ನ್ಯಾನೋ ಕಾಯುವಿಕೆಗೆ ಇನ್ಮುಂದೆ ಟಾಟಾ ಹೇಳಿ

ನ್ಯಾನೋ ಕಾರನ್ನು ಬುಕ್ ಮಾಡಿ ಕಾದು ಕಾದು ಕುಳಿತವರ ಮುಖವನ್ನು ಸನಂದ್ ಘಟಕದ ಪ್ರಾರಂಭ ಅರಳಿಸಲಿದೆ. ಪ್ರತಿವರ್ಷ 2.5 ಲಕ್ಷ ನ್ಯಾನೋ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ. ಅಗತ್ಯ ಬಿದ್ದರೆ ಉತ್ಪಾದನಾ ಪ್ರಮಾಣುವನ್ನು ದ್ವಿಗುಣಗೊಳಿಸಿ 5 ಲಕ್ಷಕ್ಕೇರಿಸಲು ಕಂಪನಿ ಯೋಜಿಸಿದೆ.
ಟಾಟಾ ಮುಖ್ಯಸ್ಥ ರತನ್ ಟಾಟಾ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಘಟಕವನ್ನು ಉದ್ಘಾಟಿಸಿದರು. ಈ ಘಟಕಕ್ಕೆ ಟಾಟಾ ಸುಮಾರು 2000 ಕೋಟಿ ರೂಪಾಯಿಗಳ ಹೂಡಿಕೆ ಮಾಡಿದ್ದು 1100 ಎಕರೆಗಳಷ್ಟು ವಿಸ್ತಾರವಾಗಿದೆ. ನ್ಯಾನೋಗೆ ಬೇಕಾಗುವ ಬಿಡಿ ಭಾಗಗಳ ಉತ್ಪಾದನಾ ಘಟಕಗಳು ಕೂಡ ಇದರ ಸುತ್ತಲೇ ಸ್ಥಾಪಿತವಾಗುತ್ತಿರುವುದರಿಂದ ಉತ್ಪಾದನೆಯ ವೇಗ ಹೆಚ್ಚಲಿದೆ.
ಈ ಸಂತಸ ಹಂಚಿಕೊಂಡ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು 20ನೇ ಶತಮಾನದ ಪೂರ್ವ ಭಾಗದಲ್ಲಿ ಫೋರ್ಡ್ ಕಂಪನಿ ಸಣ್ಣ ಕಾರುಗಳ ತಯಾರಿಕೆಯಲ್ಲಿ ಕ್ರಾಂತಿ ಮಾಡಿದ್ದು ಈಗ ಅದು ಟಾಟಾ ಅವರ ನ್ಯಾನೋವನ್ನು ಹೋಲುತ್ತಿದೆ ಎಂದರು. ಸನಂದ್ ನ ಘಟಕದಿಂದ ಕಾರು ಹೊಂದಬಯಸುವ ದೇಶದ ಪ್ರತೀ ಮಧ್ಯಮ ವರ್ಗದ ಕುಟುಂಬದ ಕನಸು ನನಸಾಗಲಿದೆ ಎಂದೂ ಅವರು ಹೇಳಿದರು.
7 ವರ್ಷದ ಹಿಂದೆ ಶ್ರೀಸಾಮಾನ್ಯನಿಗಾಗಿ ಒಂದು ಲಕ್ಷ ರೂಪಾಯಿ ಬೆಲೆಯ ಅಗ್ಗದ ಕಾರಿನ ಕನಸು ಬಿತ್ತಿದ್ದ ರತನ್ ಟಾಟಾ ಅವರು ಈ ಪ್ರಕ್ರಿಯೆಯಲ್ಲಿ ತಾಂತ್ರಿಕವಾಗಿ ಮತ್ತು ರಾಜಕೀಯವಾಗಿ ಸವಾಲುಗಳನ್ನೆದುರಿಸಬೇಕಾಯ್ತು. ಏರುತ್ತಿದ್ದ ಬಿಡಿ ಭಾಗಗಳ ಬೆಲೆ ಮತ್ತು ಉತ್ಫಾದನಾ ವೆಚ್ಚವನ್ನು ಕಡಿತಗೊಳಿಸಿ ಅತ್ಯಧಿಕ ಮೈಲೇಜ್ ನೀಡಬಲ್ಲ 623 ಸಿಸಿಯ ಆರಾಮದಾಯಕ ಕಾರನ್ನು ತಯಾರಿಸುವುದು ಟಾಟಾ ಮೋಟಾರ್‍ಸ್ ನ ಎಂಜಿನಿಯರುಗಳಿಗೂ ಸವಾಲಾಗಿತ್ತು.
ಸನಂದ್ ನ ಘಟಕ ಆರಂಭಕ್ಕೂ ಮೊದಲು ಹಿಮಾಚಲ ಪ್ರದೇಶದ ಪಂತ್ ನಗರದಿಂದ ನಿಯಮಿತವಾಗಿ ನ್ಯಾನೋ ಕಾರುಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಇದರಿಂದ ಗ್ರಾಹಕರಿಗೆ ಕಾರುಗಳನ್ನು ನೀಡಲು ತಡವಾಗಿದ್ದು ಈ ತನಕ 35 ಸಾವಿರ ನ್ಯಾನೋ ಕಾರುಗಳನ್ನು ಮಾತ್ರ ಮಾರಾಟ ಮಾಡಿಲಾಗಿದೆ.


Click it and Unblock the Notifications








