ಬೆಂಗಳೂರು ಟೊಯೊಟಾ ಘಟಕಕ್ಕೆ ಸುನಾಮಿ ಪರಿಣಾಮ

ಕಂಪನಿಯು ಭಾರತದಲ್ಲಿ ಕಿರ್ಲೊಸ್ಕರ್ ಗ್ರೂಪ್ ನೊಂದಿಗಿನ ಜಂಟಿ ಉದ್ಯಮದ ನೆರವಿನಿಂದ ಕಾರ್ಯ ನಿರ್ವಹಿಸುತ್ತಿದೆ. ಇವೆರಡು ಜಂಟಿ ಉದ್ಯಮಗಳು ತನ್ನ ಸೆಡಾನ್ ಎಟಿಯೋಸ್ ಉತ್ಪಾದನಾ ಘಟಕಕ್ಕಾಗಿ 3,200 ಕೋಟಿ ರೂ. ಹೂಡಿಕೆ ಮಾಡಿದ್ದವು. ಕಂಪನಿಯ 1.2 ಲೀಟರ್ ಪೆಟ್ರೋಲ್ ಎಂಜಿನ್ ನ ಸಣ್ಣ ಕಾರ್ ಲಿವಾ ಏಪ್ರಿಲ್ ನಲ್ಲಿರ ರಸ್ತೆಗಿಳಿಯಲಿದೆ. "ಅನಿವಾರ್ಯ ಕಾರಣಗಳಿಂದ ಮಾರ್ಚ್ 15ರಂದು ಕಂಪನಿಯ ಎರಡನೇ ಘಟಕದ ಗ್ರಾಂಡ್ ಓಪನಿಂಗ್ ಕಾರ್ಯಕ್ರಮವನ್ನು ನಡೆಸಲಾಗುವುದಿಲ್ಲ" ಎಂದು ಟೊಯೊಟಾ ಕಿರ್ಲೊಸ್ಕರ್ ಮೋಟರ್(ಟಿಕೆಎಂ) ವ್ಯವಸ್ಥಾಪಕ ನಿರ್ದೇಶಕ ಹಿರೋಶಿ ನಕಗಾವ ಹೇಳಿದ್ದಾರೆ.
ಟೊಯೊಟಾ ಮೋಟರ್ ಕಾರ್ಪೊರೇಷನ್ ನೊಂದಿಗೆ ಜಪಾನಿನಲ್ಲಿ ಕೆಲಸ ಮಾಡುತ್ತಿರುವ ಟಿಕೆಎಂ ಸಿಬ್ಬಂದಿಗಳೆಲ್ಲ ಕ್ಷೇಮವಾಗಿದ್ದಾರೆ ಮತ್ತು ಪರಿಸ್ಥಿತಿ ಅವಲೋಕಿಸಲು ಕಂಪನಿಯು ವಿಶೇಷ ತಂಡವೊಂದನ್ನು ರಚಿಸಿರುವುದಾಗಿ ಹೇಳಿದ್ದಾರೆ. ಟೊಯೊಟಾ ಮೋಟರ್ ಕಾರ್ಪೊರೇಷನ್ ನ ಹೆಚ್ಚಿನ ಘಟಕಗಳಿಗೆ ಯಾವುದೇ ಹಾನಿಯಾಗಿಲ್ಲ. ಆದರೆ ಅನಾಹುತ ಸಂಭವಿಸಿದ ಸ್ಥಳದಲ್ಲಿದ್ದ ಡೀಲರ್, ಪಾಲುದಾರ ಕೇಂದ್ರಗಳು ಹಾನಿಗೀಡಾಗಿವೆ. ಹೀಗಾಗಿ ಕಂಪನಿಯ ವಹಿವಾಟಿಗೆ ತೊಂದರೆಯಾಗಿದೆ ಎಂದರು.
ಜಪಾನಿನಲ್ಲಿ ಸಂಭವಿಸಿದ ಸುನಾಮಿ, ಭೂಕಂಪಕ್ಕೆ ವಾಹನ ಕಂಪನಿಗಳಿಗೂ ಸಾಕಷ್ಟು ಹಾನಿಯಾಗಿವೆ. ನಿಸ್ಸಾನ್, ಹೋಂಡಾ ಮುಂತಾದ ಕಂಪನಿಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ. ಸಾವಿರಾರು ಹೊಸ ಕಾರ್ ಗಳು ಕಡಲು ಪಾಲಾಗಿವೆ. ಸಾವಿರಾರು ಸರ್ವಿಸ್ ಸೆಂಟರ್ ಗಳು, ಹಲವು ಡೀಲರ್ ಷಿಪ್ ಕೇಂದ್ರಗಳು ಸುನಾಮಿ, ಭೂಕಂಪಕ್ಕೆ ಸಿಲುಕಿವೆ ಎನ್ನಲಾಗಿದೆ.


Click it and Unblock the Notifications








