ಹೊಸ ತಂತ್ರಜ್ಞಾನದಿಂದ ಸ್ಮಾರ್ಟಾದ ಕಾರ್ ಗಳು

ಹೆಚ್ಚಿನ ಕಾರ್ ತಯಾರಿಕಾ ಕಂಪನಿಗಳು ಮೊಬೈಲ್ ಫೋನ್ ಮತ್ತು ಇಂತಹ ಗ್ಯಾಜೆಟ್ ಅಳವಡಿಸಿಕೊಳ್ಳುವತ್ತ ಮನಸ್ಸು ಮಾಡಿವೆ. ತಾಂತ್ರಿಕ ಸೌಲಭ್ಯ ಅಳವಡಿಸುವಲ್ಲಿ ಕಂಪನಿ ಕಂಪನಿಗಳ ನಡುವೆ ಪೈಪೋಟಿ ಕೂಡ ನಡೆಯುತ್ತಿದೆ. ಕಾರ್ ತಯಾರಿಕೆಯಿಂದ ಹಿಡಿದು ಸರ್ವಿಸ್ ಮಾಡುವರೆಗೆ, ಆಂಟಿಲಾಕ್ ಸಿಸ್ಟಮ್ ಮುಂತಾದ ಫೀಚರ್ ಗಳವರೆಗೆ ಪ್ರತಿಯೊಂದು ವಿಷಯವೂ ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೆ ಬದಲಾಗುತ್ತಿದೆ.
ಕಾರ್ ಗಳು ಸ್ಮಾರ್ಟ್ ಆಗುವ ಪ್ರಕ್ರಿಯೆಗೆ ಕೇವಲ ಗ್ಯಾಜೆಟ್ ಮಾತ್ರ ಕಾರಣವಲ್ಲ. ಕಂಪ್ಯೂಟರ್ ನೆರವಿನಿಂದ ಎಂಜಿನ್ ಹಾರ್ಸ್ ಪವರ್ ಹೆಚ್ಚಿಸಿಕೊಳ್ಳುವುದು, ಟೆಲಿಫೋನ್ ಸಂಪರ್ಕ ಮೂಲಕ ನ್ಯಾವಿಗೇಷನ್ ಮಾಡುವುದು ಎಲ್ಲವೂ ಸಾಧ್ಯವಿದೆ. ಕಾರ್ ನಲ್ಲಿರುವ ವಯರ್ ಲೆಸ್ ಟೆಲಿಫೋನ್ ಮೂಲಕ ಡೀಲರ್ ಗಳೊಂದಿಗೆ ಕ್ಷಣಾರ್ಧದಲ್ಲಿ ಸಂಪರ್ಕ ಸಾಧಿಸಲು ಸಾಧ್ಯವಿದೆ. ಸ್ಯಾಟಲೈಟ್ ಲಿಂಕ್ ಅಳವಡಿಸಿಕೊಳ್ಳುವುದರಿಂದ ಕಾರಿನೊಳಗೆ ಪ್ರತಿಕ್ಷಣದ ಮಾಹಿತಿ, ದಾರಿ, ಸ್ಥಳ ಮಾಹಿತಿ, ಸಂಚಾರ ವ್ಯವಸ್ಥೆ ಎಲ್ಲವೂ ತಿಳಿಯುತ್ತದೆ.
ಈಗ ಪಾರ್ಕಿಂಗ್ ಸೆನ್ಸಾರ್ ಇತ್ಯಾದಿ ಫೀಚರ್ ಗಳು ಹೆಚ್ಚಿನ ಕಾರ್ ನಲ್ಲಿವೆ. ಇನ್ನು ಮುಂದೆ ಇಂತಹ ಹಲವು ಗ್ಯಾಜೆಟ್ ಗಳಿಗೆ ಬದಲಾಗಿ ಕಂಪನಿಗಳು ಎಲ್ಲ ಮಾಹಿತಿ ನೀಡುವ ಎಲ್ ಸಿ ಡಿ ಪರದೆಯ ಡ್ಯಾಷ್ ಬೋರ್ಡ್ ವಿನ್ಯಾಸ ಮಾಡುವ ಸಾಧ್ಯತೆಯಿದೆ.
ಐಪಾಡ್ ನೆರವಿನಿಂದ ಅಗತ್ಯ ಮಾಹಿತಿ ಪಡೆಯಲು ಟಚ್ ಸ್ಕ್ರೀನ್ ಸೌಲಭ್ಯ ಡ್ಯಾಷ್ ಬೋರ್ಡ್ ನಲ್ಲಿ ಬರುವ ನಿರೀಕ್ಷೆಯಿದೆ. ಪ್ರಯಾಣ ಮಾಡುತ್ತಿರುವ ಸ್ಥಳದ ಪ್ರಸಕ್ತ ವಾತಾವರಣ ತಿಳಿಯಲು ಅನುಕೂಲವಾಗುವ ಜಿ-ಫೋರ್ಸ್ ನಂತಹ ಅಪ್ಲಿಕೇಷನ್ ಗಳನ್ನು ಕೆಲವು ಕಂಪನಿಗಳು ವಿನ್ಯಾಸ ಮಾಡುವಲ್ಲಿ ನಿರತವಾಗಿವೆ.
ಚಾಲಕನಿಗೆ ಎರಡು ವಾಹನಗಳ ನಡುವೆ ಇರುವ ಅಂತರ ತಿಳಿಯಲು, ಎದುರಿನ ಅಥವಾ ಹಿಂದಿನ ವಾಹನದ ನಡುವೆ ಇರುವ ವಾಹನದ ಅಂತರ ತಿಳಿಯಲು ಕೂಡ ಸಾಧ್ಯವಾಗುವ ಗ್ಯಾಜೆಟ್ ಇಂದು ಕಾರ್ ಗಳಲ್ಲಿವೆ. ಇಂತಹ ಅವಶ್ಯಕ ಗ್ಯಾಜೆಟ್ ಇನ್ನಷ್ಟು ಅಭಿವೃದ್ಧಿಯಾಗಬೇಕಾದ ಅವಶ್ಯಕತೆಯೂ ಇದೆ.
ಈಗಷ್ಟೇ ಅಭಿವೃದ್ಧಿಯಾಗುತ್ತಿರುವ ಇಂತಹ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಲು ಕೆಲವು ಕಂಪನಿಗಳ ಕಾರ್ ಬಿಡುಗಡೆ ವಿಳಂಬ ವಾಗುತ್ತಿದೆ ಎಂದು ಎಎಚ್ಎ ರೇಡಿಯೋ ಉಪಾಧ್ಯಕ್ಷರು ಹೇಳುತ್ತಾರೆ.
ಕಾರ್ ನ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆ ಹೆಚ್ಚಿಸಿಕೊಳ್ಳುವುದರೊಂದಿಗೆ ಇಂತಹ ನೂತನ ತಂತ್ರಜ್ಞಾನಗಳೊಂದಿಗೆ ಸ್ಮಾರ್ಟ್ ಕಾರ್ ಗಳು ರಸ್ತೆಗಿಳಿಯುತ್ತಿವೆ. ಇನ್ನು ಮುಂದೆಯಂತೂ ಕಾರ್ ಎಂಬುದರ ಪರಿಕಲ್ಪನೆಯೇ ಬದಲಾಗುವ ಸಾಧ್ಯತೆಯಿದೆ. ಹೊಸ ಹೊಸ ತಂತ್ರಜ್ಞಾನದೊಂದಿಗೆ ಬರುವ ಸ್ಮಾರ್ಟ್ ಕಾರ್ ಗಳ ನಿರೀಕ್ಷೆಯಲ್ಲಿರೋಣ.


Click it and Unblock the Notifications








