ಡೀಸಲ್ ಲಿವಾ ಕಾರು ರಸ್ತೆಗಿಳಿಯೋದು ಯಾವಾಗ?

ಕೆಲವು ದಿನದ ಹಿಂದೆ ಟೊಯೊಟಾ ಕಂಪನಿಯ ಜನಪ್ರಿಯ ಕಾರು ಎಟಿಯೋಸ್ ಲಿವಾ ರಸ್ತೆಗಿಳಿದಿದೆ. ಸಹಜವಾಗಿ ಲಿವಾ ಡೀಸಲ್ ಎಂಜಿನ್ ಆಯ್ಕೆಯಲ್ಲಿ ದೊರಕಲಿದೆಯೇ ಎಂಬ ಪ್ರಶ್ನೆಯೂ ಎದ್ದಿದೆ.
ಈ ಕುರಿತು ಟೊಯೊಟಾ ಕಿರ್ಲೊಸ್ಕರ್ ಉಪಾಧ್ಯಕ್ಷರಾದ ಶೈಲೇಶ್ ಶೆಟ್ಟಿಯನ್ನು ಸಂಪರ್ಕಿಸಲಾಯಿತು. "ಡೀಸಲ್ ಎಂಜಿನ್ ಲಿವಾ ಹೊರತರುವ ಕುರಿತು ಕಂಪನಿ ಆಲೋಚಿಸುತ್ತಿದೆ. ಆದರೆ ಇತ್ತೀಚೆಗೆ ರಸ್ತೆಗಿಳಿದ ಲೀವಾಕ್ಕೆ ಮಾರುಕಟ್ಟೆ ಹೆಚ್ಚಿಸುವುದು ನಮ್ಮ ಸದ್ಯದ ಆದ್ಯತೆ" ಎಂದಿದ್ದಾರೆ.
ದೇಶದ ವಾಹನ ಮಾರುಕಟ್ಟೆಯಲ್ಲಿ ಕಂಪನಿಯ ಆಲ್ಟಿಸ್, ಇನ್ನೋವಾ ಮತ್ತು ಫಾರ್ಚ್ಯುನರ್ ಕಾರುಗಳು ಡೀಸಲ್ ಆಯ್ಕೆಯಲ್ಲಿ ದೊರಕುತ್ತಿವೆ. "ಕಂಪನಿಯು ಬೆಂಗಳೂರಿನಲ್ಲಿ ಘಟಕವನ್ನು ನಿರ್ಮಿಸುತ್ತಿದೆ. ಇಲ್ಲೇ ಎಂಜಿನ್ ಗಳನ್ನು ತಯಾರಿಸಲಾಗುತ್ತಿದೆ. ಹೀಗಾಗಿ ಡೀಸಲ್ ಎಂಜಿನ್ ನಿರ್ಮಿಸುವ ಕುರಿತು ಘಟಕ ನಿರ್ಮಾಣವಾದ ನಂತರ ಯೋಚಿಸಲಾಗುವುದು" ಎಂದು ಶೈಲೇಶ್ ಹೇಳಿದ್ದಾರೆ.
ಪೆಟ್ರೊಲ್ ದರ ಏರಿಕೆ ಕಾಣುತ್ತಿರುವುದರಿಂದ ಪ್ರಮುಖ ಕಾರು ತಯಾರಿಕಾ ಕಂಪನಿಗಳು ಡೀಸಲ್ ಕಾರುಗಳತ್ತ ಹೆಚ್ಚಿನ ಗಮನ ನೀಡುತ್ತಿವೆ.


Click it and Unblock the Notifications








