ಆ ದಿನಗಳು: ಕುದುರೆ ಗಾಡಿಗೆ ಎಂಜಿನ್ ಕಟ್ಟಿದವರಾರು?

ಅಸಲಿಗೆ ವಾಹನವೆಂದರೆ ಏನು? ಸರಕು ಅಥವಾ ಪ್ರಯಾಣಿಕರನ್ನು ಸಾಗಿಸೋ ಒಂದು ಸಾಧನ. ಕುದುರೆ, ಎತ್ತು, ಒಂಟೆ ಇತ್ಯಾದಿಗಳು ಸವಾರಿಗೆ ಪ್ರಮುಖ ವಾಹಕಗಳಾಗಿದ್ದವು. ಪುರಾಣಗಳಲ್ಲೂ ದೇವರು, ದೇವತೆಗಳು ರಾಕ್ಷಸರೂ ಕೂಡ ವಾಹನ ಬಳಸುತ್ತಾರೆ ಅಂತ ಓದಿದ್ದೇವೆ. ಯಮನ ಕೋಣ, ಸುಬ್ರಹ್ಮಣ್ಯನಿಗೆ ಮಯೂರ, ಶನಿಗೆ ಕಾಗೆ, ವರುಣನಿಗೆ ಗರುಡ, ಗಣಪತಿಗೆ ಪುಟ್ಟ ಇಲಿ ಯೇ ವಾಹನ. ಆದರೆ ಹತ್ತುತಲೆಯ ರಾವಣನಿಗೆ ಮಾತ್ರ ಪುಷ್ಪಕ ವಿಮಾನವಿದೆ. ಪುಷ್ಪಕ ವಿಮಾನ ಅಂದ್ರೆ ಅದರಲ್ಲಿ ಎಷ್ಟು ಜನರೂ ಬೇಕಾದರೂ ಕುಳಿತುಕೊಳ್ಳಬಹುದು. ಎಷ್ಟು ಜನ ಕುಳಿತರೂ ಮತ್ತೊಬ್ಬನಿಗೆ ಕುಳಿತುಕೊಳ್ಳಲು ಸ್ಥಳಾವಕಾಶವಿತ್ತಂತೆ! ಕುಬೇರ ಸೃಷ್ಟಿಸಿದ ಪುಷ್ಪಕವಿಮಾನವನ್ನು ರಾವಣ ಕದ್ದದಂತೆ. ಆತನಿಗೆ ಕದಿಯೋದೇ ಕೆಲಸ. ಇರಲಿ..
ಪುರಾಣದಿಂದ ಕಲಿಯುಗಕ್ಕೆ ಬರೋಣ. ಭೂಲೋಕದಲ್ಲಿ ವಾಹನವೆಂದರೆ ಹೇಗಿತ್ತು. ಪುಟ್ಟ ಬಂಡಿ. ಅದನ್ನು ಕುದುರೆ ಅಥವಾ ಗೂಳಿಗಳಿಂದ ಎಳೆಸಲಾಗುತ್ತಿತ್ತು. ನಂತರ ಇದೇ ಕುದುರೆಗಾಡಿಯಂತದ್ದಕ್ಕೆ ಎಂಜಿನ್ ಅಳವಡಿಸುವ ಮೂಲಕ ಮೋಟರ್ ವಾಹನಕ್ಕೆ ಚಾಲನೆ ನೀಡಲಾಗಿತ್ತು.
ಆಧುನಿಕ ವಾಹನಗಳ ಪೂರ್ವಿಕನೆಂದರೆ ಫಾರ್ಡಿಯರ್. ಮೂರು ಚಕ್ರದ, ಉಗಿಶಕ್ತಿಯ ವಾಹನವನ್ನು 1771ರಲ್ಲಿ ನಿಕೊಲಾಸ್ ಜೋಸೆಫ್ ಕಾಗ್ನೊಟ್ ತಯಾರಿಸಿದ್ದ. ಫ್ರಾನ್ಸ್ ರಾಜರ ಯುದ್ಧಕಾಗಿ ಇದನ್ನು ನಿರ್ಮಿಸಲಾಗಿತ್ತಂತೆ! ಆದರೆ ಈ ವಾಹನ ಉತ್ಪಾದನೆಯತ್ತ ಸಾಗಲಿಲ್ಲ. ಯಾಕೆಂದರೆ ಕುದುರೆ ಅಥವ ಎತ್ತಿನ ಬಂಡಿಗಳ ವೇಗಕ್ಕೆ ಹೋಲಿಸಿದರೆ ಇದರದ್ದು ಆಮೆವೇಗವಂತೆ!
ಅಮೆದೆ ಬೊಲೈ ಕೂಡ ಫ್ರಾನ್ಸ್ ನವನು. ಆತ 1883ರ ಕಾಲದಲ್ಲಿ 12 ಪ್ರಯಾಣಿಕರು ಕುಳಿತುಕೊಳ್ಳಬಹುದಾದ ಸ್ಟ್ರೀಮ್ ಕಾರೊಂದನ್ನು ನಿರ್ಮಿಸಿದ. ಆದರೆ ಇದು ಕೂಡ ಕುದುರೆ ಮತ್ತು ಎತ್ತಿನ ಗಾಡಿಯಷ್ಟು ವೇಗವಾಗಿ ಹೋಗುತ್ತಿರಲಿಲ್ಲ. ಹೀಗೆ ಸ್ಟ್ರೀಮ್ ಎಂಜಿನ್ ಎಂಬುದು ಪ್ರಾಕ್ಟಿಕಲ್ ಆಗಿ ಸಾಧ್ಯವಿಲ್ಲ ಎಂದೆನಿಸತೊಡಗಿತು.
ಆದರೆ ಅನ್ವೇಷನೆಗೆ ಅಂತ್ಯವಿಲ್ಲ ಅಲ್ಲವೇ. 1889ರಲ್ಲಿ ಜರ್ಮನಿಯಲ್ಲಿ ವಾಹನೋದ್ಯಮಕ್ಕೆ ಹೊಸ ಆರಂಭವಾಗುವ ವಾಹನವೊಂದನ್ನು ಉತ್ಪಾದಿಸಲಾಗಿತ್ತು. ಗೊಟಿಲಾಬ್ ಡೈಮ್ಲಾರ್ ಮತ್ತು ವಿಲ್ಲೆಮ್ ಮೆಬಾಕ್ ಎಂಬವರು ಇದರ ನಿರ್ಮಾತೃಗಳು. ಎರಡು ಸಿಲಿಂಡರ್ ನ ಗ್ಯಾಸೊಲಿನೊ ಎಂಜಿನ್ ನ ವಾಹನವೊಂದನ್ನು ನಿರ್ಮಿಸಿದರು. ಇದು 4-ಸ್ಪೀಡ್ ಟ್ರಾನ್ಸ್ ಮಿಷನ್ ಮತ್ತು 1.5 ಹಾರ್ಸ್ ಪವರ್ ನೀಡುತ್ತಿತ್ತು.
ಇದೇ ವರ್ಷ ಕಾರ್ಲ್ ಬೆಂಝ್ ಎಂಬಾತ ಕೂಡ ಗ್ಯಾಸೊಲಿನೊ ಕಾರೊಂದನ್ನು ನಿರ್ಮಿಸಿದ. ಈ ಕಾರ್ 19ರ ಶತಮಾನದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಆದರೆ ಸಂಪೂರ್ಣ ತೃಪ್ತಿದಾಯಕವಾದ ಮೊದಲ ವಾಹನ ನಿರ್ಮಿಸಿದ್ದು 1901ರಲ್ಲಿ. ಅಮೆರಿಕದ ಕರ್ವ್ ಡ್ ಡ್ಯಾಷ್ ಓಲ್ಡ್ಸ್ ಮೊಬೈಲ್ ಎಂಬ ಕಂಪನಿಯ ರಾನ್ಸಮ್ ಎಂಬಾತ. ಈ ವಾಹನ ಮತ್ತೆ ಸಾಕಷ್ಟು ಉತ್ಪಾದನೆಯಾಗಿ ಸವಾರಿಯ ಹೊಸ ಅಧ್ಯಾಯ ಆರಂಭವಾಯಿತು.
ಆದರೆ ಮೊದಲ ವಾಹನ ರಚಿಸಿದ ಕ್ರೆಡಿಟ್ ಡೆಟ್ರಾಯ್ಟ್ ನ ಹೆನ್ರಿ ಫೋರ್ಡ್ ಗೆ ಲಭಿಸಿತು. ಯಾಕೆಂದರೆ ಆತ ಮೊತ್ತ ಮೊದಲ ಬಾರಿಗೆ 1896ರಲ್ಲಿ ಗ್ಯಾಸೊಲಿನ್ ವಾಹನ ನಿರ್ಮಿಸಿದ್ದ. ಫೋರ್ಡ್ ಕಂಪನಿಯು ತನ್ನ ಮಾಡೆಲ್ ಟಿ ಕಾರ್ ಗಳನ್ನು 1908 ರಿಂದ 1927ರವರೆಗೆ ಉತ್ಪಾದಿಸಿತ್ತು. ಮುಂದಿನದ್ದು ಈಗ ಇತಿಹಾಸ.


Click it and Unblock the Notifications








