾಲ್ಕು ಸೀಟಿನ ಎರಡು ಬಾಗಿಲುಗಳ ಕಾರಿನಲ್ಲಿ ನಾಲ್ಕು ಜನರಿಗೆ ಆರಾಮದಾಯಕವಾಗಿ ಪಯಣಿಸಬಹುದಾಗಿದೆ. ಈ ಮೂಲಕ ಫ್ಯಾಮಿಲಿ ಕಾರೆನಿಸಿಕೊಂಡಿದೆ.

ಫ್ಯೂಚರ್ ಆಫ್ ಮೊಬಿಲಿಟಿ (ಭವಿಷ್ಯದ ಸಂಚಾರ ವಾಹಕ) ಡಿಸೈನ್ ತತ್ವಶಾಸ್ತ್ರದಲ್ಲಿ ಮಹೀಂದ್ರ ಇ2ಒ ವಿನ್ಯಾಸಗೊಳಿಸಲಾಗಿದೆ. ಇದು ವಿನ್ಯಾಸ ಮಾತ್ರವಲ್ಲದೆ ಡ್ರೈವಿಂಗ್ ವಿಚಾರದಲ್ಲೂ ವಿಶಿಷ್ಟ ಅನುಭವ ಕಾಪಾಡಲಿದೆ. ಇದರ ಮುಂದುಗಡೆ ದೊಡ್ಡ ಹನಿ ಕೊಂಬ್ ಶೈಲಿ, ಎಬಿಎಸ್ ದೇಹ (Non breakable plastice body panel), ರಿಯರ್ ಫೆಂಡರ್ ಮುಂತಾದ ವೈಶಿಷ್ಟ್ಯಗಳಿರಲಿದೆ.

ಚಾಲನಾ ಅನುಭವ
ನಮ್ಮ ದೈನಂದಿನ ಟ್ರಾಫಿಕ್ ಪರಿಸ್ಥಿತಿಯಲ್ಲಿ ಮಹೀಂದ್ರ ಇ2ಒ ಆರಾಮದಾಯಕ ಚಾಲನಾ ಅನುಭವ ನೀಡಲಿದೆ. ಇತರ ಕಾರುಗಳಿಂದ ಭಿನ್ನವಾಗಿರುವ ಇ2ಒ ಒಂದು ಕ್ಷಣಕ್ಕೆ ಎಲ್ಲರ ಆಕರ್ಷಣೆಗೆ ಕಾರಣವಾಗಲಿದೆ. ಟ್ರಾಫಿಕ್‌ನಲ್ಲೂ ಇದರ ಸಸ್ಫೆಷನ್ ಸಿಸ್ಟಂ ಚೆನ್ನಾಗಿ ಕೆಲಸ ಮಾಡಲಿದ್ದು, ಕಾಂಪಾಕ್ಟ್ ವಿನ್ಯಾಸ ಬೇಗನೇ ಟ್ರಾಫಿಕ್ ಪರಿಸ್ಥಿತಿಗೆ ಹೊಂದಿಕೊಳ್ಳಲು ನೆರವಾಗಲಿದೆ.

ಇ2ಒ ಕಾರಿನ ಬೂಸ್ಟ್ ಮೋಡ್ (ಬಿ) ಸುಲಭ ಓವರ್‌ಟೇಕಿಂಗ್‌ಗೆ ಸಹಕಾರಿಯಾಗಲಿದೆ. ಇದು ಅತ್ಯಂತ ಕಡಿಮೆ ಸಮಯದಲ್ಲೇ ಗಂಟೆಗೆ 0-40 ಕೀ.ಮೀ. ವೇಗದಲ್ಲಿ ಕ್ರಮಿಸಲು ನೆರವಾಗಲಿದೆ. ಹಾಗಿದ್ದರೂ ತುಂಬಾ ದೂರದ ವರೆಗೆ ಬೂಸ್ಟ್ ಮೋಡಲ್ಲಿ ಚಲಾಯಿಸಿದ್ದಲ್ಲಿ ಬ್ಯಾಟರಿ ಚಾರ್ಜ್ ಕಡಿಮೆಯಾಗುವ ಭೀತಿ ಇರಲಿದೆ.

ಹಾಗಿದ್ದರೂ ನೀವು ಇದೇ ಮೊದಲ ಬಾರಿಗೆ ಇ2ಒ ಬಳಕೆ ಮಾಡುತ್ತಿದ್ದಲ್ಲಿ ಅದರಲ್ಲೂ ರಾತ್ರಿ ಸವಾರಿ ವೇಳೆ ಇದರ ಡ್ರೈವಿಂಗ್ ಮೋಡ್ ಬಳಕೆ (ಟ್ರಾನ್ಸ್‌ಮಿಷನ್) ಸ್ವಲ್ಪ ಕ್ಲಿಷ್ಟಕರವಾಗಲಿದೆ. ಯಾಕೆಂದರೆ ಟ್ರಾನ್ಸ್‌ಮಿಷನ್‌ನಲ್ಲಿ ಬ್ಯಾಕ್‌ಲೈಟಿಂಗ್ ವ್ಯವಸ್ಥೆ ಇಲ್ಲವಾಗಿರುವುದರಿಂದ ಗೇರ್ ಬದಲಾವಣೆ ಸ್ವಲ್ಪ ಕಷ್ಟಕರ. ನೀವಿದನ್ನು ಅರಿಯಲು ಡ್ಯಾಶ್ ಬೋರ್ಡ್ ಅನ್ನೇ ಅವಲಂಬಿಸಬೇಕಾಗುತ್ತದೆ. ಅಲ್ಲದೆ ವೇರಿಯಬಲ್ ಅಸಿಸ್ಟ್ ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್ ಇದ್ದರೂ ಸಾಮಾನ್ಯ ಕಾರುಗಳಿಗೆ ಹೋಲಿಸಿದರೆ ಸರಳತೆಯ ಅಭಾವ ಕಾಡುತ್ತದೆ. ಹಾಗೆಯೇ ರಿ ಜನರೇಟಿವ್ ಬ್ರೇಕಿಂಗ್ ಸಿಸ್ಟಂ (ಬ್ರೇಕ್ ಅದುಮಿದಾಗ ಪವರ್ ಮರು ಉತ್ಪನ್ನ) ಇದ್ದುದ್ದರಿಂದ ಸವಾರರಲ್ಲಿ ಆತ್ಮವಿಶ್ವಾಸದ ಕೊರತೆಯುಂಟಾಗುವ ಸಾಧ್ಯತೆಯಿದೆ.

ಕ್ಯಾಬಿನ್
ಕಾರಿನ ಕ್ಯಾಬಿನ್ ಬಗ್ಗೆ ಮಾತನಾಡುವುದಾದ್ದಲ್ಲಿ ಹೆಚ್ಚು ಸ್ಥಳಾವಕಾಶದಿಂದ ಕೂಡಿದ್ದು, ಹೆಡ್ ರೂಂ ಹಾಗೂ ಡ್ಯಾಶ್ ಬೋರ್ಡ್ ವಿನ್ಯಾಸ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ದೃಢವಾದ ಆರ್ಮ್ ರೆಸ್ಟ್ (ಕೆಲವು ಸಂದರ್ಭಗಳಲ್ಲಿ ಎಲುಬುಗಳಿಗೆ ನೋವುಂಟು ಮಾಡುವ ಸಾಧ್ಯತೆ), ಟಚ್ ಸ್ಕ್ರೀನ್ (ಟಚ್ ಸ್ಕ್ರೀನ್ ಅನ್ನುವುದಕ್ಕಿಂತಲೂ ಪ್ರೆಸ್ ಸ್ಕ್ರೀನ್ ಎನ್ನುವುದೇ ಲೇಸು), ಟ್ರಕ್‌ನಲ್ಲಿರುವಂತಹ ಡೋರ್, ಫ್ರಂಟ್ ಸೀಟು ಬೆಲ್ಟ್ ಮತ್ತು ಹೊಂದಾಣಿಸಬಹುದಾದ ಸೀಟಿನ ಸ್ಥಾನಪಲ್ಲಟ ಮುಂತಾದ ಹಿನ್ನಡೆಗಳು ಕಂಡುಬರುತ್ತದೆ. ಹಾಗಿದ್ದರೂ ನಾಲ್ಕು ಬಾಗಿಲುಗಳ ಮಹೀಂದ್ರ ಇ2ಒ ತಯಾರಿಯಲ್ಲಿ ತೊಡಗಿರುವ ಮಹೀಂದ್ರ ಈ ಸಮಸ್ಯೆಗಳಿಗೆ ಪರಿಹಾರ ಕಂಡುಹುಡುಕುವ ನಂಬಿಕೆಯಿದೆ.

ಆರಾಮದಾಯಕ
ಮಹೀಂದ್ರ ಪ್ರೀಮಿಯಂ ಇ2ಒನಲ್ಲಿ ಆಳವಡಿಸಲಾಗಿರುವ 6.2 ಇಂಚಿನ ಟಚ್ ಸ್ಕ್ರೀನ್‌ನಲ್ಲಿ ಜಿಪಿಎಸ್ ನೇವಿಗೇಷನ್, ಡಿವಿಡಿ ಪ್ಲೇಯರ್, ಬ್ಲೂಟೂತ್ ಮತ್ತು ಐಪೊಡ್ ಕನೆಕ್ಟಿವಿಟಿ ಸೌಲಭ್ಯಗಳಿರಲಿದೆ. ಅಷ್ಟೇ ಅಲ್ಲದೆ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಹ ಇದರಲ್ಲಿ ಆಳವಡಿಸಲಾಗಿದ್ದು ಇದು ನೀಲಿ ಬಣ್ಣದ ಬ್ಯಾಕ್‌ಲೈಟಿಂಗ್, ಕೀಲೆಸ್ ಎಂಟ್ರಿ ಮತ್ತು ರಿವರ್ಸ್ ಕ್ಯಾಮೆರಾ ಸೌಲಭ್ಯವಿರಲಿದೆ.

ವೈಶಿಷ್ಟ್ಯ
ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿ ಅಪ್ಲಿಕೇಷನ್ ಡೌನ್‌ಲೋಡ್ ಮಾಡುವ ಮೂಲಕ ಕೆಲವು ಮಹತ್ವದ ವೈಶಿಷ್ಟ್ಯಗಳನ್ನು ನಿಯಂತ್ರಿಸಬಹುದಾಗಿದೆ. ಉದಾಹರಣೆ ನೀವು ಸ್ಮಾರ್ಟ್ ಫೋನ್‌ನಿಂದಲೇ ಕಾರನ್ನು ಲಾಕ್ ಅನ್‌ಲಾಕ್ ಮಾಡಬಹುದು. ಈ ಸೌಲಭ್ಯ ಎಸಿ ನಿಯಂತ್ರಣಕ್ಕೂ ಅನ್ವಯವಾಗಲಿದೆ. ಮಗದೊಂದು ಅತ್ಯಾಕರ್ಷಕ ವೈಶಿಷ್ಟ್ಯವೆಂದರೆ ಇದರಲ್ಲಿರುವ ರಿವೈವ್ ಬಟನ್ ನೆರವಿನಿಂದ ಜಾರ್ಜ್ ಖಾಲಿಯಾದಂತಹ ತುರ್ತು ಸಂದರ್ಭಗಳಲ್ಲಿ 8 ಕೀ.ಮೀ. ವರೆಗೆ ಚಲಿಸಲು ನೆರವಾಗಲಿದೆ. ಈ ಮೂಲಕ ನಿಮ್ಮ ಸಮೀಪದ ಚಾರ್ಜಿಂಗ್ ಸ್ಟೇಷನ್‌ಗೆ ತಲುಪಲು ನೆರವಾಗಲಿದೆ. ಆದರೆ ಇಂತಹದೊಂದು ಅಪ್ಲಿಕೇಷನ್ ಫೋನ್ ಬದಲಿಗೆ ಕಾರಿನ ಸೆಂಟ್ರಾಲ್ ಕನ್ಸಾಲ್‌ನಲ್ಲೇ ನೀಡಿದ್ದರೆ ಇದರ ಬಳಕೆ ಇನ್ನು ಉಪಯುಕ್ತವೆನಿಸುತ್ತಿತ್ತು.

ಸರಿ, ಈಗ ಮಹತ್ವದ ವಿಚಾರ ಹೇಳುವ ಸಮಯ. ಅಷ್ಟಕ್ಕೂ ಪೆಟ್ರೋಲ್, ಡೀಸೆಲ್ ಕಾರುಗಳನ್ನು ಹೋಲಿಸಿದರೆ ಲಿಥಿಯಂ ಇಯಾನ್ ಬ್ಯಾಟರಿ ಹೊಂದಿರುವ ಇ2ಒ ವಿದ್ಯುತ್ ಚಾಲಿತ ವಾಹನ ಬಳಕೆ ಶ್ರೇಷ್ಠವೇ? ಇಲ್ಲಿ ಅನೇಕ ಅಚ್ಚರಿಯ ಅಂಶಗಳನ್ನು ಬೊಟ್ಟು ಮಾಡಿಕೊಡಲಾಗಿದ್ದು ಇದನ್ನು ತಿಳಿದುಕೊಳ್ಳಲು ಸ್ಲೈಡರ್‌ನತ್ತ ಮುಂದುವರಿಯಿರಿ.

ವ್ಯಾಪ್ತಿ
ಮಹೀಂದ್ರ ಪ್ರಕಾರ ಇ2ಒ ಪ್ರೀಮಿಯಂ ವೆರಿಯಂಟ್ ವ್ಯಾಪ್ತಿಯಲ್ಲಿ ಶೇಕಡಾ 20ರಷ್ಟು ಸುಧಾರಣೆ ಕಂಡುಬಂದಿದೆ. ಅಂದರೆ ಈ ಹಿಂದೆ ಇದ್ದ ಒಂದು ಸಿಂಗಲ್ ಚಾರ್ಜ್‌ಗೆ 100 ಕೀ.ಮೀ. ಬದಲು 120 ಕೀ.ಮೀ. ವರೆಗೆ ಚಲಿಸಲಿದೆ. ಇದಕ್ಕೆ 10 ಯುನಿಟ್ ವಿದ್ಯುತ್ ಬಳಕೆ ಮಾಡಿದರೆ ಮಾತ್ರ ಸಾಕು. ಇದು ನಮ್ಮ ಟೆಸ್ಟ್ ವೇಳೆ ಸಾಬೀತಾಗದಿದ್ದರೂ 92 ಕೀ.ಮೀ. ವ್ಯಾಪ್ತಿ ಗಿಟ್ಟಿಸಿಕೊಳ್ಳಲುವಲ್ಲಿ ಸಾಧ್ಯವಾಗಿದೆ. ಬಹುಶ: ಇದು ನಮ್ಮ ಯಾತ್ರೆಯಲ್ಲಿ ಎಸಿ ಹಾಗೂ ಬೂಸ್ಟ್ ಮೋಡ್ ಹೆಚ್ಚು ಬಳಕೆಯಿಂದಾಗಿ ಆಗಿರಬಹುದು.

ವಾರ್ಷಿಕ ಚಾಲನಾ ವೆಚ್ಚ (ಪೆಟ್ರೋಲ್, ಡೀಸೆಲ್, ಎಲೆಕ್ಟ್ರಿಕ್)
ನೀವಿಲ್ಲಿ ಇಂಧನ ಹಾಗೂ ವಿದ್ಯುತ್‌ನಲ್ಲಿ ಚಲಿಸುವ ಎಲ್ಲ ಮೂರು ವಿಧದ ಕಾರುಗಳನ್ನು ಹೋಲಿಸಿ ನೋಡಬಹುದಾಗಿದೆ. ದೈನಂದಿನ ಸರಾಸರಿ 45 ಕೀ.ಮೀ. ಬಳಕೆಯ ಆಧಾರದಲ್ಲಿ ಇದನ್ನು ಲೆಕ್ಕ ಮಾಡಲಾಗಿದೆ. ಚಿತ್ರದಲ್ಲಿ ಕೊಡಲಾಗಿರುವ ಪಟ್ಟಿಯಿಂದ ನೀವಿದನ್ನು ನಿಖರವಾಗಿ ಅರ್ಥ ಮಾಡಿಕೊಳ್ಳಬಹುದು. ಅಂತಿಮದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಹಾಗೂ ಎಲೆಕ್ಟ್ರಿಕ್ ಕಾರುಗಳಿಗೆ ಆಗುವ ವಾರ್ಷಿಕ ವೆಚ್ಚವನ್ನು ಗಮನಿಸಬಹುದಾಗಿದೆ.
ಮಾರುತಿ ಸುಜುಕಿ ಸ್ವಿಫ್ಟ್ ಪೆಟ್ರೋಲ್ - ರು. 1,00,800
ಮಾರುತಿ ಸುಜುಕಿ ಸ್ವಿಫ್ಟ್ ಡೀಸೆಲ್ - ರು. 70,200
ಮಹೀಂದ್ರ ಇ2ಒ - ರು. 9,000
ವಿ.ಸೂ.: ಇಲ್ಲಿ ಕೊಟ್ಟಿರುವ ಪಟ್ಟಿಯಿಂದ ಕಾರಿನ ನಿರ್ವಹಣಾ ವೆಚ್ಚ ಹೊರತುಪಡಿಸಲಾಗಿದೆ.

5 ವರ್ಷದ ಚಾಲನಾ ವೆಚ್ಚ (ನಿರ್ವಹಣಾ ವೆಚ್ಚ ಸಹಿತ)
ಹಿಂದಿನ ಪಟ್ಟಿಯಲ್ಲಿ ಕೊಟ್ಟಿರುವುದಕ್ಕೆ ಸಮಾನವಾದ ಐದು ವರ್ಷಗಳಿಗೆ ತಗಲುವ ಒಟ್ಟು ಚಾಲನಾ ವೆಚ್ಚದ ಪಟ್ಟಿಯನ್ನು ನೀವಿಲ್ಲಿ ನೋಡಬಹುದು. ಇಲ್ಲಿ ನಿರ್ವಹಣಾ ಹಾಗೂ ಸರ್ವೀಸ್ ವೆಚ್ಚವನ್ನು ಸೇರಿಸಲಾಗಿದೆ.
ಮಾರುತಿ ಸುಜುಕಿ ಸ್ವಿಫ್ಟ್ ಪೆಟ್ರೋಲ್ - ರು. 5,54,800
ಮಾರುತಿ ಸುಜುಕಿ ಸ್ವಿಫ್ಟ್ ಡೀಸೆಲ್ - ರು. 4,10,000
ಮಹೀಂದ್ರ ಇ2ಒ - ರು. 49,000

ಗಮನಿಸಿ
ಮೇಲಿನ ಪಟ್ಟಿ ಗಮನಿಸಿದಾಗ ಮೊದಲೈದು ವರ್ಷಗಳಿಗೆ ವಿದ್ಯುತ್ ಚಾಲಿತ ವಾಹನಗಳ ಬಳಕೆ ತುಂಬಾನೇ ಲಾಭದಾಯಕ ಎಂಬುದು ಸಾಬೀತಾಗಿದೆ. ಆದರೆ ನೀವಿಲ್ಲಿ ಗಮನಿಸಬೇಕಾದ ಅಂಶವೆಂದರೆ ಐದು ವರ್ಷಗಳ ಬಳಿಕ ಮಹೀಂದ್ರ ಇ2ಒ ಬ್ಯಾಟರಿ ಬದಲಾಯಿಸಬೇಕಾಗುತ್ತದೆ. ಇದಕ್ಕೆ ಅಂದಾಜು 1.80,000 ರು. ತಗುಲಲಿದೆ. ಮಗದೊಂದು ಹಿನ್ನಡೆ ಏನೆಂದರೆ ಐದು ವರ್ಷಗಳ ಬಳಿಕ ಪೆಟ್ರೋಲ್ ಅಥವಾ ಡೀಸೆಲ್ ಬಳಕೆಯ ಕಾರುಗಳನ್ನು ನೀವು ಮಾರಾಟ ಮಾಡಬಹುದಾಗಿದೆ. ಆದರೆ ವಿದ್ಯುತ್ ಚಾಲಿತ ವಾಹನಗಳಿಗೆ (ರಿ ಸೇಲ್ ವ್ಯಾಲ್ಯೂ) ಇದರ ಸಮಸ್ಯೆ ಕಾಡಲಿದೆ. ಯಾಕೆಂದರೆ ಬ್ಯಾಟರಿ ಇಲ್ಲದ ವಾಹನಗಳನ್ನು ಯಾರು ತಾನೇ ಖರೀದಿಸುತ್ತಾರೆ?

ಚಾಲನಾ ವೆಚ್ಚ (ಪ್ರತಿ ಕೀ.ಮೀ.ಗೆ)
ಈ ಹಿಂದೆ ಕೊಡಲಾಗಿರುವ ಪಟ್ಟಿ ಆಧಾರದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಎಲೆಕ್ಟ್ರಿಕ್ ಕಾರುಗಳಿಗೆ ಪ್ರತಿ ಕೀ.ಮೀ. ತಗಲುವ ಚಾಲನಾ ವೆಚ್ಚವನ್ನು ಇಲ್ಲಿ ಕೊಡಲಾಗಿದೆ. ಇದರಲ್ಲಿ ನಿರ್ವಹಣಾ, ಸರ್ವೀಸ್ ವೆಚ್ಚವನ್ನು ಸೇರಿಸಲಾಗಿದೆ.
ಮಾರುತಿ ಸುಜುಕಿ ಸ್ವಿಫ್ಟ್ ಪೆಟ್ರೋಲ್ - ರು. 6.84/ಕೀ.ಮೀ
ಮಾರುತಿ ಸುಜುಕಿ ಸ್ವಿಫ್ಟ್ ಡೀಸೆಲ್ - ರು. 5.06/ಕೀ.ಮೀ.
ಮಹೀಂದ್ರ ಇ2ಒ - ರು. 0.60/ಕೀ.ಮೀ.

ಇಲ್ಲಿ ಕಂಡುಬಂದಿರುವ ನಿಜಾಂಶವೆಂದರೆ ಇಂಧನ ವಾಹನಗಳನ್ನು ಗಮನಿಸಿದರೆ ವಿದ್ಯುತ್ ಚಾಲಿತ ವಾಹನಗಳ ಚಾಲನಾ ವೆಚ್ಚ ತುಂಬಾನೇ ಕಡಿಮೆಯಾಗಿದೆ. ನಿಜವಾಗ್ಲು ದೇಶದಲ್ಲಿ ಎಲೆಕ್ಟ್ರಿಕ್ ಚಾರ್ಜಿಂಜ್ ಪಾಯಿಂಟ್‌ಗಳ ಮೂಲಸೌಕರ್ಯದ ಅಭಾವ ಇದ್ದರೂ ಈ ನಿಟ್ಟಿನಲ್ಲಿ ಮಹೀಂದ್ರ ತನ್ನ ಅವಿರತ ಪ್ರಯತ್ನವನ್ನು ಮುಂದುವರಿಸುತ್ತಲೇ ಬಂದಿದೆ.

ಚಾರ್ಜಿಂಗ್ ಪಾಯಿಂಟ್
ಸಂಸ್ಥೆಯ ಪ್ರಕಾರ ನಮ್ಮ ಬೆಂಗಳೂರಿನಲ್ಲಿ ಸರಿ ಸುಮಾರು 100 ಹಾಗೆಯೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 150ರಷ್ಟು ಚಾರ್ಜಿಂಗ್ ಪಾಯಿಂಟುಗಳನ್ನು ಲಗತ್ತಿಸಲಾಗಿದೆ. ಹಾಗೆಯೇ ನಿಕಟ ಭವಿಷ್ಯದಲ್ಲೇ ದೇಶದ ಇತರ ನಗರಗಳಲ್ಲೂ ತನ್ನ ಯೋಜನೆ ವ್ಯಾಪಿಸುವ ಇರಾದೆ ಹೊಂದಿದೆ.

ಅಂತೂ ಮಹೀಂದ್ರ ಇ2ಒ ಕಾರಲ್ಲಿ ಭವಿಷ್ಯದ ಸಂಚಾರ ವಾಹಕ ಎಂಬ ಗುರುತು ಸ್ಪಷ್ಟವಾಗಿ ಕಾಣಿಸುತ್ತಿದೆ. ಆದರೆ ಬೆಲೆ ಮಾತ್ರ ತಲೆನೋವಾಗಿ ಪರಿಣಮಿಸಿದೆ. ಯಾಕೆಂದರೆ ಇ2ಒ ನಿಮ್ಮದಾಗಿಸಲು ಸರಿ ಸುಮಾರು ಎಂಟು ಲಕ್ಷ ರು.ಗಳನ್ನು ಖರ್ಚು ಮಾಡಬೇಕಾಗಿದೆ. ಇದು ಎಲ್ಲರನ್ನು ಇ2ಒ ಯೋಜನೆಯನ್ನು ಕೈಬಿಡುವಂತೆ ಮಾಡುತ್ತಿದೆ. ಅಲ್ಲದೆ ಶ್ರೀಮಂತರು ತಮ್ಮ ಎರಡನೇ ಕಾರಾಗಿ ಮಾತ್ರ ಇದನ್ನು ಬಳಕೆ ಮಾಡಲು ಇಷ್ಟಪಡುತ್ತಾರೆ. ಇನ್ನು ಫಿಟ್ ಆಂಡ್ ಫಿನಿಶ್, ಚಾಲನಾ ಅನುಭವ ಮುಂತಾದ ವಿಚಾರಗಳು ಬಂದಾಗ ಎಲ್ಲ ಗ್ರಾಹಕರು ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದು ಸಹ ಪ್ರಶ್ನೆಯ ವಿಚಾರವಾಗಿದೆ.

ಒಟ್ಟಿನಲ್ಲಿ ಮಹೀಂದ್ರ ಇ2ಒ ಗರಿಷ್ಠ ಮಾರಾಟಕ್ಕಾಗಿ ತನ್ನ ಬಳಿಯಿರುವ ಎಲ್ಲ ಅಸ್ತ್ರಗಳನ್ನು ಸಂಸ್ಥೆ ಪ್ರಯೋಗಿಸುತ್ತಿದೆ. ಇದರಲ್ಲಿ ಸಾಲದ ಯೋಜನೆ ಮುಖ್ಯವಾಗಿದ್ದು, ನೀವು ಪ್ರಾರಂಭದಲ್ಲಿ 6.15 ಲಕ್ಷ ರು. ಪಾವತಿಸಿದರೆ (ಆನ್ ರೋಡ್ ಬೆಂಗಳೂರು) ಸಾಕು. ಉಳಿದ ವೆಚ್ಚವನ್ನು 'ಎನರ್ಜಿ ಫಿ' (ತಿಂಗಳಿಗೆ 3,000 ರು.) ಪಾವತಿಸಬೇಕಾಗುತ್ತದೆ. ಒಟ್ಟಿನಲ್ಲಿ ಜನ ಸಾಮಾನ್ಯರಿಗೆ ಕೈಗೆಟಕುವುದು ಸ್ವಲ್ಪ ಕಷ್ಟಕರವೆನಿಸಿದೆ. ಈ ನಿಟ್ಟಿನಲ್ಲಿ ಕಾರು ತಯಾರಕರ ಜೊತೆಗೆ ಸರಕಾರ ಕಾರ್ಯ ಪ್ರವೃತ್ತರಾಗಬೇಕಾಗಿದೆ.


Click it and Unblock the Notifications








