ಪೆಟ್ರೋಲ್ ಡೀಸೆಲ್ ಬೇಡರಿ, ಗ್ಯಾಸ್ ಕಾರು ಖರೀದಿಸಿರಿ

ಇತರ ಇಂಧನಗಳಿಗೆ ಹೋಲಿಸಿದರೆ CNG ಕಾರುಗಳು ಹೆಚ್ಚು ಸೂಕ್ತ. ಪ್ರಮುಖ ಲಾಭ ಎಂದರೆ ರನ್ನಿಂಗ್ ವೆಚ್ಚ ಕಡಿಮೆ. ಇದೀಗ ಅನಿಲ ಚಾಲಿತ ಕಾರುಗಳಿಗೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಇದಕ್ಕೆ ತಕ್ಕಂತೆ ಕಾರು ಕಂಪನಿಗಳು ಕೂಡ ಇಂಧನ ದಕ್ಷತೆಯ CNG ಕಾರು ಮಾರುಕಟ್ಟೆಯತ್ತ ಹೆಚ್ಚು ಗಮನ ನೀಡುತ್ತಿದ್ದಾರೆ.
ಮಾರುತಿ ಸುಜುಕಿ ಈ ಸಿಎನ್ಜಿ ಬೆಳವಣಿಗೆಗೆ ಹೇಳಿದ್ದು ಹೀಗೆ. "ಇದೀಗ ಹೆಚ್ಚು ಹೆಚ್ಚು ಗ್ರಾಹಕರು CNG ಕಾರುಗಳಿಗೆ ಬೇಡಿಕೆಯಿಡುತ್ತಿದ್ದಾರೆ. ಜನರ ಬೇಡಿಕೆ ಹೆಚ್ಚಿದಂತೆಲ್ಲ ನಾವು ಪೂರೈಕೆಯ ಒತ್ತಡಕ್ಕೆ ಸಿಲುಕಿದ್ದೇವೆ. ಪರಿಣಾಮ ಡೆಲಿವರಿ ಕೊಂಚ ವಿಳಂಬವಾಗುತ್ತಿದೆ" ಎಂದು ಮಾರುತಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮಾರುತಿ ಸುಜುಕಿಯ ಆಲ್ಟೊ, ವ್ಯಾಗನಾರ್, ಎಸ್ಟಿಲೊ, ಎಕೊ ಮತ್ತು ಎಸ್ಎಕ್ಸ್4 ಕಾರುಗಳು CNG ಆಯ್ಕೆಯಲ್ಲಿ ದೊರಕುತ್ತಿವೆ.
ಗ್ರಾಹಕರು ಪೆಟ್ರೋಲ್ ಕಾರಿನಿಂದ CNG ಕಾರುಗಳತ್ತ ಪ್ರಯಾಣ ಬೆಳೆಸುತ್ತಿದ್ದಾರೆ ಎಂಬುದನ್ನು ವಾಹನ ವಿಶ್ಲೇಷಕರು ಒಪ್ಪುತ್ತಾರೆ. ಒಟ್ಟಾರೆ ಹೆಚ್ಚು ಇಂಧನ ದಕ್ಷತೆ ಇರುವ ವಾಹನಗಳೇ ಹೆಚ್ಚಿನ ಗ್ರಾಹಕರ ಆಯ್ಕೆಯಾಗಿದೆ. ಹೀಗಾಗಿ ವಾಹನ ಕಂಪನಿಗಳೂ ಕೂಡ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿವೆ.
ಮಾರುತಿ ಮಾತ್ರವಲ್ಲದೇ ಇತರ ಪ್ರಮುಖ ವಾಹನ ಕಂಪನಿಗಳು CNG ತಂತ್ರಜ್ಞಾನದತ್ತ ಹೆಚ್ಚು ಆಸಕ್ತಿ ವಹಿಸುತ್ತಿವೆ. ಟಾಟಾ ಇಂಡಿಕಾ ಮತ್ತು ಟಾಟಾ ಇಂಡಿಗೊ ಕಾರುಗಳು ಕೂಡ ಗ್ಯಾಸ್ ಆಯ್ಕೆಯಲ್ಲಿ ದೊರಕುತ್ತಿವೆ. ಟೊಯೊಟಾ ಇನ್ನೋವಾ ಮತ್ತು ಕೊರೊಲಾ ಆಲ್ಟಿಸ್ ಕೂಡ CNG ಮಾದರಿಯಲ್ಲಿ ದೊರಕುತ್ತಿವೆ. ಹ್ಯುಂಡೈ ಅಸೆಂಟ್ ಮತ್ತು ಜನರಲ್ ಮೋಟರ್ಸ್ ನ ಅವಿಯೊ ಕಾರು ಕೂಡ ಇನ್ನಿತರ CNG ಕಾರುಗಳಾಗಿವೆ.


Click it and Unblock the Notifications








