Maruti e Vitara Review: ಬಿಡುಗಡೆಗೂ ಮೊದಲೇ 5-ಸ್ಟಾರ್ ರೇಟಿಂಗ್.. ಹೊಸ ಮಾರುತಿ ಇ-ವಿಟಾರಾ ರಿವ್ಯೂ, ಹೇಗಿದೆ?
ಇದೇ ಡಿಸೆಂಬರ್ 2 ರಂದು ನವದೆಹಲಿಯಲ್ಲಿ ಜರುಗಿದ ಅದ್ದೂರಿ ಸಮಾರಂಭದಲ್ಲಿ ನೂತನ ಮಾರುತಿ ಸುಜುಕಿ ಇ-ವಿಟಾರಾ (Maruti Suzuki e Vitara) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಪ್ರದಶಿಸಲಾಯಿತು. ಈ ಕಾರನ್ನು ನೆಕ್ಸಾ ಡೀಲರ್‌ಶಿಪ್ ಮೂಲಕ ಮಾರಾಟಗೊಳಿಸಲಾಗುತ್ತದೆ. ಎಲ್ಲವು ಅಂದುಕೊಂಡಂತೆ ನಡೆದರೆ, 2026ರ ಜನವರಿಯಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಇದು ಕನಿಷ್ಠ ರೂ.17 ಲಕ್ಷ ಹಾಗೂ ಗರಿಷ್ಠ ರೂ.22.50 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರಬಹುದು ಅಂದಾಜಿಸಲಾಗಿದೆ. ಡೆಲ್ಟಾ, ಜಿಟಾ ಹಾಗೂ ಆಲ್ಫಾ ಎಂಬ 3 ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗಲಿದೆ.
ಈಚೆಗೆ ನಮ್ಮ 'ಡ್ರೈವ್‌ಸ್ಪಾರ್ಕ್' ತಂಡಕ್ಕೆ ಹೊಚ್ಚ ಹೊಸ 'ಮಾರುತಿ ಇ-ವಿಟಾರಾ' ಕಾರು ಟೆಸ್ಟ್ ಡ್ರೈವ್ ನಡೆಸುವುದಕ್ಕೆ ಲಭ್ಯವಾಗಿತ್ತು. ಬನ್ನಿ, ನೂತನ ಎಸ್‌ಯುವಿಯ ವಿನ್ಯಾಸವೇನು.. ವೈಶಿಷ್ಟ್ಯಗಳೇನು.. ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಕುರಿತಂತೆ ಪ್ರತಿಯೊಂದು ವಿವರಗಳನ್ನು ತಿಳಿಯೋಣ.

ವಿನ್ಯಾಸ & ಬಣ್ಣಗಳು (Design & Colors):
ನೂತನ 'ಮಾರುತಿ ಸುಜುಕಿ ಇ-ವಿಟಾರಾ' ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಮುಂಭಾಗ (ಫ್ರಂಟ್) ಉತ್ತಮವಾಗಿರುವ ಬಂಪರ್ ಹಾಗೂ ಗ್ರಿಲ್‌ನ್ನು ಹೊಂದಿದೆ. ಎಲ್ಇಡಿ ಹೆಡ್‌ಲೈಟ್‌ಗಳು, 'ವೈ' ಆಕಾರಕ್ಕೆ ಹೋಲಿಕೆಯಾಗಬಲ್ಲ ಎಲ್ಇಡಿ ಡಿಆರ್‌ಎಲ್‌ಗಳು, ಎಲ್‌ಇಡಿ ಫಾಗ್ ಲೈಟ್‌ಗಳನ್ನು ಪಡೆದಿದೆ. ದೊಡ್ಡದಾದ 'ಮಾರುತಿ ಸುಜುಕಿ' ಲೋಗೋವನ್ನು ತನ್ನದಾಗಿಸಿಕೊಂಡಿದೆ. ಫೆಂಡರ್‌ನಲ್ಲಿ ಚಾರ್ಜಿಂಗ್ ಪೋರ್ಟ್‌ನ್ನು ಇರಿಸಲಾಗಿದೆ.
ಹಿಂಭಾಗ (ರೇರ್) ಎಲ್ಇಡಿ ಟೈಲ್ ಲೈಟ್‌ಗಳು, ಜಬರ್ದಸ್ತ್ ಆಗಿರುವ 'ಇ ವಿಟಾರಾ' ಬ್ಯಾಡ್ಜಿಂಗ್, ವಾಷರ್ & ಡಿಫಾಗರ್‌ಗಳೊಂದಿಗೆ ವೈಪರ್‌ನ್ನು ಹೊಂದಿದೆ. ಇದರೊಂದಿಗೆ, ಈ ಕಾರು ಬಾಡಿ ಕಲರ್ ಒಆರ್‌ವಿಎಂಗಳು ಹಾಗೂ 19-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ನೆಕ್ಸಾ ಬ್ಲೂ, ಸ್ಪ್ಲೆಂಡಿಡ್ ಸಿಲ್ವರ್, ಆರ್ಕ್ಟಿಕ್ ವೈಟ್, ಗ್ರ್ಯಾಂಡಿಯರ್ ಗ್ರೇ, ಬ್ಲ್ಯೂಯಿಶ್ ಬ್ಲ್ಯಾಕ್ ಮತ್ತು ಆಪ್ಯುಲೆಂಟ್ ರೆಡ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

ಸುತ್ತಳತೆ (Dimensions):
ಇದು ಸಾಕಷ್ಟು ವಿಶಾಲ ಗಾತ್ರದಲ್ಲಿದೆ. 4,275 ಮಿ.ಮೀ ಉದ್ದ, 1,800 ಮಿ.ಮೀ ಅಗಲ ಹಾಗೂ 1,640 ಮಿ.ಮೀ ಎತ್ತರವಿದೆ. ಹಾಗೆಯೇ 180 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,700 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ. ಗರಿಷ್ಠ ತೂಕ 1815 ಕೆಜಿ ಇದೆ.
ಆಸನ ಆಯ್ಕೆ ಬೂಟ್ ಸ್ಪೇಸ್ (Seating Capacity & Boot Space):
ಹೊಸ 'ಮಾರುತಿ ಇ-ವಿಟಾರಾ' ಎಸ್‌ಯುವಿ, 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. ದೂರದ ಊರುಗಳಿಗೆ ಪ್ರವಾಸಕ್ಕೆ ತೆರಳುವಾಗ ಹೆಚ್ಚಿನ ಲಗೇಜ್ ಕೊಂಡೊಯ್ಯಲು ಸ್ಟ್ಯಾಂಡರ್ಡ್ ಆಗಿ 236 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ಕಾರ್ಯಕ್ಷಮತೆ (Performance):
ಈ ಕಾರು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಪಡೆದಿದೆ. ಇದರ 49 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಹೊಂದಿರುವ ಮಾಡೆಲ್, 144 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 192.5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಮತ್ತೊಂದು 61 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಹೊಂದುರುವ ಮಾಡೆಲ್, 174 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 192.5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಹೊಸ 'ಇ-ವಿಟಾರಾ'ವು ಸಂಪೂರ್ಣ ಚಾರ್ಜ್‌ನಲ್ಲಿ 543 ಕಿಲೋಮೀಟರ್‌ವರೆಗೆ (ಎಆರ್‌ಎಐ) ರೇಂಜ್ ನೀಡಲಿದೆ ಎಂದು ಕಂಪನಿಯೇ ಹೇಳಿಕೊಂಡಿದೆ.

ಒಳಾಂಗಣ & ವೈಶಿಷ್ಟ್ಯಗಳು (Interior & Features):
ಇದರ ಒಳಭಾಗದ ವಿನ್ಯಾಸವು ಅತ್ಯಾಕರ್ಷಕವಾಗಿದೆ. ಹೆಚ್ಚು ಪ್ರೀಮಿಯಂ ಆಗಿದ್ದು, ಹತ್ತಾರು ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿದೆ. 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25 ಇಂಚಿನ ಆಲ್ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 2-ಸ್ಪೋಕ್ ಸ್ಟೀರಿಂಗ್ ವೀಲ್, ಫಿಕ್ಸೆಡ್ ಗ್ಲಾಸ್ ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ಆಟೋ ಎಸಿಗಳನ್ನು ಒಳಗೊಂಡಿದೆ.
ಸುರಕ್ಷತಾ ವೈಶಿಷ್ಟ್ಯಗಳು (Safety Features):
ಈ ಎಸ್‌ಯುವಿಯು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ ಭಾರತ್ ಎನ್‌ಸಿಎಪಿಯಿಂದ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಪಡೆಯುವಲ್ಲಿಯೂ ಸಫಲವಾಗಿದೆ. 7-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 360-ಡಿಗ್ರಿ ಕ್ಯಾಮೆರಾ, ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ರೇರ್) ಪಾರ್ಕಿಂಗ್ ಸೆನ್ಸರ್‌ಗಳಂತಹ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿದೆ.

ಚಾಲನಾ ಅನುಭವ (Driving Impressions):
ಈ 'ಮಾರುತಿ ಸುಜುಕಿ ಇ-ವಿಟಾರಾ' ಅದ್ಭುತವಾದ ಚಾಲನಾ ಅನುಭವವನ್ನು ಒದಗಿಸಿತು. ಇದು ಲೀಲಾಜಾಲವಾಗಿ ಸಂಚರಿಸಬಲ್ಲದು. ಎಲ್ಲ ವಿಧದ ರಸ್ತೆಗಳಿಗೂ ಸುಲಭವಾಗಿ ಹೊಂದಾಣಿಕೆಯಾಗುತ್ತದೆ. ತಿರುವುಗಳಲ್ಲೂ ಚೆನ್ನಾಗಿಯೇ ಕಾರ್ಯನಿರ್ವಹಿಸಿತು. ಸ್ಟೀರಿಂಗ್ ವೀಲ್ ಭರ್ಜರಿಯಾಗಿದ್ದು, ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್‌ಗಳು ಕೂಡ ಉತ್ತಮವಾಗಿ ಕೆಲಸ ಮಾಡಿದವು.

ಒಟ್ಟಾರೆ ಅಭಿಪ್ರಾಯ (Overall Opinion):
ಇದು ಅತ್ಯಾಧುನಿಕವಾದ ವಿನ್ಯಾಸ ಮತ್ತು ಭರಪೂರ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಪರಿಸರ ಸ್ನೇಹಿ ಕಾರನ್ನು ಖರೀದಿಸಲು ಪ್ಲ್ಯಾನ್ ಮಾಡಿದವರಿಗೆ 'ಇ-ವಿಟಾರಾ' ಬೆಸ್ಟ್ ಚಾಯ್ಸ್ ಆಗಲಿದೆ. ಈ ಕಾರಿಗೆ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್, ಮಹೀಂದ್ರಾ ಬಿಇ 6, ವಿನ್‌ಫಾಸ್ಟ್ ವಿಎಫ್6, ಟಾಟಾ ಹ್ಯಾರಿಯರ್ ಇವಿ, ಎಂಜಿ ವಿಂಡ್ಸರ್ ಇವಿ ಮತ್ತು ಟಾಟಾ ನೆಕ್ಸಾನ್ ಇವಿಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications








