ದೆಹಲಿಯಲ್ಲಿ ಮಾಲಿನ್ಯದ ಅಬ್ಬರ: ನಿಮ್ಮ ಕಾರು ರಸ್ತೆಗೆ ಇಳಿಯುತ್ತಾ? ಇಲ್ಲಿದೆ ಕಂಪ್ಲೀಟ್ ಮಾಹಿತಿ
ನವದೆಹಲಿ, ನವೆಂಬರ್ 10: ದೆಹಲಿ-ಎನ್‌ಸಿಆರ್ (Delhi-NCR) ವ್ಯಾಪ್ತಿಯಲ್ಲಿ ಇಂದಿನಿಂದ 'ಸ್ಟೇಜ್ 3' ಹಂತದ ಮಾಲಿನ್ಯ ನಿಯಂತ್ರಣ ನಿಯಮಗಳು ಜಾರಿಗೆ ಬಂದಿವೆ. ಇದರ ಪರಿಣಾಮವಾಗಿ BS-III ಪೆಟ್ರೋಲ್ ಮತ್ತು BS-IV ಡೀಸೆಲ್ ಖಾಸಗಿ ಕಾರುಗಳ ರಸ್ತೆ ಸಂಚಾರವನ್ನು ನಿಷೇಧಿಸಲಾಗಿದೆ. ದೆಹಲಿ, ನೋಯ್ಡಾ, ಗುರುಗ್ರಾಮ, ಘಾಜಿಯಾಬಾದ್, ಫರೀದಾಬಾದ್ ಹಾಗೂ ಸೋನಿಪತ್ ಭಾಗಗಳಲ್ಲಿ ಈ ಕಟ್ಟುನಿಟ್ಟಿನ ನಿಯಮ ಅನ್ವಯಿಸಲಿದೆ. ಆದರೆ BS-VI, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಕಾರುಗಳ ಸಂಚಾರಕ್ಕೆ ಯಾವುದೇ ಅಡೆತಡೆ ಇಲ್ಲ. ತುರ್ತು ಸೇವೆ ವಾಹನಗಳು ಮತ್ತು ಬಸ್‌ಗಳು ನಿಗದಿತ ಮಾರ್ಗಸೂಚಿಯಂತೆ ಸಂಚರಿಸಬಹುದು. ಈ ನಡುವೆ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ತಪಾಸಣೆ ನಡೆಸಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
ನವೆಂಬರ್ 1 ರಿಂದ ಜನವರಿ 31 ರವರೆಗೆ ದೆಹಲಿ ಹೊರಗೆ ನೋಂದಣಿಯಾದ, ಬಿಎಸ್-VI ಅಲ್ಲದ (non-BS-VI) ವಾಹನಗಳು ದೆಹಲಿ ಪ್ರವೇಶಿಸುವಂತಿಲ್ಲ. ಪ್ರತಿಯೊಬ್ಬ ವಾಹನ ಸವಾರರು ಚಾಲ್ತಿಯಲ್ಲಿರುವ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನು (PUCC) ಜೊತೆಯಲ್ಲಿಟ್ಟುಕೊಳ್ಳುವುದು ಕಡ್ಡಾಯ. ಪೋಲಿಸರು 24 ಗಂಟೆಯೂ ಪರಿಶೀಲನೆ ನಡೆಸಲಿದ್ದಾರೆ. ಪಿಯುಸಿ ಇಲ್ಲದೆ ಚಾಲನೆ ಮಾಡಿದರೆ, ಸೆಕ್ಷನ್ 190(2) ರ ಅಡಿಯಲ್ಲಿ ₹10,000 ದಂಡ ವಿಧಿಸಲಾಗುತ್ತದೆ. ಇಂಧನ ಬಂಕ್‌ಗಳಲ್ಲಿ 'ಪಿಯುಸಿ ಇಲ್ಲದಿದ್ದರೆ ಇಂಧನವಿಲ್ಲ' ಎಂಬ ನಿಯಮವೂ ವರ್ಷಪೂರ್ತಿ ಚಾಲ್ತಿಯಲ್ಲಿರುತ್ತದೆ. ಆದರೆ ವಿಕಲಚೇತನರಿಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಿದ ವಾಹನಗಳಿಗೆ ವಿನಾಯಿತಿ ನೀಡಲಾಗಿದ್ದು, ಬೇರೆ ರಾಜ್ಯಗಳ ವ್ಯಾಲಿಡ್ ಪಿಯುಸಿ ಪ್ರಮಾಣಪತ್ರಗಳಿಗೂ ಮಾನ್ಯತೆ ಇರಲಿದೆ.

₹10–15 ಲಕ್ಷ ಬಜೆಟ್‌ನಲ್ಲಿ ಸಿಗುವ ಬೆಸ್ಟ್ ಇವಿ ಮತ್ತು ಸಿಎನ್‌ಜಿ ಕಾರುಗಳು
ನಗರ ಪ್ರದೇಶದ ದೈನಂದಿನ ಬಳಕೆಗೆ 'ಟಿಯಾಗೋ.ಇವಿ' (Tiago.ev) ಅತ್ಯುತ್ತಮ ಆಯ್ಕೆಯಾಗಿದ್ದು, ದೆಹಲಿಯಲ್ಲಿ ಇದರ ಆನ್-ರೋಡ್ ಬೆಲೆ ಸುಮಾರು ₹7.5 ರಿಂದ ₹9.5 ಲಕ್ಷ ಇದೆ. ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಹಾಗೂ ಹೆಚ್ಚಿನ ಜಾಗ ಬಯಸುವವರಿಗೆ ₹10.2 ರಿಂದ ₹13.3 ಲಕ್ಷ ಬೆಲೆಯ 'ಪಂಚ್.ಇವಿ' (Punch.ev) ಸೂಕ್ತ. ಕಮ್ಮಿ ಬಜೆಟ್‌ನ ಕುಟುಂಬಗಳಿಗೆ ₹6.5 ರಿಂದ ₹7.2 ಲಕ್ಷ ಬೆಲೆಯ 'ವ್ಯಾಗನ್ಆರ್ ಸಿಎನ್‌ಜಿ' ಅತ್ಯುತ್ತಮ ಕಾರು. ಪ್ರೀಮಿಯಂ ಲುಕ್ ಬೇಕಿದ್ದರೆ ₹9.5 ರಿಂದ ₹11 ಲಕ್ಷದಲ್ಲಿ 'ಬಲೆನೊ ಸಿಎನ್‌ಜಿ' ಹಾಗೂ ಉತ್ತಮ ಬೂಟ್‌ಸ್ಪೇಸ್ ಬಯಸುವವರಿಗೆ ₹9.3 ರಿಂದ ₹10 ಲಕ್ಷದಲ್ಲಿ 'ಡಿಜೈರ್ ಸಿಎನ್‌ಜಿ' ಲಭ್ಯವಿವೆ. ಕಾರು ಖರೀದಿಸುವ ಮುನ್ನ ಡೀಲರ್‌ಗಳಿಂದ ಇನ್ಶೂರೆನ್ಸ್ ಆಡ್-ಆನ್‌ಗಳು ಮತ್ತು ಡೆಲಿವರಿ ಸಮಯವನ್ನು ಖಚಿತಪಡಿಸಿಕೊಳ್ಳಿ.
ಅಪಾರ್ಟ್‌ಮೆಂಟ್‌ಗಳಲ್ಲಿ ಹೋಮ್ ಚಾರ್ಜಿಂಗ್: ತಿಳಿದುಕೊಳ್ಳಲೇಬೇಕಾದ ಸಂಗತಿಗಳು
ಮೊದಲಿಗೆ ನಿಮ್ಮ ನಿಗದಿತ ಪಾರ್ಕಿಂಗ್ ಸ್ಥಳದಲ್ಲಿ ಚಾರ್ಜರ್ ಅಳವಡಿಸಲು ಅಪಾರ್ಟ್‌ಮೆಂಟ್‌ನ RWA ನಿಂದ ಲಿಖಿತ ಅನುಮತಿ ಪಡೆದುಕೊಳ್ಳಿ. ಬಳಿಕ ದೆಹಲಿಯ ಏಕ-ಗವಾಕ್ಷಿ 'ಡಿಸ್ಕಾಮ್' (DISCOM) ಪೋರ್ಟಲ್ ಮೂಲಕ ಚಾರ್ಜರ್ ಮತ್ತು ಅಗತ್ಯವಿದ್ದರೆ ಪ್ರತ್ಯೇಕ ಇವಿ ಮೀಟರ್‌ಗಾಗಿ ಅರ್ಜಿ ಸಲ್ಲಿಸಿ. ಹೆಚ್ಚಿನ ಅಪಾರ್ಟ್‌ಮೆಂಟ್‌ಗಳಲ್ಲಿ ತಮ್ಮ ಮಂಜೂರಾದ ವಿದ್ಯುತ್ ಲೋಡ್‌ನಲ್ಲೇ 3.3 ರಿಂದ 7.4 kW ಎಸಿ ಚಾರ್ಜರ್‌ಗಳನ್ನು ಬಳಸಬಹುದು. ಒಂದು ವೇಳೆ ಮಾಸಿಕ ವಿದ್ಯುತ್ ಬಳಕೆ ಮಂಜೂರಾದ ಮಿತಿಯನ್ನು ತಲುಪುತ್ತಿದ್ದರೆ, ಹೆಚ್ಚಿನ ಲೋಡ್‌ಗೆ ಮನವಿ ಮಾಡಿ. ದೆಹಲಿಯಲ್ಲಿ ಪ್ರತ್ಯೇಕ ಇವಿ ಸಂಪರ್ಕಗಳಿಗೆ ಪ್ರತಿ kWh ಗೆ ಸುಮಾರು ₹4.5 ದರ ವಿಧಿಸಲಾಗುತ್ತದೆ.
ಗ್ರಾಪ್ (GRAP) ಹಂತ IV ಜಾರಿಯಾದರೆ ಏನೆಲ್ಲಾ ಬದಲಾಗಲಿದೆ?
ಒಂದು ವೇಳೆ 'ಸ್ಟೇಜ್ IV' ಜಾರಿಯಾದರೆ ಟ್ರಕ್ ಸಂಚಾರದ ಮೇಲೆ ಕಠಿಣ ನಿಷೇಧ ಹಾಗೂ ಗಡಿಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಇರಲಿದೆ. ದೆಹಲಿ ಹೊರಗೆ ನೋಂದಣಿಯಾದ ಬಿಎಸ್-VI ಗಿಂತ ಕೆಳಗಿನ ವಾಹನಗಳ ಪ್ರವೇಶ ಸಂಪೂರ್ಣ ಬಂದ್ ಆಗಲಿದೆ. ಜೊತೆಗೆ ದೆಹಲಿಯಲ್ಲಿ ಪಾರ್ಕಿಂಗ್ ಶುಲ್ಕ ಹೆಚ್ಚಿಸುವುದು ಮತ್ತು ಕಂಪನಿಗಳಿಗೆ 'ವರ್ಕ್ ಫ್ರಮ್ ಹೋಮ್' ಸಲಹೆಗಳನ್ನು ನೀಡುವುದನ್ನು ಮತ್ತೆ ಆರಂಭಿಸಬಹುದು. CAQM ಮತ್ತಷ್ಟು ಕಠಿಣ ಆದೇಶ ಹೊರಡಿಸದ ಹೊರತು, ಖಾಸಗಿ ನಾಲ್ಕು ಚಕ್ರಗಳ ವಾಹನಗಳ ಮೇಲಿನ ನಿಷೇಧವು BS-III ಪೆಟ್ರೋಲ್ ಮತ್ತು BS-IV ಡೀಸೆಲ್ ವಾಹನಗಳಿಗಷ್ಟೇ ಸೀಮಿತವಾಗಿರುತ್ತದೆ. ಹೀಗಾಗಿ, ಯಾವುದೇ ಅಂತರನಗರ ಪ್ರಯಾಣ ಕೈಗೊಳ್ಳುವ ಮುನ್ನ CAQM ನ ಇತ್ತೀಚಿನ ಸೂಚನೆಗಳನ್ನು ಗಮನಿಸುತ್ತಿರಿ.


Click it and Unblock the Notifications
